ಅಲ್ಲದೇ ಹತ್ತು ಡಿಗ್ರಿಯೊಳಗೆ ಸೂರ್ಯನ ಸಮೀಪ ಬುಧವೊಂದನ್ನು ಬಿಟ್ಟು ಯಾವುದೇ ಗ್ರಹ ಬಂದರೆ ಅವು ಸೂರ್ಯನಲ್ಲಿ ಲೀನವಾಗುತ್ತವೆ, ಹೀಗಿರುವಾಗ, ಜ್ಯೋತಿಷದಂತೆ ಗುರುವಿನ ಆಗಮನವನ್ನು ಕಾಯ್ದು ಪುಣ್ಯಸ್ನಾನ ನಡೆಸಬಹುದು. ಶಾಸ್ತçದಂತೆ ಪ್ರಯಾಗರಾಜದಲ್ಲಿ ಮಾತ್ರವಲ್ಲ, ಮೂರು ನದಿಗಳು ಸಂಗಮವಾಗುವ ನರ್ಮದಾ, ಗಂಗಾ, ಶಿಪ್ರಾ ಮತ್ತು ಗೋದಾವರಿ ತೀರಗಳಲ್ಲಿ ಹಿಂದಿನಿಂದಲೂ ನಡೆಯುತ್ತಿದೆ, ನಿಜವಾಗಿ ಸಂತರು, ಸಾಧಕರ ದೇಶವಾದ ಈ ನಾಡಿನಲ್ಲಿ ಸಾಧಕರು ಸಾಮಾನ್ಯ ಜೀವನದಿಂದ ವಿಮುಖರಾಗಿ ದೂರ ಕಾಡು, ಗುಡ್ಡ ಬೆಟ್ಟಗಳಿಗೆ ಹೋಗಿ ಸಾಧನೆಯಲ್ಲಿ ತೊಡಗಿರುತ್ತಾರೆ, ಕುಂಭಸ್ನಾನದ ವೇಳೆಯಲ್ಲಿ ಸಮಾಜವನ್ನು ಅವಲೋಕಿಸುವ ಉದ್ದೇಶದಿಂದ ಅವರು ನಾಲ್ಕು ವರ್ಷಕ್ಕೊಮ್ಮೆ ಹೊರಗೆ ಬರುತ್ತಾರೆ, ಇದು ಪದ್ಧತಿ. ಪ್ರತಿ ೧೪೪ ವರ್ಷ ಅಂದರೆ ಅಷ್ಟು ವರ್ಷ ಜೀವಂತವಾಗಿರುವ ಸಾಧಕರು ಕೂಡ ಬಹಳ ಕಡಿಮೆ, ಅಲ್ಲದೇ ಈಗ ನಡೆಯುತ್ತಿರುಉವ ಕುಂಭ ಮೇಳ ಕೂಡ ನಮಗೆ ನೆನಪಿರುವಂತೆ ೧೯೮೩, ೨೦೦೧ರಲ್ಲಿ ಕೂಡ ನಡೆದಿದೆ, ಇವೆಲ್ಲ ೧೪೪ ವರ್ಷಕ್ಕೆ ನಡೆದವೇ? ಒಂದು ರೀತಿಯಲ್ಲಿ ಈ ಬಾರಿ ನಡೆದ ಕುಂಭ ಮೇಳ ಪ್ರತಿ ೧೪೪ ವರ್ಷಕ್ಕೊಮ್ಮೆ ಘಟಿಸುತ್ತದೆ ಎಂದು ಹೇಳಿದ್ದರಿಂದ ಉತ್ತರಪ್ರದೇಶ ಹಾಗೂ ಪ್ರಯಾಗ ರಾಜ್ ನಲ್ಲಿ ೫೦-೬೦ ಕೋಟಿ ಜನ ಸೇರುವಂತೆ ಒಂದೇ ಕಡೆ ಮೂರು ಲಕ್ಷ ಕೋಟಿ ರೂ ಹರಿಯುವಂತೆ, ಇನ್ನು ನಮ್ಮ ಈ ಜೀವಿತಾವಧಿಯಲ್ಲಿ ಕುಂಭ ಸ್ನಾನ ಕನಿಷ್ಠ ಪಕ್ಷ ನೋಡಲೂ ಸಾಧ್ಯವಿಲ್ಲ ಅಂದುಕೊಂಡ ಜನಸಾಮಾನ್ಯರು ಅಲ್ಲಿ ನುಗ್ಗಿ ಸಂಚಾರ ವ್ಯತ್ಯಯ, ನೂಕುನುಗ್ಗಲು, ಜೀವಹಾನಿಯಂಥ ಕೆಲವು ಘಟನೆಗಳಿಗೂ ಸಾಕ್ಷಿ ಆಗುವಂತೆ ಆಯಿತು, ಈ ಕುಂಭ ಮೇಳದ ಆರ್ಥಿಕ ಲಾಭ ಅನೂಹ್ಯ. ಇವೆಲ್ಲ ಸಂಗತಿಗಳು ನಮ್ಮ ಹಿರಿಯರಿಗೆ ತಿಳಿಯದ ಸಂಗತಿಗಳೇನೂ ಆಗಿರಲಿಲ್ಲ, ಹೀಗಾಗಿ ಅವರು ದೇಶಾದ್ಯಂತ ಇರುವ ನದಿಗಳ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಅವಕಾಶ ಕೊಟ್ಟಿದ್ದರು, ಈಗ ನೋಡಿ ನಮ್ಮ ಟಿ. ನರಸೀಪುರದ ಸಂಗಮದಲ್ಲಿ ಇದೇ ಫೆಬ್ರವರಿ ೧೦ರಿಂದ ೨೦ರವರೆಗೆ ಪುಣ್ಯಸ್ನಾನ ನಡೆಯಲಿದೆ. ಇದರಿಂದ ದೇಶಾದ್ಯಂತ ಇರುವ ಸಾಧಕರಿಗೆ, ಜನಸಾಮಾನ್ಯರಿಗೆ ಒಂದೆಡೆ ಸೇರಲು, ಸಾಮಾಜಿಕವಾಗಿ ಪರಸ್ಪರ ಒಂದಾಗಲು, ಬೇಧಭಾವ ಮರೆಯಲು ಅನುಕೂಲ ಮಾಡಿಕೊಡುತ್ತದೆ, ಇದನ್ನು ಪಾಶ್ಚಾತ್ಯರು ಸ್ನಾನ ಮಾಡದ ಭಾರತೀಯರು ಸ್ನಾನ ಮಾಡುತ್ತಾರೆಂದೆಲ್ಲ ಟೀಕಿಸಬಹುದು, ಇವರ ಅನುಯಾಯಿಗಳು ನಮ್ಮಲ್ಲೂ ಇರಬಹುದು, ಆದರೆ ಇದರಿಂದ ಆಗುವುದು ಕೇವಲ ಆರ್ಥಿಕ ಲಾಭ ಮಾತ್ರವಲ್ಲ, ಸಮಾಜದಲ್ಲಿರುವ ಅನೇಕಾನೇಕ ಜಾತಿ, ಗುಂಪುಗಳು ಈ ನೆಪದಲ್ಲಿ ಒಂದೆಡೆ ಸೇರಿ ತಾವೆಲ್ಲ ಒಂದೇ ಎಂದು ಭಾವಿಸುತ್ತಾರೆ, ನನಗೇ ವೈಯಕ್ತಿಕವಾಗಿ ತಿಳಿದಂತೆ ಹಿಂದೂ ಸಮಾಜದ ವಿವಿಧ ಜಾತಿ ಜನ ಮಾತ್ರವಲ್ಲ, ಭಾರತೀಯ ಸಮಾಜದ ಭಾಗವಾದ ಮುಸ್ಲಿಂ, ಕ್ರಿಶ್ಚಿಯನ್ ಜನ ಕೂಡ ಈ ಕುಂಭದಲ್ಲಿ ಸಂತೋಷವಾಗಿ ಮಿಂದು ಬಂದಿದ್ದಾರೆ, ಸಮಾಜದ ಏಕತೆಗೆ ಇದೊಂದು ನೆಪ, ಹಾಗೆ ನೋಡಿದರೆ ಅಧ್ಯಾತ್ಮ ಹೆಸರಿನ ಸಾಮಾಜಿಕ ಸಂಗಮ ಇದು, ಕೇವಲ ನದಿಗಳ ಸಂಗಮವಲ್ಲ, ಮನುಷ್ಯ ಬದುಕಿದ್ದಾಗ ಯಾವ ಗಾಳಿಯ, ಬೆಂಕಿಯ, ನೀರಿನ ಅಂಶವನ್ನು ಯಾರು ಹೇಗೆ ಎಲ್ಲಿ ಬಳಸಿ ಬಿಟ್ಟಿರುತ್ತಾರೋ ಅದು ಮುಂದೆ ಸಾಗಿ ಎಲ್ಲೋ ಒಂದೆಡೆ ಶಿವನಿಗೆ ಅಭಿಷೇಕ ಆಗಬಹುದು, ಮಡಿವಂತ ಬ್ರಾಹ್ಮಣ ಆಚಮನ ಮಾಡಬಹುದು, ನಾವು ಈಗ ಉಸಿರಾಡುವ ಗಾಳಿಯನ್ನು ಯಾರು ಎಲ್ಲೆಲ್ಲಿ ಉಸಿರಾಡಿ ಬಿಟ್ಟಿದ್ದೋ, ಎಷ್ಟುಜನರ ಸಿಗರೇಟಿನ ಹವೆ ಇದರಲ್ಲಿ ಸೇರಿತ್ತೋ ಇದನ್ನೆಲ್ಲ ಯೋಚಿಸುತ್ತ ಕುಳಿತರೆ ಬದುಕು ಸಾಧ್ಯವಿಲ್ಲ, ಹೀಗಾಗಿ ಸತ್ತ ಮೇಲೆ ನಾವೆಲ್ಲ ಲೀನವಾಗುವುದು ಪ್ರಕೃತಿಯಲ್ಲಿ. ಅಲ್ಲಿ ಎಲ್ಲ ಒಂದೇ ಎಂಬುದನ್ನು ಈ ಸ್ನಾನ ನಮಗೆ ಅರ್ಥ ಮಾಡಿಸುತ್ತದೆ. ಜೊತೆಗೆ ನಮ್ಮ ಸಾಮಾಜಿಕ ವೈವಿಧ್ಯವನ್ನು ಜಗತ್ತೇ ಬೆರಗಾಗುವಂತೆ ತೋರಿಸಿದೆ. ಸುಮ್ಮನೇ ಪ್ರತಿ ೧೪೪ ವರ್ಷಕ್ಕೊಮ್ಮೆ ಮಾತ್ರ ಇದು ನಡೆಯುತ್ತದೆ ಎಂದು ಸುದ್ದಿ ಹರಡಿಸುವ ಬದಲು ಆಯಾ ಪ್ರದೇಶಗಳಲ್ಲಿ ಇದು ಹಿಂದಿನಿಂದಲೂ ನಡೆಯುತ್ತದೆ ಅನುಕೂಲ ಇರುವವರು ಅಲ್ಲಿ ಪಾಲ್ಗೊಳ್ಳಿ ಎಂದು ಹೇಳಿದ್ದರೆ ಪ್ರಯಾಗ್ ರಾಜ್ ನಲ್ಲಿ ಒಂದೇ ಕಡೆ ಜನ - ಧನ ಸೇರಿ ಅವಾಂತರ ಆಗುವುದು ತಪ್ಪುತ್ತಿತ್ತು ಅನಿಸುತ್ತದೆ. ಅಲ್ಲದೇ ಪ್ರಪಂಚಾದ್ಯಂತ ಕುತೂಹಲ ಹುಟ್ಟಿಸಿದ್ದ ಈ ಮೇಳ ಮಹಾನ್ ಮಾನವ ಸಂಗಮದ ದಾಖಲೆಯಾಗಿದೆ. ಪ್ರಯಾಗ್ ರಾಜ್ ನಲ್ಲಿ ವಸತಿ, ಊಟ ಇತ್ಯಾದಿಗಳೆಲ್ಲ ಕೋಟಿ ಕೋಟಿ ಜನಕ್ಕೆ ಸೇವೆಯ ರೂಪದಲ್ಲಿ ಸಂದಿವೆ, ಇಲ್ಲೆಲ್ಲೂ ವ್ಯವಹಾರ ತಲೆಹಾಕಿಲ್ಲ, ಅಲ್ಲಲ್ಲಿ ಆಗಿರುವ ಅವ್ಯವಸ್ಥೆಯನ್ನು ಕೂಡ ಜನ ಸಮಾಧಾನದಿಂದ ಸ್ವೀಕರಿಸಿದ್ದಾರೆ, ಅಲ್ಲಿ ಹೋಗಿರುವುದು ಸುಖಪಡುವ ಪ್ರವಾಸ ಅಥವಾ ಪಿಕ್ ನಿಕ್ ಗಾಗಿ ಅಲ್ಲ ಎಂಬುದು ಶ್ರದ್ಧಾಳುಗಳಿಗೆ ತಿಳಿದಿದೆ. ಈ ಮೂಲಕ ಭಾರತದ ಶ್ರದ್ಧೆಯ ಒಂದು ಸೆಳಕನ್ನು ಪ್ರಪಂಚಕ್ಕೆ ಕಾಣಿಸಿದೆ. ನೋಡಿ - ಪ್ರಯಾಗ್ ರಾಜ್ ನಲ್ಲಿ ವಿವಿಧ ಸಂಪ್ರದಾಯದ ಸಾಧು ಸಂತರು ಅಖಾಡಗಳ ಹೆಸರಲ್ಲಿ ಸೇರಿ ಸಂಭ್ರಮ ಮೆರೆದಿದ್ದಾರೆ, ಸಂಭ್ರಮದಲ್ಲಿ ಸ್ವಲ್ಪ ನೂಕುನುಗ್ಗಲು ಉಂಟಾಗಿ ಕೆಲವು ಸಾವು ಘಟಿಸಿದೆ, ಆದರೆ ಜಾತಿ ಮತಗಳ ಹೆಸರಲ್ಲಿ ಅಲ್ಲಿ ಯಾವ ಗಲಾಟೆಯೂ ಆಗಿಲ್ಲ ಎಂಬುದನ್ನು ಗಮನಿಸಿ. ಇದೇ ನಮ್ಮ ಸಂಪ್ರದಾಯದ ಹೆಚ್ಚುಗಾರಿಕೆಯನ್ನು ಹೇಳುತ್ತದೆ. ನಮ್ಮ ಆಧ್ಯಾತ್ಮಿಕ ಚಿಂತನೆಯ ಸಾರವನ್ನು, ಹೇಳುತ್ತದೆ. ಇದನ್ನು ನಾವು ಗಮನಿಸುವುದನ್ನು ಬಿಟ್ಟು ಇಲ್ಲಿಯೂ ಚಿಲ್ಲರೆ ರಾಜಕೀಯ ನಡೆಸುತ್ತಿದ್ದೇವೆ. ಈ ಕುಂಭದಿಂದ ಪ್ರವಾಸೋದ್ಯಮಕ್ಕೆ ಆದ ಲಾಭ ಎಷ್ಟು ಎಂಬ ಲೆಕ್ಕ ಇನ್ನೂ ಸಿಕ್ಕಿಲ್ಲ, ಕುಂಭ ಸ್ನಾನದ ವೇಳೆ ಪ್ರಯಾಗರಾಜ್ ವಿಮಾನ ಟಿಕೆಟ್ ದರ ೫೦-೭೦ಸಾವಿರ ಇತ್ತು ಅನ್ನಲಾಗಿದೆ, ಇದಲ್ಲದೇ ಅಸಂಖ್ಯ ಕಾರು, ಬಸ್ಸು ಆಟೋ ಇವುಗಳ ಲೆಕ್ಕ ಎಲ್ಲೂ ಸಿಗುವುದಿಲ್ಲ, ಇವೆಲ್ಲ ಬಿಟ್ಟರೂ ಇದರಿಂದ ಆಗಿರುವ ಸಾಮಾಜಿಕ ಐಕ್ಯಮತದ ಭಾವನೆಗೆ ಬೆಲೆ ಕಟ್ಟಲು ಸಾಧ್ಯವೇ?
