Thursday, 26 December 2024

ಭಾರತದ ಸುತ್ತ ಶತ್ರುಗಳ ಕೋಟೆ


ಸದ್ಯ ಭಾರತವನ್ನು ನೇರವಾಗಿ ಮಣಿಸಲಾಗದ ದೇಶಗಳೆಲ್ಲ ಸೋತು ಸುಣ್ಣವಾಗಿ ನಿಧಾನಕ್ಕೆ ಒಗ್ಗೂಡುತ್ತಿದ್ದಾರೆ. ಇವರ ನಾಯಕತ್ವವನ್ನು ಚೀನಾ ವಹಿಸಿಕೊಂಡಿದ್ದರೆ ಉಪನಾಯಕತ್ವವನ್ನು ಪಾಕಿಸ್ತನ ವಹಿಸಿಕೊಂಡಂತೆ ಕಾಣುತ್ತದೆ. ಈ ಗುಂಪಿಗೆ ಮೊದಲು ಸೇರಿದ್ದು ಚೀನಾ. ಅರುಣಾಚಲ ಸ್ವತಂತ್ರ ಶಕ್ತಿ ಇಲ್ಲದ ದೇಶಗಳು. ಆದರೆ ಅನ್ಯರಿಗೆ ಹವಪ್ರದೇಶದ ವಿಷಯದಲ್ಲಿ ತಗಾದೆ ತೆಗೆದು ಕಾಲುಕಿತ್ತ ಚೀನಾ ಪಾಕಿಸ್ತಾನವನ್ನು ಎತ್ತಿಕಟ್ಟಿತು. ತನ್ನ ವಿರುದ್ಧ ಭರತ ಕೈಗೊಂಡ ಸರ್ಜಿಕಲ್ ಸ್ಟ್ರೈಕ್ ನೆಪದಲ್ಲಿ ಪಾಕಿಸ್ತಾನ ನಿರಂತರವಾಗಿ ಭಾರತದ ವಿರುದ್ಧ ಮಸಲತ್ತು ಮಾಡುತ್ತಲೇ ಇದೆ. ಸದ್ಯ ಪಾಕಿಸ್ತಾನ ಭಾರತದ ವಿರುದ್ಧ ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಹಗೂ ಬಂಗ್ಲಾದೇಶಗಳನ್ನು ಎತ್ತಿಕಟ್ಟಿ ಸ್ವಲ್ಪ ಯಶಸ್ಸು ಕಂಡಿದೆ. ಇರಲಿ. ಇವೆಲ್ಲ ದೇಶಗಳು ಒಂಟಿಯಾಗಿ ಬಂದರೆ ತವು ಯಾವ ಗತಿ ಕಾಣುತ್ತೇವೆಂಬುದನ್ನು ಅರ್ಥಮಾಡಿಕೊಂಡಿವೆ.

ಆದರೆ ಶತ್ರುವಿನ ಶತ್ರು ತನಗೆ ಮಿತ್ರ ಎಂಬಂತೆ ಇವರೆಲ್ಲ ಒಟ್ಟಾಗಿ ಭಾರತದ ವಿರುದ್ಧ ನಿಂತರೆ ನಮ್ಮ ದೇಶದ ಸುತ್ತ ಶತ್ರುಗಳ ಕೋಟೆ ನಿರ್ಮಾಣವಾಗುತ್ತದೆ. ಇದರಿಂದ ಭಾರತ ಪಾರಾಗುವುದು ಕಷ್ಟವಾಗುತ್ತದೆ. ಚೀನಾ ಹೇಳಿ ಕೇಳಿ ಭೂಪ್ರದೇಶವನ್ನು ಕಬಳಿಸುವ ಬುದ್ಧಿಯುಳ್ಳ ದೇಶ. ಪಾಕಿಸ್ತನ ಒಳಗೊಳಗೇ ಮರದ ಕಾಂಡ ಕೊರೆಯುವ ಹುಳವಿದ್ದಂತೆ ಇನ್ನು ಶ್ರೀಲಂಕಾ ಮತ್ತು ಬಾಂಗ್ಲಾಗಳು ಸ್ವತಂತ್ರ ಬಲವಿಲ್ಲದ ಆದರೆ ಅನ್ಯರಿಗೆ ಸಾಕಷ್ಟು ಹನಿ ಮಡುವ ಶಕ್ತಿ ಇರುವ ದೇಶಗಳು. ಈ ಅಪಾಯ ನಮ್ಮ ದೇಶದ ಮುಖಂಡರಿಗೆ ತಿಳಿದಿಲ್ಲವೆಂದಲ್ಲ, ಅದರೆ ಈ ಎಲ್ಲ ನಾಲ್ಕು ದೇಶಗಳು ಒಂದು ಸಂದರ್ಭಕ್ಕಾಗಿ ಕಾಯುತ್ತಿರುವಂತೆ ಕಾಣುತ್ತದೆಯಾದರೂ ಎಲ್ಲರಿಗೂ ಸರಿಹೊಂದುವ ಸಮಾನ ಕಾರಣ ಸಿಗುವುದು ಕಷ್ಟ.  ಇವೆಲ್ಲದರ ಮಧ್ಯೆ ಸದ್ಯ ಭಾರತದ ವಿರುದ್ಧ ನೆರೆಯ ಬಾಂಗ್ಲಾ ಮತ್ತು ಮಯನ್ಮಾರ್ ದೇಶಗಳು ಮಾದಕ ದ್ರವ್ಯದ ಮೂಲಕ ಉಪಟಳ ಶುರು ಮಾಡಿವೆ. ಈ ದ್ರವ್ಯದ ಹೆಸರು ಯಾಬಾ. ಇದು ಒಂದು ಬಗೆಯ ಔಷಧ ಎಂಬ ನೆಪದಲ್ಲಿ ಭಾರತದ ಒಳಗೆ ಬರುತ್ತಿದೆ. ಇದನ್ನು ಮತ್ರೆಯ ರೂಪದಲ್ಲಿ ಬಾಯಿ ಮೂಲಕ ಸೇವಿಸಲಾಗುತ್ತದೆ. ಪೆಪ್ಪರ್ಮಿಂಟ್, ಮಾತ್ರೆ, ಚಾಕೋಲೇಟ್ ರೂಪದಲ್ಲಿ ಕೆಂಪು ಅಥವಾ ಕಿತ್ತಳೆ ಬಣ್ಣದಲ್ಲಿ ಸಿದ್ಧಪಡಿಸಿ ಭಾರತದೊಳಗೆ ತೋರಿಸಲಾಗುತ್ತಿದೆ. 2022 ರಿಂದ ಇಲ್ಲಿಯವರೆಗೆ ಸಾವಿರಾರು ಲಾಬಾವನ್ನು ಗಡಿ ಭದ್ರತಾಪಡೆ ಹಿಡಿದಿದೆ. ಇದರ ದ್ರವ ರೂಪವನ್ನು ಇಂಜೆಕ್ಷನ್ ರೂಪದಲ್ಲೂ ವ್ಯಸನಿಗಳು ತೆಗೆದುಕೊಳ್ಳುತ್ತರಂತೆ.

ಸಾಮಾನ್ಯವಗಿ ಮೋಜು ಮಸ್ತಿಯ ಹೆಸರಲ್ಲಿ ರೇವ್ ಪಾರ್ಟಿ ಮಾಡುವ ಜನ ಸದ್ಯ ಇದರ ಹಿಂದೆ ಬಿದ್ದಿದ್ದಾರೆನ್ನಲಾಗಿದೆ. ದೆಹಲಿ, ಮುಂಬೈ, ಬೆಂಗಳೂರಿನಂಥ ಮಹಾನಗರಗಳು ಇದರ ಅಡ್ಡೆಗಳಂತೆ. ಇದರ ಒಂದು ಸಾಮಾನ್ಯ ಮಾತ್ರೆ ಗಾತ್ರದ ಯಾಬಾದ ಬೆಲೆ 800 ರಿಂದ ಒಂದು ಸಾವಿರವಂತೆ. ಇದನ್ನು ಭಾರತದ ಎಲ್ಲ ಕಡೆಯ ಗಡಿಗಳ ಮೂಲಕವೂ ತೂರಿಸಲಗುತ್ತಿದೆಯಂತೆ. ಅಂದಹಗೆ ಇದರ ಸೇವನೆಯಿಂದ ತಾತ್ಕಲಿಕ ಭ್ರಮೆ ಆವರಿಸುತ್ತದೆ ಎನ್ನಲಾಗಿದೆ, ತಾತ್ಕಾಲಿಕ ಹುಚ್ಚುತನವೂ ಬರುತ್ತದೆ ಎನ್ನಲಾಗಿದೆ. ಮಾದಕ ದ್ರವ್ಯ ಸೇವಿಸುವವರು ಇಂಥ ಹುಚ್ಚುತನ ಬಯಸುವುದರಿಂದ ಅವರೇ ಇದರ ಪ್ರಮುಖ ಗಿರಾಕಿಗಳು. ಸಾಮಾನ್ಯವಾಗಿ ಸಿನಿಮಾ ಕಿರುತೆರೆಯ ಜನ ಇದರ ಹಿಂದಿರುವ ಹಣವಂತ ಕುಳಗಳು. ಈ ಮಾತ್ರೆ ರೂಪದ ದ್ರವ್ಯ ನಮ್ಮ ಶಾಲಾ ಕಾಲೇಜುಗಳನ್ನೂ ಸದ್ದು, ವಾಸನೆಗಳಿಲ್ಲದೇ ಪ್ರವೇಶಿಸಿವೆ ಅನ್ನಲಾಗಿದ್ದು ಇದೊಂದು ಭಯಾನಕ ವಿಷಯ. ಯಾವುದೇ ಬಗೆಯ ಅಡ್ಡ ವಾಸನೆ ಬಾರದ ಕಾರಣ ಇದನ್ನು ಸೇವಿಸಿದವರು ಎಲ್ಲರ ನಡುವೆ ಇದ್ದರೂ ಯಾರಿಗೂ ಯವ ಅನುಮಾನವೂ ಬರುವುದಿಲ್ಲ, ಇದರಲ್ಲಿ ಮೆಟಾಂಫೆಟಾಮೈನ್ ಎಂಬ ರಾಸಾಯನಿಕವಿದ್ದು ನರಕೋಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆಯಂತೆ. ಒಮ್ಮೆ ಇದನ್ನು ಸೇವಿಸಿದವರು ವ್ಯಸನಿಗಳಾಗುತ್ತಾರೆನ್ನಲಾಗಿದೆ. ಭಾರತದ ಶಕ್ತಿಯನ್ನು ಕುಗ್ಗಿಸಲು ನಮ್ಮ ಸುತ್ತಲಿನ ಶತ್ರು ದೇಶಗಳು ಈ ಮಾರ್ಗವನ್ನು ಹಿಡಿದಿವೆ. ಇದು ಯುದ್ಧದ ಒಂದು ಮಾದರಿ. ನಮ್ಮ ಸಮಾಜ ಇದರ ವಿರುದ್ಧ ಆದಷ್ಟು ಬೇಗ ಜಾಗ್ರತವಾಗುವ ಅಗತ್ಯವಿದೆ. ಭರತದ ದೊಡ್ಡ ದೊಡ್ಡ ಔಷಧ ವ್ಯಾಪಾರಿಗಳು ಇದನ್ನು ಸಾಮಾನ್ಯ ಔಷಧಗಳ ಜೊತೆ ಸುಲಭವಾಗಿ ಸಾಗಾಟ ಮಾಡುತ್ತಿದ್ದು ಹಣದ ಆಸೆ ಇದನ್ನೆಲ್ಲ ಮಾಡಿಸುತ್ತಿದ್ದು ಶತ್ರು ದೇಶಗಳಿಗೆ ಮಾರ್ಗ ಸುಲಭವಾಗಿದೆ. ಈಚೆಗೆ ಮಣಿಪುರದಲ್ಲಿ ಕುಕಿಗಳು ಮತ್ತು ಮೈತಿ ಬುಡಕಟ್ಟುಗಳ ಕದನದ ಹಿಂದೆಯೂ ಯಾಬಾ ಸೇರಿಕೊಂಡಿದೆ ಅನ್ನಲಾಗಿದೆ. ಆದಷ್ಟು ಬೇಗ ಇದು ನಮ್ಮ ದೇಶದ ಹಳ್ಳಿ ಮೂಲೆಗಳನ್ನು ಶಾಲೆಗಳನ್ನು ತಲುಪುವ ಸಾಧ್ಯತೆಯನ್ನು ತಡೆಯುವ ಅಗತ್ಯವಿದೆ. ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸುವ ಪೋಷಕರ ಜವಾಬ್ದಾರಿ ಹತ್ತು ಪಟ್ಟು ಈಗ ಹೆಚ್ಚಿದೆ. ಇಂಥ ವಿಷಯಗಳಿಂದ ನಮ್ಮ ಸಮಾಜವನ್ನು ಮತ್ತು ದೇಶವನ್ನು ಕಾಪಾಡುವ ಸವಾಲು ನಮ್ಮ ಮುಂದಿದೆ. 

 


Wednesday, 25 December 2024

ಎಲ್ಲರೊಳಗೊಂದಾಗಿಯೂ ತಮ್ಮತನ ಮರೆಯದ ಹವ್ಯಕರು


ಇದೀಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ. (ಡಿಸೆಂಬರ್ ೨೭-೨೯). ಸಮಾಜದಲ್ಲಿ ಎಲ್ಲರೂ ಇದ್ದರೆ ನಮ್ಮ ಅಸ್ತಿತ್ವ ಎಂಬ ಮಾತಲ್ಲಿ ನಂಬಿಕೆ ಇಟ್ಟವರು ಹವ್ಯಕರು. ಇದು ಬರಿಯ ಮಾತಲ್ಲ, ಈಗ ನಡೆಯುತ್ತಿರುವ ಸಮ್ಮೇಳನದ ಸ್ವರೂಪ ನೋಡಿ. ಇದರಲ್ಲಿ ಕೇವಲ ಹವ್ಯಕರು ಮಾತ್ರವಲ್ಲ, ಬ್ರಾಹ್ಮಣ ಸಮುದಾಯದಲ್ಲಿರುವ ೨೦ಕ್ಕೂ ಹೆಚ್ಚು ಉಪ ಪಂಗಡಗಳು ಮಾತ್ರವಲ್ಲ, ಆಸಕ್ತಿ ಇರುವ ಯಾವ ಸಮುದಯದವರೂ ಪಾಲ್ಗೊಳ್ಳಬಹುದೆಂದು ಸ್ವತಃ ಅಧ್ಯಕ್ಷರು ಕರೆಕೊಟ್ಟಿದ್ದಾರೆ. ಜೊತೆಗೆ ಸಮಾಜದ ಇತರೆ ಪ್ರಮುಖ ಸಮುದಾಯಗಳಾದ ಒಕ್ಕಲಿಗ, ಲಿಂಗಾಯತ, ಕುರುಬ ಮೊದಲಾದ ಸಮುದಾಯಗಳ ಗಣ್ಯ ಸಾಧಕರನ್ನು ಹವ್ಯಕ ಸಾಧಕರೊಂದಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಇದೊಂದು ಮಾದರಿಯೂ ಹೌದು. ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಯಾವ ಸಮುದಾಯವಾದರೂ ಸಂಘಟನೆ ಸಮ್ಮೇಳನವನ್ನು ಉಳಿದ ಸಮುದಾಯಗಳಿಗೆ ಧಕ್ಕೆ ಆಗದಂತೆ ಧಾರಾಳವಾಗಿ ನಡೆಸುವ ಸ್ವಾತಂತ್ರ್ಯವಿದೆ. ಆದರೆ ಸಾಮಾನ್ಯವಾಗಿ ಅಂಥ ಕಡೆ ಕೇವಲ ಆಯಾ ಸಮುದಾಯಕ್ಕಷ್ಟೇ ಸ್ವಾಗತ, ಆದ್ಯತೆ ಇರುತ್ತದೆ. ಜೊತೆಗೆ ಇಲ್ಲಿ ಹವ್ಯಕ ಸಂಸ್ಕೃತಿಯನ್ನು ಪ್ರದರ್ಶಿಸುವ ಆಹಾರ, ವಿಚಾರ ಮಂಥನಗಳಿರುತ್ತವೆ.

ಈಗಾಗಲೇ ಅಮೆರಿಕ ಮೊದಲಾದ ಕಡೆ ಜಾಗತಿಕ ಸಮ್ಮೇಳನ ಹಿಂದೆ ನಡೆದಿದೆ. ಮುಖ್ಯವಾಗಿ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಹವ್ಯಕ ಸಮುದಾಯದ ಜನ ತಮ್ಮದೇ ಸಾಹಿತ್ಯ, ಸಂಸ್ಕೃತಿಗಳನ್ನು ಇಂದಿಗೂ ಕಾಪಿಟ್ಟುಕೊಂಡು ಬಂದಿರುವುದಲ್ಲದೇ ಆಧುನಿಕ ಸಮಾಜದ ಮುಂಚೂಣಿ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ. ಇಂಥದ್ದೊಂದು ಕ್ಷೇತ್ರದಲ್ಲಿ ಹವ್ಯಕರು ಇನ್ನೂ ಇಲ್ಲ ಎಂದಿಲ್ಲ. ಅಷ್ಟರ ಮಟ್ಟಿಗೆ ಆ ಸಮುದಾಯ ಬೆಳೆದಿದೆ. ಸದ್ಯ ಹವ್ಯಕರ ಜನಸಂಖ್ಯೆ ಪ್ರಪಂಚಾದ್ಯಂತ ೧೧ ಲಕ್ಷದಷ್ಟಿದೆ ಎಂದು ಲೆಕ್ಕಹಾಕಲಾಗಿದೆ. ಮೂಲತಃ ಹವ್ಯಕರು ೩ನೆಯ ಶತಮಾನದ ವೇಳೆಗೆ ಮಯೂರ ವರ್ಮನ ಆಡಳಿತ ಸಂದರ್ಭದಲ್ಲಿ (೩೪೫-೩೬೫) ಧಾರ್ಮಿಕ ಚಟುವಟಿಕೆ ನಡೆಸಲು ಕಾಶ್ಮೀರದಿಂದ ಕರೆತಂದ ಜನ ಎಂದು ಹೇಳಲಾಗುತ್ತದೆ. ಹವ್ಯಕರಿಗೆ ಸಂಬಂಧಿಸಿದ ಪ್ರಾಚೀನ ಉಲ್ಲೇಖಗಳು ಪುರಾಣೋಕ್ತ ಸಹ್ಯಾದ್ರಿ ಕಾಂಡದಲ್ಲಿ ಸಿಗುತ್ತದೆ. ವಿದ್ವಾಂಸರಾದ ಸೇಡಿಯಾಪು ಕೃಷ್ಣ ಭಟ್ ಹಾಗೂ ಎನ್ ರಂಗನಾಥ ಶರ್ಮರು ಹವ್ಯಕ ಎಂಬ ಶಬ್ದವನ್ನು ಸಂಸ್ಕೃತದ ಅಹಿಚ್ಛತ್ರ ಮೂಲಕ್ಕೂ ಹವ್ಯಕ ಎಂಬುದು ಪವಿತ್ರ ಯಜ್ಞದಲ್ಲಿ  ಹವಿಸ್ಸನ್ನು ಅರ್ಪಿಸುವವರು ಎಂಬುದರಿಂದ ಬಂದಿದೆ ಎಂದು ಹೇಳುತ್ತಾರೆ. ಸದ್ಯ ಎಲ್ಲರೂ ವ್ಯಾಪಕವಾಗಿ ಒಪ್ಪಿದ ಮಾತು ಇದು. ಹವ್ಯಕ ಸಮುದಾಯ ಭಾರತದಲ್ಲಿರುವ ೪೩೦ಕ್ಕೂ ಹೆಚ್ಚು ಬ್ರಾಹ್ಮಣ ಪಂಗಡಗಳಲ್ಲಿ ಒಂದಾಗಿದೆ. ಮಾತ್ರವಲ್ಲ, ಈ ಸಮುದಾಯಕ್ಕೆ ಅದರದೇ ಆದ ಭಾಷೆಯೂ ಇದೆ.ಈ ಭಾಷೆಯ ಶಬ್ದಕೋಶವೂ ಇದೆ. ಅಂತರ್ಜಾಲದಲ್ಲಿ ಹವ್ಯಕ ಇಂಗ್ಲಿಷ್ ಶಬ್ದಕೋಶವೂ ಲಭ್ಯವಿದೆ. ಹೀಗೆ ಅತ್ಯಂತ ಶ್ರೀಮಂತ ಪರಂಪರೆಯ ಈ ಸಮುದಾಯ ಪ್ರಪಂಚಾದ್ಯಂತ ಹರಡಿದ್ದು ಆಗಾಗ ಸಮ್ಮೇಳನಗಳ ನೆಪದಲ್ಲಿ ಒಂದು ಕಡೆ ಸೇರುತ್ತದೆ. ಹವ್ಯಕರ ಆಹಾರ ವಿಧಾನಕೂಡ ವಿಶಿಷ್ಟವಾದುದು. ಪ್ರಾಥಮಿಕವಾಗಿ ಸಸ್ಯಾಹಾರಿಗಳಾದ ಇವರು ಅದರಲ್ಲೂ ಅತ್ಯಂತ ಸರಳ ಎನಿಸುವ ಆಹಾರ ಪದಾರ್ಥಗಳನ್ನು ಬಳಸುತ್ತಾರೆ. ಮುಖ್ಯವಾಗಿ ಹಸಿರು ತರಕಾರಿ ಅಥವಾ ಸೊಪ್ಪಿನ ಪದಾರ್ಥ ಇವರಿಗೆ ಅಚ್ಚುಮೆಚ್ಚು. ಸಾಮಾನ್ಯವಾಗಿ ಇವರು ತಮ್ಮ ಅಡುಗೆಗೆ ಬೇಕಾದ ಬಹುತೇಕ ಪದಾರ್ಥಗಳನ್ನು ತಮ್ಮ ಮನೆಯ ಹಿತ್ತಿಲಲ್ಲೇ ಬೆಳೆದುಕೊಳ್ಳುತ್ತಾರೆ. ಪ್ರಧಾನವಾಗಿ ಕುಲಕಸುಬು ಎಂಬಂತೆ ಬಹುತೇಕ ಹವ್ಯಕ ಕುಟುಂಬಗಳು ಕೃಷಿಯನ್ನು ನೆಚ್ಚಿಕೊಂಡಿವೆ. ಅದರಲ್ಲೂ ಉತ್ತರ , ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಮುಖವಾಗಿರುವ ಅಡಕೆ ಹಾಗೂ ಬತ್ತದ ಕೃಷಿಯನ್ನು ಹೆಚ್ಚಾಗಿ ಮಾಡುತ್ತಾರೆ. ಅಡಕೆಯ ಜೊತೆಗೆ ಅದಕ್ಕೆ ಪೂರಕವಾಗುವ ಹಲಸು, ಏಲಕ್ಕಿ, ಕಾಳುಮೆಣಸು, ಬಾಳೆ, ತೆಂಗು ಮುಂತಾದ ಉಪ ಬೆಳೆಗಳನ್ನೂ ತೆಗೆಯುತ್ತಾರೆ. ಹವ್ಯಕರಲ್ಲಿ ಪ್ರಧಾನವಾಗಿ ಶೈವ ಪಂಥ ಅನುಸರಿಸುವ ಸ್ಮಾರ್ತರಿದ್ದು ಇವರು ಋಗ್ವೇದ, ಯಜುರ್ವೇದ ಹಾಗೂ ಸಾಮವೇದ ಕ್ರಮದವರಿದ್ದಾರೆ. ಶೃಂಗೇರಿ ಹಾಗೂ ಸೋಂದಾ, ರಾಮಚಂದ್ರಾಪುರ ಮಠ ಮುಂತಾದ  ಶ್ರೀಮಠಗಳಿಗೆ, ಅಂತೆಯೇ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳ ಕಾಸರಗೋಡು ಭಾಗದವರು ಉಡುಪಿ ಮಠಗಳಿಗೆ ಹೆಚ್ಚಾಗಿ ನಡೆದುಕೊಳ್ಳುವರು.

 ಇವರು ಆರ್ಥಿಕವಾಗಿ ಸಬಲರು, ಶ್ರಮಜೀವಿಗಳು. ದಿನದ ಎರಡು ಹೊತ್ತು ಊಟಮಾಡುವರು. ಬೆಳಿಗ್ಗೆ ಉಪಾಹಾರ ಮಾಡುವರು. ಕೆಲವರು ಸಂಜೆಯ ವೇಳೆ ಕೂಡ ಉಪಾಹಾರ ಸೇವಿಸುವುದುಂಟು. ಸಸ್ಯಾಹಾರಿಗಳೂ ಸಂಪ್ರದಾಯನಿಷ್ಠರೂ ಆದ ಈ ಸಮುದಾಯದವರಲ್ಲಿ ಆಹಾರ ವೈವಿಧ್ಯಗಳಿಂದ ಕೂಡಿದೆ. ಸಾಮಾನ್ಯ ಆಹಾರ ಪದ್ಧತಿ ಸಸ್ಯಾಹಾರಿಗಳ ಆಹಾರ ಕ್ರಮದಂತೆ ಇರುತ್ತದೆ. ಆದರೆ ಕೆಲವು ಹಬ್ಬಗಳಲ್ಲಿ, ಸಮಾರಂಭಗಳಲ್ಲಿ ಮತ್ತು ಋತುಮಾನಕ್ಕನುಸಾರವಾಗಿ ಆಹಾರಗಳ ಬಳಕೆ ಭಿನ್ನವಾಗುತ್ತದೆ. 

ಇವರ ವೃತ್ತಿ ವ್ಯವಸಾಯ. ಸಾಂಪ್ರದಾಯಿಕ ಶೈಲಿಯಲ್ಲಿ ಬತ್ತ, ಕಬ್ಬು, ಅಡಕೆಗಳನ್ನು ಬೆಳೆಯುತ್ತಾರೆ. ಬತ್ತದ ಕೊಯ್ಲು ಜನವರಿ - ಫೆಬ್ರವರಿ ವೇಳೆಯಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಹೊಸಕ್ಕಿ (ಹೊಸ+ ಅಕ್ಕಿ) ಹಬ್ಬವನ್ನು ಆಚರಿಸುವರು. ಬೆಳೆದು ಕೊಯ್ಲಿಗೆ ಬಂದ ಬತ್ತದ ತೆನೆಯನ್ನು ಪ್ರತ್ಯೇಕವಾಗಿ ತಂದು ಕೈಯಲ್ಲಿ ಕುಟ್ಟಿ ಅಕ್ಕಿಯನ್ನು ಮಾಡಿ ಆ ಅಕ್ಕಿಯನ್ನು ಹಳೆ ಅಕ್ಕಿಯೊಂದಿಗೆ ಬೆರೆಸಿ ಚುರು ಮತ್ತು ಅಕ್ಕಿ ಪಾಯಸವನ್ನು ಮಾಡಿ ಕುಲದೇವರಿಗೆ ಪೂಜಿಸಿ ಸೇವಿಸುವರು. ಅಕ್ಕಿಯ ಪಾಯಸಕ್ಕೆ ಸಣ್ಣಕ್ಕಿ ಶ್ರೇಷ್ಠವೆಂದು ತಿಳಿಯಲಾಗುತ್ತದೆ. ಆ ಅಕ್ಕಿಯಿಂದ ಮಾಡುವ ಒಂದು ಬಗೆಯ ಸುವಾಸನೆ ಪಾಯಸಕ್ಕೆ ಸಹಜ ರುಚಿಯನ್ನು ತರುತ್ತದೆ. ಅಕ್ಕಿ ಪಾಯಸಕ್ಕೆ ಬೆಲ್ಲವನ್ನು ಬೆರೆಸಲಾಗುತ್ತದೆ. ಸಕ್ಕರೆಯನ್ನು ಬಳಸುವುದು ನಿಷಿದ್ಧ. ಪಾಯಸವನ್ನು ತಯಾರಿಸಲು ಸಣ್ಣಕ್ಕಿ ದೊರಕದಿದ್ದಲ್ಲಿ ಸಣ್ಣಕ್ಕಿ ಎಲೆಯನ್ನು ಪಾಯಸಕ್ಕೆ ಬಳಸುವರು. ಸಣ್ಣಕ್ಕಿ ಎಲೆ ಸಾಮಾನ್ಯವಾಗಿ ತೋಟದ ಬದಿಯ ಜೌಗು ಮಣ್ಣಿನಲ್ಲಿ ಸಹಜವಾಗಿ ಬೆಳೆದುಕೊಂಡಿರುತ್ತದೆ. ಅದು ಬೆಳೆಯದಿದ್ದಲ್ಲಿ ಉದ್ದೇಶಪೂರ್ವಕವಾಗಿ ತಂದು ಬೆಳೆಸಲಾಗುತ್ತದೆ. ಇದು ಒಂದು ಬಗೆಯ ಕೇದಗೆ ಜಾತಿಯ ಪುಟ್ಟ ಗಿಡ. ಮುಳ್ಳಿಲ್ಲದ ಅನಾನಸ್ ಗಿಡದಂತಿರುತ್ತದೆ. ಎಲೆಯ ಆಕಾರ, ಬಣ್ಣ, ಒಟ್ಟೂ ಸ್ವರೂಪ ಅನಾನಸನ್ನು ಹೋಲುತ್ತದೆ. ಎಲೆ ಅತ್ಯಂತ ಸುವಾಸಿತವಾಗಿದ್ದು, ಬೆಳೆದ ಎಲೆಯ ಒಂದೆರಡು ಚೂರುಗಳು ಸಾಮಾನ್ಯ ಅಕ್ಕಿಯೊಂದಿಗೆ ಬೆಂದಾಗ ಸಣ್ಣಕ್ಕಿಯ ಸುವಾಸನೆಯನ್ನು, ರುಚಿಯನ್ನು ತರುತ್ತದೆ. ಹೊಸಕ್ಕಿ ಹಬ್ಬದಲ್ಲಿ ಇನ್ಯಾವ ವಿಶೇಷ ತಿಂಡಿ ತಿನಿಸುಗಳನ್ನು ಮಾಡದಿದ್ದರೂ ಅಕ್ಕಿ ಪಾಯಸವಂತೂ ಕಡ್ಡಾಯ. ಕೃಷಿಕರಾದ ಇವರಿಗೆ ಹೊಸಕ್ಕಿ ಹಬ್ಬವೇ ವರ್ಷದ ಮೊದಲ ಹಬ್ಬ. 

ಚೌತಿ ಹಬ್ಬ ಇನ್ನೊಂದು ಪ್ರಮುಖ ಹಬ್ಬ.  ಹವ್ಯಕರ ಆರಾಧ್ಯ ದೈವಗಳಲ್ಲಿ ಗಣೇಶನೂ ಒಬ್ಬ. ಗಣೇಶನನ್ನು ಬಿಟ್ಟು ಹವ್ಯಕರ ಯಾವುದೇ ಕರ್ಮಕಾಂಡೋಕ್ತಿಗಳಿಲ್ಲ. ತಮ್ಮ ಜೀವಿತವೇ ಗಣೇಶನ ಅವಲಂಬನೆಯಲ್ಲಿದೆ ಎಂದು ಹವ್ಯಕ್ರು ನಂಬುತ್ತಾರೆ. ಜೀವಕ್ಕೆ ಜಲವೇ ಮೂಲ. ಜಲತತ್ತ್ವದ ಅಧಿಪತಿ ಗಣಪತಿ. ಜೀರ್ಣಾಂಗ ವ್ಯೂಹಕ್ಕೂ ಅವನೇ ಅಧಿಪತಿ. ರೋಗಗಳ ಚಿಕಿತ್ಸೆಗೆ ಮುನ್ನ ಮತ್ತು ಅನಂತರ ಗಣಪತಿಯನ್ನು ಸ್ತುತಿಸಲಾಗುತ್ತದೆ. ಆಹಾರವೇ ಆರೋಗ್ಯಕ್ಕೂ ಅನಾರೋಗ್ಯಕ್ಕೂ ಕಾರಣ. ಇದನ್ನು ನಿಗ್ರಹಿಸುವವ ಗಣೇಶ ಅಥವಾ ಗಣಪತಿ. ಹೀಗಾಗಿ ಗಣಪತಿಯ ಆರಾಧನೆಯಲ್ಲಿ ಸಮಗ್ರ ಆಹಾರ ವಿಜ್ಞಾನವಿದೆ ಎಂಬುದು ಹವ್ಯಕರ ನಂಬಿಕೆ.

ಇದರಿಂದಾಗಿ ಚೌತಿ ಹಬ್ಬವನ್ನು ಅತ್ಯಂತ ಸಡಗರ ಸಭ್ರಮಗಳಿಂದ ಆಚರಿಸಲಾಗುತ್ತದೆ. ಗಣೇಶನ ಹಬ್ಬಕ್ಕೆ ಒಂದು ತಿಂಗಳು ಇರುವಂತೆಯೇ ಹಬ್ಬಕ್ಕೆ ತಯಾರಿ ನಡೆಯುತ್ತದೆ. ಮನೆಯನ್ನು, ಮನೆಯ ಆವರಣವನ್ನು ಚೊಕ್ಕಟಗೊಳಿಸುವುದು ಇತ್ಯಾದಿಗಳು  ಒಂದೆಡೆ ನಡೆಯುತ್ತಿರುತ್ತವೆ. ಮನೆಯ ಅಲಂಕರಣ ಗಂಡಸರಿಗೆ ಬಿಟ್ಟ ಜವಾಬ್ದಾರಿ. ಇದೇ ಸಂದರ್ಭದಲ್ಲಿ ಮಹಿಳೆಯರು ಚಕ್ಕುಲಿಯನ್ನು ತಯಾರಿಸುವ ಕಾರ್ಯದಲ್ಲಿ ಮಗ್ನರಾಗುತ್ತಾರೆ. ಹಬ್ಬಕ್ಕೆ ಒಂದುವಾರ ಇರುವಷ್ಟರಲ್ಲಿ ಚಕ್ಕುಲಿಯನ್ನು ಭದ್ರವಾಗಿ ಡಬ್ಬ ತುಂಬಿ ಇಡಲಾಗುತ್ತದೆ. ಹಬ್ಬದ ದಿನ ಮಡಿಯುಟ್ಟ ಮಹಿಳೆಯರು ಪೂಜೆಗಾಗಿ ಪ್ರತ್ಯೇಕವಾಗಿ ಚಕ್ಕುಲಿ, ಕರ್ಜಿಕಾಯಿ, ಕಡಬು, ಅತ್ರಾಸ, ಪಂಚಕಜ್ಜಾಯ, ಪಾಯಸ, ಮೋದಕ ಇತ್ಯಾದಿಯಾಗಿ ಇಪ್ಪತ್ತೊಂದು ಬಗೆಯ ತಿಂಡಿ ತಿನಿಸುಗಲನ್ನು ಸಿದ್ಧಪಡಿಸುತ್ತಾರೆ. ಇವುಗಳನ್ನು ಬಿಟ್ಟು ಅನ್ನ ಮತ್ತು ಇತರೆ ನೆಂಚಿಕೆಗಳು ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಇಪ್ಪತ್ತೊಂದು ಬಗೆಯ ವಿಶೇಷಗಳನ್ನು ತಯಾರಿಸುವುದು ರೂಢಿ ತಪ್ಪುತ್ತಿದ್ದರೂ ತೀರ ಸಂಪ್ರದಾಯಸ್ಥರು ಪ್ರಾಚೀನ ಕ್ರಮವನ್ನು ಕೈಬಿಟ್ಟಿಲ್ಲ. 

ಹಬ್ಬದ ಹಿಂದಿನ ದಿನ ತದಿಗೆಯಂದು ತಮ್ಮ ಮನೆಯ ಹಿತ್ತಲು, ಗದ್ದೆ, ತೋಟಗಳಲ್ಲಿ ಬೆಳೆದ ಯಾವುದೇ ಹೊಸ ಫಲವನ್ನು ದೇವರ ಮುಂದೆ ಕಟ್ಟುತ್ತಾರೆ. ಇದನ್ನು ಫಲಾವಳಿ ಎಂದು ಕರೆಯುವರು. ತಾವು ಬೆಳೆದ ಯಾವುದೇ ಹೊಸ ಫಲವನ್ನು ಫಲಾವಳಿಗೆ ಹಾಕಿದ ತರುವಾಯವೇ ಬಳಸುವುದು ಒಂದು ಕ್ರಮ. ಫಲಾವಳಿಯಲ್ಲಿ ಬಾಳೆ, ತೆಂಗು, ಸೌತೆಕಾಯಿಗಳು ಸಾಮಾನ್ಯವಾಗಿರುತ್ತವೆ. ಮಾರನೆಯ ದಿನ ಬೆಳಿಗ್ಗೆ ಉಪವಾಸ ಆಚರಿಸುವ ಗಂಡಸರು ಮಡಿಯಲ್ಲಿ ಗಣೇಶನಿಗೆ ಪೂಜಿಸಿದ ತರುವಾಯ ಎಲ್ಲ ಇಪ್ಪತ್ತೊಂದು ಬಗೆಯ ಖಾದ್ಯಗಳ ನೈವೇದ್ಯ ನಡೆಯುತ್ತದೆ. ತರುವಾಯ ಮನೆಯ ಸದಸ್ಯರು ನೆಂಟರು ಇಷ್ಟರು ಊಟ ಮಾಡುತ್ತಾರೆ. ನೆಂಚಿಕೆಗೆ ಕೆಸುವಿನ ಪಲ್ಯ ಮತ್ತು ಮೋಡ ಹಾಗಲಕಾಯಿ ಹಸಿ ಕಡ್ಡಾಯವಾಗಿರುತ್ತದೆ. 

ಚೌತಿಯ ದಿನದ ಊಟಕ್ಕೆ ಅಂದೆ ಮಡಿಯುಟ್ಟು ತಯಾರಿಸಿದ ಖಾದ್ಯಗಳು ಪ್ರಸಾದ ರೂಪದಲ್ಲಿರುತ್ತವೆ. ಕರ್ಜಿಕಾಯಿ ಮತ್ತು ಚಕ್ಕುಲಿಗಳನ್ನು ವಾರದ ಹಿಂದೆ ಸಿದ್ಧವಾಗಿಟ್ಟರೂ ಪೂಜೆ ನೈವೇದ್ಯಗಳ ತರುವಾಯವೇ ಅವುಗಳನ್ನು ಬಳಸಲಾಗುವುದು. ಮಾರನೆಯ ದಿನ ಪಂಚಮಿಯಂದು ಅಕ್ಕಿಯ ರೊಟ್ಟಿ (ಸಪ್ಪೆ) ಮತ್ತು ಕಾಯಿ ಕಡುಬುಗಳನ್ನು ತಯಾರಿಸುವರು. ಅಂದು ಮಧ್ಯಾಹ್ನದ ವೇಳೆಯಿಂದ ಭಿಕ್ಷಾಟನೆಗೆ ಬರುವವರು ಬಂದು ಚಕ್ಕುಲಿ, ಕರ್ಜಿಕಾಯಿಗಳನ್ನು ಪಡೆದು ಹೋಗುತ್ತಾರೆ. ಚೌತಿಯ ವೇಳೆ ಯಾರಿಗಾದರೂ ಆಹಾರ ದಾನ ಮಾಡದಿದ್ದರೆ ಪೂಜೆಯ ಫಲವಿಲ್ಲ ಎಂದು ನಂಬುತ್ತಾರೆ.  

ನಾಗರ ಪಂಚಮಿಯಂದು ಅಕ್ಕಿಯ ಸಪ್ಪೆರೊಟ್ಟಿಯನ್ನು ನಾಗದೇವರಿಗೆ ಎಡೆ ಇಡುವರು. ಅಕ್ಕಿಯ ಹಿಟ್ಟು ಮತ್ತು ಆಕಳ ಹಸಿ ಹಾಲನ್ನು ಹುತ್ತಕ್ಕೆ ಸುರಿಯುವರು. ನೈವೇದ್ಯವಾದ ಸಪ್ಪೆ ರೊಟ್ಟಿಯನ್ನು ಊಟದ ಜೊತೆ ಪ್ರಸಾದ ರೂಪದಲ್ಲಿ ಸೇವಿಸುವರು. ಅಕ್ಕಿ ಪಾಯಸದ ಊಟವನ್ನು ಅಂದು ಮಾಡಲಾಗುತ್ತದೆ. ದೀಪಾವಳಿ ಹಬ್ಬದಂದು ಹೋಳಿಗೆ, ಸಿಹಿ ಕಡಬು ಮತ್ತು ಪಾಯಸಗಳನ್ನು ಮಾಡಿ ಸೇವಿಸುವರು. ನೆಂಚಿಕೆಗೆ ಕೆಸುವಿನ ದಂಟಿನ ಸಾಸಿವೆ ಮತ್ತು ಬಾಳೆಕಾಯಿಯ ಪಲ್ಯ ಕಡ್ಡಾಯವಾಗುರುತ್ತದೆ. 

ಭೂಮಿ ಹುಣ್ಣಿಮೆ ಇನ್ನೊಂದು ಪ್ರಮುಖವಾದ ಸಂದರ್ಭ. ಸಿಹಿ ಊಟದ ಜೊತೆಗೆ ಹತ್ತಂಬರವೆ (ದಂಟಿನ ಸೊಪ್ಪಿನಂಥ ಎಲೆಯ ಮುಂಬಾಗ ದಟ್ಟ ಹಸಿರು ಹಾಗೂ ಹಿಂಭಾಗ ದಟ್ಟ ಕೆಂಪು ವರ್ಣದಿಂದ ಕೂಡಿರುತ್ತದೆ) ಸೊಪ್ಪಿನ ಸಾಸಿಮೆ, ಪಲ್ಯದ ಬಳಕೆ ಕಡ್ಡಾಯ. ಅನ್ನ, ಅಕ್ಕಿ, ಹತ್ತಂಬರವೆ ಸೊಪ್ಪು ಮತ್ತು ಬೆಲ್ಲ ಬೆರೆಸಿದ ಕಡುಬನ್ನು ಕಾಗೆಗೆ ಎಡೆ ಹಾಕಲಾಗುತ್ತದೆ. ಗೋವೆಕಾಯಿ (ಸಿಹಿ ಕುಂಬಳ) ಮತ್ತು ಮೊಗೆಕಾಯಿ (ಮಂಗಳೂರು ಸೌತೆಕಾಯಿ)ಗಳ ಕಡಬು ಕಡ್ಡಾಯ.

ಮೇಲೆ ಉಲ್ಲೇಖಿಸಿದ ಹಬ್ಬಗಳನ್ನು ಬಿಟ್ಟರೆ ಹವ್ಯಕರಲ್ಲಿ ಆಹಾರ ನಿಷೇಧಗಳಿರುವ ಪ್ರಮುಖ ಹಬ್ಬಗಳು ಕಂಡುಬರುವುದಿಲ್ಲ. ಕೃಷ್ಣ ಜನ್ಮಾಷ್ಟಮಿ, ನವರಾತ್ರಿ, ಯುಗಾದಿ ಮುಂತಾದ ಸಂದರ್ಭಗಳಲ್ಲಿ ಯಾವುದೇ ಬಗೆಯ ಸಿಹಿಯೂಟವನ್ನು ಮಾಡಬಹುದು. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಅವಲಕ್ಕಿಯ ಸೇವನೆ ಕಡ್ಡಾಯ. ಯುಗಾದಿಯಂದು ಬಯಲು ಸೀಮೆಯಿಂದ ತರಿಸಿದ ಬೇವಿನ ಎಲೆ ಅಥವಾ ಜಂತಲೆ ಮರದ ಚಕ್ಕೆಯನ್ನು (ತೊಗಟೆ) ಬೆಲ್ಲದೊಂದಿಗೆ ಬೆರೆಸಿ ಊಟಕ್ಕೆ ಮೊದಲು ತುಸು ಸೇವಿಸುವುದು ಕೂಡ ಕಡ್ಡಾಯ.

ತಿಥಿ ಅಥವಾ ಶ್ರಾದ್ಧಗಳಂದು ತೊಂಡೆಕಾಯಿ, ಬಾಳೆಕಾಯಿ, ಬಾಳೆಯ ಒಳ ತಿರುಳಿನ ಪಲ್ಯ, ಕುಂಬಳ, ಬದನೆ, ಎಳ್ಳು, ಹೆಸರುಕಾಳು, ಉದ್ದು ವಿಶೇಷವಾಗಿ ಬಳಕೆಯಾಗುತ್ತವೆ. ಟೊಮೆಟೋ ಬಳಕೆ ಶ್ರಾದ್ಧಾದಿ ಸಂಪ್ರದಾಯಗಳಲ್ಲಿ ನಿಷಿದ್ಧ. ತೊಂಡೆಕಾಯನ್ನು  ಸಾಮಾನ್ಯ ದಿನಗಳಲ್ಲಿ ಸಂಪ್ರದಾಯಸ್ಥರು ಬಳಸುವುದಿಲ್ಲ. ನುಗ್ಗೆಕಾಯಿ, ನೀರುಳ್ಳಿ, ಬೆಳ್ಳುಳ್ಳಿ ಕೂಡ ಇದೇ ಗುಂಪಿಗೆ ಸೇರುತ್ತವೆ. 

ಸಾಮಾನ್ಯ ದಿನಗಳಲ್ಲಿ ಸೇವಿಸುವ ವಿಶೇಷ ಖಾದ್ಯಗಳಲ್ಲಿ ಪುಟ್ಟು ಅಥವಾ ಬಾಳೆ ಮಂಡಿಗೆ ಪ್ರಮುಖವಾದುದು. ಬಾಳೆ ಎಲೆಯನ್ನು ಕೊಳವೆಯಂತೆ ಮಾಡಿ ಉಪ್ಪು, ಜೀರಿಗೆ ಮತ್ತು ಮೆಣಸನ್ನು ಬೆರೆಸಿ ಹದಮಾಡಿದ ಅಕ್ಕಿ ಹಿಟ್ಟನ್ನು ಕೊಳವೆಯಲ್ಲಿ ಹಾಕಿ ಅದರ ಮೇಲೆ ತುರಿದ ತೆಂಗಿನಕಾಯಿ ಹಾಕಿ ಕೊಳವೆ ತುಂಬುವರು. ಒಂದು ಕೊಳವೆಯಲ್ಲಿ ನಾಲ್ಕು ಭಾಗಗಳಿರುತ್ತವೆ. ಕಟ್ಟಿದ ಕೊಳವೆಯನ್ನು ಅವಿಯಲ್ಲಿ ಬೇಯಿಸುವರು. ಕೊಳವೆಯನ್ನು ಕಟ್ಟಲು ಬಾಳೆಯ ನಾರನ್ನು ಬಳಸುವರು. ಒಂದು ಗೊತ್ತಾದ ಪ್ರಮಾಣದಲ್ಲಿ ಬೆಂದ ತರುವಾಯ ಕಾಯಾಲು (ತೆಂಗಿನಕಾಯಿಯ ಹಾಲು) ವಿನಲ್ಲಿ ಅದ್ದಿ ಸೇವಿಸುವರು. ಇದೇ ಬಗೆಯಲ್ಲಿ ತಯಾರಾಗುವ ಇನ್ನೊಂದು ಖಾದ್ಯ ವಿಶೇಷ ಕೊಟ್ಗೆ ಅಥವಾ ಕೊಟ್ಟಿಗೆ. ಇದನ್ನು ಮೆಣಸು ರಹಿತವಾಗಿ ಸಿದ್ಧಗೊಳಿಸಿ ಬೆಂದ ಮೇಲೆ ಕಾಯಲು ಮತ್ತು ಬೆಲ್ಲವನ್ನು ಸೇರಿಸಿ ನೆಂಚಿಕೊಂಡು ಸೇವಿಸಲಾಗುವುದು. ಇವೆರಡು ಖಾದ್ಯ ವಿಶೇಷಗಳು ಹಾಲಕ್ಕಿ ಒಕ್ಕಲಿಗರು ಮತ್ತು ಹರಿಕಾಂತರಲ್ಲಿ ಬಳಕೆಯಲ್ಲಿವೆ. 

ದಿನನಿತ್ಯದ ಊಟೋಪಚಾರಗಳಿಗೆ ಬಳಕೆಯಾಗುವ ನೆಂಚಿಕೆಗಳು (ನೆಂಚಿಕೆಯನ್ನು ಆಸೆ, ಪದಾರ್ಥ ಎಂಬ ಹೆಸರುಗಳಿಂದ ಕರೆಯುವ ರೂಢಿಯಿದೆ) ಬಗೆ ಬಗೆಯ ಸಸ್ಯಗಳಿಂದ ಸಿದ್ಧವಾಗುತ್ತದೆ. ಇವುಗಳಲ್ಲಿ ಬೆಟ್ಟ ಬಸಲೆ, ಅಮಟೆ, ಸಾಂಬಾರ ಸೊಪ್ಪು (ದೊಡ್ಡಿ ಪತ್ರೆ), ಜೌತಿ ಅಥವಾ ಆರತಿ ಕುಂಡಿಗೆ, ಎಲೆಯುರಿಕೆ, ತಗಟೆ, ವಂದೆಲಗ, ಇಲಿಕಿವಿಗಳನ್ನು ಮುಖ್ಯವಾಗಿ ಗುರುತಿಸಬಹುದು. ಒಗ್ಗರಣೆಗಾಗಿ ಕರಿಬೇವಿನ ಸೊಪ್ಪನ್ನು ಬಳಸುವರು. ಇದನ್ನು ಕರಮಂಗಲ ಸೊಪ್ಪು, ಒಗ್ಗರಣೆ ಸೊಪ್ಪುಗಳೆಂದೂ ಕರೆಯುವರು. 