Monday, 24 February 2025
ಐಕಮತ್ಯ ಸಾರಿದ ಮಹಾಕುಂಭ
Wednesday, 19 February 2025
ಬೆಂಗಳೂರಲ್ಲಿ ಕೊನೆಯುಸಿರೆಳೆದ ಇನ್ನೊಂದು ಪ್ರಮುಖ ನದಿ - ಅರ್ಕಾವತಿ
ಬೆಂಗಳೂರಿಗೆ ಅಂದಕಾಲತ್ತಿಲೆ ನೀರು, ನೆರಳು ಕೊಡುತ್ತಿದ್ದ ಮತ್ತೊಂದು ಪ್ರಸಿದ್ಧ ನದಿ ಇತ್ತು- ಅದೇ ಅರ್ಕಾವತಿ. ಇದು ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಹುಟ್ಟಿ ಬೆಂಗಳೂರು ಕಡೆ ಬಂದು ರಾಮನಗರ ಕನಕಪುರವನ್ನೆಲ್ಲ ಬಳಸಿಕೊಂಡು ಕಣಿವೆ ನಾರಾಯಣಪುರ ಬಳಿ ಸಂಗಮದಲ್ಲಿ ವೃಷಭಾವತಿ, ಸುವರ್ಣಮುಖಿ, ಅಂತರಮುಖಿ ದೇವಮುಖಿ ಹಾಗೂ ಕುಮುದ್ವತಿ ಉಪನದಿಗಳನ್ನು ಸೇರಿಸಿಕೊಂಡು ಕಾವೇರಿ ನದಿಗೆ ಸೇರಿಕೊಳ್ಳುತ್ತಿತ್ತು. ಇದು ಜೀವಂತವಿದ್ದಾಗಿನ ಬೆಂಗಳೂರಿನ ಚಿತ್ರಣ ಈಗ ಊಹೆಗೂ ನಿಲುಕದ್ದು, ಅಂತೆಯೇ ಅದರ ಪುನರುಜ್ಜೀವನ ಕೂಡ, ಅದೃಷ್ಟದ ವಿಷಯದಲ್ಲಿ ಇದು ದಕ್ಷಿಣ ಪಿನಾಕಿನಿಯಂತೆಯೇ, ಇದಕ್ಕೆ ಸದ್ಯಕ್ಕಿರುವ ಅಡ್ರೆಸ್ ಅಂದರೆ ಇದರ ಹೆಸರಲ್ಲಿ ದಾಸರಹಳ್ಳಿಯಿಂದ ಹಿಡಿದು ಹೆಬ್ಬಾಳದವರೆಗಿನ ೧೬ ಬಡಾವಣೆಗಳ ನಿರ್ಮಾಣಕ್ಕೆ ಬಿಡಿಎ ನಿವೇಶನ ನಿರ್ಮಿಸುವ ಯೋಜನೆಯ ವಿವಾದ. ನದಿಯ ಕತೆ ಏನಾದರೂ ಆಗಲಿ ಇದರ ಹೆಸರಲ್ಲಿ ನಿರ್ಮಿಸಲಾಗುತ್ತಿರುವ ಬಡಾವಣೆಯಲ್ಲಿ ಹಣ ಕಟ್ಟಿದ ತಮಗೆ ನಿವೇಶನ ಯಾವಾಗ ಸಿಗುತ್ತದೆ ಎಂಬುದಷ್ಟೇ ಜನರ ನಿರೀಕ್ಷೆ ಆಗಿದೆ. ಅರ್ಕಾವತಿ ಬಡಾವಣೆಯಲ್ಲಿರುವ ಒಟ್ಟೂ ಸೈಟುಗಳ ಸಂಖ್ಯೆ ೮, ೮೧೩. ಇವುಗಳ ಮೇಲೆ ಅದೆಷ್ಟು ಬಹುಮಹಡಿ ಕಟ್ಟಡಗಳು, ವಸತಿ ಸಂಕೀರ್ಣಗಳು ಬರಲಿವೆಯೋ ತಿಳಿದಿಲ್ಲ, ಒಟ್ಟಿನಲ್ಲಿ ಸತ್ತುಹೋದ ಈ ನದಿಯ ಸಮಾಧಿಯ ಮೇಲೆ ಲಕ್ಷಾಂತರ ಜನ ಬದುಕಲಿದ್ದಾರೆ.
ಅರ್ಕಾವತಿಯನ್ನು ಬತ್ತಿಸಿ ಬಡಾವಣೆ ಮಾಡಿದಮೇಲೆ ಆಗುತ್ತಿರುವ ಲಾಭ ನೋಡಿ - ಇಲ್ಲಿ ಸೈಟಿನ ದರ ಹೀಗಿದೆ-ಪ್ರತಿ ಚದರ ಅಡಿಗೆ ೧೦೦೦, ೭೦೦ ರೂ, ಎರಡು ಮೂರು ಕೋಣೆಗಳ ಅಪಾರ್ಟ್ಮೆಂಟ್ ಬೆಲೆ ೧, ೪೬ ಕೋಟಿಗಳಿಂದ ೩, ೪೯ ಕೋಟಿ ರೂಗಳು. ಅರ್ಕಾವತಿಯ ಬೆಲೆ ಗಮನಿಸಿದ ಸನಿಹದ ಬಡಾವಣೆಯ ಜನ ಕೂಡ ಬೆಲೆ ಏರಿಸಿ ಕುಳಿತಿದ್ದಾರೆ. ಬೆಂಗಳೂರಿನ ನೀರಿನ ಮೂಲ ಒಣಗಿಸಿದ ರಿಯಲ್ ಎಸ್ಟೇಟ್ ಜನ ಈ ಊರಿನ ನೆಲದ ಬೆಲೆಯನ್ನು ಕೂಡ ವಿಪರೀತ ಏರುವಂತೆ ಮಾಡಿ ಕೃತಾರ್ಥರಾಗಿದ್ದಾರೆ. ಈ ತಲೆಮಾರಿನ ಜನ ನದಿ ನೆಲ ಕದ್ದು ಒಂದಿಷ್ಟು ಹಣ ಮಾಡಿಕೊಂಡು ಭೂಮಿಯ ಮೇಲೆ ನಾವು ಹುಟ್ಟಿದ್ದು ಹಾಗೂ ಬದುಕಿದ್ದು ಸಾರ್ಥಕವಾಯಿತೆಂದು ನೆಮ್ಮದಿಯಿಂದ ಸಾಯಬಹುದು. ಆದರೆ ಅನೇಕ ತಲೆಮಾರುಗಳ ಜನ, ಜಾನುವಾರುಗಳ ಯೋಗಕ್ಷೇಮ ನೋಡಿಕೊಂಡಿದ್ದ ನದಿ ನಮ್ಮ ಜನರ ಸ್ವಾರ್ಥಕ್ಕೆ ಸತ್ತೇ ಹೋಯಿತಲ್ಲ, ಇದೇನು ಕಡಿಮೆ ನಷ್ಟವೇ? ಆ ದರಿದ್ರ ಹಣ ಎಲ್ಲಿಂದಾದರೂ ಬರುತ್ತದೆ, ಆದರೆ ಸತ್ತು ಹೋದ ನದಿಯ ಕತೆ? ಹೀಗೆ ೧೯೫೦ - ೬೦ರ ದಶಕದಲ್ಲಿ ಬೆಂಗಳೂರಿನ ಕಂದಾಯ ಅಧಿಕಾರಿಗಳೋ ಜಿಲ್ಲಾಧಿಕಾರಿಗಳೋ ಆಗಿದ್ದ ಪಾಪಿಗಳು ಇನ್ನೂ ಬದುಕಿದ್ದರೆ ಸಾರ್ವಜನಿಕರ ಮುಂದೆ ತಂದು ಯಾರಾದರೂ ನಿಲ್ಲಿಸುವ ಕೆಲಸ ಮಾಡಿದರೆ ಮಹದುಪಕಾರವಾಗುತ್ತದೆ. ಇದನ್ನಾದರೂ ಸರ್ಕಾರ ಮಾಡುವುದೇ? ಇದುವರೆಗೆ ಬೆಂಗಳೂರಿನ ಕೆರೆ, ವೃಷಭಾವತಿ, ದಕ್ಷಿಣ ಪಿನಾಕಿನಿ ಜೊತೆಗೆ ಅರ್ಕಾವತಿಯಂಥ ನದಿಗಳನ್ನು ಕದ್ದು ತಿಂದು ತೇಗಿದ ಬೆಂಗಳೂರಿನ ಆ ಪಾಪಿಗಳನ್ನು ಪತ್ತೆ ಹಚ್ಚುವವರು ಯಾರು? ಶಿಕ್ಷಿಸುವುದು ಹಾಗಿರಲಿ, ಕನಿಷ್ಠ ಪಕ್ಷ ಅಂಥವರು ಯಾರು ಅವರ ಮುಖವಾದರೂ ಹೇಗಿದೆ, ಅವರ ಮಕ್ಕಳು ಮರಿ ಯಾರು ಎಂಬುದಾದರೂ ನಮಗೆ ತಿಳಿಯಲಿ. ಇಷ್ಟೆಲ್ಲವಾಂತರ ಮಾಡಿಕೊಂಡ ಬೆಂಗಳೂರು ಈಗ ಕುಡಿಯುವ ನೀರಿನ ಕನಿಷ್ಠ ಅಗತ್ಯವನ್ನು ಪೂರೈಸಿಕೊಳ್ಳಲಾಗದೇ ಕಾವೇರಿ ನದಿ ನೀರಿಗೆ ಕೈಹಾಕಿ ಅದನ್ನೇ ನಂಬಿಕೊಂಡಿದೆ. ಇದೇನೂ ಸುಲಭವಲ್ಲ, ಇನ್ನು ಕೆಲವೇ ವರ್ಷಗಳಲ್ಲಿ ಬೆಂಗಳೂರಿಗೆ ಕಾವೇರಿ ನೀರಿನ ಪೂರೈಕೆ ಅಸಾಧ್ಯ ಎಂದು ತಜ್ಞರೇ ಹೇಳುತ್ತಿದ್ದಾರೆ, ೯೦ಕ್ಕೂ ಹೆಚ್ಚು ಅಡಿ ಮೇಲೆ ಸುಮಾರು ೨೦೦ ಕಿಮೀ ದೂರ ಕಾವೇರಿ ನೀರನ್ನು ಸಾಗಿಸಿ ತರುವುದು ಶಾಶ್ವತ ಕೆಲಸವಲ್ಲ, ಸಾಧುವೂ ಅಲ್ಲ, ಇರುವ ನೈಸರ್ಗಿಕ ನೀರಿನ ಮೂಲಗಳನ್ನು ಕೈಯಾರೆ ಕೊಂದು ಆಕಾಶ ನೋಡುತ್ತಿರುವ ಬೆಂಗಳೂರಿನ ಜನ ಕೃತಕವಾಗಿ ಕೂಡ ನೀರು ಕೊಯ್ಲು ಇತ್ಯಾದಿಗಳ ಮೂಲಕ ನೀರು ಕಾಯುವ ಕೆಲಸ ಮಾಡದೇ ಇದ್ದಾರೆ. ಕಾವೇರಿಯನ್ನೇ ನಂಬಿ ಕೂತಿದ್ದಾರೆ. ನೆನಪಿರಲಿ, ನೀರಿನ ಮೂಲ ಸಮೃದ್ಧವಾಗಿದ್ದ ಕಾಲದಲ್ಲಿ ಬೆಳೆದು ನಿಂತ ಬೆಂಗಳೂರು ನೀರಿನ ಮೂಲಗಳನ್ನು ಸಾಯಿಸಿ ತಾನು ಕೂಡ ವಿನಾಶದತ್ತ ಸಾಗುತ್ತಿದೆ, ಎಲ್ಲ ನಗರಗಳಿಗೂ ನಾಶದ ಕಾಲ ಹೇಗೆ ಬರುತ್ತದೆಂದು ತಜ್ಞರು ಸಾಕಷ್ಟು ಅಧ್ಯಯನ ಮಾಡಿದ್ದಾರೆ, ಅವರ ಜಾಗತಿಕ ಅಧ್ಯಯನ ಹೇಳುವಂತೆ ಸಿಟಿ ಡಿಕೇ ಎಂಬುದು ಉಂಟಾಗುವ ಎಲ್ಲ ಲಕ್ಷಣಗಳೂ ಬೆಂಗಳೂರಿಗೆ ಈಗಾಗಲೇ ಬಂದು ಸೇರಿ ಆಗಿದೆ, ಅವುಗಳಲ್ಲಿ ಒಂದು ಜಲಮೂಲ ಇಲ್ಲದಿರುವುದು, ಅದಾಗಿದೆಯಲ್ಲ. ವಾಸದ ಮನೆಗಳು ಸಾಲದಿರುವುದು ಎರಡನೆಯದು, ಇದೂ ಆಗಿದೆಯಲ್ಲ, ಇನ್ನುಳಿದ ಕಾರಣಗಳು ಸಾಧನೆಯಾಗಿವೆ, ಅಂತೂ ಬೆಂಗಳೂರು ವಿನಾಶದ ಅಂಚಿಗೆ ಹೋಗುತ್ತಿದೆ ಎಂಬುದು ಸುಳ್ಳಲ್ಲ.