ಬೇಸಗೆಯ ದಿನಗಳಲ್ಲಿ ಹಲಸು ಮತ್ತು ಮಾವಿನಕಾಯಿಗಳು ಹೇರಳವಾಗಿ ದೊರಕುವುದರಿಂದ ಇವುಗಳನ್ನು ಬಳಸಿ ಬಗೆ ಬಗೆಯ ಆಹಾರಗಳನ್ನು ತಯಾರಿಸಲಾಗುವುದು. ಹಲಸಿನ ಕಾಯಿಯಲ್ಲಿ ವೈವಿಧ್ಯಮಯ ಜಾತಿಗಳಿವೆ. ಬೇರು ಹಲಸು, ನೀರು ಹಲಸು, ಹೆಬ್ಬಲಸುಗಳ ಹಣ್ಣನ್ನು ಸೇವಿಸುವುದಿಲ್ಲ. ಆದರೆ ಎಳೆಯ ಕಾಯಿಯಾಗಿದ್ದಾಗ ಇವುಗಳನ್ನು ಬೇಯಿಸಿ ಪಲ್ಯ, ಸಾರು, ಚಟ್ನಿ, ಗೊಜ್ಜುಗಳ ರೂಪದಲ್ಲಿ ಸೇವಿಸುವರು. ಹಲಸು ಮತ್ತು ಗಟ್ಟಿ ತೊಳೆಯ ಹಲಸು (ಬೊಕ್ಕೆ/ ಬಕ್ಕೆ)ಗಳಿಂದ ಕಡುಬು, ದೋಸೆ, ಸಿಹಿ ಮುಳುಕ (ಅಂಬೊಡೆ ಅಕಾರದ ಸಿಹಿ ತಿಂಡಿ)ಗಳನ್ನು ತಯಾರಿಸುವರು. ಆರಿದ್ರಾ ಮಳೆಯ ಸಂದರ್ಭದಲ್ಲಿ ನಡೆಯುವ ಮಳೆ ಪೂಜೆಯ ಸಂದರ್ಭದಲ್ಲಿ ಹಲಸಿನ ಹಣ್ಣನ್ನು ತೊಳೆ ಬಿಡಿಸಿ ಅಕ್ಕಿ ಹಿಟ್ಟಿನೊಂದಿಗೆ ರುಬ್ಬಿ ಹದವಾದ ಹಿಟ್ಟು ಮಾಡಿ ಬಾಳೆ ಎಲೆಯಲ್ಲಿ ಹಿಟ್ಟು ಸುರಿದು ಕೊಟ್ಟೆ ಆವಿಯಲ್ಲಿ ಬೇಯಿಸಿ ಕಡುಬು ತಯಾರಿಸುವರು. ನೆಟರು, ಇಷ್ಟರನ್ನು ಕರೆದು ಹಬ್ಬದ ಊಟ ಬಡಿಸುವರು. ಹಲಸಿನ ಹಣ್ಣಿನ ತೊಳೆಯನ್ನು ಅಕ್ಕಿ ಹಿಟ್ಚಿನೊಂದಿಗೆ ರುಬ್ಬಿ ಹದವಾದ ಹಿಟ್ಟಿನಿಂದ ದೋಸೆಯನ್ನು ತಯಾರಿಸುವರು. ಹಲಸಿನ ಹಣ್ಣು ದೊರೆಯುತ್ತಿರುವವರೆಗೂ ಬೆಳಗಿನ ಉಪಾಹಾರಕ್ಕೆ ಹಲಸಿನ ಹಣ್ಣಿನ ದೋಸೆ ಸಾಮಾನ್ಯವಾಗಿರುತ್ತದೆ. ಅಕ್ಕಿಯ ರೊಟ್ಟಿ, ಮೊಗೆಕಾಯಿ ದೋಸೆಗಳು ಉಳಿದ ದಿನಗಳಲ್ಲಿ ಬಳಕೆಯಾಗುತ್ತವೆ. ಮಾವಿನ ಕಾಯಿಯ ಗೊಜ್ಜು, ಚಟ್ನಿಗಳು ಬೇಸಿಗೆಯಲ್ಲಿ ಸಾಮಾನ್ಯವಾದ ಊಟದ ನೆಂಚಿಕೆಗಳು. ಅಪ್ಪೆ ಹುಳಿ ಇನ್ನೊಂದು ವಿಶಿಷ್ಟ ನೆಂಚಿಕೆ ಹಾಗೂ ಪಾನೀಯ. ವಿಶೇಷವಾಗಿ ಹುಳಿ ಇರುವ ಮಾವಿನ ಕಾಯಿಗಳನ್ನು ತಕ್ಕ ಪ್ರಮಾಣದಲ್ಲಿ ಬೇಯಿಸಿ ಸಿಪ್ಪೆ ತೆಗೆದು ರಸವನ್ನು ಹಿಂಡಿ, ಅಗತ್ಯ ಪ್ರಮಾಣದಲ್ಲಿ ನೀರು ಬೆರೆಸಿ ಕುದಿಸಿ, ಉಪ್ಪು, ಒಣ ಮೆಣಸಿನಕಾಯಿ, ತುಸು ಬೆಲ್ಲ, ಜೀರಿಗೆ, ಸಾಸುವೆಗಳನ್ನು ಹದವಾಗಿ ಸೇರಿಸಿ ಒಗ್ಗರಣೆ ಹಾಕುವರು. ಮಧ್ಯಾಹ್ನದ ಊಟದ ವೇಳೆಗೆ ಅಪ್ಪೆ ಹುಳಿ ನೆಂಚಿಕೆಗೆ  ಹಾಗೂ ಪಾನೀಯಕ್ಕೆ ಯೋಗ್ಯವಾಗುತ್ತದೆ. ಸೆಕೆಯಲ್ಲಿ ಬಿಸಿ ಬಿಸಿ ಸಾರುಗಳಿಗಿಂತ ಭಿನ್ನ ರುಚಿಯನ್ನು ದೇಹಕ್ಕೆ ತಂಪನ್ನು ನೀಡುವ ಅಪ್ಪೆ ಹುಳಿ ಮೇಲೆಂದು ಅವರು ತಿಳಿಯುತ್ತಾರೆ. ಅಪ್ಪೆಮಿಡಿಯ ಉಪ್ಪಿನಕಾಯಿಗೆ ಜಿಲ್ಲೆ ಹೆಸರುವಾಸಿ. ಅಪ್ಪೆಮಿಡಿ ಒಂದು ಜಾತಿಯ ಮಾವಿನಕಾಯಿ. ಅತ್ಯಂತ ಕಟುವಾದ ಮತ್ತು ಸುವಾಸಿತವಾದ ಸೊನೆಯನ್ನು ಇದು ಸೂಸುತ್ತದೆ. ಹದವಾದ ಹುಳಿ ಇದರ ವೈಶಿಷ್ಟ್ಯ ಹಣ್ಣಾದ ಮೇಲೆ ಇದನ್ನು ಬಳಸಲಾಗುವುದಿಲ್ಲ. ಓಟೆ ಹದವಾಗಿ ಬೆಳೆಯುತ್ತಿದ್ದಂತೆಯೇ ಕಾಯಿಯನ್ನು ನೆಲಕ್ಕೆ ಬೀಳಿಸದಂತೆ ಜೋಪಾನವಾಗಿ ಕಿತ್ತು, ತೊಟ್ಟುಗಳನ್ನು ನಾಜೂಕಾಗಿ ತೆಗೆದು ಸೊನೆಯನ್ನು ಒರೆಸಿ ಉಪ್ಪಿನ ನೀರಿನಲ್ಲಿ ಕಾಯಿಗಳನ್ನು ಹಾಕಿಡುತ್ತಾರೆ. ಅಥವಾ ಕಾಯಿಗಳನ್ನು ಹೋಳುಗಳನ್ನಾಗಿ ಮಾಡಿ ಮೆಣಸು ಒಗ್ಗರಣೆ ಇತ್ಯಾದಿಗಳನ್ನು ಒಂದು ಹದದಲ್ಲಿ ಹಾಕಿ ಉಪ್ಪಿನಕಾಯಿ ತಯಾರಿಸಿ ಗಾಜಿನ ಭರಣಿಯಲ್ಲಿ ತುಂಬಿ ಭದ್ರವಾಗಿ ಮುಚ್ಚಳ ಹಾಕಿ ಇಡಲಾಗುತ್ತದೆ. ಅನೇಕ ವರ್ಷಗಳವರೆಗೆ ಇದು ಕೆಡದಂತೆ ಇಡುತ್ತದೆ. ಅಗತ್ಯವಾದ ಉಪ್ಪಿನಕಾಯನ್ನು ತೆಗೆಯುವಾಗ ಒಬ್ಬರೇ ತೆಗೆಯಬೇಕು. ನೀರಿನ ಸ್ಪರ್ಶ ಆಗಕೂಡದು ಮತ್ತು ಮಾತಾಡಬಾರದು ಎಂಬ ವಿಧಿಗಳಿವೆ. ಮನೆಯ ಹಿರಿಯ ಮಹಿಳೆ ಈ ಕೆಲಸವನ್ನು ನಿರ್ವಹಿಸುತ್ತಾಳೆ. 

ಕಳಲೆ (ಕಳಿಲೆ) ಸಂಪ್ರದಾಯಸ್ಥರಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಎಳೆಯ ಬಿದಿರನ್ನು ಕಳಲೆ ಎಂದು ಕರೆಯುವರು. ಇದು ಬೇಗನೆ ಬೇಯುವುದಿಲ್ಲ. ನೀರಿನಲ್ಲಿ ಎರಡು ದಿನಗಳ ಕಾಲ ನೆನೆಹಾಕಿ ಬೇಯಿಸಿ, ಸಾರು ಅಥವಾ ಪಲ್ಯಗಳನ್ನು ಮಾಡಿ ಇದನ್ನು ಬಳಸುವರು. ಕಳಿಲೆ ಎಲೆಯನ್ನು ಮನೆಯ ಸುತ್ತ ಮತ್ತು ಕೊಟ್ಟಿಗೆಯ ಬಳಿ ಎಲ್ಲೂ ಹಾಕಬಾರದೆಂದು ನಿಷೇಧವಿದೆ. 

ಕಳಿಲೆಯನ್ನು ಸಂಪ್ರದಾಯಸ್ಥರು ಬಳಸಿದರೂ ಮೃಗಶಿರಾ ಮತ್ತು ಅರಿದ್ರಾ ನಕ್ಷತ್ರಗಳ ವೇಳೆಯಲ್ಲಿ ಯಾವ ನಿಷೇಧವಿಲ್ಲ. ಆದರೆ ವಿಶಾಖಾ ನಕ್ಷತ್ರದ ತರುವಾಯ ಅಂದರೆ ಕಾರ್ತಿಕ ಹುಣ್ಣಿಮೆ ಆದ ಮೇಲೆ ಕಳಿಕೆಯನ್ನು ಬಳಸಕೂಡದೆಂದು ನಿರ್ಬಂಧವಿದೆ. 

ಕಳಿಲೆ ಅತ್ಯಂತ ಪುಷ್ಟಿಕರವಾದ ಆಹಾರ ಪದಾರ್ಥ. ಇದರ ಬಗ್ಗೆ ಆಧುನಿಕ ಆಹಾರ ವಿಜ್ಞಾನದಲ್ಲಿ ಸಾಕಷ್ಟು ಅಧ್ಯಯನಗಳಾಗಿವೆ. ವ್ಯಾಪಾರ ವಹಿವಾಟು ಕೂಡ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿ ಕಳಿಲೆ ಕಿತ್ತವರಿಗೆ ದಂಡ, ಕಿರುಕುಳ ಇತ್ಯಾದಿ ಅರಣ್ಯ ಇಲಾಖೆಯವರ ಕಾಟದಿಂದ ಜನರು ತಮ್ಮ ಇಷ್ಟದ ಈ ಆಹಾರ ಬಳಸದಂತಾಗಿದೆ. 

ಋತುಮಾನಕ್ಕನುಗುಣವಾಗಿ ಕೆಲವು ಸಸ್ಯಗಳ ಬಳಕೆಯನ್ನು ವಿಶೇಷವಾಗಿ ಮಾಡುತ್ತಾರೆ. ಬೇಸಗೆಯಲ್ಲಿ ಕಳ್ಳಂಗಟ್ಲೆ ಸಸ್ಯದ ನಾರನ್ನು ಎತ್ತಿ ನೀರಿನಲ್ಲಿ ಕುದಿಸಿ ಸೇವಿಸುವರು. ಇದರಿಂದ ತಯಾರಿಸಿದ ತುಂಬುಳಿ ಊಟಕ್ಕೆ ಬಳಕೆಯಾಗುತ್ತದೆ. ಪಾನಕದ ರೂಪದಲ್ಲಿ ಕಾಮಕಸ್ತೀ ಬೀಜ, ಎಳ್ಳು, ಸೊಪ್ಪು, ಮುರುಗಲ ಹುಳಿಗಳನ್ನು ನೀರಿಗೆ ಬೆರೆಸಿ, ಬೆಲ್ಲ ಸೇರಿಸಿ ಸೇವಿಸುವರು. ಮೊಗೆ ಬೀಜ ಮತ್ತು ಬೆಲ್ಲವನ್ನು ರುಬ್ಬಿ ಹದವಾಗಿ ನೀರು ಸೇರಿಸಿ ಪಾನಕದಂತೆ ಕುಡಿಯುವುದು ಇನ್ನೊಂದು ಜನಪ್ರಿಯ ವಿಧಾನ.

ಮಳೆಗಾಲದಲ್ಲಿ ಕನ್ನೆಕುಡಿ, ಎಲೆಯುರಿಗೆ ಸೊಪ್ಪುಗಳ ತಂಬುಳಿ, ವಿಶೇಷವಾಗಿ ಬಳಕೆಯಾಗುತ್ತದೆ. ಚಳಿಗಾಲದಲ್ಲಿ ತಗಟೆಸೊಪ್ಪಿನ ತಂಬುಳಿ, ಪಲ್ಯ, ಕಟ್ನೆಗಳ (ಕಷಾಯ) ಸೇವನೆ ಇರುತ್ತದೆ. ಸಾಮಾನ್ಯವಾಗಿ ಮಳೆಗಾಲ ಮತ್ತು ಚಳಿಗಾಲದ ಅಡುಗೆಗಳಲ್ಲಿ ಬಳಕೆಯಾಗುವ ಸಸ್ಯಗಳು ಒಂದೇ ಬಗೆಯವು. 

ಅಡುಗೆಯಲ್ಲಿ ಬಳಸುವ ಪಾತ್ರೆಗಳಲ್ಲಿ ಉಪ್ಪು, ಉಪ್ಪಿನಕಾಯಿ ಮೊರಟೆಗಳು, ತೆಂಗಿನ ಕರಟದಿಂದ ಮಾಡಿದ ಚಿಪ್ಪು (ಸೌಟು), ಕೈಎಣ್ಣೆ ಮರದಿಂದ ಮಾಡಿದ ಯಶ ಮುಚ್ಚಲು (ಪಾತ್ರೆಗಳ ಮುಚ್ಚಳ), ಬಿದಿರಿನಿಂದ ತಯಾರಿಸಿದ ಜರಡಿ, ಅನ್ನ ಬಸಿಯುವ ಮರಿಗೆ (ಪುಟ್ಟ ತೊಟ್ಟಿ) ಹಲಸಿನ ಮರದಿಂದ ತಯಾರಿಸಿದ ಸೌಟು, ಸಾಂಬಾರ ಪದಾರ್ಥಗಳನ್ನು ಇಡಲು ತಯಾರಿಸಿದ ಕೈಎಣ್ಣೆ ಮರದ ಸಾಂಬಾರ ಬಟ್ಟಲು, ಬರಲು ಮರದಿಂದ ತಯಾರಿಸಿದ ಕಡೆಗಿಲುಗಳು ವಿಶೇಷವಾದವು. ಇವು ಕಲಾತ್ಮಕ ಕೆತ್ತನೆಗಳಿಂದ ಕೂಡಿರುತ್ತವೆ. ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳ ಬಳಕೆ ಚಾಲ್ತಿಯಲ್ಲಿ ಬರುತ್ತಿದ್ದರೂ ಇಂದಿಗೂ ಮೇಲ್ಕಾಣಿಸಿದ ವಸ್ತುಗಳ ಬಳಕೆ ನಿಂತಿಲ್ಲ. ಪ್ರತಿಯೊಬ್ಬರ ಮನೆಯಲ್ಲೂ ಇವು ಇದ್ದೇ ಇರುತ್ತವೆ.

ಆಹಾರ ಸೇವನೆಯ ಕ್ರಮ:

ಹವ್ಯಕರಲ್ಲಿ ಆಹಾರ ಸೇವನೆಗೆ ಸಂಬಂಧಿಸಿದಂತೆ ಹೆಚ್ಚಿನ ಕಟ್ಟುಪಾಡುಗಳು ಕಂಡುಬರುತ್ತವೆ. ಅನ್ನಾಹಾರ ಸೇವನೆಯ ವಿಷಯದಲ್ಲಿ ಹವ್ಯಕರು ಕೆಲವು ಕಟ್ಟುಪಾಡುಗಳನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಮೂರು ಗಂಟೆಯೊಳಗೆ ಮತ್ತು ರಾತ್ರಿ ಏಳು ಗಂಟೆಯಿಂದ ಹತ್ತುಗಂಟೆಯೊಳಗೆ ಊಟ ಮಾಡುವುದು ಸಾಮಾನ್ಯ ಕ್ರಮ. ಅನ್ನಾಹಾರ ಸೇವನೆಯನ್ನು ಮಾತ್ರ ಊಟ ಎಂದು ಇವರು ಕರೆಯುವುದು. ಉಳಿದಂತೆ ಚಪಾತಿ, ರೊಟ್ಟಿ, ಉಪ್ಪಿಟ್ಟು ಇತ್ಯಾದಿ ಏನನ್ನೇ ಹೊಟ್ಟೆ ತುಂಬ ಸೇವಿಸಿದರೂ ಅದು ಊಟವಲ್ಲ. 

ಊಟಕ್ಕೆ ಬಾಳೆ ಎಲೆಯ ಕುಡಿಯೇ ಆಗಬೇಕು. ಎಲೆಯನ್ನು ಸ್ವಚ್ಛವಾಗಿ ತೊಳೆದು ಬಳಸಲಾಗುತ್ತದೆ, ಮಳೆಗಾಲದ ವೇಳೆ ಅದನ್ನು ಬೆಂಕಿಯಲ್ಲಿ ತುಸು ಬಾಡಿಸಿ ಬಳಸುತ್ತಾರೆ. ಮಳೆಗಾಲದ ಸಮಯದಲ್ಲಿ ಬಾಳೆ ಎಲೆಯನ್ನು ಆಶ್ರಯಿಸಿ ಅನೇಕ ಕ್ರಿಮಿ ಕೀಟಗಳು ಇರುವುದರಿಂದ ಈ ಕ್ರಮ ಅನುಸರಿಸುತ್ತಾರೆ. ಊಟಕ್ಕೆ ಎಲೆ ಹಾಕಿದ ಮೇಲೆ ಊಟ ಮಾಡುವವರನ್ನೆಲ್ಲ ಸಾಲಾಗಿ ಕೂರಿಸಿದ ಮೇಲೆ ಊಟ ಬಡಿಸಲಾಗುತ್ತದೆ. ಬಾಳೆ ಎಲೆಯ ತುದಿ ಭಾಗ ಊಟಕ್ಕೆ ಕುಳಿತವನ ಎಡಭಾಗಕ್ಕೆ ಬರಬೇಕು. ಈ ಎಲೆಯ ಎಡ ಮೇಲ್ಭಾಗದಲ್ಲಿ ಉಪ್ಪು, ಉಪ್ಪಿನಕಾಯಿ ಬಡಿಸಬೇಕು. ನಂತರ ಎಡಭಾಗದಿಂದ ಬಲಕ್ಕೆ ಎಲೆಯ ಮೇಲ್ತುದಿಯಲ್ಲಿ ಕೋಸಂಬರಿ, ಪಲ್ಯ, ಗೊಜ್ಜು, ಚಟ್ನಿ ಇತ್ಯಾದಿ ನೆಂಚಿಕೆಗಳನ್ನು ಬಡಿಸಬೇಕು. 

ಎಲೆಯ ಬಲಭಾಗದ ಕೆಳತುದಿಯಲ್ಲಿ ಪಾಯಸ ಬಡಿಸಬೇಕು. ಎಲೆಯ ಎಡಬದಿಯ ಕೆಳಭಾಗದಲ್ಲಿ ಚಿತ್ರಾನ್ನ, ಹಪ್ಪಳ, ಸಂಡಿಗೆಗಳನ್ನು ಬಡಿಸಬೇಕು. ಮಧ್ಯಭಾಗದಲ್ಲಿ ಅನ್ನವನ್ನು ಬಡಿಸಬೇಕು. ಊಟಕ್ಕೆ ಸಿದ್ಧಪಡಿಸಿದ ಎಲ್ಲ ಆಹಾರ ಬಗೆಗಳನ್ನೂ ಎಲೆಯಲ್ಲಿ ಸ್ವಲ್ಪ ಸ್ವಲ್ಪವೇ ಈ ಕ್ರಮದಲ್ಲಿ ಮೊದಲು ಬಡಿಸಿದ ನಂತರ ಮಧ್ಯಭಾಗದಲ್ಲಿ ಅನ್ನ ಬಡಿಸಬೇಕು. ಅನ್ನದ ಮೇಲೆ ತುಪ್ಪವನ್ನು ಬಡಿಸಿದ ಮೇಲೆ ತೊಗರಿ ಬೇಳೆಯ ತೊವ್ವೆ ಬಡಿಸಬೇಕು. 

ಇಷ್ಟಾದ ಮೇಲೆ ದೇವರ ಪ್ರಾರ್ಥನೆ ನಡೆಯುತ್ತದೆ. ಆನಂತರವಷ್ಟೇ ಊಟ ಆರಂಭ. ಒಂದೆಡೆಯಿಂದ ಬಡಿಸಲು ಆರಂಭಿಸುತ್ತಿದ್ದಂತೆಯೇ ಯಾರೂ ತಿನ್ನಲು ಆರಂಭಿಸುವಂತಿಲ್ಲ. ಎಲ್ಲವನ್ನೂ ಬಡಿಸಿ ದೇವರ ಪ್ರಾರ್ಥನೆ ಆದ ಮೇಲಷ್ಟೇ ಬಡಿಸಿದ ಆಹಾರಕ್ಕೆ ಕೈಹಾಕಬೇಕು. ಉಪನಯನವಾದವರು ಚಿತ್ರಾವತಿಯನ್ನು ಇಟ್ಟ ಮೇಲಷ್ಟೇ ಊಟ ಮಾಡಬೇಕು. ಮೊದಲು ಸಾರು, ನಂತರ ಹುಳಿ, ನಂತರ ಬಜ್ಜಿ, ಹಸಿ ಇತ್ಯಾದಿ ಪದಾರ್ಥಗಳು ಕ್ರಮವಾಗಿ ಬರುತ್ತವೆ. ಸಿಹಿ ಪದಾರ್ಥಗಳು ಬಂದ ಮೇಲೆ ಕೊನೆಯಲ್ಲಿ ಮಜ್ಜಿಗೆ ಅಥವಾ ಮೊಸರನ್ನ ಊಟಮಾಡಬೇಕು. ಬಡಿಸಿಕೊಂಡ ಏನನ್ನೂ ಚೆಲ್ಲಬಾರದು, ವ್ಯರ್ಥ ಮಾಡಬಾರದು. ಹಾಗೇನಾದರೂ ಅನಿವಾರ್ಯವಾಗಿ ಆಹಾರ ಬಿಡಬೇಕಾಗಿ ಬಂದರೆ ತ್ಯಜಿಸಿದ ಅನ್ನಾಹಾರಕ್ಕೆ ನೀರು ಬೆರೆಸಬೇಕು. ಚಿತ್ರಾವತಿ ಇಟ್ಟವರು ಉಪ್ಪಿಗೆ ತುಸು ನೀರು ಸೇರಿಸಿ ಅದನ್ನು ಸೇವಿಸಿ ನಂತರ ಆಪೋಶನ ತೆಗೆದುಕೊಂಡು ನೆಲಕ್ಕೆ ಕೈಒತ್ತಿ ಮೇಲೇಳಬೇಕು. ದೇವರ ಪ್ರಾರ್ಥನೆ ಅಥವಾ ಶ್ಲೋಕಗಳನ್ನು ಬಿಟ್ಟು ಊಟ ಮಾಡುವಾಗ ಬೇರೇನೂ ಮಾತಾಡಬಾರದು, ಹರಟಬಾರದು. ಆಪೋಶನ ತೆಗೆದುಕೊಂಡ ಮೇಲೆ ಕೈತೊಳೆದುಕೊಳ್ಳಬೇಕು. ಊಟವಾದ ಮೇಲೂ ಖಾಲಿ ಎಲೆಯ ಮುಂದೆ ಹೆಚ್ಚು ಹೊತ್ತು ಕೂತಿರುವುದು ಅಥವಾ ನೀರು ಮತ್ತೇನೋ ಸೇವಿಸುವುದು ನಿಷಿದ್ಧ. ಮಕ್ಕಳಿರಲಿ, ವಿವಾಹಿತರಿರಲಿ, ಸ್ತ್ರೀಯರಿರಲಿ ಎಲ್ಲರಿಗೂ ಊಟದ ಸಾಮಾನ್ಯ ನಿಯಮಗಳು ಅನ್ವಯ.

ಅಕ್ಕಿಯನ್ನು ಬೇಯಿಸಿದಾಗ ಅದನ್ನು ಮುಸುರೆ ಎಂದು ತಿಳಿಯಲಾಗುತ್ತದೆ. ಅನ್ನವನ್ನು ಮುಟ್ಟುವ ಮೊದಲು ಅಥವಾ ಮುಟ್ಟಿದ ಅನಂತರ ಕೈ ತೊಳೆದುಕೊಳ್ಳಬೇಕು. ಅನ್ನವಿಟ್ಟ ಸ್ಥಳವನ್ನೂ ಸ್ವಚ್ಛಗೊಳಿಸಬೇಕು. ದೇವರಿಗೆ ಮಡಿಯಲ್ಲಿ ನೈವೇದ್ಯಕ್ಕೆ ಮಾಡಿದ ಪದಾರ್ಥಗಳನ್ನು ಬಿಟ್ಟರೆ ಬೇರೆ ಯಾವ ಪದಾರ್ಥವನ್ನೂ ಈ ಸ್ಥಾನವನ್ನು ನೀಡಿಲ್ಲ. ಈ ಸಮುದಾಯದ ಪ್ರಧಾನ ಆಹಾರ ಅನ್ನವಾದ ಕಾರಣದಿಂದ ಹಾಗೂ ಪವಿತ್ರತೆಯ ಕಾರಣದಿಂದ ಇಂಥ ಗೌರವ ಭಾವನೆಯನ್ನು ನೀಡಲಾಗಿದೆ ಅನಿಸುತ್ತದೆ.  

ಉಪವಾಸದ ಕ್ರಮ: 

ಹವ್ಯಕರು ಹರಿ, ಹರರನ್ನು ಸಮಾನವಾಗಿ ಕಾಣುತ್ತಾರೆ. ದೇವರಲ್ಲಿ ಯಾವ ಭೇದವನ್ನೂ ಇವರು ಕಾಣುವುದಿಲ್ಲ. ಕೃಷ್ಣಜನ್ಮಾಷ್ಟಮಿಯೂ ಶಿವರಾತ್ರಿಯೂ ಇವರ ಪಾಲಿಗೆ ಒಂದೇ. ಎರಡರಲ್ಲೂ ಸಮಾನ ಶ್ರದ್ಧೆ ಮತ್ತು ಕಟ್ಟುನಿಟ್ಟಿನ ಆಚರಣೆ ಮಾಡುತ್ತಾರೆ. ಏಕಾದಶಿಯಂದು ದಿನವಿಡೀ ಉಪವಾಸ ಇರುತ್ತಾರೆ. ಬಹುತೇಕ ಜನ ರಾತ್ರಿ ವೇಳೆ ಮಾತ್ರ ಅವಲಕ್ಕಿ ಅಥವಾ ಉಪ್ಪಿಟ್ಟಿನಂಥ ಲಘು ಆಹಾರ ಸೇವಿಸುತ್ತಾರೆ. ಶಿವರಾತ್ರಿ ಮತ್ತು ಶ್ರೀಕೃಷ್ಣಜನ್ಮಾಷ್ಟಮಿಗಳಂದು, ಶ್ರಾದ್ಧಾದಿಗಳಂದು ಉಪವಾಸ ಆಚರಿಸುತ್ತಾರೆ. ಇದು ಸಾಮುದಾಯಿಕವಾದುದು. ಉಪವಾಸ ಆಚರಣೆ ಎಂದು ಹೇಳುತ್ತ ಲಘು ಆಹಾರ ಸೇವಿಸುತ್ತಿದ್ದರೆ ಹಾಸ್ಯಕ್ಕೆ “ಮಂಗನ ಉಪವಾಸ” ಎಂದು ಛೇಡಿಸುತ್ತಾರೆ. ಇದಲ್ಲದೇ ವೈಯಕ್ತಿಕವಾಗಿಯೂ ಕೆಲವರು ವಾರದ ಉಪವಾಸ ಮಾಡುತ್ತಾರೆ. ಈಚಿನ ದಿನಗಳಲ್ಲಿ ಉಪವಾಸದ ಪದ್ಧತಿ ಹೊಸ ತಲೆಮಾರಿನವರಲ್ಲಿ ಕಡಿಮೆಯಾಗುತ್ತಿದೆ ಎಂಬುದು ಹಿರಿಯರ ಅಂಬೋಣ. 

ಹವ್ಯಕರ ಸಮಾಜ ಹಾಗೂ ಸಂಸ್ಕೃತಿ ವಿಶಿಷ್ಟವಾಗಿದ್ದು ಇದರ ಕಿರು ನೋಟವನ್ನು ಅವರ ಆಹಾರ ಕ್ರಮವನ್ನು ಗಮನಿಸುವ ಮೂಲಕ ಅವಲೋಕಿಸಬಹುದು. ಆಹಾರ ಕ್ರಮವನ್ನು ಗಮನಿಸಿದರೆ ಉಳಿದ ಸಂಗತಿಗಳ ಸ್ಥೂಲ ಚಿತ್ರಣ ಲಭಿಸುತ್ತದೆ. ಹಾಗಾಗಿ ಇಲ್ಲಿ ಹವ್ಯಕರ ಆಹಾರ ಕ್ರಮದ ನೋಟವನ್ನು ನೋಡಲಾಗಿದೆ. ಕಲೆ ಸಾಹಿತ್ಯದಲ್ಲೂ ಹವ್ಯಕರ ಹೆಸರು ಉತ್ತುಂಗದಲ್ಲಿದೆ. ಮಹಾನ್ ಯಕ್ಷಗಾನ ಕಲಾವಿದರಾಗಿದ್ದ ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಆ ಪರಂಪರೆಯನ್ನು ಮುಂದುವರೆಸಿದ ಕೆರೆಮನೆ ಶಿವಾನಂದ ಹೆಗಡೆ , ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಮನೆತನ, ಕೊಂಡದಕುಳಿ ಶ್ರೀಪಾದ ಹೆಗಡೆಯವರ ಮನೆತನ ಮೊದಲಾದವು ಹವ್ಯಕರ ಪ್ರೀತಿಯ ಯಕ್ಷಗಾನ ಕಲೆಯ ಪ್ರಸಿದ್ಧ ಹೆಸರುಗಳಾಗಿವೆ, ಇನ್ನೂ ಹತ್ತು ಹಲವು ಕುಟುಂಬಗಳೇ ಈ ಕಲೆಗೆ ತೊಡಗಿಸಿಕೊಂಡಿವೆಯಲ್ಲದೇ ಯಕ್ಷಗಾನ ತಾಳಮದ್ದಲೆಯಲ್ಲೂ ಸಾಕಷ್ಟು ಹೆಸರು ಮಾಡಿದ ಕುಟುಂಬಗಳಿವೆ. ಇನ್ನು ಚಿತ್ರಕಲೆ, ಶಾಸ್ತ್ರೀಯ ಸಂಗೀತದ ಕ್ಷೇತ್ರದಲ್ಲೂ ಅಪಾರವಾಗಿ ದುಡಿದವರಿದ್ದಾರೆ. ಇತಿಹಾಸ, ಸಾಹಿತ್ಯ, ಶಾಸನ ಕ್ಷೇತ್ರಗಳಲ್ಲಿ, ವಿಜ್ಞಾನ-ತಂತ್ರಜ್ಞಾನಗಳಲ್ಲಿ, ಕ್ರೀಡೆ, ರಾಜಕಾರಣದಲ್ಲೂ ದೇಶದ ಸೇನೆಯೂ ಸೇರಿದಂತೆ ರಾಷ್ಟç, ಅಂತಾರಾಷ್ಟçದ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿದ ಜನರಿದ್ದಾರೆ. ಎಷ್ಟೇ ಆಧುನಿಕ ಜೀವನಕ್ಕೆ ತೆರೆದುಕೊಂಡಿದ್ದರೂ ಸಂಪ್ರದಾಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳದವರು ಹವ್ಯಕರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ದುಡಿದ ಮಹನೀಯರಿದ್ದಾರೆ. ಹವ್ಯಕರ ಸಂಘಟನೆ, ಏಳಿಗೆಗೆ ಶ್ರಮಿಸುವ ಹವ್ಯಕ ಮಹಾಸಭಾ ಎಂಬ ಬೃಹತ್ ಸಂಘಟನೆಯೂ ಸಕ್ರಿಯವಾಗಿದೆ. ಒಟ್ಟಿನಲ್ಲಿ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಗುಣದಲ್ಲಿ ಇತರರಿಗೆ ಮತ್ಸರ ಹುಟ್ಟಿಸುವಲ್ಲಿ ಹವ್ಯಕ ಸಮುದಾಯ ಯಶಸ್ವಿಯಾಗಿದೆ.           

 

 


Monday, 16 December 2024

ಸದ್ಯ ನನ್ನ ಗಮನ ಸೆಳೆದ ಒಂದು ಕೃತಿ


ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು, ನೆಲೆ - ಹಿನ್ನೆಲೆ ಎಂಬ ಅಪರೂಪ ಅನಿಸುವ ಕೃತಿ - ಇದು ಮೂರ್ನಾಲ್ಕು ದಿನ ನಿರಂತರ ಓದಿಸಿಕೊಂಡಿತು. ಯಾಕೆ ಅಪರೂಪ ಅಂದರೆ, ಇಂಥ ಒಂದು ಮುಖ್ಯ ಪಂಗಡ ಮತ್ತು ಅದರೊಳಗಿನ ಉಪ ಪಂಗಡ ಕುರಿತ ಗಂಭೀರ ಅಧ್ಯಯನ ಕೃತಿ ಇದೇ ಮೊದಲು ಆದ್ದರಿಂದ. ಅಲ್ಲದೇ ಸಾಮಾನ್ಯವಾಗಿ ಸಮಾಜ ಶಾಸ್ತ್ರ, ಮಾನವ ಶಾಸ್ತ್ರ ಅಥವಾ ಜಾನಪದ ಅಧ್ಯಯನಗಳಲ್ಲಿ ಆಗಾಗ ಜಾತಿ ಪಂಗಡಗಳ ಜಾತಿಗಳ ಅಧ್ಯಯನ ನಡೆಯುವಾಗ ಅಪರೂಪಕ್ಕೆ ಅಲ್ಲಲ್ಲಿ ಇಂಥ ಅಧ್ಯಯನ ನಡೆದುದುಂಟು. ಆದರೆ ಇತ್ತೀಚೆಗೆ ಬ್ರಾಹ್ಮಣರನ್ನು ಕುರಿತ ಅಧ್ಯಯನ ಉನ್ನತ ಮಟ್ಟದಲ್ಲಿ ಅಘೋಷಿತವಾಗಿ ನಿಷಿದ್ಧವಾಗಿಹೋಗಿದೆಯಾದ್ದರಿಂದ ಈ ಸಮುದಾಯದ ಬಗ್ಗೆ ಈ ಬಗೆಯ ಗಂಭೀರ ಅಧ್ಯಯನ ಕಾಣಿಸುವುದೇ ದುರ್ಲಭ. ಇಂದಿನ ಶೈಕ್ಷಣಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಬ್ರಾಹ್ಮಣ ಸಮುದಾಯವೇ ಈ ದೇಶದ ಪಿಡುಗುಗಳಿಗೆಲ್ಲ ಬ್ರಾಹ್ಮಣ ಸಮುದಾಯವೇ ಕಾರಣ ಅನ್ನುವ ಪಾಶ್ಚಾತ್ಯರು ಬಿತ್ತಿದ ಬೀಜ ಬೆಳೆದು ನಿಂತಿದೆ. ಇದರಿಂದ ಬ್ರಾಹ್ಮಣರನ್ನು ಕುರಿತ ಯಾವುದೇ ಬಗೆಯ ಗಂಭೀರ ಅಧ್ಯಯನಕ್ಕೆ ಯಾವುದೇ ವಲಯದಲ್ಲಿ ನಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತದೆ. ಇಂಥ ಸಂದರ್ಭದಲ್ಲಿ ಅಷ್ಟಕ್ಕೂ ನಿಜಕ್ಕೂ ಬ್ರಾಹ್ಮಣರು ಈ ದೇಶಕ್ಕೆ ಕೊಟ್ಟ ನಿಜವಾದ ಕೊಡುಗೆ ಏನೂ ಇಲ್ಲವೇ? ಬರೀ ಕೆಟ್ಟದ್ದನ್ನು ಮಾತ್ರ ಕೊಟ್ಟರೇ? ಕೆಟ್ಟದ್ದ ಅನ್ನು ವಂಥದ್ದು ಇದ್ದರೆ ಅದಕ್ಕೆ  ಬೇರೆ ಸಮುದಾಯಗಳ ಕೊಡುಗೆ ನಿಜಕ್ಕೂ ಏನೂ ಇಲ್ಲವೇ ಎಂಬ ಅಧ್ಯಯನ ನಿಜಕ್ಕೂ ಗಂಭೀರವಾಗಿ ನಡೆಯಬೇಕಿದೆ. ಯಾವುದೇ ಪೂರ್ವಗ್ರಹವಿಲ್ಲದೇ ಇಂಥ ಅಧ್ಯಯನ ನಡೆಯಬೇಕಾದ ಅಗತ್ಯ ಇಂದಿಗೂ ಹಾಗೆಯೇ ಉಳಿದಿದೆ. ಬ್ರಾಹ್ಮಣರು ಬರೀ ಕೆಟ್ಟದ್ದು ಮಾತ್ರ ಮಾಡಿದ್ದಾರೆಂದು ಸಾರ್ವಜನಿಕವಾಗಿ ಯಾರೂ ಹೇಳುವುದಿಲ್ಲ, ಬ್ರಾಹ್ಮಣರು ಎಂದಲ್ಲ, ಯವ ಸಮುದಾಯದ ಬಗ್ಗೆಯೂ ಇಂಥ ಮಾತನ್ನು ಹೇಳಲು ಸಾಧ್ಯವಲ್ಲ, ಅದು ಸಾಧುವೂ ಅಲ್ಲ. ಆದರೆ ಒಟ್ಟಾರೆ ಇಂಥ ಮನೋಧರ್ಮ ಈ ವಲಯಗಳಲ್ಲಿ ಇರುವುದು ಸುಳ್ಳಲ್ಲ, ಆದ್ದರಿಂದ ಸಾರ್ವಜನಿಕ ಸ್ವರೂಪದಲ್ಲಿ ಅನ್ಯರು ಇಂಥ ಕೆಲಸವನ್ನು ಈ ಸಮುದಾಯದ ಬಗ್ಗೆ ಮಾಡಲು ಮುಂದಾಗಲಾರರು. ಅದನ್ನು ನಿರೀಕ್ಷಿಸುವುದು ಕೂಡ ಸರಿಯಲ್ಲ. ಆದರೆ ಇಂಥ ಅಧ್ಯಯನಗಳು ಅನ್ಯರಿಂದ ನಡೆದರೆ ಅದರ ಬೆಲೆ ಹೆಚ್ಚು ಎಂಬುದರಲ್ಲಿ ಎರಡು ಮಾತಿಲ್ಲ. ದೇಶದಲ್ಲಿ ಈ ಗಾಗಲೇ ಹೇಳಿದಂತೆ ಬ್ರಾಹ್ಮಣ ಸಮುದಾಯದ ಬಗ್ಗೆ ವಸಾಹತು ಪ್ರಭಾವದಿಂದ ಅನೇಕ ಅಪ ಕಲ್ಪನೆಗಳಿವೆ ಅದರಲ್ಲೊಂದು ಈ ದೇಶದ ಅನಿಷ್ಟಗಳಿಗೆ ಬ್ರಾಹ್ಮಣರೇ ಕಾರಣ ಅನ್ನುವುದು ಒಂದು. ಇನ್ನೊಂದು ಬ್ರಾಹ್ಮಣರು ಕೇವಲ ಪೂಜೆ ಪೌರೋಹಿತ್ಯ ಮಾಡಿಕೊಂಡಿರುವವರು ಅನ್ನುವುದು. ಇದಕ್ಕೆ ಕಾರಣ ಬ್ರಟಿಷರು ಯೂರೋಪಿನ ತಮ್ಮ ಸಮಾಜದಲ್ಲಿದ್ದ ಪ್ರೀಸ್ಟ್ಗಳಿಗೆ ಸಮಾಂತರವಾಗಿ ಇಲ್ಲಿನ ಬ್ರಾಹ್ಮಣ ಸಮುದಾಯವನ್ನು ಕಂಡು ಅವರ ಅನುಭವವನ್ನು ಹಾಗೆಯೇ ಇಲ್ಲಿನ ಸಮಾಜಕ್ಕೆ ಆರೋಪಿಸಿದ್ದು. ತಮಾಷೆ ಅಂದರೆ ಬ್ರಿಟಿಷರ ಕಾಲದಲ್ಲಿಯೇ ವಿವಿಧ ಬ್ರಾಹ್ಮಣ ಸಮುದಾಯಗಳು ಬೇರೆ ಬೇರೆ ವೃತ್ತಿಗಳಲ್ಲಿದ್ದರು, ಅಷ್ಟಕ್ಕೂ ಅವರ ಆಡಳಿತದಲ್ಲಿ ಅವರ ಸರ್ಕಾರದಲ್ಲಿಯೇ ವಿವಿಧ ವೃತ್ತಿಗಳಲ್ಲಿ ಬ್ರಾಹ್ಮಣರಿದ್ದರು. ಸಾಲದ್ದಕ್ಕೆ ಹವ್ಯಕ, ಸಂಕೇತಿ ಮೊದಲಾದ ಬ್ರಾಹ್ಮಣ ಪಂಗಡಗಳು ತಲೆ ತಲಾಂತರದಿಂದ ಕೃಷಿಯನ್ನೇ ತಮ್ಮ ಕುಲ ಕಸುಬನ್ನಾಗಿ ಮಾಡಿಕೊಂಡು ಬಂದಿದ್ದಾರೆOಬುದು ಅವರ ದಾಖಲೆಗಳಲ್ಲೇ ಇದೆ. ಇಷ್ಟಾಗಿಯೂ ಅವರು ಬ್ರಾಹ್ಮಣರೆಂದರೆ ಬರೀ ಪೂಜೆ ಪೌರೋಹಿತ್ಯ ಮಾಡಿಕೊಂಡಿರುವವರು ಎಂದು ಬಿಂಬಿಸಿದರಲ್ಲದೇ ಈ ದೇಶದ ಎಲ್ಲ ಸಾಮಾಜಿಕ ಅನಿಷ್ಟಗಳಿಗೂ ಜಾತಿಯೇ ಕಾರಣ ಹಾಗೂ ಇದನ್ನು ಸೃಷ್ಟಿಸಿದವರೇ ಬ್ರಾಹ್ಮಣರು ಎಂಬ ಕಲ್ಪನೆಯನ್ನು ಬಲವಾಗಿ ಬಿತ್ತಿದರು. ಇದು ಇಂದು ಹೆಮ್ಮರವಾಗಿ ಬೆಳೆದುನಿಂತು ಸಾಕಷ್ಟು ಗೊಂದಲಗಳಿಗೂ ತಪ್ಪು ಕಲ್ಪನೆಗಳಿಗೂ ತಪ್ಪು ಸಾರ್ವಜನಿಕ ಗ್ರಹಿಕೆಗಳಿಗೂ ಕಾರಣವಾಗಿದೆ. ಬ್ರಾಹ್ಮಣರು ಈ ದೇಶದ ಆಧುನಿಕ ಬೆಳವಣಿಗೆಗೂ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಮೊದಲ ಪ್ರಧಾನಿ ನೆಹರೂ ಒಬ್ಬ ಬ್ರಾಹ್ಮಣ ಸಮುದಾಯದವರು ಅಂತೆಯೇ ಅಪರೂಪದ ರಾಜಕಾರಣಿ ಲಾಲ್ ಬಹದ್ದೂರ್‌ಶಾಸ್ತ್ರಿ, ರಾಜಾರಾಮ ಮೋಹನ್‌ರಾಯ್ ಇವರೆಲ್ಲ ಆಯಾ ಪ್ರದೇಶದಲ್ಲಿದ್ದ ಬ್ರಾಹ್ಮಣ ಪಂಗಡದವರೆಂಬುದನ್ನು ಮರೆಯಲಾಗದು. ಅಂತೆಯೇ ಬ್ರಾಹ್ಮಣ ಸಮುದಾಯ ಈ ದೇಶದ ಸಂಗೀತ, ಕಲೆ ಸಾಹಿತ್ಯಗಳಿಗೆ ಕೊಟ್ಟವರ ಪಟ್ಟಿ ಸಣ್ಣದಲ್ಲ, ಜೊತೆಗೆ ಈ ದೇಶ ಕಂಡ ಅಸಾಧಾರಣ ಸಾಮಾಜಿಕ ಕ್ರಾಂತಿಕಾರ, ಸಮಾನತೆಯ ಹರಿಕಾರ ರಾದ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಹೆಸರು ಹಾಗೆ ಬಂದಿದ್ದೇ ಅವರ ಒಬ್ಬ ಬ್ರಾಹ್ಮಣ ಸಮುದಾಯದ ಶಿಕ್ಷಕರಿಂದ ಎಂಬುದನ್ನೂ ಮರೆಯಲಾಗದು. ಅಂಬೇಡ್ಕರ್ ಅವರ ಶಾಲಾ ದಾಖಲೆಗಳಲ್ಲಿ ಅವರ ಮೊದಲ ಮೂಲ ಹೆಸರು ಅಂಬಡವೇಕರ್ ಎಂದಿದ್ದು ಅದು ಅವರ ಶಿಕ್ಷಕರದ ಕೃಷ್ಣಜಿ ಕೇಶವ್ ಅಂಬೇಡ್ಕರ್ ಅವರ ಕಾರಣದಿಂದ ಅಂಬೇಡ್ಕರ್ ಎಂದು ಬದಲಾಯಿತು ಅನ್ನಲಾಗಿದೆ. ಅಲ್ಲದೇ ಸ್ವತಃ ಅಂಬೇಡ್ಕರ್ ಅವರಿಗೂ ಈ ದೇಶದ ಒಂದು ಸಮುದಾಯವಾದ ಬ್ರಾಹ್ಮಣರ ಬಗ್ಗೆ ಸ್ವತಃ ಅಂಬೇಡ್ಕರ್ ಅವರಿಗೆ ಯಾವುದೇ ಪೂರ್ವಗ್ರಹಗಳಿರಲಿಲ್ಲ. ದೇಶದಲ್ಲಿರುವ ಇಷ್ಟೊಂದು ಜಾತಿಗಳ ಸೃಷ್ಟಿ ಕೇವಲ ಬ್ರಾಹ್ಮಣರಿಂದ ಮಾತ್ರ ಆಗಿದೆ ಎಂಬುದನ್ನು ಅವರು ಒಪ್ಪುವುದಿಲ್ಲ, ಅನುಮೋದಿಸುವುದೂ ಇಲ್ಲ (ನೋಡಿ-(ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆಹಗಳು-ಭಾಷಣಗಳು, ಸಂಪುಟ ೧, ಪುಟ೧೮-೨೭, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ೨೦೧೮,). ಕನ್ನಡದಲ್ಲಿ ಇನ್ನೊಂದು ತಪ್ಪು ಗ್ರಹಿಕೆ ಹೆಚ್ಚು ಜನಪ್ರಿಯವಾಗಿದೆ. ಅದೆಂದರೆ ಈ ದೇಶದಲ್ಲಿ ಬ್ರಿಟಿಷರೇ ಮೊದಲು ಎಲ್ಲರಿಗೂ ಶಿಕ್ಷಣ ಕೊಟ್ಟವರು ಎಂಬುದು. ತಮಾಷೆ ಅಂದರೆ ಕುವೆಂಪು ಅವರಂಥವರು ಕೂಡ ಇಂಥ ಮಾತಿಗೆ ಓಗೊಡುತ್ತಾರೆ. ಆದರೆ ಸ್ವತಃ ಕುವೆಂಪು ಅವರೇ ಬ್ರಿಟಿಷ್ ಶಿಕ್ಷಣ ಬರುವ ಮುಂಚೆಯೇ ಸಾಂಪ್ರದಾಯಿಕ ಕೂಲಿ ಮಠದಲ್ಲಿ ಪಡೆದುಕೊಂಡಿದ್ದರು. ಆದರೆ ಕುವೆಂಪು ಅವರು ಒಂದೆಡೆ ಬ್ರಿಟಿಷರು ಬಾರದಿದ್ದರೆ ತಾವು ಎಲ್ಲೋ ದನ ಕುರಿ ಮೇಯಿಸಿಕೊಂಡು ಇರಬೇಕಾಗುತ್ತಿತ್ತು ಅಂದಿದ್ದಾರೆ ಹಾಗೂ ಅವರ ಮೇರು ಕೃತಿ ರಾಮಾಯಣ ದರ್ಶನಂ ಅನ್ನು ತಮ್ಮ ಪ್ರೀತಿಯ ಗುರುಗಳಾದ ಬ್ರಾಹ್ಮಣ ಸಮುದಾಯದ ಟಿ ಎಸ್ ವೆಂಕಣ್ಣಯ್ಯ ಅವರಿಗೆ ಅರ್ಪಿಸಿದ್ದಾರೆ. ವೆಂಕಣ್ಣಯ್ಯ ಹಗೂ ಅವರ ಸಹೋದರ ತ ಸು ಶ್ಶಾಮರಾವ್ ಅವರು ಜಾತಿ ಮತ ನೋಡದೇ ಅಸಂಖ್ಯ ವಿದ್ಯಾರ್ಥಗಳಿಗೆ ಊಟ ವಸತಿ ಒದಗಿಸಿದ್ದು ಕೂಡ ಅವರ ಗಮನದಲ್ಲಿತ್ತು. ಆದರೆ ಕುವೆಂಪು ಅವರಿಗೆ ಸಂಬಂಧಿಸಿದ ಇಂಥ ವಿವರಗಳ ಅರಿವಿಲ್ಲದ ತರುವಾಯದ ಜನ ಅವರ ಮಾತನ್ನು ಬ್ರಾಹ್ಮಣೇತರರಿಗೆ ಆರೋಪಿಸಿ ಎಲ್ಲರಿಗೂ ಶಿಕ್ಷಣ ಸಿಗದಂತೆ ಮಾಡಿದ್ದು ಬ್ರಾಹ್ಮಣರು ಎಂದು ಭಾವಿಸಿ ಹಾಗೆಯೇ ಪ್ರಚಾರ ಮಾಡುತ್ತ ಬಂದರು. ಕುವೆಂಪು ಅವರು ಹೀಗೆ ಹೇಳಿಲ್ಲ. ಇವೆಲ್ಲ ಹಾಗಿರಲಿ. ಈಗ ಮತ್ತೆ ಈ ಕೃತಿಯ ಕಡೆಗೆ ಬರೋಣ. ಪ್ರಸ್ತುತ ಕೃತಿಯಲ್ಲಿ ಕರ್ನಾಟಕದ ಸ್ಮಾರ್ತ ಬ್ರಾಹ್ಮಣರನ್ನು ಗಮನದಲ್ಲಿಟ್ಟುಕೊಂಡು ಅದರೊಳಗಿನ ಉಪ ಪಂಗಡಗಳ ವಿಶಿಷ್ಟ ಮಾಹಿತಿಗಳ ವಿವರ ಕೊಡಲಾಗಿದೆ. ಈ ಕೃತಿಯನ್ನು ಗಮನಿಸಿದರೆ ಇಂಥ ಕೃತಿ ದೇಶದ ಎಲ್ಲ ಸಮುದಾಯಗಳಲ್ಲೂ ಹೊರಬರುವ ಅಗತ್ಯವಿದೆ ಅನಿಸುತ್ತದೆ. ಏಕೆಂದರೆ ನಮ್ಮ ದೇಶದ ವೈವಿಧ್ಯ ಇರುವುದೇ ವಿವಿಧತೆ ಹಾಗೂ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರತ್ಯೇಕತೆಯಲ್ಲಿ. ಹಾಗೆ ನೋಡಿದರೆ ವಿವಿಧತೆ ನಿಸರ್ಗ ಸಹಜ. ಪ್ರಕೃತಿಯಲ್ಲಿ ಯಾವುದನ್ನೇ ಗಮನಿಸಿ. ಕಾಡು-ಮೇಡು, ನದಿ, ಪ್ರಾಣಿ ಪಕ್ಷಿ ಇತಾದಿ. ಇವುಗಳಲ್ಲಿ ಯಾವುದೂ ಒಂದರಂತೆ ಇನ್ನೊಂದಿಲ್ಲ. ಏಕ ರೂಪತೆ ಇದ್ದರೆ ವಿನಾಶ ಹತ್ತುರ ಬರುತ್ತದೆ ಎಂಬುದೂ ಸುಳ್ಳಲ್ಲ. ಇದಕ್ಕೆ ನಿಸರ್ಗವೇ ಮಾದರಿ ತೋರಿಸುತ್ತದೆ. ಒಂದು ಉದಾಹರಣೆ ಕೊಡಬೇಕೆಂದರೆ, ನಾಗರಹೊಳೆ, ಹುಣಸೂರು ಸುತ್ತುಮುತ್ತ ಸಾಗುವಾನಿ ಪ್ಲಾಂಟೇಶನ್ ಬೆಳೆಸಲಾಗಿತ್ತು. ನಾಗರಹೊಳೆಯಲ್ಲಿ ಅವನ್ನು ಮಿಶ್ರ ಕಾಡುಗಳಲ್ಲಿ ಬೆಳೆಸಲಾಗಿತ್ತು. ಆದರೆ ಹುಣಸೂರಲ್ಲಿ ಬರೀ ಸಾಗುವಾನಿಯನ್ನು ಮಾತ್ರ ಬೆಳೆಸಲಾಗಿತ್ತು. ಬರೀ ಸಾಗುವಾನಿ ಇದ್ದ ಕಾಡಿನಲ್ಲಿ ಮರಗಳಿಗೆ ಒಂದು ಬಗೆಯ ಕೀಟ ಮರಗಳಿಗೆ ಹತ್ತಿ ಅವನ್ನು ತಿನ್ನಲಾರಂಭಿಸಿದ್ದವು, ಸಾಲದ್ದಕ್ಕೆ ಮತಗಳು  ಅಂಕುಡೊOಕಾಗಿ ಬೆಳೆದಿದ್ದವು. ಆದರೆ ಮಿಶ್ರ ಕಾಡಲ್ಲಿದ್ದ ಮರಗಳಿಗೆ ಏನೂ ಆಗದೇ ಅವು ನೇರ ಬೆಳೆದಿದ್ದವು. ಕಾರಣ ಹುಡುಕಿದಾಗ ಮಿಶ್ರ ಕಾಡಲ್ಲಿದ್ದ ಇತರೆ ಮರಗಳು ಕೀಟಗಳಿಗೆ ಬಾಧೆ ಉಂಟು ಮಾಡಿ ಅವನ್ನು ತಡೆದಿದ್ದವು. ಅಂದರೆ ವೈವಿಧ್ಯದಿಂದ ಉಳಿಗಾಲ ಎಂದರ್ಥ. ನಮ್ಮ ಸಮಾಜದಲ್ಲೂ ಮೇಲ್ನೋಟಕ್ಕೆ ಬ್ರಾಹ್ಮಣ ಸಮುದಾಯದ ಸ್ಮಾರ್ತ ಪಂಗಡ ಅಂದರೂ ಅದರೊಳಗೆ ೨೮ಕ್ಕೂ ಹೆಚ್ಚು ಉಪ ಪಂಗಡಗಳಿವೆ. ದೇಶಾದ್ಯಂತ ಕೇವಲ ಬ್ರಾಹ್ಮಣ ಸಮುದಾಯದಲ್ಲಿ ೪೩೦ಕ್ಕೂ ಹೆಚ್ಚು ಉಪ ಪಂಗಡಗಳಿವೆ. ಆದರೆ ಇವುಗಳ ಒಳಗೆ ಕೆಲವು ಸಂಪ್ರದಾಯ ಆಚರಣೆಗಳಲ್ಲಿ ಸಮಾನತೆ ಕಾಣಬಹುದು, ಆದರೂ ಅವು ಅನನ್ಯವಾಗಿವೆ. ನಮ್ಮ ಸಮಾಜದ ಬೆಳವಣಿಗೆಗೆ ಇಂಥ ವೈವಿಧ್ಯವೇ ಕಾರಣ.