ನಮಗೆ, ಅಂದರೆ ಈ ತಲೆಮಾರಿನ ಜನಕ್ಕೆ ಬೆಂಗಳೂರಲ್ಲಿದ್ದ ಜಲಮೂಲಗಳಲ್ಲಿ ಒಂದನ್ನೂ ಜೀವಂತ ನೋಡುವ ಭಾಗ್ಯ ಇಲ್ಲ, ಇವನ್ನು ಕದ್ದ ಪಾಪಿಗಳನ್ನಾದರೂ ಕಂಡು ಧನ್ಯರಾಗೋಣ. ಅಷ್ಟಾದರೂ ಪುಣ್ಯ ನಮ್ಮ ಪಾಲಿಗೆ ಇದೆಯಾ ನೋಡುವಾ. ಏನಂತೀರಾ?
Tuesday, 18 February 2025
ಬೆರಗಾಗಿಸುವ ಭಾರತದ ಸೆಗಣಿ ಆರ್ಥಿಕತೆ
ಸುಮ್ಮನೇ ನೋಡಿ, ಭಾರತದ ಗಿರ್ ಎಂಬ ಹಸುವಿನ ಮೂತ್ರದಲ್ಲಿ ಬಂಗಾರದ ರೇಕುಗಳಿರುತ್ತವಂತೆ, ಹೀಗಾಗಿ ಈ ಹಸುವಿನ ಬೆಲೆ ಅನೂಹ್ಯ. ಭಾರತೀಯ ಸಂಪ್ರದಾಯದಲ್ಲಿ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಹಸುವಿನ ಸೆಗಣಿ, ಮೂತ್ರ, ಹಾಲು, ಮೊಸರು ಮತ್ತು ತುಪ್ಪಗಳೆಂಬ ಐದು ವಸ್ತುಗಳನ್ನು ಅಥವಾ ಪಂಚಗವ್ಯಗಳನ್ನು ಬಹಳ ಪವಿತ್ರವಾಗಿ ಕಾಣಲಾಗುತ್ತದೆ. ಹಾಗೂ ಇವು ಅನಿವಾರ್ಯ ಕೂಡ.ಸಾಂಪ್ರದಾಯಿಕ ದೃಷ್ಟಿಯಲ್ಲಿ ಇವುಗಳನ್ನು ಕೀಳಾಗಿ ನೋಡುವ ದೃಷ್ಟಿ ಆಧುನಿಕತೆಯ ಪ್ರಭಾವದಿಂದ ಮೂಲೆಗುಂಪಾಗಿವೆಯಾದರೂ ಅಲ್ಲಲ್ಲಿ ಈಗಲೂ ಕಟ್ಟಾ ವ್ರತಸ್ಥರ ಮನೆಗಳಲ್ಲಿ ರೂಢಿಯಲ್ಲಿದೆ. ಇವುಗಳಿಗೆ ಈಗ ಮತ್ತೆ ಬೆಲೆ ನಿಜವಾಗಿ ಬರುತ್ತಿದೆ. ಒಂದು ಸಾವಿರ ಕಿಲೋ ಸೆಗಣಿಯಿಂದ ೪೫ ಕ್ಯುಬಿಕ್ ಮೀಟರ್ ಬಯೋಗ್ಯಾಸ್ ಉತ್ಪನ್ನ ಮಾಡಬಹುದಂತೆ. ಒಂದು ಕ್ಯುಬಿಕ್ ಮೀಟರ್ ಗ್ಯಾಸ್ ನಿಂದ ೨.೮ ಕಿಲೋವ್ಯಾಟ್ ವಿದ್ಯುತ್ ಉತ್ಪನ್ನ ಸಾಧ್ಯವಂತೆ. ಅಂದರೆ ಒಂದು ಸಾವಿರ ಕೆಜಿ ಸೆಗಣಿಯಿಂದ ೧೨೬ ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತದೆ, ಇದು ಪರಿಸರಪ್ರೇಮಿ ಉತ್ಪಾದನೆ. ಉಳಿದಂತೆ ಬಳಕೆ ಇರುವ ಜಲ ವಿದ್ಯುತ್, ಅಣುವಿದ್ಯುತ್, ಪವನ ವಿದ್ಯುತ್ ಇತ್ಯಾದಿಗಳು ಒಂದಲ್ಲ ಒಂದು ರೀತಿಯಲ್ಲಿ ಪರಿಸರಕ್ಕೆ ಹಾನಿ ಮಾಡುತ್ತವೆ ಅನ್ನಲಾಗಿದೆ. ಸೆಗಣಿ ಉದ್ಯಮದಿಂದ ಎಷ್ಟು ಉದ್ಯೋಗ ಗ್ರಾಮೀಣ ಭಾಗದಲ್ಲಿ ಸೃಷ್ಟಿ ಆಗಬಹುದು ಯೋಚಿಸಿ.