 ಕೇವಲ ಬ್ರಾಹ್ಮಣ ಸಮುದಾಯದಲ್ಲೇ ಇಷ್ಟು ವೈವಿಧ್ಯ ಇಷ್ಟು ಇರಬೇಕಾದರೆ ಇನ್ನು ದೇಶಾದ್ಯಂತ ಇರುವ ನೂರಾರು ಸಮುದಾಯಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯ ಇನ್ನು ಹೇಗಿರಬೇಡ? ಇದು ಕೇವಲ ಸಾಮಾಜಿಕ ಮತ್ತು ಮಾನವ ಶಾಸ್ತ್ರೀಯ ಅಧ್ಯಯನದ ಕುತೂಹಲ ಮಾತ್ರ. ಇಂಥ ಅಧ್ಯಯನಗಳು ಎಲ್ಲ ಸಮುದಾತಗಳಲ್ಲೂ ನಡೆದರೆ ಆಗ ನಮ್ಮ ದೇಶದ ವಿವಿಧತೆ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತದೆ. ಆದರೆ ನಮ್ಮದು ಜಾತ್ಯತೀತ ಸಮಾಜ ಅನ್ನುತ್ತಾ ಇಂಥ ಜಾತಿ ಪಂಗಡಗಳ ಅಧ್ಯಯನಕ್ಕೆ ಅಡ್ಡಗಾಲು ಹಾಕುವವರು ರಾಜಕೀಯ ಕಾರಣಕ್ಕೆ ಇಂಥ ಅಧ್ಯಯನ ನಡೆಯುವುದನ್ನು ವಿರೋಧಿಸುವುದಿಲ್ಲ ಎಂಬುದನ್ನು ಗಮನಿಸಬೇಕು.  ಈ ಕೃತಿಯಲ್ಲಿ ಗಮನಿಸಿದ ಎಲ್ಲ ಪಂಗಡಗಳ ಅಧ್ಯಯನಕ್ಕೂ ಒಂದು ಏಕರೂಪತೆ ಬರುವಂತೆ ಕಾಪಾಡಿಕೊಳ್ಳಲಾಗಿದೆಯಾದರೂ ಅದರ ವ್ಯಾಪ್ತಿ ಸೀಮಿತವಾಗಿದೆ.  ಸಂಪಾದಕರು ತಮ್ಮ ಮಾತಿನಲ್ಲಿ ಹೇಳಿಕೊಂಡಂತೆ ಇದು ಸವಾಲಿನ ಕೆಲಸವಾಗಿದ್ದ ಕಾರಣ ಭಾಷೆ, ಮೂಲ, ಹಿರಿಯರ ಬದುಕಿನ ಥೂಲ ಚಿತ್ರಣಗಳು ಸೇರಿವೆಯಾದರೂ ಆಯಾ ಪಂಗಡಗಳ ಕಲೆ ಸಂಸ್ಕೃತಿಯ ಕೊಡುಗೆ, ಜನಸಂಖ್ಯಾ ವಿವರ, ಸಾಧನೆ-ಸಾಧಕರ ವಿವರ, ಕಾಕ ವೈವಿಧ್ಯ, ವೇಷ ಭೂಷಣ ಇತ್ಯಾದಿ, ಸಂಗತಿಗಳನ್ನು ಸಮಾನವಾಗಿ ಕೊಡಬೇಕಾಗಿತ್ತು ಅನಿಸುತ್ತದೆ. ಏಕೆಂದರೆ ಕೆಲವು ದೊಡ್ಡ ಹಬ್ಬ ಹರಿದಿನಗಳ ಆಚರಣೆಯಲ್ಲಿ ಇವರೊಳಗೆ ಸಮಾನತೆ ಕಾಣಿಸಿದರೂ ಅವರ ಅನನ್ಯತೆ ಇರುವುದು ಕೆಲವು ಸೂಕ್ಷ್ಮ ಸಂಗತಿಗಳಲ್ಲಿ ಅವುಗಳ ಪಾಕ ವೈವಿಧ್ಯದಲ್ಲಿ. ಅಲ್ಲದೇ ಕೆಲವು ಪಂಗಡಗಳು ಉದಾಹರಣೆಗೆ ಹವ್ಯಕರು ಮತ್ತು ಸಂಕೇತಿಗಳು ಹೊಯ್ಸಳ ಕರ್ನಾಟಕ ದಂಥ ಪಂಗಡಗಳು ಕೃಷಿಯನ್ನು ಕುಲ ಕಸುಬಾಗಿ ನಡೆಸುತ್ತ ಬಂದಿದ್ದರೂ ಇವರ ವಾಸಸ್ಥಳ ಭಿನ್ನವಾದ ಕಾರಣಕ್ಕೋ ಏನೋ ಇವರ ಸಂಪ್ರದಾಯ, ಆಚರಣೆ ಮತ್ತು ಪಾಕ ವೈವಿಧ್ಯದಲ್ಲಿ ಸಾಕಷ್ಟು ಅಂತರವಿದೆ, ಕೆಲವು ಸಾಮ್ಯಗಳಿವೆ. ಭಾಷೆಯಂತೂ ಪೂರ್ತಿ ಭಿನ್ನವಾಗಿದೆ. ಇಂಥ ವ್ಯತ್ಯಾಸವನ್ನು ಗುರುತಿಸುವುದು ಇಂಥ ಅಧ್ಯಯನದಲ್ಲಿ ಮಾತ್ರ ಬರಲು ಸಾಧ್ಯ. ಅದರ ಕೊರತೆ ಇಲ್ಲಿ ಕಾಣುತ್ತದೆ. ಅದಿರಲಿ, ಜೊತೆಗೆ ಹಾಸನ ಸುತ್ತುಮುತ್ತಲಿನ ಬಬ್ಬೂರ ಕಮ್ಮೆ, ಸಂಕೇತಿ ಸಮುದಾಯದ ಜನರು ಸಂಗೀತ ಸಾಹಿತ್ಯ, ಗಮಕ ಇತ್ಯಾದಿ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಗೈದಿದ್ದಾರೆ, ಕರಾವಳಿ, ಮಲೆನಾಡು ಪ್ರದೇಶದ ಹವ್ಯಕ ಜನರು ಯಕ್ಷಗಾನ, ತಾಳಮದ್ದಲರಗಳಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ, ಇಂಥ ಸಮುದಾಯದ ವಿಶೇಷತೆ ಮತ್ತು ಅಂಥ ಸಾಧಕರ ಪ್ರಶಸ್ತಿ ಗೌರವಗಳ ಸಣ್ಣ ಪಟ್ಟಿಯನ್ನಾದರೂ ಒದಗಿಸುವ ಯತ್ನ ಇಲ್ಲಿ ಆಗಬಹುದಿತ್ತು ಅನಿಸುತ್ತದೆ. ಏಕೆಂದರೆ ಇಂಥ ಸಶಧಕರು ಸಾಮಾನ್ಯದವರಲ್ಲ, ಅಂತಾರಾಷ್ಟç ಮಟ್ಟದಲ್ಲಿ ಹೆಸರು ಮಾಡಿದವರು. ಇಂಥ ಮಾಹಿತಿ ಇಂಥ ಕೃತಿಯಲ್ಲಿ ಅಪೇಕ್ಷಣೀಯವಾಗಿರುತ್ತದೆಯಲ್ಲವೇ? ಆದರೆ ಇದರಲ್ಲಿನ ಕೆಲವು ವಿದ್ವಾಂಸರ ಬರೆಹಗಳು ಅದರಲ್ಲೂ ಮಾನ್ಯ ಟಿ ವಿ ವೆಂಕಟಾಚಲ ಶಾಸ್ತಿçÃಗಳು, ಶತಾವಧಾನಿ ಗಣೇಶ್, ವಿಜ್ಞಾನಿ ಆಕಾಶ್ ಬಾಲಕೃಷ್ಣ ರಂಥವರ ಬರೆಹಗಳು ಗಮನಾರ್ಹವಾಗಿವೆ. ಆದರೆ ಇಲ್ಲಿರುವ ಎಲ್ಲ ೩೪ ಬರಹಗಳಲ್ಲಿ ಏಕರೂಪತೆ ಇಲ್ಲ, ಕೆಲವು ಬರೆಹಗಳಲ್ಲಿ ಮಾಹಿತಿಗಳ ಭಾರವಿದ್ದರೆ ಇನ್ನು ಕೆಲವು ಮಾಹಿತಿಗಳ ಕೊರತೆಯಿಂದ ಬಳಲುತ್ತಿವೆ. ವೈವಿಧ್ಯಮಯ ಬರಹಗಳು ಸ್ವೀಕಾರಾರ್ಹ ಅನಿಸಿದರೂ ಜನಸಂಖ್ಯೆ, ಹಿರಿಯರು ಸಾಧಕರು ಇತ್ಯಾದಿ ಕೆಲವು ಸಂಗತಿಗಳು ಅಗತ್ಯವಾಗಿವಾಗಿ ಏಕರೂಪತೆಯಲ್ಲಿರಬೇಕಿತ್ತು ಅನಿಸುತ್ತದೆ. ಇಷ್ಟಾಗಿಯೂ ಈ ಕೃತಿಯಲ್ಲಿ ಕೆಲವು ಅಭೂತಪೂರ್ವ ಮಾಹಿತಿಗಳು ಒಂದೆಡೆ ದಾಖಲಾಗಿವೆ, ಉದಾಹರಣೆಗೆ ಕ್ರಿ. ಶ. ೩ನೆಯ ಶತಮಾನದವರೆಗೆ ದಕ್ಷಿಣ ಭಾಗದಲ್ಲಿ ಬ್ರಾಹ್ಮಣರೇ ಇರಲಿಲ್ಲ ಹಾಗೂ ಇದ್ದರೆಂಬ ಶಾಸನಾಧಾರಿತ ಚರ್ಚೆಗಳು, ಮೊದಲು ಇವರನ್ನು ಅಹಿಚ್ಛತ್ರದಿಂದ ಕದಂಬರು ಕರೆತಂದರು, ಅವರು ಶೈವ ಮತ ಅನುಸರಿಸುತ್ತಿದ್ದ ಸ್ಮಾರ್ತರಾಗಿದ್ದು ಕ್ರಮೇಣ ವೇದಾಂತ ಸಿದ್ಧಾಂತಗಳು ಬೆಳೆದಂತೆ, ಅದನ್ನು ಅನುಸರಿಸಿ ಅನ್ಯಾನ್ಯ ಪಂಗಡಗಳು ಕಾಣಿಸಿಕೊಂಡಿವೆ ಅನ್ನುವ ಮಾಹಿತಿ ಒದಗಿಸುವ ಬರೆಹಗಳು ಗಮನ ಸೆಳೆಯುತ್ತವೆ, ಚಿಂತನೆಗೆ ಹಚ್ಚುತ್ತವೆ. ಕರ್ನಾಟಕದಲ್ಲಿ ಬ್ರಾಹ್ಮಣರು ಮೊದಲು ಇಂದಿನ ಶಿವಮೊಗ್ಗದ ತಾಳಗುಂದದಲ್ಲಿ ನೆಲೆಯಾಗಿದ್ದರು. ಕ್ರಿ. ಶ, ೧ ಮತ್ತು ೩ನೆಯ ಶತಮಾನದ ವೇಳೆಗೆ ಇವರೆಲ್ಲ ಹರಡಿಕೊಳ್ಳಲು ಆರಂಭಿಸಿದರು ಇದಕ್ಕಿರುವ ಕಾರಣಗಳು ಹಲವು ಎಂಬ ಚರ್ಚೆಗಳಿಗೂ ಸಾಕಷ್ಟು ಅವಕಾಶ ದೊರೆತಿದೆ. ಇಂಥ ಮಾಹಿತಿಗಳು ಒಂದೇ ಕಡೆ ದೊರಕುವುದು ದುರ್ಲಭ. ಇದಕ್ಕೆ ಮಳವಳ್ಳಿ ಶಾಸನ, ಹಿರೇ ಮಗಳೂರಿನ ಶಾಸನ ಮತ್ತು ಮಾಧವಪುರದ ಶಾಸನಗಳ ಆಧಾರ ಕೊಡಲಾಗಿದ್ದು ಆಸಕ್ತರಿಗೆ ಇವು ಸಮೃದ್ಧ ಆಹಾರ ಒದಗಿಸುತ್ತವೆ.

ಸಮೃದ್ಧ ಮಾಹಿತಿಯೊಂದಿಗೆ ಗಂಭೀರ ಅಧ್ಯಯನದಂತೆ ಹೊರಬಂದಿರುವ ಒಂದೊOದೂ ಲೇಖನಗಳನ್ನು ಓದಿದಾಗ ಇಷ್ಟೆಲ್ಲ ಇದೆಯಾ ಅನಿಸುತ್ತದೆ. ಇದನ್ನು ಬ್ರಾಹ್ಮಣ ಸಮುದಾಯದ ಪ್ರತಿಯೊಬ್ಬರೂ ಓದಿ ತಿಳಿಯಬೇಕಿದೆ ಜೊತೆಗೆ ಇತರೆ ಬ್ರಾಹ್ಮಣ ಸಮುದಾಯದೊಳಗಿನ ತರ ಒಳಪಂಗಡಗಳ ಬಗ್ಗೆಯೂ ಇಂಥ ಕೆಲಸ ನಡೆಯಬೇಕಿದೆ. ಇದರಿಂದ ಸಮುದಾಯವೊಂದರ ಬಗ್ಗೆ ಬದಲಾಗುತ್ತಿರುವ ಅನೇಕಾನೇಕ ಸಂಗತಿಗಳು ಕೈಬಿಟ್ಟುಹೋಗುತ್ತಿರುವ ಇಂದಿನ ಸಂದರ್ಭದಲ್ಲಿ ಈ ಬಗೆಯ ಕೃತಿಗಳು ಹೊರಬಂದಲ್ಲಿ ಪಂಗಡಗಳ ಸಣ್ಣಪುಟ್ಟ ಮಾಹಿತಿಗಳು ಒಂದೆಡೆ ದಾಖಲಾಗಿ ಅದು ಐತಿಹಾಸಿಕ ಮಹತ್ವ ಪಡೆಯುತ್ತದೆ. ಆದ್ದರಿಂದ ಆದಷ್ಟು ಬೇಗ ಇಂಥ ಕೆಲಸಗಳು ಉಳಿದ ಎಲ್ಲ ಸಮುದಾಯಗಳಲ್ಲೂ ನಡೆಯುವ ಅಗತ್ಯವಿದೆ. ಮುಂದಿನ ತಲೆಮಾರುಗಳಿಗೆ ಇದು ಉಪಯುಕ್ತವಾಗುತ್ತದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವದ ಅರಿವಾಗುತ್ತದೆ. ಅಂಥದ್ದೊOದು ಮಾರ್ಗವನ್ನು ಈ ಕೃತಿ ತೆರೆದಿಟ್ಟಿದೆ. ಲೇಖನ ಬರೆದ ಮಹನೀಯರು, ಕೃತಿಯ ಸಂಪಾದಕರೆಲ್ಲರೂ ಅಭಿನಂದನಾರ್ಹರು. ಇಂಥ ಗಂಭೀರ ಕೃತಿಯೊಂದು ಮೊದಲು ಪ್ರಕಟವಾದ ಕೆಲವೇ ತಿಂಗಳುಗಳಲ್ಲಿ ಎರಡನೆಯ ಮುದ್ರಣ ಕಂಡಿದೆ ಎಂಬುದೇ ಇದರ ಹೆಗ್ಳಿಕೆಯನ್ನು ತೋರಿಸುತ್ತದೆ. 



 

ಕೃತಿಯ ಹೆಸರು-ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು, ನೆಲೆ- ಹಿನ್ನೆಲೆ, 

ಟಿ ಆರ್ ಅನಂತರಾಮು (ಸಂ), 

ಅರಿವು ಬುಕ್ಸ್, ಸೌತ್ ಅವೆನ್ಯೂ ಕಾಂಪ್ಲೆಕ್ಸ್,  ಡಿವಿಜಿ ರಸ್ತೆ, ಬೆಂಗಳೂರು, ಪುಟಗಳು-೧೮+೫೬೨, ಜಿ ಎಸ್ ಎಂ ೧/೪ ಮ್ಯಾಪ್ಲಿತೋ ಕ್ರೌನ್

ಬೆಲೆ-೮೦೦ರೂ. ಮುದ್ರಣ-೨೦೨೩.

   

    

  

 


Saturday, 14 December 2024

ಒಂದು ದೇಶ ಒಂದು ಚುನಾವಣೆ - ಅನಗತ್ಯ ವಿರೋಧ


ಕಳೆದ ಸೆಪ್ಟಂರ‍್ನಲ್ಲಿ ಮೋದಿ ಸರ್ಕಾರ ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಮಸೂದೆಗೆ ಒಪ್ಪಿಗೆ ಕೊಟ್ಟಿತ್ತು ಈಗ ಇದೇ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ಸರ್ಕಾರ ಬಯಸಿದೆ. ಆದರೆ ಇದಕ್ಕೆ ವಿರೋಧಪಕ್ಷಗಳು ವಿರೋಧ ವ್ಯಕ್ತಮಾಡುತ್ತಿವೆ. ಇದಕ್ಕೆ ಅರ್ಥವಿಲ್ಲ ಏಕೆಂದರೆ ಮೊದಲು ನಮ್ಮ ಸಂವಿಧಾನ ಕರ್ತೃಗಳು ಇದನ್ನೇ ಬಯಸಿದ್ದರು ೧೯೫೨ರಲ್ಲಿ ಮೊದಲಬಾರಿ ಇಂಥ ಪ್ರಯೋಗ ನಡೆದು ೧೯೬೭ರವರೆಗೂ ವೆನ್ನಾಗಿ ನಡೆಯಿತು, ಇದನ್ನು ಈಗ ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷವೇ ಅಳವಡಿಸಿಕೊಂಡು ಯಶಸ್ವಿಯಾಗಿತ್ತು. ಈಗ ಅದು ಈ ವ್ಯವಸ್ಥೆಯನ್ನು ಜನತಂತ್ರ ವಿರೋಧಿ ಎಂದು ವಿರೋಧಿಸುತ್ತಿದೆ. ಈಗ ನಾಲ್ಕು ದಶಕಗಳ ಅನಂತರ ಮೋದಿ ಸರ್ಕಾರ ಮತ್ತೆ ಇದರ  ಮರು ಜಾರಿಗೆ ಆಸಕ್ತಿ ತೋರಿಸುತ್ತಿದೆ. ಇದನ್ನು ವಿರೋಧಿಸುವ ಮುಂಚೆ ಸದ್ಯದ ಪ್ರತ್ಯೇಕ ಚುನಾವಣೆಯ ಅನನುಕೂಲಗಳನ್ನು ಗಂಭೀರವಾಗಿ ಗಮನಿಸಬೇಕು. ಈಗ ನಡೆಯುತ್ತಿರುವ ಒಂದು ಕ್ಷೇತ್ರದ ಚುನಾವಣೆಗೆ ಸರ್ಕಾರ ಅಧಿಕೃತವಾಗಿ ನೂರಾರು ಕೋಟಿ ರೂಗಳನ್ನು ವ್ಯಯಮಾಡುತ್ತಿದೆ. ಸಾಲದ್ದಕ್ಕೆ ಅದರಲ್ಲಿ ಕರ್ತವ್ಯ ನಿರ್ವಹಿಸುವ ನೌಕರರ ಭತ್ಯೆ, ಸಂಭಾವನೆ ಹಾಗೂ ಅಲ್ಲಿನ ಇತರೆ ಖರ್ಚುಗಳೆಲ್ಲ ಖಚಿತ ಲೆಕ್ಕಕ್ಕೆ ಸಿಗುವುದಿಲ್ಲ. ಅಲ್ಲದೇ ಪ್ರತಿ ಪಕ್ಷಗಳು ಹಣ ಮತ್ತು ಶ್ರಮ ಉಳಿತಾಯ ಮಾಡುತ್ತಿರುವ ಸದ್ಯದ ವಿದ್ಯುತ್ ಮತ ಯಂತ್ರಗಳ (ಎವಿಎಂ) ಬದಲು ಹಳೆಯ ಮತ ಪತ್ರಗಳ ವ್ಯವಸ್ಥೆ ಬೇಕೆಂದು ಹಠಮಾಡುತ್ತಿವೆ. ಈಗ ಇದಕ್ಕೆ ಒತ್ತಾಯಿಸುತ್ತಿವೆ. ಒಟ್ಟಿನಲ್ಲಿ ಪ್ರತಿಪಕ್ಷಗಳು ವ್ಯವಸ್ಥೆಯನ್ನು ಮುಂದೆ ತಳ್ಳುವ ಬದಲು ನಿಂತಲ್ಲೇ ನಿಲ್ಲಲು ಅಥವಾ ಹಿಂದೆ ತಳ್ಳಲು ಹೊರಟಿವೆ. ಅದಿರಲಿ, ಈಗ ಒಂದು ಚುನಾವಣೆ ವ್ಯವಸ್ಥೆಯ ಗುಣಾವಗುಣ ನೋಡೋಣ. ಈಗಾಗಲೇ ಹೇಳಿದಂತೆ ಭಾರತದಲ್ಲಿ ಇದು ಮೊದಲು ಜಾರಿಯಲ್ಲಿತ್ತು. ಈಗ ಮತ್ತೆ ಜಾರಿಗೊಳಿಸುವ ಯತ್ನಗಳು ನಡೆಯುತ್ತಿವೆ. ಇಷ್ಟರಲ್ಲಿ ಪ್ರಪಂಚದ ಏಳು ದೇಶಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ ಎಂದು ಇದರ ಬಗ್ಗೆ ಅಧ್ಯಯನ ಮಾಡಿದ ಲೋಕಸಭೆಯ ಉನ್ನತ ಮಟ್ಟದ ಸಮಿತಿ ವರದಿಕೊಟ್ಟಿದೆ. ದಕ್ಷಿಣ ಆಫ್ರಿಕ, ಸ್ವೀಡನ್, ಜರ್ಮನಿ, ಬೆಲ್ಜಿಯಂ, ಫಿಲಿಪ್ಪೀನ್ಸ್ ಮತ್ತು ಜಪಾನ್ ದೇಶಗಳು ಯಶಸ್ವಿಯಾಗಿ ನಡೆಸುತ್ತಿವೆ. ಇದರಿಂದ ಖರ್ಚು ಮತ್ತು ಶ್ರಮಗಳು ಕಡಿಮೆ ಆಗುತ್ತವೆ. 