ಆದರೆ ಈ ಸೆಗಣಿ ಉತ್ಪಾದನೆಯಲ್ಲೂ ಪರಿಸರ ಹಾನಿ ಆಗುವುದಿದೆ, ಪಶುಗಳು ಹುಲ್ಲುಗಾವಲಿನಲ್ಲಿ ಮೇಯುವುದರಿಂದ ಪರಿಸರದಲ್ಲಿಕಾರ್ಬನ್ ಹೆಚ್ಚಳ ಸಾಧ್ಯತೆ ಇದೆ ಇದರಿಂದ ಪರಿಸರ ಹೊಂದಾಣಿಕ ವ್ಯತ್ಯಾಸವಾಗುತ್ತದೆ ಅನ್ನಲಾಗಿದೆ. ಸೆಗಣಿಯ ಉಪಯುಕ್ತತೆ ಕುರಿತು ಭಾರತದ ಸಿಂಗ್ ಮತ್ತು ಅಗರ್ ವಾಲ್ ಎಂಬುವವರು ೧೯೮೪ರಲ್ಲೇ ಅಧ್ಯಯನ ಮಾಡಿದ್ದರು ಇದಕ್ಕೆ ನಮ್ಮವರು ಸೊಪ್ಪು ಹಾಕಿರಲಿಲ್ಲ, ಈಗ ಈ ಅಧ್ಯಯನಕ್ಕೆ ಇನ್ನಿಲ್ಲದ ಬೇಡಿಕೆ ಬಂದಿದೆ, ಜೊತೆಗೆ ಸೆಗಣಿಯಿಂದ ಮಾಲಿನ್ಯ ಹೇಗೆ ಕಡಿಮೆ ಆಗಿ ಪರಿಸರ ಶುದ್ಧಿ ಆಗುತ್ತದೆ ಎಂಬ ಅಧ್ಯಯನ ಕೂಡ ಹಿಂದೆಯೇ ನಡೆದಿದೆ, ಇವುಗಳಿಗೆಲ್ಲ ಈಗ ಬೆಲೆ ಬಂದಿದೆ. ಕೆಲವು ವರ್ಷಗಳ ಹಿಂದೆ ನಮ್ಮ ರಾಮಚದ್ರಾಪುರ ಮಠ ಹಸುಗಳನ್ನು ಉಳಿಸಿ ಬೆಳೆಸಿ ಅವುಗಳ ಉತ್ಪನ್ನದ ಪ್ರಯೋಜನವನ್ನು ಇಂದಿನ ವೈಜ್ಞಾನಿಕ ಆಧಾರದಲ್ಲಿ ಅಧ್ಯಯನ ಮಾಡುವ ಉದ್ದೇಶದಿಂದ ಸ್ವಂತ ಸಂಶೋಧನ ಕೇಂದ್ರ ಆರಂಭಿಸಿತ್ತು, ಅದು ಈಗಲೂ ಇದೆ, ಆದರೆ ಅದನ್ನು ಗೇಲಿ ಮಾಡಿ ಕೆಡಿಸುವ ಯತ್ನ ನಡೆಯಿತು. ಆದರೆ ಮಠ ಕೆಲವು ಉತ್ಪನ್ನಗಳನ್ನು ಆರೋಗ್ಯದ ದೃಷ್ಟಿಯಲ್ಲಿ ಚಿಕಿತ್ಸೆಯ ಕಾರಣದಿಂದ ತಯಾರಿಸಿತು, ಇದರ ನೇತೃತ್ವವನ್ನು ಡಾ. ಗಿರೀಶ್ ಕಜೆಯವರು ವಹಿಸಿದ್ದರು, ಯಶಸ್ಸು ಕೂಡ ಸಿಕ್ಕಿತ್ತು. ಹಸು ಸೆಗಣಿಯ ಸೋಪನ್ನು ಕೆಲವು ಚರ್ಮ ಕಾಹಿಲೆಗೆ ಉಪಯುಕ್ತ ಎಂದು ಕಂಡುಕೊಳ್ಳಲಾಗಿತ್ತು. ಈಗ ವಿದೇಶಗಳಲ್ಲಿ ಸೆಗಣಿಗೆ ಬೇಡಿಕೆ ಬಂದಿರುವುದು ಕೂಡ ಚರ್ಮ ಸೌಂದರ್ಯ ಕಾಯ್ದುಕೊಳ್ಳುವ ಉದ್ದೇಶಕ್ಕೇ ಆಗಿದೆ. ಎಲ್ಲವನ್ನೂ ಪಾಶ್ಚಾತ್ಯರ ಪ್ರಭಾವದಿಂದ ಅಳವಡಿಸಿಕೊಳ್ಳುವ ಇನ್ನು ಮೇಲೆ ಈ ಮಾರ್ಗವನ್ನು ನಾವೂ ಅಳವಡಿಸಿಕೊಳ್ಳಬಹುದು. ಬಹುಶಃ ಭಾರತೀಯ ಸಂಪ್ರದಾಯ ಶಿಷ್ಟಾಚಾರಗಳ ಬೆಲೆಯನ್ನು ಹೊರಗಿನವರು ತೋರಿಸಿಕೊಟ್ಟರೆ ನಮಗೆ ಸಮಾಧಾನವಾಗಬಹುದು, ನೋಡುವಾ. ಆರಂಭಿಕ ಸೆಗಣಿ ಉದ್ಯದಲ್ಲಿ ರೂ ಹತ್ತು ಸಾವಿರದಿಂದ ಒಂದೂವರೆ ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಕನಿಷ್ಠ ಹತ್ತು ಸಾವಿರ ರೂ. ನಿಶ್ಚಿತ ಆದಾಯ ಪಡೆಯಬಹುದು, ಇದರ ಭವಿಷ್ಯ ಕೂಡ ಉಜ್ವಲವಾಗಿದೆ ಅನ್ನಲಾಗಿದೆ.
ಸದ್ಯ ಒಂದು ಟನ್ ಸೆಗಣಿಗೆ ಲಕ್ಷಾಂತರ ರೂ. ಬೆಲೆ ಇದೆ, ಹೆಚ್ಚಿನ ಬೇಡಿಕೆ ಅರಬ್ ದೇಶ ಹಾಗೂ ಅಮೆರಿಕದಿಂದ ಇದೆ. ಈಗ ಮಾಲ್ಡೀವ್ಸ ಕೂಡ ಇದರಲ್ಲಿ ಸೇರಿದೆ. ೨೦೧೮ರಲ್ಲಿ ಕೇವಲ ರಾಜಸ್ಥಾನವೊಂದೇ ೧೦ ಕೋಟಿ ಒಂದು ಲಕ್ಷ ರೂ ಲಾಭ ಕಂಡಿದೆ. ಭಾರತದಲ್ಲಿ ನಿತ್ಯ ಸೆಗಣಿಯ ಹೊಳೆ ಹರಿಯುತ್ತದೆ, ಇದನ್ನು ವ್ಯವಸ್ಥಿತವಾಗಿ ಮಾಡಿದರೆ ದೇಶ ಎಷ್ಟು ಲಾಭ ಪಡೆಯಬಹುದು ಊಹಿಸಿ ಇನ್ನು ಮೇಲೆ ನಮ್ಮ ವಿವಿಗಳ ಎಂಬಿಎಗಳು ಸೆಗಣಿ ಎಂಬಿಎ ಮಾಡಬಹುದು. ನಮ್ಮ ದೇಶದ ಡೈರಿಗಳಲ್ಲಿ ಮುಖ್ಯವಾದ ನಂದಿನಿ ಹಾಗೂ ಅಮುಲ್ ಫಾರ್ಮ್ಗಳು ಸೆಗಣಿಯಿಂದಲೂ ಅಪಾರ ಲಾಭದ ಮಾರ್ಗ ಹುಡುಕಿದರೆ ನಮ್ಮ ರೈತರಿಗೂ ಪ್ರಯೋಜನವಾಗಿ ನಮ್ಮ ಗ್ರಾಮಗಳು, ರೈತರು ಉದ್ಧಾರವಾಗುತ್ತಾರೆ. ಹೀಗೇನಾದರೂ ಆದರೆ ಇದರಿಂದ ಸೃಷ್ಟಿಯಾಗುವ ಗ್ರಾಮೀಣ ಭಾಗದ ಉದ್ಯೋಗ ಪ್ರಮಾಣವನ್ನು ಊಹಿಸಿ.
ನನ್ನ ವೈಯಕ್ತಿಕ ಅನುಭವ ಹೇಳುವುದು ಇಲ್ಲಿ ಉಚಿತ. ಕೆಲ ವರ್ಷಗಳ ಹಿಂದೆ ನನಗೆ ತುಟಿಗಳ ಮೇಲೆ ಒಳಭಾಗದಿಂದ ಊತ ಬಂದು ಊಟ ತಿಂಡಿ ಇರಲಿ, ನೀರು ಕುಡಿಯಲು ಕೂಡ ಹಿಂಸೆ ಆಗುತ್ತಿತ್ತು. ಹಿರಿಯ ಆಲೋಪತಿ ವೈದ್ಯರಾದ ಅನುಭವಿ ವೈದ್ಯರಾದ ಡಾ. ಕಾಮತ್ ಎಂಬುವವರು ಮೈಸೂರಲ್ಲಿ ನಮ್ಮ ಖಾಯಂ ವೈದ್ಯರಾಗಿದ್ದರು. ಅನೇಕ ವೈದ್ಯರಿಗೆ ತೋರಿಸಿದರೂ ಇದೇನೆಂದು ಹೇಳಲು ಸಾಧ್ಯವಾಗದಿದ್ದಾಗ ಅವರು ಇದು ಮ್ಯೂಕಸ್ ಮೆಂಬ್ರೆನ್ಸ್ ಎಂದು ತಿಳಿಸಿ ಇದಕ್ಕೆ ಸರಳ ಆಪರೇಶನ್ ಮಾಡಬೇಕು ನೀವು ಕಾಮತ್ ಆಸ್ಪತ್ರೆಗೆ ಬನ್ನಿ ಅಂದರು, ನಾನು ಸದ್ಯ ಹೆಸರು ತಿಳಿಯಿತಲ್ಲ, ನೋಡುವಾ ಅಂದುಕೊಂಡು ಸರ್ಕಾರಿ ಆಯುರ್ವೇದ ಕಾಲೇಜಿನ ಡಾ, ಅಶೋಕ್ ಸಾತ್ಪುತೆ ಅವರ ಬಳಿ ಹೋಗಿ ಎಲ್ಲ ಹೇಳಿಕೊಂಡೆ, ಅವರು ಪ್ರಾಚೀನ ಗ್ರಂಥ ಅವಲೋಕಿಸಿ ನೋಡಿ ಇದಕ್ಕೆ ಶಸ್ತ್ರ ಚಿಕಿತ್ಸೆ ಬೇಕಿಲ್ಲ, ನಾನು ಹೇಳಿದಂತೆ ಒಂದು ವಾರ ಮಾಡಿ, ಗುಣ ಆಗದಿದ್ದರೆ ನಾನು ಉಚಿತವಾಗಿ ನಿಮ್ಮ ಚಿಕಿತ್ಸೆ ಮಾಡುತ್ತೇನೆ ಅಂದರು, ನಾನು ಒಪ್ಪಿದೆ, ಅವರು ಸರಳ ವಿಧಾನ ಹೇಳಿದರು - ನಿತ್ಯ ಬೆಳಿಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಒಂದು ಸ್ವಲ್ಪ ಹಸುವಿನ ಮೂತ್ರವನ್ನು ಬಾಯಲ್ಲಿ ಹಾಕಿಕೊಂಡು ತುಟಿಗೆ ಅದು ಒತ್ತಿಬರುವಂತೆ ಅದು ಎಂಜಲಿನ ಜೊತೆ ಸೇರಿ ಸ್ವಲ್ಪ ದಪ್ಪ ಆಗುವವರೆಗೆ ಮುಕ್ಕಳಿಸಿವುದು. ಕಣ್ಣು ನೀರು ಬರುತ್ತದೆ ಆಗ ಉಗುಳಿ ಬಾಯಿ ತೊಳರದುಕೊಳ್ಳುವುದು, ಆದರೆ ಅನಗತ್ಯ ಇದನ್ನು ಮಾಡಬಾರದು ಅಪಾಯ ಅಂದರು ಸರಿ ಅಂದೆ. ಹೌದು ಗುಣವಾಯ್ತು. ಅದೃಷ್ಟಕ್ಕೆ ನನ್ನ ಮಿತ್ರರೊಬ್ಬರಿಗೆ ಇದೇ ರೀತಿ ಆದಾಗ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರಂತೆ ಮತ್ತೆ ನಾಲ್ಕು ತಿಂಗಳ ನಂತರ ಮತ್ತೆ ಆದಾಗ ಮತ್ತೆ ಶಸ್ತ್ರ ಚಿಕಿತ್ಸೆ - ಹೀಗೆ ನಾಲ್ಕಾರು ಬಾರಿ ಆದಾಗ ಅವರ ತುಟಿ ಆಕಾರ ಕೆಟ್ಟಿತ್ತು. ಅದು ಮತ್ತೆ ಬರುವ ಸಾಧ್ಯತೆ ಇದೆ ಅಂದಿದ್ದರು. ಆದರೆ ಇಪ್ಪತ್ತು ವರ್ಷಗಳ ಮೇಲಾಯಿತು, ನನ್ನ ಕಡೆಗೆ ಅದು ಮತ್ತೆ ಸುಳಿಯಲಿಲ್ಲ. ನಾನು ಕಾಮತ್ ಡಾಕ್ಟರ್ ಬಳಿ ಇದನ್ನು ಹೇಳಿದೆ, ಅವರು ಯಥಾ ಪ್ರಕಾರ ಎಲ್ಲ ಆಲೋಪತಿ ವೈದ್ಯರಂತೆ ಇವನ್ನೆಲ್ಲ ನಂಬಬೇಡಿ ಅಂದರು. ನಾನು ಅನುಭವವನ್ನು ಮಾತ್ರ ಇಂದಿಗೂ ನಂಬಿ ಕುಳಿತಿದ್ದೇನೆ. ಆರಾಮ್ ಇದ್ದೇನೆ, ಮತ್ತೆ ಸಗಣಿಗೆ ಬರೋಣ. ಈಚೆಗೆ ದೇಶದೆಲ್ಲೆಡೆ ಕರೋನಾ ದಾಳಿ ಆದಾಗ ಹಳ್ಳಿಜನ ಹೆಚ್ಚು ಆರೋಗ್ಯವಾಗಿದ್ದರು ಅದರಲ್ಲೂ ಸೆಗಣಿ ಸಾರಿಸುತ್ತಿದ್ದ ಮನೆಗಳ ಜನಕ್ಕೆ ಒಬ್ಬರಲ್ಲೂ ಕರೋನಾ ಕಾಣಿಸಿರಲಿಲ್ಲ ಅನ್ನಲಾಗಿದೆ, ಸೆಗಣಿ ಬ್ಯಾಕ್ಟೀರಿಯಾ ನಾಶಕ ಎಂಬುದು ನಿಜ, ಆದರೆ ಇದರ ಬಗ್ಗೆ ಆಗಬೇಕಾದ ಪ್ರಮಾಣದಲ್ಲಿ ಅಧ್ಯಯನ ಆಗಿಲ್ಲ. ನಾವಿನ್ನೂ ಅರೆಬರೆ ವಿಜ್ಞಾನ ತಿಳಿದು ಎಲ್ಲ ಸಾಂಪ್ರದಾಯಿಕ ಜ್ಞಾನವನ್ನು ಮೌಢ್ಯ ಎಂದು ಪ್ರಶ್ನಿಸುವ ಹಂತದಲ್ಲಿದ್ದೇವೆ, ಪಾಶ್ಚಾತ್ಯರು ಬರೀ ಪ್ರಶ್ನಿಸುವ ತರ್ಕದಲ್ಲಿ ಹುರುಳಿಲ್ಲ ನ್ನುತ್ತಾ ನಮ್ಮ ಸಂಪ್ರದಾಯದ ಕಡೆ ಹೊರಳುತ್ತಿದ್ದಾರೆ, ನಮ್ಮ ಆಚಾರ - ಅವರ ಅಧ್ಯಯನದ ಫಲವನ್ನು ನಾವು ಹಣ ತೆತ್ತು ಮರಳಿ ಪಡೆಯಬೇಕಿದೆ ಅಂದರೆ ನಮ್ಮ ಸಂಪ್ರದಾಯದ ಲಾಭ ಯಾರಿಗೆ ಆಗುತ್ತಿದೆ ನೋಡಿ. ನಿಜವಾಗಿ ಇಷ್ಟು ಕಾಲ ಮೌಢ್ಯ ಎಂದು ಹೀಯಾಳಿಸುತ್ತ ಬಂದ ನಮ್ಮ ಕರ್ಮಠ ಸಂಪ್ರದಾಯದ ಅನೇಕ ಸಂಗತಿಗಳನ್ನು ಆಧುನಿಕ ರೀತಿಯಲ್ಲಿ ಅಧ್ಯಯನ ಮಾಡುವ ಅನೇಕ ಸಾಧ್ಯತೆ ಮತ್ತು ಅವಕಾಶಗಳಿವೆ, ಸೆಗಣಿಯ ಕತೆ ಬಿಡಿ, ಅದರ ನುಂದೆ ಹೋಗಿ ಪಂಚಗವ್ಯದ ಅಧ್ಯಯನ ಈಗ ನಡೆದಿದೆ, ಇದರ ಜೊತೆಗೆ ನಮ್ಮ ಹಬ್ಬ ಹರಿದಿನಗಳಲ್ಲಿ ಮನೆಯ ಮುಂದೆ ತೋರಣ ಕಟ್ಟುವ ಮಾವು, ಬೇವು, ಅರಳಿ, ಆಲ ಮತ್ತು ಅತ್ತಿ ಇತ್ಯಾದಿ ಪಂಚ ಪಲ್ಲವಗಳ ಕೆಲವೊಮ್ಮೆ ಇವುಗಳ ಜೊತೆಯಾಗುವ ಎಕ್ಕ ಎಲೆಗಳ ಇಂದಿನ ವೈಜ್ಞಾನಿಕ ಅಧ್ಯಯನ ಜರೂರಾಗಿ ನಡೆಯಬೇಕಿದೆ, ಇವು ಅನೇಕ ರೋಗಗಳನ್ನು ತಡೆಯುತ್ತವೆ ಅನ್ನಲಾಗಿದೆ, ಇವುಗಳ ಕಾಂಬಿನೇಶನ್‌ನ್ನಲ್ಲಿ ಅಂಥದ್ದೇನಿದೆ ಎಂಬುದನ್ನು ಕೂಡ ನಮಗೆ ಈಗ ಹೊರಗಿನವರು ಹೇಳಬೇಕಿದೆ ಎಂಬುದು ದೊಡ್ಡ ವ್ಯಂಗ್ಯ. ವಿದ್ಯುತ್ ಕೊರತೆ ಎಂದು ಸದಾ ಅಳುವ ನಾವು ಈ ಸೆಗಣಿಯ ಪ್ರಯೋಜನವನ್ನು ಅಲಕ್ಷ್ಯಿಸಿದ್ದೇವೆ, ಕಾಲಡಿ ಇರುವ ಸೆಗಣಿಯನ್ನು ಬೈದುಕೊಂಡು ಓಡಾಡುತ್ತೇವೆ, ಇನ್ನಾದರೂ ನಮಗೆ ಸೆಗಣಿಯ ಬೆಲೆ ತಿಳಿಯಲಿ, ಇದರ ಸಮಗ್ರ ಪ್ರಯೋಜನ ತಿಳಿದರೆ ದೊಡ್ಡ ಪ್ರಮಾಣದಲ್ಲಿ ಒಂದು ಸೆಗಣಿ ಅಧ್ಯಯನ ಕೇಂದ್ರ ಕೃಷಿ ವಿವಿಗಳಲ್ಲಿ ತೆರೆಯಬಹುದು. ನಮ್ಮ ಸಂಪ್ರದಾಯಗಳಿಗೆ ಹೀಗಾದರೂ ಬೆಲೆ ಬರುತ್ತಿದೆಯಲ್ಲ, ಸಾಕು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅನ್ನುವುದರ ಬದಲು ಈಗ ಹಾಲಿಗೊಂದು ಕಾಲ ಸೆಗಣಿಗೊಂದು ಕಲ ಅನ್ನಬಹುದೇನೋ?