೧೯೬೭ರ ವೇಳೆಗೆ ಕಾಂಗ್ರಸ್ ತನ್ನ ಮಿತ್ರ ಪಕ್ಷಗಳ ಆಂತರಿಕ ವಿರೋಧವನ್ನು ಎದುರಿಸಲು ಹೆಣಗತೊಡಗಿತು. ನಿಧಾನವಾಗಿ ಆಂತರಿಕ ವಿರೋಧ ಹೆಚ್ಚುತ್ತ ಹೋಯಿತು ನೆಹರೂ ನಿಧನದ ಅನಂತರ ಅವರ ಮಗಳು ಇಂದಿರಾಗಾoಧಿ ಅಧಿಕಾರಕ್ಕೆ ಬಂದರು, ಆಡಳಿತ ವಿರೋಧಿ ಅಲೆ ದೇಶದಲ್ಲಿ ಹೆಚ್ಚತೊಡಗಿತು. ವಿರೋಧ ಪಕ್ಷಗಳು ಬಲವಾಗತೊಡಗಿದವು. ಅಲ್ಲಿಯವರೆಗೆ ಚುನಾವಣೆಯಲ್ಲಿ ಗೆಲ್ಲುವುದೇ ಕಾಂಗ್ರೆಸ್ ಎಂಬ ವಾತಾZವರಣವಿತ್ತು. ೧೯೬೭ರಲ್ಲಿ  ಉತ್ತರ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶಹೊತುಪಡಿಸಿ ಉಳಿದೆಡೆಮೊದಲ ಬಾರಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಿತು.  ಆಗ ೫೨೦ ಲೋಕಸಭಾ ಮತ್ತು ೩,೫೬೩  

ಒಂದು ದೇಶ ಒಂದು ಚುನಾವಣೆಯಿಂದ ಪ್ರಾದೇಶಿಕ ಪಕ್ಷಗಳ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಅವರ ಪ್ರಭಾವಕ್ಕೆ ಕುಂದುಬರುತ್ತದೆ ಅನ್ನುವುದು ಇದರ ವಿರೋಧಕ್ಕಿರುವ ಮೊದಲ ಕಾರಣ. ವಿಧಾನಸಭಾ ಸ್ಥಾನಗಳಿಗೂ ಚುವಾವಣೆ ನಡೆಯಿತು. ಕೇಂದ್ರಾಡಳಿತ ಪ್ರದೇಶ ಹೇಗಿದ್ದರೂ ಕೇಂದ್ರದ ಆಡಳಿತದಡಿಯಲ್ಲೇ ಬರುವುದರಿಂದ ಅದರ ಆದ್ಯತೆ ಪ್ರತ್ಯೇಕವಾಗಿರಲು ಸಂಭವತೆ ಕಡಿಮೆ. ಈ ಕಾರಣಕ್ಕೆಒಂದು ದೇಶ ಒಂದು ಚುನಾವಣೆ ವ್ಯವಸ್ಥೆಯಲ್ಲಿ ಇವನ್ನು ಸೇರಿಸಿಕೊಳ್ಳಲಾಗಿತ್ತು. ಉಳಿದಂತೆ ಸ್ವಾಯತ್ತ ರಾಜ್ಯಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸಲಾಯಿತು. ಸದ್ಯದ ಪ್ರಸ್ತಾವಿತ ಮಸೂದೆಯಲ್ಲೂ ಇದನ್ನು ಉಳಿಸಿಕೊಳ್ಳಲಾಗಿದೆ. 

ಒಂದೇ ಚುನಾವಣೆ ನಡೆದರೆ ಪ್ರಾದೇಶಿಕ ಸಂಗತಿಗಳನ್ನು ಪಕ್ಕಕ್ಕೆ ಸರಿಸುವ ಸಾಧ್ಯತೆ ಹೆಚ್ಚಿರುತ್ತದೆ ಅನ್ನುವುದು ಎರಡನೆಯ ಕಾರಣ.ಪ್ರತ್ಯೇಕ ಚುನಾವಣೆಗಳು ನಡೆದರೆ ರಾಜಕೀಯ ಪ್ರತಿನಿಧಿಗಳ ಜವಾಬ್ದಾರಿ ಹೆಚ್ಚುತ್ತದೆ.ಸಂವಿಧಾನದಲ್ಲಿ ೧೭೨ನೆಯ ವಿಧಿಯಡಿ ಕೊಡಲಾಗಿರುವ ಒಕ್ಕೂಟ ವ್ಯವಸ್ಥೆಯ ಹಕ್ಕು ಇದರಿಂದ ಕುಂಠಿತವಾಗುತ್ತದೆ. ಏಕ ಕಾಲಕ್ಕೆ ಚುನಾವಣೆ ಹಮ್ಮಿಕೊಂಡರೆ ಒಂದೇ ಬಾರಿ ಎವಿಎಂಗ ಬೇಡಿಕೆ ಹೆಚ್ಚಿ ಅವುಗಳ ಪೂರೈಕೆ ಸಮಸ್ಯೆಯಾಗುತ್ತದೆ. ಈ ವ್ಯವಸ್ಥೆಯ ಜಾರಿಗೆ ಸಂವಿಧಾನದ ೮೩,೮೫, ೧೭೨ ಮತ್ತು ೧೭೪ನೆ ವಿಧಿಗಳಿಗೆ ಸೂಕ್ತ ತಿದ್ದುಪಡಿ ತರಬೇಕಾಗುತ್ತದೆ.ಹೀಗೆ ಈ ವ್ಯವಸ್ಥೆಯ ಜಾರಿಗೆ ಒಟ್ಟಿನಲ್ಲಿ ವ್ಯವಸ್ಥಾಪನೆ, ನಿರ್ವಹಣೆಸಂಕೀರ್ಣತೆ, ಸಂವೈಧಾನಿಕ ಅಡೆತಡೆಗಳು,ಜೊತೆಗೆ ರಾಷ್ಟಿಯ ಹಾಗೂ ಪ್ರಾದೇಶಿಕ ಸಂಗತಿಗಳ ಸಮರ್ಥ ಪ್ರಾತಿನಿಧ್ಯ ಸಾಧ್ಯವಾಗುವುದಿಲ್ಲ ಅನ್ನುವ ಕಾರಣಗಳಿವೆ. ಇವುಗಳಿಗೆ ಸೂಕ್ತ ಪರಿಹಾರ ಮಾರ್ಗಗಳನ್ನು ಹುಡುಕಿ ನಿಧಾನವಾಗಿ ಇದನ್ನು ಜಾರಿಗೆ ಮಾಡುವ ಬಗ್ಗೆ ಯೋಚಿಸುವುದು ಸೂಕ್ತವೆನಿಸುತ್ತದೆ. ಇದು ದೇಶಾದ್ಯಂತ ಮುಕ್ತ ಚರ್ಚೆಗೆ ಮೊದಲು ಒಳಗಾಗಬೇಕು, ಈ ವ್ಯವಸ್ಥೆಯ ಗುಣಾವಗುಣಗಳ ನಿಷ್ಕರ್ಷೆ ನಡೆಯಬೇಕು ಏಕೆಂದರೆ ಇದು ಅಂತಿಮವಾಗಿ ನಮ್ಮ ಜನರ ಹಕ್ಕುಬಾಧ್ಯತೆಗೆ ಸಂಬOಧಿಸಿದೆ. ದೇಶ ಮಟ್ಟದ ಸಮಸ್ಯೆಗಳು ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರೆ ಪ್ರಾದೇಶಿಕ ವಿಷಯಗಳು ರಾಜ್ಯ ಚುನಾವಣೆಯಲ್ಲಿ ಮುಖ್ಯವಾಗುತ್ತವೆ. ಏಕ ಕಾಲಕ್ಕೆ ಚುನಾವಣೆ ನಡೆದರೆ ಮತ ಚಲಾಯಿಸುವಾಗ ನಮ್ಮ ಸಾಮಾನ್ಯ ಜನತೆಗೆ ಗೊಂದಲವಾಗುವ ಸಾಧ್ಯತೆ ಹೆಚ್ಚು ಅನ್ನುವುದನ್ನು ಅಲ್ಲಗಳೆಯಲಾಗದು. ಹೀಗಾಗಿ, ಕೇವಲ ರಾಜಕೀಯ ಪಕ್ಷಗಳು ಮಾತ್ರ ಸದನದಲ್ಲಿ ಕುಳಿತು ಚರ್ಚಿಸಿದರೆ ಸಾಕಾಗುವುದಿಲ್ಲ, ದೇಶಾದ್ಯಂತ ಜನರ ಅಭಿಪ್ರಾಯ ಸಂಗ್ರಹಣೆ ನಡೆಯುವುದು ಅಗತ್ಯ. ಏನೇ ಆದರೂ ಇಂಥ ವ್ಯವಸ್ಥೆಯನ್ನು ದಿಢೀರನೆ ಜಾರಿ ಗೊಳಿಸಲು ನಮ್ಮಂಥ ದೇಶದಲ್ಲಿ ಸುಲಭವಲ್ಲ. ಇದು ದೇಶಾದ್ಯಂತ ಮುಕ್ತ ಚರ್ಚೆಗೆ ಬರುವುದಂತೂ ಖಚಿತ ಅನಿಸುತ್ತದೆ.

Tuesday, 10 December 2024

ಆಳ್ವಾಸ್ ವಿರಾಸತ್ ಎಂಬ ಮಾದರಿ ಸಮ್ಮೇಳನ


ವಿಪರ್ಯಾಸನೋಡಿ - ಕರ್ನಾಟಕದಲ್ಲಿ ರಾಜ ಮಹಾರಾಜರ ಕಾಲದಿಂದಲೂ ಸಾರ್ವಜನಿಕ ಸಭೆ ಸಮಾರಂಭಗಳು ಶತಮಾನಗಳಿಂದಲೂ ನಡೆಯುತ್ತ ಬರುತ್ತಿದೆ. ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಮೇಲೆಯೂ ಇಂಥ ಕಾರ್ಯಕ್ರಮಗಳು ನಡೆಯುತ್ತಿವೆಯಾದರೂ ಎರಡನೆಯ ವಿಧದ ಸಮಾರಂಭಗಳಲ್ಲಿ ಕರ್ತವ್ಯಕ್ಕಿಂತ ಹಕ್ಕಿನ ಪ್ರಶ್ನೆ ಮೊದಲು ಮುಂದಾಗುತ್ತದೆ. ಇದರಿಂದ ಎಲ್ಲರನ್ನೂ ತೃಪ್ತಿಪಡಿಸುವ ಕೆಲಸದಲ್ಲೇ ಸಮಾರಂಭ ಅಂತ್ಯ ಕಾಣುತ್ತದೆ. ಮೂಲ ಉದ್ದೇಶ ಮೂಲೆಗುಂಪಾಗುತ್ತದೆ. ಬಹುತೇಕ ಇಂಥ ಸಮಾರಂಭಗಳು ಅದರಲ್ಲೂ ಸಾರ್ವಜನಿಕ ಸ್ವರೂಪದ ಮುಕ್ತ ಅವಕಾಶದ ಸಾಹಿತ್ಯಕ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಗತ್ಯ ಅನಪೇಕ್ಷಿತ ಗದ್ದಲ ಗೌಜುಗಳಿಲ್ಲದೇ  ಅಂತ್ಯ ಕಾಣುವುದೇ ಇಲ್ಲ ಅನ್ನುವಂತಾಗಿದೆ. ಇದೀಗ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಈಗಲೇ ಊಟದ ವಿಷಯದಲ್ಲಿ ವಿವಾದ ಸೃಷ್ಟಿಸಿ ಚರ್ಚೆಗೆ ಒಳಗಾಗಿದೆ. ಜೊತೆಗೆ ಪ್ರತೀ ಬಾರಿ ಈ ಸಮ್ಮೇಳನದಲ್ಲಿ ಸಾಮಾನ್ಯವಾಗಿರುವ ಊಟದ ಟೋಕನ್ ಸಿಗದೇ ನೋಂದಣಿ ಕಿಟ್ ಸಿಗದೇ ನೌಕರರಿಗೆ ಓಓಡಿ ಪತ್ರ ಸಿಗದೇ ನಡೆಯುವ ಗಲಾಟೆಗಳು ಕೌಂಟರ್ ಗಳು ಸರಿ ಇಲ್ಲ ಎಂಬಂಥ ಗದ್ದಲಗಳು ಇನ್ನೂ ಬಾಕಿ ಇವೆ. ಇಷ್ಟೆಲ್ಲ ಗೊಂದಲಗಳ ನಡುವೆ ಅತ್ ದೂರದ ಕರ್ನಾಟಕದ ಹಳ್ಳಿಯೊಂದರಲ್ಲಿ ಕಳೆದ ೩೦ ವರ್ಷಗಳಿಂದ ಒಂದು ವರ್ಷವೂ ತಪ್ಪದೇ ಪ್ರತಿ ಬಾರಿಯೂ ಹಿಂದಿನ ವರ್ಷಕ್ಕಿಂತ ಅದ್ಭುತ ಅನಿಸುವಂತೆ ತೀರಾ ಖಾಸಗಿ ಅನಿಸುವ ಉಸ್ತುವಾರಿಯಲ್ಲಿ , ದೇಶಾದ್ಯಂತ ಇದಕ್ಕಾಗಿ ಜನ ಕಾಯುವ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮವೊಂದು ಮೂಡುಬಿದರೆಯಲ್ಲಿ ಆಳ್ವಾಸ್ ವಿರಾಸತ್ ಅನ್ನುವ ಹೆಸರಲ್ಲಿ ನಡೆಯುತ್ತಿದೆ. ಪ್ರತಿ ಬಾರಿಯೂ ಸಾರ್ವಜನಿಕರು ನಾನೂ ಭಾಗವಹಿಸಿದ್ದೆ ಎಂದು ಕಣ್ಣರಳಿಸಿ ಹೇಳಿಕೊಳ್ಳುವಂತೆ ಮಾಡುತ್ತಿದೆ, ಇದಕ್ಕಾಗಿ ಜನ ಸ್ವತಃ ಆಸಕ್ತಿಯಿಂದ ಮುಂದೆ ಬಂದು ಕೆಲಸ ಮಾಡುತ್ತಾರೆ, ಸಂತೋಷಪಡುತ್ತಾರೆ. ಒಂದು ಸಾರ್ವಜನಿಕ ಕಾರ್ಯಕ್ರಮ ಹೇಗಿರಬೇಕು ಎಂಬುದನ್ನು ಇದು ಅಪೂರ್ವ ಮಾದರಿ ಎಂಬಂತೆ ತೋರಿಸಿದೆ. ಈ ಸಭೆಯಲ್ಲಿ ಸಮಾಜ ಸಾಹಿತ್ಯ, ಸಂಸ್ಕೃತಿಗಾಗಿ ದುಡಿದ ಜನರಿಗೆ ವೈಯಕ್ತಿಕವಾಗಿ ಕೊಡುವ ಆಳ್ವಾಸ್ ವಿರಾಸತ್ ಪ್ರಶಸ್ತಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠೆಯೂ ಇದೆ. ಈ ಕಾರ್ಯಕ್ರಮ ಸಾಮಾನ್ಯವಾಗಿ ಮೂರು ದಿನ ನಡೆಯುತ್ತದೆ, ಊಟ ವಸತಿಯ ಗದ್ದಲವಿಲ್ಲ, ಎಲ್ಲವೂ ಶಿಸ್ತು ಬದ್ಧ ಅಚ್ಚುಕಟ್ಟು. ಈ ಬಾರಿ ಇದು ಇದೇ ಡಿಸೆಂಬರ್ ೧೦ ರಿಂದ ೧೫ರವರೆಗೆ ನಡೆಯಲಿದೆ, ವಸ್ತು, ಪುಸ್ತಕ ಪ್ರದರ್ಶನ ವ್ಯಾಪಾರ ವಹಿವಾಟು ಇತ್ಯಾದಿಗಳಿಂದ ಒಂದು ಹೊಸ ಲೋಕವನ್ನೇ ಇದು ಸೃಷ್ಟಿಸುತ್ತದೆ, ಇವೆಲ್ಲದರ ಮೂಲಕ ಇದು ಕರ್ನಾಟಕದ ಗ್ರಾಮೀಣ ಪರಿಸರದ ಜನರಲ್ಲಿ ಸಾಹಿತ್ಯ ಸಂಸ್ಕೃತಿಯ ಚರ್ಚೆ ನಡೆಯುವಂತೆ ಮಾಡಿರುವುದು ಹೆಗ್ಗಳಿಕೆ. ಇಲ್ಲಿ ಸಾಂಪ್ರದಾಯಿಕ ಕಲಾಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದಕ್ಕೆ ಆಧುನಿಕತೆಯ ಸ್ಪರ್ಶ ಕೊಡಲಾಗುತ್ತದೆ. ಯುವ ಜನತೆಯಲ್ಲಿ ಸಾಮಾಜಿಕ ಕಳಕಳಿ, ಶಿಸ್ತನ್ನು ಸದ್ದಿಲ್ಲದೇ ತುಂಬುತ್ತಿದೆ. ಇದರ ಎಲ್ಲ ಯಶಸ್ಸಿನಲ್ಲಿ ದುಡಿಯುವವರು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರು ಮತ್ತು ಮಕ್ಕಳು. ಅವರೆಲ್ಲ ಇದು ತಮ್ಮ ಮನೆಯ ಕಾರ್ಯಕ್ರಮ ಎಂಬಂತೆ ಹಗಲಿರುಳೂ ಇದಕ್ಕೆ ಕಿಂಚಿತ್ತೂ ಊನ ಬರದಂತೆ ದುಡಿಯುತ್ತಾರೆ. ಇದರ ಹಿಂದಿನ ಸೂತ್ರಧಾರಿ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮೋಹನ್ ಆಳ್ವ. ಅವರ ಕರ್ತತ್ವ ಶಕ್ತಿ, ಸೃಜನಶೀಲತೆಗೆ ಇದು ಕನ್ನಡಿ. ಇದರ ಮುಖ್ಯ ಮಾರ್ಗದರ್ಶಕರು ಧರ್ಮದರ್ಶಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರು. ಮಾನ್ಯ ಹೆಗ್ಗಡೆಯವರು ಪ್ರಸ್ತುತ ರಾಜ್ಯಸಭಾ ಸದಸ್ಯರು. ಇವರು ಕರ್ನಾಟಕದ ¸ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನ ಸನ್ಮಾನಿತರು. 

ಸಾಮಾನ್ಯವಾಗಿ ಇಂಥ ಕಾರ್ಯಕ್ರಮ ಒಂದೆರಡು ವರ್ಷ ನಡೆದ ಮೇಲೆ ಆಯೋಜಕರಿಗೆ ಬೇಸರ ಮೂಡಿ ಗುಣಮಟ್ಟ ಕುಸಿಯುತ್ತಾ ಬರುತ್ತದೆ. ಆದರೆ ಇಲ್ಲಿ ವರ್ಷ ಕಳೆದಂತೆಲೋಪಗಳ ವಿಮರ್ಶೆ ಮಾಡುತ್ತ ಅದನ್ನು ಸರಿಪಡಿಸುತ್ತಾ ಗುಣಮಟ್ಟ ಏರಿಸಿಕೊಳ್ಳುತ್ತ ಬರಲಾಗುತ್ತಿದೆ. ಇದನ್ನು ಗಮನಿಸಿದರೆ ಇಂಥ ಆಯೋಜನೆಯನ್ನು ಉತ್ತೇಜಿಸಲು ಸರ್ಕಾರ ವಿಶೇಷ ಗೌರವ ನೀಡಬೇಕಿದೆ. ಈ ಕಾರ್ಯಕ್ರಮದ ಮಾರ್ಗದರ್ಶಕರು ಜಗತ್ ಪ್ರಸಿದ್ಧ ಸಮಾಜ ಸೇವಕರಾದ ಧರ್ಮದರ್ಶಿ ಡಾ, ವೀರೇಂದ್ರ  ಇಂಥವರ ಸೂಕ್ತ ಮಾರ್ಗದರ್ಶನದಡಿಯಲ್ಲಿ ಇದು ಯಶಸ್ವಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಒಮ್ಮೆ ಪಾಲ್ಗೊಂಡವರು ಹೇಳುವುದೇನೆಂದರೆ  ಮತ್ತೆ ಇದಕ್ಕೆ ಹೋಗಬೇಕು ಅನ್ನುವುದು. ಜೀವಮಾನ ಪರ್ಯಂತ ಇದರ ಬಗ್ಗೆ ಸಿಕ್ಕವರ ಬಳಿ ಗುಣಾತ್ಮಕ ಪ್ರಚಾರ ಮಾಡುವುದು. ಮತ್ತೆ ಇದಕ್ಕಾಗಿ ಕಾಯುವುದು. ಇದರಲ್ಲಿ ಪಾಲ್ಗೊಂಡ ಒಬ್ಬರಾದರೂ ಇದುವರೆಗೆ ಇದರಲ್ಲಿ ಊಟ ವಸತಿ ಇತ್ಯಾದಿ ಅದು ಇದು ಸರಿ ಇರಲಿಲ್ಲ ಅಂದಿದ್ದು ಎಲ್ಲಿಯೂ ಕೇಳಿ ಬರದಿರುವುದು ಇದರ ಇಷ್ಟು ವರ್ಷದ ಹೆಗ್ಗಳಿಕೆ. ಅಷ್ಟಕ್ಕೂ ಇದರಲ್ಲಿ ಪಾಲ್ಗೊಳ್ಳಲು ಬರುವವರು ಊಟ ವಸತಿಯ ಸೌಕರ್ಯಕ್ಕಾಗಿ ಬರುವವರಲ್ಲ, ಸಾಂಸ್ಕೃತಿಕ ರಸದೂಟವಷ್ಟೇ ಇವರಿಗೆ ಮುಖ್ಯ. ಅಂಥ ವಾತಾವರಣವನ್ನು ಅದು ಸೃಷ್ಟಿಸಿದೆ.

ಸರ್ಕಾರಿ ಅಥವಾ ಯಾವುದೇ ಸಾರ್ವಜನಿಕ ಸಮಾರಂಭದ ಶಿಸ್ತು ಶ್ರದ್ಧೆ ಹೇಗಿರಬೇಕು ಎಂಬುದಕ್ಕೆ ಇದು ಮಾದರಿಯಾಗಿದೆ. ಒಟ್ಟಿನಲ್ಲಿ ಸಾಹಿತ್ಯ ಸಂಸ್ಕೃತಿ ಆಸಕ್ತರು ಜೀವನದಲ್ಲಿ ಒಮ್ಮೆಯಾದರೂ ಇದರಲ್ಲಿ ಪಾಲ್ಗೊಳ್ಳಬೇಕು ಇಲ್ಲದಿದ್ದರೆ ತಮ್ಮ ಜೀವನ ವ್ಯರ್ಥ ಎಂಬ ಭಾವನೆ ಹುಟ್ಟಿಸಿರುವುದು ಸುಳ್ಳಲ್ಲ. ಇದನ್ನು ಕಂಡಾಗ ಯಾಕೆ ಎಲ್ಲ ಕಾರ್ಯಕ್ರಮಗಳು ಇದರಂತೆ ನಡೆಯಬಾರದು ಅನಿಸುತ್ತದೆ. ಈ ಕಾರ್ಯಕ್ರಮದ ಯಶಸ್ಸು ಕಂಡ ವಿರೋಧಿಗಳು

ಇದರ ಬಗ್ಗೆ ಇದೊಂದು ಪುರಾತನ ದೃಷ್ಟಿಕೋನ ಪ್ರತಿಪಾದಿಸುವ ಪ್ರತಿಗಾಮಿ ಕಾರ್ಯಕ್ರಮ ಎಂಬಂತೆ ಪ್ರಚಾರ ಮಾಡುವ ಯತ್ನದಲ್ಲಿ ಬಹುಕಾಲದಿಂದ ತೊಡಗಿ ಪ್ರತಿ ಸಮ್ಮೇಳನ ಕೂಡ ನಡೆಸಿ ಸದ್ಯ ವಿಫಲವಾಗಿದ್ದಾರೆ. ಒಳ್ಳೆಯ ಕೆಲಸ ಮಡುವಾಗ ಟೀಕೆಗಳು ಬರುತ್ತವೆ, ಅವುಗಳಲ್ಲಿ ಗುಣಾತ್ಮಕವಾದವನ್ನು ಸ್ವೀಕರಿಸಿ ಉಳಿದವನ್ನು ನಿರ್ಲಕ್ಷಿಸಿ ಮುನ್ನಡೆಯುವುದು ಶ್ರೇಯಸ್ಕರ ಎಂಬುದನ್ನು ಕೂಡ ಇದು ತೋರಿಸಿದೆ.

Sunday, 8 December 2024

ಹೊಸ ಕತೆಗಾರರೊಬ್ಬರ ಹೊಸ ಸಂಕಲನ


ಜಿ.ಕೆ. ನಂದಕುಮಾರ್ ಕನ್ನಡ ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಈಚೆಗೆ ಸಣ್ಣದಾಗಿ ಕೇಳಿಬರುತ್ತಿರುವ ಹೆಸರು. ಪರವಾಗಿಲ್ಲ, ಅವರ ಕತೆಗಳಲ್ಲಿ ಶಕ್ತಿ ಇದೆ, ಸತ್ವವೂ ಇದೆ. ಮೊದಲ ಓದನ್ನು ಓದುಗ ಯಾವುದೇ ನಿರೀಕ್ಷೆ ಇಲ್ಲದೇ ಸುಮ್ಮನೇ ಕೈಗೆತ್ತಿಕೊಂಡು ಓದಲುತೊಡಗಿದರೆ ಸಾಕು ಮುಂದೆ ಅದೇ ಓದಿಸಿಕೊಳ್ಳುತ್ತದೆ. ಇದು ಈ ಕತೆಗಾರರ ಹೆಚ್ಚುಗಾರಿಕೆ.  ಇವರು ಉತ್ತಮ ನಟರೂ ಹೌದು, ಜೊತೆಗೆ ಉತ್ತಮ ಕಥಾವಾಚಕರೂ ಹೌದು ಎಂಬುದು ಈಚೆಗೆ ಉತ್ಸಾಹದಿಂದ ಅವರು ಒಂದೆಡೆ ತಮ್ಮ ಕಥಾವಾಚನ ಮಾಡುವುದನ್ನು ಆಸಕ್ತಿಯಿಂದ ಕೇಳಿಸಿಕೊಂಡೆ, ಹೇಳಿದಂತೆ ಮೊದಲು ಸುಮ್ಮನೇ ಅವರು ಓದುವುದನ್ನು ಕೇಳುತ್ತ ಕುಳಿತೆ, ಮುಂದೆ ನನ್ನ ಗಮನವೆಲ್ಲ ಅವರ ವಾಚನದಲ್ಲಿ ಮಗನವಾಯಿತು, ನಾನು ಕಳೆದೇ ಹೋಗಿದ್ದೆ, ಆ ಎರಡುಗಂಟೆಗಳು ಜಾರಿದ್ದೇ ತಿಳಿಯಲಿಲ್ಲ, ಅವರ ವಾಚನದ ಶೈಲಿ ಹಾಗಿತ್ತು, ಬರೆಹಗಾರ ಕಥೆ, ನಾಟಕ ಬರೆಯಬಹುದು, ಆದರೆ ಅದನ್ನು ಓದುವಾಗ ಆಯಾ ಪದಗಳಉಚ್ಚರಣೆ, ಧ್ವನಿ ಏರಿಳಿತ ಇತ್ಯಾದಿ ಕೇಳುಗರ ಮನ ಸೊರೆಯಾಗುವಂತೆ ಓದುವುದು ಸುಲಭದ ಮಾತಲ್ಲ. ಓದುವುದೆಂದರೆ ವಾರ್ತೆ ಓದಿದಂತೆ, ಉದ್ದಕ್ಕೆ ಓದುವುದಲ್ಲ, ಅದಕ್ಕೊಂದು ಕ್ರಮವಿದೆ ಕನ್ನಡ ನವೋದಯ ಕಾಲದಲ್ಲಿ ಕವಿಗಳು ತಮ್ಮ ಕವಿತೆಗಳನ್ನು ಓದುತ್ತಿದ್ದರಂತೆ. ಬೇಂದ್ರೆಯವರ ಗೆಳೆಯರ ಗುಂಪು ಮತ್ತು ಆ ಗುಂಪಲ್ಲಿದ್ದ ಕವಿಗಳು ಸಾಹಿತಿಗಳೆಲ್ಲ ಇದನ್ನೇ ಮಾಡುತ್ತಿದ್ದರೆಂದು ಕೇಳಿದ್ದೇವೆ, ಓದಿದ್ದೇವೆ. ಆದರೆ ಕಥೆಗಳನ್ನು ಹೀಗೆ ಓದುತ್ತಿದ್ದ ಸಂಪ್ರದಾಯ ಇತ್ತೇ ಎಂಬುದು ಅಷ್ಟಾಗಿ ತಿಳಿದಿಲ್ಲ, ಆದರೆ ಈ ಕತೆಗಾರರ ಜೊತೆಗಿನ  ರಂಗ ತಂಡದವರು ಇಂಥ ಯತ್ನವನ್ನು ಆಗಾಗ ಮಾಡುತ್ತಿದ್ದಾರೆ. ಇದೊಂದು ಸ್ತುತ್ಯರ್ಹ ಪ್ರಯತ್ನ. ಅದರ ಭಾಗವಾಗಿ ಅದರ ಸದಸ್ಯರು ತಾವು ಬರೆದ ಕತೆಗಳನ್ನು ನಾಟಕ ಅಥವಾ ಧಾರಾವಾಹಿಗಳ ಸಂಭಾಷಣೆಗಳನ್ನು ಕಣ್ಣಿಗೆ ಕಟ್ಟುವಂತೆ ಓದುತ್ತಾರೆ, ಅನಂತರ ಕೇಳುಗರಿಂದ ಆ ಕುರಿತು ಗಂಭೀರ ಚರ್ಚೆ, ಅಭಿಪ್ರಾಯ ಮಂಡನೆ ನಡೆಯುತ್ತದೆ. ಇದರಿಂದ ಆ ಹಸ್ತ ಪ್ರತಿಯ ಕತೆ ಅಥವಾ ಭಾಷೆ, ವಾಕ್ಯ ಪ್ರಯೋಗಗಳ ದೋಷಗಳೇನಾದರೂ ಇದ್ದರೆ ಅವೆಲ್ಲ ಜರಡಿಹಿಡಿದು ಹೋಗುತ್ತವೆ,  ಬರೆಹದ ಪ್ರತಿಗೆ ಗುಣಮಟ್ಟ ಬರಲು ಕಾರಣವಾಗುತ್ತದೆ. ಇದು ಸಾರ್ವಜನಿಕವಾಗಿ ಪ್ರದರ್ಶಿತವಾಗುವ ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಬರಬೇಕು ಅನಿಸುತ್ತದೆ.

ಅದಿರಲಿ, ಪ್ರಸ್ತುತ ಕತೆಗಾರರ ಹೊಸ ಸೃಷ್ಟಿಯ ಬಗ್ಗೆ ಬರೋಣ. ಇವರ ಈಚಿನ ಹೊಸ ಕಥಾ ಸಂಕಲನ 'ಬಿಳೇ ದಾಸ್ವಾಳ'. ಇದನ್ನು ಪ್ರತಿಷ್ಠಿತ ಸಪ್ನಾ ಬುಕ್ ಹೌಸ್ ಪ್ರಕಟಿಸಿದೆ. ಇದರ ಮೊದಲ ಮುದ್ರಣವಾದುದು ೨೦೨೨ರಲ್ಲಿ. ೬೫ ಪುಟಗಳ ಕಿರುಗಾತ್ರದ ಸಂಕಲನ ಇದು. ಇದರಲ್ಲಿ ಒಟ್ಟೂ ಐದು ಕಥೆಗಳಿವೆ. ಒಂದಕ್ಕಿಂತ ಒಂದು ಕಥೆ ಭಿನ್ನ ಹಾಗೂ ವಸ್ತು ವೈವಿಧ್ಯದಿಂದ ಗಮನಸೆಳೆಯುವುದು ಮಾತ್ರವಲ್ಲ, ಇದರಿಂದ ಓದುಗರ ಆಸಕ್ತಿಯನ್ನೂ ಕಾಯ್ದುಕೊಳ್ಳುತ್ತದೆ. ಎಲ್ಲ ಕಥೆಗಳ ಭಾಷೆ ಕಲ್ಯಾಣ ಕರ್ನಾಟಕದ ದಟ್ಟ ಸೊಗಡಿನ ಗಾಂವ್ಟಿ ನುಡಿ. ಗಮನಿಸಬೇಕಾದ ಸಂಗತಿ ಎಂದರೆ ಈ ಕಥೆಗಾರರಿಗೆ ಕಥೆಉ ಹಂದರ ಹಣೆಯುವ ಕಲೆ ಸಿದ್ಧಿಸಿದೆ ಮಾತ್ರವಲ್ಲ, ಸಮಾಜದ, ತಾವು ಗಮನಿಸುವ ಪಾತ್ರಗಳು ಮತ್ತು ಅಂಥ ಪಾತ್ರಗಳು ಸಮಾಜದಲ್ಲಿ ಸಹಜವಾಗಿ ಹೇಗೆ ವರ್ತಿಸುತ್ತವೆ ಎಂಬ ಬಗ್ಗೆ ದಟ್ಟ ಅನುಭವವಿದೆ. ಸಹಜವಾಗಿ ತಮ್ಮ ಓದು ಮತ್ತು ಆಧುನಿಕ ಪ್ರಪಂಚದ ಚಿಂತನೆ, ವಾದ ಚರ್ಚೆಗಳ ನಂಟಿಲ್ಲದೇ ನೇರವಾಗಿ ಕಥೆ ಹಣೆಯುವಾಗ ಅವರ ಯಶಸ್ಸು ಕಾಣಿಸುತ್ತದೆ, ಎಲ್ಲೆಲ್ಲಿ ಆಧುನಿಕ ಚಿಂತನೆಗಳು ಮತ್ತು ವಾದಗಳ ಸೆಳೆತಕ್ಕೆ ಒಳಗಾಗಿ ಕಥೆ ಬರೆಯುತ್ತಾರೋ ಅಲ್ಲೆಲ್ಲ ಸೋಲುತ್ತಾರೆ. ಉದಾಹರಣೆಗೆ ಗಣಪ್ಪ ಕಥೆಯ ಒಂದು ಸನ್ನಿವೇಶ ಗಮನಿಸೋಣ, ಜೋಗವ್ವ ಮತ್ತು ದುರುಗಪ್ಪ ಬಿಕ್ಕೆಗಾಗಿ ಬೀದಿಯಲ್ಲಿ ಬರುತ್ತಿರುತ್ತಾರೆ. ಅವರು ಅಲ್ಲಿ ಇಲ್ಲಿ ಅಡ್ಡಾಡುತ್ತಾ ಬಿಸಿಲಿನ ಜಳದಿಂದ ಬೆಂಡಾಗಿ ಯಾರದ್ದೋ ಮನೆಯ ಜಗುಲಿ ಮೇಲೆ ಕುಳಿತುಕೊಳ್ಳುತ್ತಾರೆ. 'ಆಗ ಮನಿ ಯಜಮಾನ ಜೋಗವ್ವಳಿಗೆ ಎಲೆ ಅಡಿಕೆ ಕೊಡುತ್ತನೆ. ಅದರಲ್ಲಿ ತಾನು ಸ್ವಲ್ಪ ತೆಗೆದುಕೊಂಡ ಆಕೆ ಒಂದಡಕಿ ತಗೆದು ಕಡದುತಂಬಾಕಾ ತಿಕ್ಕಿ ಎಲಿ ಹಾಕ್ಯಂಡ್ ಉಳದ  ಉಳಿದ ಎಲೆ ಅಡಕೆಯನ್ನು ತಗದು ದುರಗಗ ಕೊಟ್ರ ಎಲಿ ಅಡಕಿ ನೋಡದನ ರೊಟ್ಟಿ ಹರಕಂಡAಗ ಹರಕಂಡ ತಿನ್ನಾಕತ್ತ. ಯಜಮಾನನ ಮನಿಗೆ ಬಂದ ಬೀಗರು ಗಾಭಾಗಿ ನೋಡಿ ಸುಮ್ಮನಾದರು.ಜೋಗವ್ವ ಎಷ್ಟ ಕರದರೂ ಕೇಳದಎಲಿ ತಿಂದ್ ತೇಗಿ ಮನಿ  ಯಜಮಾನನಂಗ ಗ್ವಾದಲಿ ಹಾಕಿರೋ ಕಟ್ಟಿ ಮ್ಯಾಗ ಅಂಗಾತ ಮಕ್ಕಂಡ. ಎಷ್ಟ್ ಎಬಿಸಿದ್ರೂ ಏಳ್ಳೆ ಇಲ್ಲ. ಜೋಗವ್ವ ಸಿಟ್ಟಿಗೆದ್ ಮುಂದಿನ ಮನೆಗುಳಿಗೆ ಹೋದ್ಲು. ದುರುಗ ಅಲ್ಲೇ ಅಂಗಾತ ಮಲಗಿದ್ದ.  ಈತಗ ಊರಾಗ ಸ್ವಾತಂತ್ರ ಇತ್ತು. ಹಂಗಾಗೆ ಎಲ್ಲರ ಮಲಗಿದ್ರು ಯಾರು ಎಬ್ಬಸಿತ್ತಿದ್ದಿಲ್ಲ. ಎಚ್ಚರಾದಾಗ  ಎದ್ದೋಕ್ಯಾನ' (ಪು. ೩) ಇಲ್ಲಿನ ಭಾಷೆ ಮಾತ್ರವಲ್ಲ, ಇಂಥ  ಸನ್ನಿವೇಶವನ್ನು  ಊರಲ್ಲಿ ನೋಡಿದ್ದ ಯಾರಿಗಾದರೂ ಚಿತ್ರ ಕಣ್ಣಿಗೆ ಕಟ್ಟುತ್ತದೆ. ಇದು ಕತೆಗಾರನ ನಿಜ ಶಕ್ತಿ. ಇಲ್ಲಿ ನಮ್ಮ ಗಮನಕ್ಕೆ ಬರುವುದು ಕತೆಗರರ ನಿಜ ಅನುಭವದ ಸಹಜ ಅಭಿವ್ಯಕ್ತಿ. ಇಂಥಲ್ಲಿ ಕತೆಗಾರರು ಗೆಲ್ಲುತ್ತರೆ. ಇನ್ನೊಂದು ಸಂದರ್ಭ ನೋಡೋಣ. ಬಿಳಿ ದಾಸ್ವಾಳ ಎಂಬ ಶೀರ್ಷಿಕೆಯ ಕಥೆ ಯ ಒಂದು ಸಂದರ್ಭ. ಹೆಣ್ಣುಮಕ್ಕಳ ಮುಟ್ಟಿನ ಸಮಸ್ಯೆಗೆ ಮನೆಯಲ್ಲಿ ಯಶಸ್ವೀ ಪಾರಂಪರಿಕ ಔಷಧ ಮಾಡುವುದಕ್ಕಾಗಿ ಬಿಳಿ ದಾಸವಾಳದ ಹೂವು ಕಿತ್ತು ತರುತ್ತಿದ್ದ ನಿಂಗಪ್ಪನ ಕೃತ್ಯವನ್ನು ನೋಡಿ ದಾಸವಾಳ ಗಿಡಗಳಲ್ಲಿ ಆಧುನಿಕ ಸಾಹಿತ್ಯ ಸಿದ್ಧಾಂತ ಹೇಳುವ ಒಂದು ಸಂಕೇತ ಹುಡುವ ಕತೆಗಾರರು ಒಂದೆಡೆ ಈ ಬಗ್ಗೆ ಹೇಳುತ್ತ 'ದೊಡ್ಡ ಗಿಡದಾಗ ಹೂ ಕಿತ್ತಾಂಗೆಲ್ಲ ಅದು ದೃಷ್ಟಿ ಕಳಕಂತಿತ್ತು. ಯಾಕಂದ್ರ ಈ ಗಿಡದ ಕಣ್ಣ ಹೂವು, ಅದನ್ನ ಕಿತ್ತರ ಗಿಡ ಕುರುಡಾಕ್ಕಿತ್ತು. ಇದು ನಿಂಗಪ್ಪಗ ಗೊತ್ತಾಗದ ಮೊಗ್ಗು ಸಮೇತ ಎಲ್ಲಾ ಹೂ ಕಿತಗಂಡ್ ಗಿಡಾನ ಕುಲ್ಡ್ ಮಾಡದ.ಇದನ್ನೆಲ್ಲ ನೋಡ್ತಿದ್ದ ಸಣ್ಣ ಗಿಡ ದೊಡ್ಡ ಗಿಡಕ್ಕ  ನಿನ್ನ ಬಾಳೇವ್ ಬ್ಯಾಡವ್ವ ನನಗ ಅಂತಂದ್ರ  ದೊಡ್ಡ ಗಿಡ ಭೂತಾಯಿ ಮಡಲಾಗ ಕರಗಾಕ  ಈ ನಡಕ ಯಾರ ಚೂಟಿದ್ರು ಕಡದ್ರು, ಕಡದ್ರು ಚುಚ್ಚಿದ್ರ, ಕಡೇಕ್ ಸುಟ್ರು ಮಾತಾಡಬಾರದಂತ ಬಾಯಿಕೊಟ್ಟಿಲ್ಲ ಆ ಭಗವಂತಮ ಅದರ ಅರ್ಥ ನಾವು ಬೆಳಕಂತ ಹೋಬಕು ತಿಳೀತ ಅಂತ ದೊಡ್ಡ ಗಿಡ ಅನ್ನೋರಾಗ, ನಾಗಪ್ಪ ಸಣ್ಣ ಸಸಿ ಕಿತಗಂಡ್ ಹೊಂಟ. ದೊಡ್ಡ ಗಿಡಾ ಹೂನೆಲ್ಲಾ ಕಳಕಂಡ್ ಕುರುಡಾಗಿ ಸಣ್ಣ ಗಿಡಾನ ಹುಡುಕಾಡಕತ್ತು. ನಿಂಗಪ್ಪನ  ಕೈಯಾಗ ಉಲ್ಟ ಜೊತ್‌ಬಿದ್ ಗಿಡದ ಹೂವು ದೊಡ್ಡ ಗಿಡಾ ವದ್ಯಾಡೋದ್ ನೋಡಿ ಮರಗ್ತಾ ಇನ್ನ ಮುಗೀತ ನಿನ್ನ ಕತಿ ಅಂತ ಸುಮ್ಮನಾತು". (ಪುಟ ೪೦). ಇಲ್ಲಿನ ವಿವರವನ್ನು ದೌರ್ಜನ್ಯ ಶೋಷಣೆ ವಿರುದ್ಧ ಮೌನ ತಾಳುವುದು, ಗಿಡಕ್ಕೂ ನೋಟವಿದೆ, ನೋವಿದೆ ಎಂಬುದನ್ನೆಲ್ಲ ತಿಳಿಸಬೇಕೆಂಬ ಸಾಮಾಜಿಕ ಜಾಗೃತಿ ಹುಟ್ಟಿಸುವ ಕಳಕಳಿಯ ಚಿಂತನೆಯ ಪ್ರಭಾವ ದಟ್ಟವಾಗಿರುವುದು ಕಾಣುತ್ತದೆ. ಇಂಥ ಕಡೆ ಕತೆಗಾರರು ಸೋಲುತ್ತಾರೆ. ಇವೆಲ್ಲ ಯಾವುದೋ ಚಿಂತನೆಯ ಹಿನ್ನೆಲೆಯಲ್ಲಿ ನೋಡಿದಾಗ ಅದ್ಭುತ ಒಳನೋಟ ಕಟ್ಟಿಕೊಟ್ಟಿದ್ದಾರೆ ಅನಿಸಬಹುದು. ಅದೇ ಕತೆಯಲ್ಲಿ ಒಂದೆಡೆ ಬಿಳೇ ದಾಸವಾಳದ ಹೂವುಗಳಿಂದ ಹೆಣ್ಣು ಮಕ್ಕಳ ಜೀವ ತಿನ್ನುವ ಕಾಹಿಲೆಗೆ ನಾಟಿ ಮದ್ದು ಕೊಟ್ಟು ಕಪಾಡುವ ತಾಯಿಯನ್ನು ಕುರಿತು ನಿಮ್ಮ ಜೀವ ಉಳಿಸಲು ಆ ಗಿಡಗಳ ಜೀವ ಯಾಕೆ ತಿನ್ನುತ್ತೀರಿ ಎಂಬ ಮಾತು ಕೂಡ ಸಮಾನತೆ, ಜೀವ ಪ್ರೇಮ ಇತ್ಯಾದಿ ಚಿಂತನೆಯ ಪ್ರಭಾವದಿಂದ ಕೂಡಿದೆ. ಇಲ್ಲಿಯೂ ಸುತ್ತಲಿನ ಪ್ರಕೃತಿಯನ್ನು ಕೆಡಿಸಬಾರದೆಂದು  ಅರ್ಥವಾಗುವಷ್ಟು ಸುಲಭವಾಗಿ ಇಂಥ ಅಸಂಗತ ಅನಿಸುವ ಧ್ವನಿಗಳು ಜನರನ್ನು ಮುಟ್ಟಲಾರವು ಇಂಥ ಕಡೆ ಕತೆ ಓದುವವರಿಗೆ ಒಂದು ನಿರ್ದಿಷ್ಟಬಗೆಯ ಸಿದ್ಧತೆ ಅಗತ್ಯ ಎನಿಸುವಂತೆ ದೂರವಾಗುತ್ತಾರೆ ಕಥೆಗಾರರು.    

ಅದರೆ ಇದು ನಮ್ಮ ಸಮಾಜದ ಸಾಮಾನ್ಯ ಅನುಭವಕ್ಕೆ ಗಾವುದ ದೂರ ಇರುವ ಕಾರಣ ಇಲ್ಲೆಲ್ಲ ಕಥೆ ಸೋಲುತ್ತದೆ. ಕತೆಗರರು ಇಂಥ ಅಸಹಜತೆಯನ್ನು ಕೃತಕವಾಗಿ ತರುವ ಯತ್ನವನ್ನು ಆದಷ್ಟು ಬೇಗ ಕೈಬಿಟ್ಟರೆ ಇವರಲ್ಲಿನ ನೈಜ ಕತೆಗಾರ  ಸೊಗಸಾಗಿ ಮೂಡುತ್ತಾನೆ.


ಕೃತಿಯ ವಿವರ:

ಕೃತಿ: ಬಿಳೆ ದಾಸ್ವಾಳ

ಲೇಖಕರು: ಜಿ.ಕೆ. ನಂದಕುಮಾರ್

ಪ್ರಕಾಶಕರು: ಸಪ್ನ ಬುಕ್ ಹೌಸ್

ಪ್ರಕಟಗೊಂಡ ವರ್ಷ: ೨೦೨೨

ಒಟ್ಟು ಪುಟ: ೬೫

ಹೆಚ್ಚಿನ ವಿವರಕ್ಕಾಗಿ: 

Buy Bile Dasvala : Matt Innashtu Katigalu book : G K Nandakumar , 9354563686, 9789354563683 - SapnaOnline.com India

Bile Daasvala | Stories | Nandakumara. G. K. | Kannada Books | Sapna Book House – Harivu Books


ಮಹಾಭಾರತದ ಕೀಚಕ ವಧಾ ಪ್ರಸಂಗ - ಒಂದು ಘಟನೆ ಹಲವು ಆಯಾಮಗಳು


ನಮ್ಮ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ನಮ್ಮ ನಿತ್ಯ ಜೀವನದ ಹತ್ತು ಹಲವು ಸಮಸ್ಯೆಗಳನ್ನು ಕಟ್ಟಿಕೊಟ್ಟು ಅವುಗಳಿಗೆ ಶಾಶ್ವತ ಪರಿಹಾರವನ್ನೂ ಅದರಿಂದ ಕಲಿಯಬಹುದಾದ ಪಾಠಗಳನ್ನೂ ಮನಮುಟ್ಟುವಂತೆ ಚಿತ್ರಿಸುತ್ತವೆ. ಈ ಕಾರಣಕ್ಕಾಗಿ ಅವು ಎಂದೆಂದಿಗೂ ನಿತ್ಯ ನೂತನವಾಗಿವೆ. ಅಲ್ಲಿನ ಒಂದು ಪ್ರಸಂಗ ಕೀಚಕ ವಧೆ. ಇದು ಅತ್ಯಂತ ಸಂಕೀರ್ಣ ಆಯಾಮಗಳನ್ನು ಹೊಂದಿದೆ. ಸಾಮಾನ್ಯ ಗಂಡು ಹೆಣ್ಣಿನ ಸಂಬಂಧಗಳಿಂದ ಹಿಡಿದು ಸೇನಾಧಿಪತಿ ಸ್ಥಾನಮಾನ, ವ್ಯಕ್ತಗೆ ಅಧಿಕಾರದಿಂದ ಸಿಗುವ ಗೌರವ ಹಾಗೂ ಅದು ಹೋದ ಮೇಲೆ ಆಗುವ ಪರಿಸ್ಥಿತಿ ಇತ್ಯಾದಿಗಳನ್ನು ಅದು ತೋರಿಸುವ ರೀತಿ ಅನನ್ಯ. ಜೊತೆಗೆ ಈಘಟನೆಯ ಹಿಂದೆ ನಡೆಯುವ  ರಾಜತಾಂತ್ರಿಕ ಮಗ್ಗಲುಗಳನ್ನೆಲ್ಲ ಏಕ ಕಾಲಕ್ಕೆ ಈ  ಒಂದೇ ಘಟನೆಯ ಮೂಲಕ ಅರ್ಥಮಾಡಿಸುತ್ತದೆ. ಪ್ರಸ್ತುತ ಕುಮಾರ ವ್ಯಾಸನ ಗದುಗಿನ ಭಾರತದ ವಿರಾಟಪರ್ವದ ಭಾಗವನ್ನು ಆಧರಿಸಿ ಇಲ್ಲಿ ಕೆಲವು ಸಂಗತಿಗಳನ್ನು ಪರಿಶೀಲಿಸಲಾಗಿದೆ. (ಕರ್ಣಾಟ ಭಾರತ ಕಥಾ ಮಂಜರಿ, ಆದಿ ಪಂಚಕ, ಸಂಪುಟ-೧. ಟಿ. ವಿ. ವೆಂಕಟಾಚಲ ಶಾಸ್ತ್ರಿ (ಪ್ರ. ಸಂ), ಪ್ರಕಾಶಕರು, ಕನ್ನಡ ಗಣಕ ಪರಿಷತ್ತು, ಬೆಂಗಳೂರು೨೦೨೨, ಪುಟ ೬೯೭)

ಮತ್ಸ್ಯ ದೇಶದ ರಾಜ ವಿರಾಟ. ಅವನ ಪತ್ನಿ ಸುದೇಷ್ಣೆ. ಅವಳ ಸೋದರ ಕೀಚಕ. ವಿರಾಟನ ಸೇನಾಧಿಪತಿ. ಆತ ಅತಿಯಾದ ಹೆಣ್ಣಿನ ಚಪಲ ಇರುವಾತ. ಆದರೆ ಬಲಶಾಲಿ. ಇಡೀ ರಾಜ್ಯದ ಎಲ್ಲ ಸುಂದರ ಹೆಣ್ಣನ್ನೂ ಆತ ಕಾಡಿದ್ದಾನೆ, ಅವರ ಪುರುಷರಿಗೂ ಬುದ್ಧಿ ಕಲಿಸಿದ್ದಾನೆ. ಅವನಿಗೆ ಹೆಣ್ಣು ಬೇಕು ಅಂದರೆ ಆತ ಏನು ಬೇಕಾದರೂ ಮಾಡಬಲ್ಲ, ಆದರೆ ಆತ ಸೇನಾಧಿಪತಿ, ಸಾಲದ್ದಕ್ಕೆ ಆತ ರಾಜನ ಹತ್ತಿರದ ಬಂಧು ಹೀಗಾಗಿ ಜನ ಬೇರೆ ದಾರಿ ಇಲ್ಲದೇ ಸುಮ್ಮನಿದ್ದರು. ಇತ್ತ ಹಸ್ತಿನಾವತಿಯ ಪಾಂಡವರು ಮತ್ತು ಕೌರವರ ನಡುವೆ ನಡೆದ ಬಿರುಕಿನ ಸಂಬಂಧದ ಪರಿಣಾಮವಾಗಿ ಕೌರವರ ಮೋಸದಿಂದಾಗಿ ಪಾಂಡವರು ಹನ್ನೆರಡು ವರ್ಷ ವನವಾಸವನ್ನೂ ಒಂದು ವರ್ಷ ಅಜ್ಞಾತವಾಸವನ್ನೂ ಅನ್ಯಾಯವಾಗಿ ಅನುಭವಿಸಬೇಕಾಗುತ್ತದೆ.ಹನ್ನೆರಡು ವರ್ಷ ವನವಾಸ ಪೂರೈಸಿ ಒಂದು ವರ್ಷದಜ್ಞಾತವಾಸ ಪೂರೈಸಲು ಪಾಂಡವರು ಇನ್ನಿಲ್ಲದ ಕಷ್ಟಪಡುತ್ತಿದ್ದರು. ಬಲ ಮತ್ತು ಶೌರ್ಯದಿಂದ ಪ್ರಸಿದ್ಧರಾಗಿದ್ದ ಅವರು ಐವರು ಜೊತೆಗೆ ಪತ್ನಿ ದ್ರೌಪದಿ ಮತ್ತು ವಯಸ್ಸಾದ ತಾಯಿ ಕುಂತಿ ಎಲ್ಲರ ಚಿಂತೆ ಒಬ್ಬೊಬ್ಬರನ್ನೂ ಕಾಡುತ್ತಿತ್ತು. ಕುಂತಿ ಹಸ್ತಿನಾವತಿಯಲ್ಲಿ ವಿದುರನ ಜೊತೆ ಇರುತ್ತಾಳೆ. ಆದರೆ ದ್ರೌಪದಿ ಮಾತ್ರ ನಿತ್ಯ ಇವರೆಲ್ಲರ ಜೊತೆ ಕಷ್ಟಕ್ಕೆ ಹೆಗಲು ಕೊಡಬೇಕಾಗುತ್ತದೆ. ಇವರ ಪರಿಪಾಟಲಿನ ಲಾಭ ಪಡೆದು ಹೇಗಾದರೂ ಅವರನ್ನು ಪತ್ತೆ ಹಚ್ಚಿ ಮತ್ತೆ ಹನ್ನೆರಡು ವರ್ಷ ವನವಾಸಕ್ಕೆ ಅಟ್ಟಿದರೆ ಸಾಕೆಂದು ದುರ್ಯೋಧನ ತನ್ನ ಗೂಢಚಾರರನ್ನು ಸದಾ ಛೂ ಬಿಟ್ಟಿರುತ್ತಾನೆ. ಇವೆಲ್ಲ ಸಮಸ್ಯೆಗಳನ್ನು ಎದುರಿಸಲು ಪಂಡವರು ಪ್ರಾಮಾಣಿಕವಾಗಿ ಯತ್ನಿಸುತ್ತಾರೆ. ಹೀಗಾಗಿ ಅವರು ವೇಷ ಮರೆಸಿಕೊಂಡು ತಮ್ಮ ನಿಜ ರೂಪವನ್ನು ಶಕ್ತಿಯನ್ನು ಬಚ್ಚಿಟ್ಟು ಕಾಲ ಕಳೆಯುತ್ತಾರೆ. ಇನ್ನು ಕೆಲವೇ ತಿಂಗಳ ಪ್ರಶ್ನೆ ಇರುತ್ತದೆ. ಮನುಷ್ಯನಿಗೆ ಕಾಣಿಸಿಕೊಳಳದಿರುವುದು ದೊಡ್ಡ ಸಮಸ್ಯೆ. ಅಂದು ಎಂದಲ್ಲ, ಎಂದೆಂದಿಗೂ. ಪಾಂಡವರು ಹೆಸರಾಗಿದದವರು. ಅಂಥವರನ್ನು ಜನ ಗುರುತಿಸುವುದು ಸುಲಭ. ಅವರಿಗೆ ಇದರಿಂದ ಒದಗಬಹುದಾದ ತೊಂದರೆ ನೆನೆದೇ ದುರ್ಯೋಧನ ಅವರ ಮುಂದೆ ಈ ಸವಾಲು ಮುಂದೆ ಇಟ್ಟು ಅಷ್ಟರಲ್ಲಿ ಅವರ ಪತ್ತೆ ಆದರೆ ಮತ್ತೆ ಹನ್ನೆರಡು ವರ್ಷ ವನವಾಸ ಎಂಬ ಷರತ್ತು ವಿಧಿಸುತ್ತಾನೆ. ಹೀಗಾಗಿ ಅವರನ್ನು ಪತ್ತೆ ಹಚ್ಚಲು ನಿರಂತರ ಗೂಢಚಾರರನ್ನು ಬಿಟ್ಟಿರುತ್ತಾನೆ. ಆದರೆ ಅಜ್ಞಾತವಾಸದ ಕಷ್ಟ ಅನುಭವಿಸಿದ ಪಾಂಡವರ ಕಷ್ಟ ಅವರಿಗೇ ಗೊತ್ತು. ಅಷ್ಟಕ್ಕೂ ಈ ಸಲಹೆ ಕೊಟ್ಟವನು ಶಕುನಿ. ಇವನ ಮಾತನ್ನು ಬೆಂಬಲಿಸುವ ಕರ್ಣ. ಅವರ ಜಾಣ್ಮೆ ನೋಡಿ. ಮನುಷ್ಯನಿಗೆ ಇರುವ ಕಾಣಿಸಿಕೊಳ್ಳಲಾಗದ ಕಷ್ಟದ ಅರಿವು ಅವರಿಗೆ ಇತ್ತು ಅನಿಸುತ್ತದೆ. ಇಂದಿನ ಸಂದರ್ಭವನ್ನೇ ನೋಡಿ. ಸಿನಿಮಾ, ರಾಜಕಾರಣ ಇತ್ಯಾದಿ ಕ್ಷೇತ್ರದ ಸೆಲೆಬ್ರಿಟಿಗಳನ್ನು ಬಿಡಿ. ಜನ ಸಾಮಾನ್ಯರಿಗೂ ಇದು ಒಂದೆರಡು ದಿನದ ತರುವಾಯ ಕಾಡುತ್ತದೆ. ಇಂದು ಸಾಮಾಜಿಕ ಜಾಲ ತಾಣ, ಮೊಬೈಲುಗಳ ಮೂಲಕ ಒಮ್ಮೆ ಕಾಣಿಸಿಕೊಳ್ಳುವ ಜನರಿಗೆ ಒಂದು ದಿನ ಕೂಡ ಅದರಿಂದ ದೂರ ಇರುವುದು ಕಷ್ಟವಾಗುತ್ತದೆ.ಇಂಥ ಸಂದರ್ಭದಲ್ಲಿ ರಾಜರಂತೆ ಮೆರೆದ ಪಾಂಡವರು ವರ್ಷಗಟ್ಟಲೆ ಯಾರಿಗೂ ತಿಳಿಯದಂತೆ ಅವರ ನಡುವೆಯೇ ಇರಬೇಕೆನ್ನುವುದು ಕಡು ಕಷ್ಟ. ಇದನ್ನು ಧರ್ಮರಾಜ ಸಹೋದರರಿಗೆ ಮತ್ತೆ ಮತ್ತೆ ನೆನಪಿಸುತ್ತಾನೆ. ಮತ್ತೊಂದು ಕಷ್ಟವೆಂದರೆ ಪಾಂಡವರು ಹಸ್ತಿನಾವತಿ ಬಿಟ್ಟು ಬಹುದೂರ ಹೋಗುವ ಸ್ಥಿತಿಯಲ್ಲಿಲ್ಲ, ಅಸ್ತ್ರ, ಶಸ್ತ್ರಗಳಿಲ್ಲದೆ ಬರಿಗೈಯಲ್ಲೇ ಊಳಿಗದವರಂತೆ ಇದ್ದು ತಮ್ಮ ಗುರುತು ಹತ್ತದಂತೆ ಇರಬೇಕಿದೆ. ಸಾಲದ್ದಕ್ಕೆ ತಾವು ಇರುವ ಜಾಗ ದುರ್ಯೋಧನನಿಗೆ ಶತ್ರು ದೇಶವಾಗಿರಬೇಜು, ಶತ್ರುವಿನ ಶತ್ರು ತನಗೆ ಮಿತ್ರ ಎಂಬಂತೆ ವಿರಾಟನಿಗೆ ದುರ್ಯೋಧನ ಶತ್ರುವೆಂದೂ ಆತ ಪಾಂಡವರ ಅಭಿಮಾನಿ ಎಂಬುದು ಬೇರೆ. ಹೀಗಾಗಿ ಅಲ್ಲಿಗೆ ಹೋಗುತ್ತರೆ. ಧರ್ಮರಾಜನಿಗೆ ದ್ಯೂತ ಬರುತ್ತಿತ್ತು, ವಿರಾಟನಿಗೂ ಅದರ ಹುಚ್ಚು ಇತ್ತು. ಇದನ್ನು ಮುಂದಿಟ್ಟುಕೊಂಡು ತಾನು ಪಾಂಡವರ ಅಭಿಮಾನಿಯೆಂದೂ ಈಗ ಅವರು ಹಸ್ತಿನಾವತಿಯಲ್ಲಿ ಇಲ್ಲದ ಕಾರಣ ತನು ತಮ್ಮ ರಾಜ್ಯಕ್ಕೆ ಬಂದಿರುವುದಾಗಿ, ಭೀಮ ತಾನು ಪಾಂಡವರಿಗೆ ಅಡುಗೆ ಮಾಡುತ್ತಿದ್ದ ತಾನು ಈಗ ಕೆಲಸ ಹುಡುಕು ಬಂದಿದ್ದಾಗಿ ಹೇಳುವುದಾಗಿ ಅಲ್ಲಿ ಹೋದರೆ ಅರ್ಜುನ ತನ್ನ ಬಲವಾದ ತೋಳುಗಳಿಂದ ವೇಷ ತೊಡುವುದು ಕಷ್ಟವಾದ ಕಾರಣ ತಾನು ನಾಟ್ಯ ಪ್ರವೀಣನೂ ಅದನ್ನು ಕಲಿಸುವುದಾಗಿಯೂ ಕಲಿಸುವುದಾಗಿಯೂ ಶಿಖಂಡಿಯಂತೆ ವೇಷಹಾಕಿ ಅಲ್ಲಿ ಹೋಗುತ್ತಾನೆ. ನಕುಲ ಸಹದೇವರು ಹಸು  ಕುದುರೆಗಳ ಸಂಪತ್ತನ್ನು ಕಾಪಾಡುವವರಾಗಿಯೂ ಅಲ್ಲಿ ಕೆಲಸಕ್ಕೆ ಸೇರಿದರೆ ದ್ರೌಪದಿ ಕೇಶ ವಿನ್ಯಾಸ ಮಾಡುವ ಸೈರಂಧ್ರಿಯಾಗಿ ರಾಣಿ ಸುದೇಷ್ಣೆಯ ಸೇವೆಯ ಹೆಸರಲ್ಲಿ ಸೇರುತ್ತಾಳೆ. ಹೀಗೆ ಎಲ್ಲರೂ ವಿರಾಟನ ಮತ್ಸ್ಯ ನಗರ ಸೇರುತ್ತಾರೆ. ತಮ್ಮ ಶಸ್ತ್ರಾಸ್ತ್ರಗಳನ್ನು ಊರ ಹೊರಗಿನ ಮರವೊಂದರ ಮೇಲೆ ಬಚ್ಚಿಟ್ಟು ಊರು ಪ್ರವೇಶಿಸಿ ತಮ್ಮನ್ನು ಬೇರೆ ಬೇರೆ ಹೆಸರು ಮತ್ತು ಕೆಲಸಗಳಿಗೆ ಮೀಸಲಿಟ್ಟುಕೊಂಡು ರಾಜ ವಿರಾಟನ ಬಳಿ ಬಂದು ಕೆಲಸ ಪಡೆಯುತ್ತಾರೆ, ಧರ್ಮರಾಜ ರಾಜನ ಸಲಹೆಗಾರನಾಗಿ ಕಂಕ ಭಟ್ಟ ಎಂಬ ಹೆಸರಲ್ಲಿಯೂ ಅರ್ಜುನ ಬೃಹನ್ನಳೆಯಾಗಿ ನಾಟ್ಯ ಕಲಿಸುವವನಾಗಿಯೂ ಭೀಮ ವಲಲ ಎಂಬ ಹೆಸರಲ್ಲಿ ಅಡುಗೆಯವನಾಗಿಯೂ ನಕುಲ ಸಹದೇವರು ಕುದುರೆ ಲಾಯ ಮತ್ತು ಗೋಶಾಲೆಯ ಉಸ್ತುವಾರಿ ನೋಡಿಕೊಳ್ಳುವವರಾಗಿಯೂ ಕೆಲಸಕ್ಕೆ ಸೇರುತ್ತಾರೆ. ದ್ರೌಪದಿ ಕೇಶ ವಿನ್ಯಾಸ ಮಾಡುವ ಸೈರಂಧ್ರಿಯಾಗಿ ಸುದೇಷ್ಣೆಯ ಬಳಿಯೂ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ದ್ರೌಪದಿಯ ಅನುಪಮ ಸೌಂದರ್ಯ ಕಂಡ ಸುದೇಷ್ಣೆ ಅವಳನ್ನು ಕೆಲಸಕ್ಕೆ ಇಟ್ಟುಕೊಂಡರೆ ತನ್ನ ಪತಿಯೇ ದಾರಿ ತಪ್ಪ ಬಹುದೆಂದು ಹಿಂಜರಿಯುತ್ತಾಳೆ. ಆದರೆ ಅಂತಿಮವಾಗಿ ಅವಳನ್ನು ಕೆಲಸಕ್ಕೆ ಇಟ್ಟುಕೊಳ್ಳುತ್ತಾಳೆ. ಸುದೇಷ್ಣೆ ಅಂದುಕೊಂಡಂತೆ ಆಕೆಯ ರೂಪದಿಂದ ತೊಂದರೆ ಆಗುತ್ತದೆ ಆದರೆ ಗಂಡನಿಂದ ಅಲ್ಲ, ಬದಲಿಗೆ ತನ್ನ ತಮ್ಮ ಕೀಚಕನಿಂದ. ಆತನ ಸ್ವಭಾವ ತಿಳಿದಿದ್ದ ಸುದೇಷ್ಣೆ ಆಕೆ ಅವನ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಿದ್ದರೂ ಒಂದು ಸಂದರ್ಭದಲ್ಲಿ ಆತ ಅವಳನ್ನು ನೋಡಿ ಅವಳೊಂದಿಗೆ ಸೇರುವ ಆಸೆಯನ್ನು ಅಕ್ಕನಿಗೆ ಹೇಳುತ್ತಾನೆ, ಅವಳು    ತಿಳಿ ಹೇಳುವಲ್ಲಿ ಸೋತು ಅವನ ಬಳಿ ದ್ರೌಪದಿ ಹೋಗುವಂತೆ ಮಾಡುತ್ತಾಳೆ. ಅವನ ಕಪಟತನ ತಿಳಿದ ದೌಪದಿ ತನು ಗಂಧರ್ವರ ಪತ್ನಿ ಎಂದೂ ಅವರಿಗೆ ತಿಳಿದರೆ ಕಷ್ಟವೆಂದೂ ಹೇಳಿ ಉಪಾಯದಿಂದ ಆತ ನಾಟ್ಯಶಾಲೆಗೆ ಒಂಟಿಯಾಗಿ ಬರುವಂತೆ ಮಾಡಿ ವಿಷಯವನ್ನು ಭೀಮನಿಗೆ ತಿಳಿಸುತ್ತಾಳೆ. ಅಷ್ಟರಲ್ಲಿ ವಿರಾಟನ ಆಸ್ಥಾನದಲ್ಲಿ ದ್ರೌಪದಿಗೆ ಅವಮಾನವಾದರೂ ಪಾಂಡವರು ಏನೂ ಮಾಡುವ ಸ್ಥಿತಿಯಲ್ಲಿರುವುದಿಲ್ಲ, ಇದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಭೀಮ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.

ಇದೇ ಸಂದರ್ಭ ಅಂದುಕೊಂಡ  ಭೀಮ ಹೆಣ್ಣಿನಂತೆ ವೇಷ ಧರಿಸಿ ನಾಟ್ಯಶಾಲೆಯಲ್ಲಿ ಕೀಚಕನಿಗಾಗಿ ಕಾಯುತ್ತಿರುತ್ತಾನೆ, ನಿರೀಕ್ಷೆಯಂತೆ ಬಂದ ಕೀಚಕ ಆಕೆಯ ಮೈ ಮುಟ್ಟುತ್ತಾನೆ, ಆದರೆ ಆ ಮೈಯ ಗಡಸುತನದಿಂದ ಅನುಮಾನ ಬರುತ್ತದೆ. ಆ ಸಂಜೆಯ ಕತ್ತಲಿನಲ್ಲಿ ಏನೂ ಕಾಣದ ಕೀಚಕನ ಮೇಲೆ ಭೀಮ ದಾಳಿ ಮಾಡುತ್ತಾನೆ. ಭೀಕರ ಕಾಳಗ ನಡೆದು ಅಂತಿಮವಾಗಿ ಕೀಚಕ ಸಾಯುತ್ತಾನೆಕೀಚಕನ ಸಾವಿನಿಂದ  ನೊಂದ ಅವನ ತಮ್ಮಂದಿರಾದ ಉಪ ಕೀಚಕರು ಭೀಮನ ಮೇಲೆ ಮುಗಿಬೀಳುತ್ತಾರೆ. ಅವರನ್ನೆಲ್ಲ ಭೀಮ ಸಂಹರಿಸುತ್ತಾನೆ

ಸೇನಾಧಿಪತಿಯ ಸಾವು ಆಗಿದ್ದರೂ ಅದನ್ನು ಊರ ನಾಗರಿಕರು ಸಂಭ್ರಮಿಸುತ್ತಾರೆ. ಆತ ಉತ್ತಮ ಸೇನಾಧಿಪತಿ ಆಗಿದ್ದರೂ ಅವನ ವರ್ತನೆ ಜನಕ್ಕೆ ಅಸಹ್ಯ ಹುಟ್ಟಿಸಿತ್ತು. ಭೀಮನ ಈ ಕೆಲಸದಿಂದ ಪಾಂಡವರಿಗೆ ಇದರಿಂದ ತಮ್ಮ ಗುರುತು ಯಾರಿಗಾದರೂ ಅನುಮಾನ ತರಿಸಬಹುದೆಂದು ಚಿಂತೆಯಾಗುತ್ತದೆ. ಕೀಚಕನಂಥ ಪರಾಕ್ರಮಿಯನ್ನು ಸಾಯಿಸಲು ಸಾಧ್ಯವಿಲ್ಲ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಇದರಿಂದ ಅತ್ತ ದುರ್ಯೋಧನ ಅನುಆನ ತಾಳಿ ಗೂಢಚಾರರನ್ನು ಮತ್ತೆ ಬಿಡುತ್ತಾನೆ, ಇತ್ತ ಕೀಚಕನಂಥ ಸೇನಾಧಿಪತಿ ಇಲ್ಲದ ವಿಚಾರ ತಿಳಿದ ವಿರಾಟನ ಶತ್ರುಗಳು ಆ ರಾಜ್ಯದ ಮೇಲೆ ದಾಳಿ ಮಾಡಲು ತಯಾರಿ ಮಾಡುತ್ತಾರೆ. ಅತ್ತ ದುರ್ಯೋಧನ ಹೇಗಾದರೂ ಪಾಂಡವರ ಪತ್ತೆ ಆದರೆ ಅವರನ್ನು ವನವಾಸಕ್ಕೆ ತಳ್ಳಿದರೆ ಇಷ್ಟು ವರ್ಷ ಅಧಿಕಾರ ಇಲ್ಲದ ಪಾಂಡವರನ್ನು ಪ್ರಜೆಗಳು ಸಹಜವಾಗಿ ಮರೆಯುತ್ತಾರೆಂಬ ಲೆಕ್ಕಾಚಾರದಲ್ಲಿರುತ್ತಾನೆ. ಕೊಲ್ಲುತ್ತಾನೆ.ಊರ ಜನಕ್ಕೆ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತದೆ.ಇದರಿಂದ ಭೀತಿಗೊಂಡ ಜನ ಕೀಚಕನನ್ನು ಕೊಂದವನು ಸಾಮಾನ್ಯನಲ್ಲ ಎಂಬ ತೀರ್ಮಾನಕ್ಕೆ ಬಂದು ದ್ರೌಪದಿಯತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಈ ವಿಷಯ ತಿಳಿದ ದುರ್ಯೋಧನ ಪಾಂಡವರ ನ್ನು ಪತ್ತೆ ಮಾಡಿ ಖಚಿತಮಾಡಿಕೊಳ್ಳಲು ಅಲ್ಲಿಗೆ ಬೇಹುಗಾರರನ್ನು ಕಳುಹಿಸುತ್ತಾನೆ, ಆದರೆ ಅವರು ಬರಿಗೈನಿಂದ ಹಿಂದಿರುಗಿ ಹೋಗಿ ಅವರೆಲ್ಲ ಕಾಡಲ್ಲಿ ಸತ್ತಿರಬೇಕು, ಈ ಭೂಮಿಯಲ್ಲಿ ಯಾವ ಮೂಲೆಯಲ್ಲೂ ಇಲ್ಲ ಎಂದು ವರದಿ ಒಪ್ಪಿಸುತ್ತಾರೆ. ಇದರ ಚಿತ್ರಣವನ್ನು ಕುಮಾರವ್ಯಾಸ ತನ್ನ ಗದುಗಿನಭಾರತ ಕೃತಿಯಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾನೆ. ಒಟ್ಟಿನಲ್ಲಿ ಜನಸಾಮಾನ್ಯ ದೃಷ್ಟಿಯಲ್ಲಿ ಕೇವಲ ಅಧಿಕಾರ ಮಾತ್ರ ಮುಖ್ಯವಲ್ಲ, ಅದರ ಜೊತೆಗೆ ನೀತಿ, ನಡವಳಿಕೆ ಕೂಡ ಮುಖ್ಯ ಎಂಬುದನ್ನು ಕೀಚಕನ ಸಾವನ್ನು ಸಂಭ್ರಮಿಸುವ ಜನರ ಮನಸ್ಸು ತೋರಿಸುತ್ತದೆ. ಜೊತೆಗೆ ತಮಗೆ ಒದಗಿದ್ದ ಕಷ್ಟವನ್ನು ಕೊನೆಗಾಣಿಸಿದವರಿಗೆ ಜನರು ಎಂಥ ಸ್ಥಾನ ಕೊಡುತ್ತಾರೆಂಬುದನ್ನೂ ಇದು ಹೇಳುತ್ತದೆ. ಕಾಮದ ವಾಂಛೆಗೆ ಬುದ್ಧಿ ಕೊಟ್ಟರೆ ವಿನಾಶವೇ ಗತಿ ಎಂಬ ಭಾರತೀಯ ಪರಂಪರೆಯ ನಂಬಿಕೆಯನ್ನು ಈ ಘಟನೆ ಮತ್ತಷ್ಟು ಬಲಗೊಳಿಸುತ್ತದೆ. ತನ್ನ ಕೆಟ್ಟ ನಡತೆಯಿಂದ ಕೀಚಕ ವ್ಯಕ್ತಿ ಏನು ಮಾಡಬಾರದು ಎಂಬುದನ್ನು ತೋರಿಸಿ ತನ್ನ ಹೆಸರು ಸದಾ ಎಚ್ಚರಿಕೆ ಕೊಡುವಂತೆ ಮಾಡುತ್ತಾನೆ. ಕಾಮ ಪಿಪಾಸುವನ್ನು ಜನ ಕೀಚಕ ಎಂಬ ಬಿರುದಿನೊಂದಿಗೆ ಗುರುತಿಸಿ ಆ ಹೆಸರನ್ನು ಶಾಶ್ವತ ಪಡೆನುಡಿಯಾಗುವಂತೆ (idiom) ಮಾಡಿದ್ದಾರೆ. ಮಹಾಭಾರತದಲ್ಲಿ ಬರುವ ಕೀಚಕವಧೆ ಪ್ರಸಂಗ ಅನೇಕ ರೀತಿಯಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ತಲಪುತ್ತದೆ. ಇದರಲ್ಲಿರುವ ರಾಜಕೀಯ ಸಂಗತಿಗಳು ಇಂದಿಗೂ ಮಾರ್ಗದರ್ಶಕವಾಗಿವೆ.