Monday, 17 February 2025
ನಮ್ಮ ಬಜೆಟ್ ನಮ್ಮ ನಿರೀಕ್ಷೆಗಳು
ಈ ಬಾರಿಯ ಮುಂಗಡಪತ್ರದ ಅಂದಾಜು ಮೊತ್ತ ಸುಮಾರು ೪.೧ ಲಕ್ಷಕೋಟಿ ರೂ. ಆಗಲಿದೆ ಎಂಬ ಅಂದಾಜಿದೆ. ಗ್ರಾಮೀಣ ಭಾಗದಿಂದ ಬಂದು ಕಷ್ಟಪಟ್ಟು ವಿದ್ಯೆ ಕಲಿತು ಬದುಕಿನ ಸಮೃದ್ಧ ಅನುಭವದಿಂದ ರಾಜ್ಯ ರಾಜಕಾರಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟ ಸಿದ್ದರಾಮಯ್ಯನವರ ಮೊದಲ ಹಾಗೂ ಕೊನೆಯ ಲಕ್ಷ್ಯ ಬಡವರು ಹಾಗೂ ಹಿಂದುಳಿದವರು ಹಾಗೂ ಅವರ ಕಲ್ಯಾಣ. ಜನತಂತ್ರ ವ್ಯವಸ್ಥೆಯಲ್ಲಿ ಇದು ಒಂದುಹಂತದವರೆಗೆ ಅಪೇಕ್ಷಣೀಯ. ಇದನ್ನು ಅವರು ಈಗಾಗಲೇ ಸಾಧಿಸಿದ್ದಾರೆ. ಇನ್ನೇನಿದ್ದರೂ ಸಮಗ್ರ ಅಭಿವೃದ್ಧಿಯಲ್ಲಿ ಅವರನ್ನು ಸೇರಿಸುವ ಯತ್ನ ಆಗಬೇಕು, ವಿಶೇಷ ಸವಲತ್ತು, ಸೌಲಭ್ಯಗಳನ್ನು ಪುಕ್ಕಟೆಯಾಗಿ ಕೊಟ್ಟು ಅವರನ್ನು ಮೇಲೆತ್ತುವ ಪ್ರಯತ್ನ ಸಾಕಷ್ಟು ಆಗಿದೆ. ಇನ್ನು ಅದರ ಫಲಿತಾಂಶವನ್ನು ವಾಸ್ತವಿಕ ನೆಲೆಯಲ್ಲಿ ಮುಲಾಜಿಲ್ಲದೇ ಅವಲೋಕಿಸುವ ಕೆಲಸ ಆಗಬೇಕು. ಇಲ್ಲವಾದಲ್ಲಿ ಸಿಕ್ಕವರಿಗೆ ಸೀರುಂಡೆ ಎಂಬಂತೆ ಅನರ್ಹರು ಕೂಡ ಸರ್ಕಾರದ ಸವಲತ್ತು, ಯಾರಪ್ಪನದು ಅನ್ನುತ್ತಾ ಅನುಭವಿಸುವ ಕೆಲಸ ಮಾಡುತ್ತಾರೆ, ಇದರಿಂದ ಸರ್ಕಾರಕ್ಕೂ ಸಮಾಜಕ್ಕೂ ಹೊರೆ ಹೆಚ್ಚುತ್ತದೆ. ಸಮಾಜದಲ್ಲಿ ತಮ್ಮತಮ್ಮ ಜವಾಬ್ದಾರಿ ಅರಿತ ಪ್ರಜೆಗಳಿದ್ದರೆ ತಮ್ಮ ಸಹಜೀವಿಗಳಿಗೆ ಉಳ್ಳವರು ನೆರವಾಗುತ್ತಾರೆ ಸರ್ಕಾರದೊಂದಿಗೆ ಕೈಜೋಡಿಸುತ್ತಾರೆ, ಇಲ್ಲವಾದಲ್ಲಿ ಬಂದಷ್ಟು ಬರಲೆಂಬ ಭಾವನೆಯಲ್ಲಿ ಸ್ವಾರ್ಥ ಸಾಧನೆಗೆ ಇಳಿಯುತ್ತಾರೆ. ತೆರಿಗೆ ಕಟ್ಟುವವರು ಕಟ್ಟುತ್ತಿರುತ್ತಾರೆ, ಕುಳಿತು ಅನುಭವಿಸುವವರು ಉಣ್ಣುತ್ತಲೇ ಇರುತ್ತಾರೆ. ಇಂಥ ಬೆಳವಣಿಗೆ ಆಗದಂತೆ ತಡೆಯುವ ಹೊಣೆ ಮಾನ್ಯ ಮುಖ್ಯಮಂತ್ರಿಗಳ ಮೇಲೆ ಇದೆ. ಯಾಕೆಂದರೆ ರಾಜ್ಯದಲ್ಲಿ ಒಳ್ಳೆಯ ಉದ್ದೇಶದಿಂದ ಜಾರಿಗೆ ಬಂದ ಐದು ಭಾಗ್ಯ ಯೋಜನೆಯ ಫಲಾನುಭವಿಗಳಲ್ಲಿ ಅನರ್ಹರೇ ಹೆಚ್ಚುತುಂಬಿದ್ದಾರೆ. ಉದಾಹರಣೆಗೆ ಸ್ತ್ರೀಶಕ್ತಿ ಯೋಜನೆಯನ್ನು ನೋಡಿ. ಮಹಿಳೆಯರು ನಮಗೆ ಪುಗ್ಸಟ್ಟೆ ಪ್ರಯಾಣಕ್ಕೆ ಅವಕಾಶಕೊಡಿ ಎಂದು ಕೇಳಿರಲಿಲ್ಲ ಎಂಬುದು ಬೇರೆ ಮಾತು. ಸರ್ಕಾರಗಳು ಜನ ಸೌಲಭ್ಯವನ್ನು ಕೇಳಿದರೆ, ಜನ ಅತ್ತರೆ ಮಾತ್ರ ಕೊಡಬೇಕೆಂದಿಲ್ಲ, ಹಾಗಾದಾಗ ಅದು ಕೆಟ್ಟ ಸರ್ಕಾರವಾಗುತ್ತದೆ. ಜನರ ಕಷ್ಟ ನೋಡಿ ಸ್ಪಂದಿಸುವ ಸರ್ಕಾರ ಯಾವಾಗಲೂ ಅಪೇಕ್ಷಣೀಯ. ಈ ಯೋಜನೆಗಳೆಲ್ಲ ಅಂಥವು. ಆದರೆ ಅವುಗಳ ಪ್ರಯೋಜನ ಪಡೆಯುವ ಜನ ಒಂದು ಕ್ಷಣ ನಾನು ಇದಕ್ಕೆ ಅರ್ಹನೇ ಎಂದು ಯೋಚಿಸಬೇಕು. ಸರ್ಕಾರದಲ್ಲಿ ಹಲವರಿಗಾಗಿ ಹಲವು ಯೋಜನೆಗಳು ಇರುತ್ತವೆ, ಅದಕ್ಕೆ ಸಂಬಂಧಪಡದವರು ಅದಕ್ಕಾಗಿ ಹಂಬಲಿಸಬಾರದು. ನಮಗೆ ತಿಳಿದಂತೆ ರೈತರಿಗಾಗಿ ಸರ್ಕಾರ ಜಾರಿಮಾಡಿದ ಪ್ರೋತ್ಸಾಹದ ಹಣವನ್ನು ಎಲ್ಲೋ ನೌಕರಿಯಲ್ಲಿದ್ದು ಹೆಸರಿಗಷ್ಟೇ ರೈತರಾದ ಅನೇಕರು ಪಡೆಯುತ್ತಿದ್ದಾರೆ. ಯಾವುದೇ ಯೋಜನೆ ಹೀಗಾಗಬಾರದು. ಇಂಥವನ್ನು ತಡೆಯುವ ಕೆಲಸ ಯಾವುದಾದರೂ ಒಂದು ಹಂತದಲ್ಲಿ ನಡೆಯಬೇಕು. ಹಿಂದುಳಿದವರಿಗೆ ಕೊಡಲಾಗುವ ಸೌಲಭ್ಯಗಳು ಕೂಡ ಇಷ್ಟು ಕಾಲದ ಅನಂತರ ಕಟ್ಟು ನಿಟ್ಟಿನ ಪರಿಶೀಲನೆಗೆ ಅರ್ಹ. ಏಕೆಂದರೆ ಇಂಥ ಯೋಜನೆ ಶುರುವಾಗಿ ನಾಲ್ಕಾರು ದಶಕಗಳು ಸಂದಿವೆ. ಆದರೆ ಸವಲತ್ತು ನೀಡುವಾಗ ಇನ್ನೂ ಹಳೆಯ ಮಾನದಂಡ ಬಳಸುವುದು ಸಾಧುವಲ್ಲ, ಹಿಂದೆ ಹಿಂದುಳಿದವರೆಂದು ಗುರುತಿಸಲಾಗಿದ್ದ ಎಷ್ಟೋ ಕುಟುಂಬಗಳು ಮೂರು ನಾಲ್ಕು ತಲೆಮಾರುಗಳ ಹಿಂದೆಯೇ ಅಪೇಕ್ಷಿತ ಪ್ರಧಾನವಾಹಿನಿಗೆ ಬಂದುಬಿಟ್ಟಿವೆ, ಮುಂದುವರೆದವರೆಂದು ಹೇಳಲಾದ ಕುಟುಂಬಗಳು ಸವಲತ್ತುಗಳ ಕೊರತೆಯಿಂದ ಹಿಂದೆ ಉಳಿದು ಕೆಳಗೆ ಜಾರಿವೆ. ಅಂದರೆ ಮೇಲಿದ್ದವರು ಕೆಳಗೂ ಕೆಳಗಿದ್ದವರು ಮೇಲಕ್ಕೂ ಬಂದು ಸಾಮಾಜಿಕ ರೇಖೆ ಒಂದು ಹಂತದಲ್ಲಿ ಸಮವಾಗಿದೆ. ಇದನ್ನು ಗುರುತಿಸಬೇಕು. ಇಲ್ಲವಾದಲ್ಲಿ ತಾವು ಹಿಂದುಳಿದವರೆಂದು ಅರ್ಥಹೀನ ಜಾತಿಯ ಹೆಸರಲ್ಲಿ ಸಕಲ ಸವಲತ್ತು ಪಡೆಯುವವರು ಮತ್ತೆ ಸಾಮಾಜಿಕ ಅಸಮಾನತೆಗೆ ಕಾರಣವಾಗುತ್ತಾರೆ. ಇದುವರೆಗಿನ ವಾದವನ್ನೇ ಮುಂದಿಟ್ಟು ಹೇಳುವುದಾದರೆ ಇದುವರೆಗೆ ಮುಂದುವರೆದವರೆಂದು ಹೇಳಲಾದ ಬ್ರಾಹ್ಮಣರ ಬದಲು ಆದಿವಾಸಿ ಪಂಗಡವೊಂದು ಆ ಜಾಗಕ್ಕೆ ಬಂದು ಕುಳಿತರೆ ಅದು ಸಾಮಾಜಿಕ ಸಮಾನತೆಯ ಸಾಧನೆ ಆಗುವುದಿಲ್ಲ. ಮತ್ತೆ ಅದು ಇಷ್ಟು ದಿನ ನೀವು ಇದ್ದಲ್ಲಿ ನಾವಿದ್ದೇವೆ ಎಂಬ ಪ್ರತೀಕಾರದ ದಾರಿಯಾಗುತ್ತದೆ. ಅವರ ಬದಲು ಇವರು ಬಂದು ಕುಳಿತಂತಾಗುತ್ತದೆ. ಇದು ಸಾಧನೆ ಅಲ್ಲ. ಈ ಕಾರಣಕ್ಕಾಗಿ ಸರ್ಕಾರ ಕಟ್ಟುನಿಟ್ಟಿನ ಮಾರ್ಗ ರೂಪಿಸಬೇಕಿದೆ. ಇಲ್ಲವಾದಲ್ಲಿ ಸವಲತ್ತು ಪಡೆಯುವ ಮೇಲಾಟದಲ್ಲಿ ಎಲ್ಲ ಸಮುದಾಯಗಳೂ ತಮಗೂ ಮೀಸಲಾತಿ ಕೊಡಿ, ನಮ್ಮನ್ನು ಕೆಳ ವರ್ಗಕ್ಕೆ ಸೇರಿಸಿ ಎಂದು ಜಾತಿಯನ್ನು ಮುಂದೆ ಮಾಡಿ ಹೋರಾಟಕ್ಕೆ ಇಳಿಯುತ್ತವೆ. ನಮ್ಮ ಮುಂದೆ ಇಂಥ ಹೋರಾಟಗಳು ಈಚೆಗೆ ಹೆಚ್ಚುತ್ತಿರುವುದನ್ನು ನಾವು ಮತ್ತೆ ಮತ್ತೆ ಗಮನಿಸಬಹುದು, ಕೆಲವೊಮ್ಮೆ ಇದು ಕೆಟ್ಟ ಹಿಂಸಾ ರೂಪಕ್ಕೂ ತಿರುಗಬಹುದು. ಜಾತಿ ನಿಷ್ಠ ಮೀಸಲಾತಿಯ ಅಪಾಯಕ್ಕೆ ಮಣಿಪುರದ ಗಲಭೆ ಒಂದು ನಿದರ್ಶನ. ಇದು ದೇಶದ ಬೇರೆ ಕಡೆ ಆಗುವುದಿಲ್ಲ, ಆಗಬಾರದು ಎಂದೇನೂ ಇಲ್ಲ. ಮೀಸಲಾತಿ ಯೋಜನೆ ಜಾರಿಯ ಆರಂಭದ ಕಾಲಘಟ್ಟದಲ್ಲಿ ಜಾತಿ ಅಥವಾ ಪಂಗಡಗಳನ್ನು ಮಾನದಂಡವಾಗಿ ಇಟ್ಟುಕೊಂಡಿದ್ದರಲ್ಲಿ ಅರ್ಥವಿದೆ. ಆಗ ಅನ್ಯ ಮಾನದಂಡಗಳು ಇರಲಿಲ್ಲ. ಆದರೆ ಈಗ ಹಾಗೆ ಗುರುತಿಸಲು ಸಾಧ್ಯವಾಗುವ ಅನೇಕ ಮಾರ್ಗಗಳಿವೆ. ಹೀಗಿರುವಾಗ ಒಂದು ಕಡೆ ಜಾತಿ ನಿರ್ನಾಮ ಮಾಡುತ್ತೇವೆ ಎಂದು ಹೇಳುತ್ತ ಜಾತಿ ನಿಷ್ಠ ಮೀಸಲಾತಿ ಜಾರಿಯಲ್ಲಿಟ್ಟರೆ ಜಾತಿಗಳ ನಾಶ ಕನಸೇ ಆಗಿ ಮತ್ತಷ್ಟು ಅದು ಬಲಗೊಳ್ಳುವಂತಾಗುತ್ತದೆ. ಆದ್ದರಿಂದ ಮೀಸಲಾತಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಜಾರಿ ಮಾಡುವ ಅಗತ್ಯವಿದೆ. ಇನ್ನುಳಿದಂತೆ ಶಿಕ್ಷಣ. ಆರೋಗ್ಯದಂಥ ಕ್ಷೇತ್ರಗಳಿಗೆ ಕೊಡಲಾಗುವ ಆದ್ಯತೆಯಲ್ಲಿ ಕಡಿಮೆ ಮಾಡಲಾಗದು. ಇವುಗಳ ಜೊತೆಗೆ ಸರ್ಕಾರಿ ನೌಕಕರು ಮತ್ತು ಅವರ ಬೇಡಿಕೆಗಳು, ಬಡ್ತಿ ಮತ್ತು ಹಿಂಬಾಕಿ ಬೇಡಿಕೆಗಳು ಬಹುಕಾಲದಿಂದ ಬಾಕಿ ಇದ್ದು ಇವನ್ನು ಪೂರೈಸಬೇಕಿದೆ. ಆದ್ಯತೆಯ ಕ್ಷೇತ್ರಗಳ ಜೊತೆ ಇವನ್ನೆಲ್ಲ ನಿರಾಕರಿಸಲಾಗದು. ಇವಲ್ಲದೇ ಆಗಾಗ ಘಟಿಸುವ ನೈಸರ್ಗಿಕ ಪ್ರಕೋಪಗಳ ಸವಾಲುಗಳಿಗೆ ವ್ಯಯಿಸಬೇಕಾದ ಹಣಕಾಸಿನ ಲೆಕ್ಕವನ್ನು ಯಾರೂ ಊಹಿಸಲಾಗದು. ಇವುಗಳಿಗೆ ಸರ್ಕಾರ ಯಾವಾಗಲೂ ಸಿದ್ಧವಾಗಿರಬೇಕಾಗುತ್ತದೆ. ಇವನ್ನೆಲ್ಲ ಸರಿದೂಗಿಸಬೇಕಾದ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ.
ಈಗ ವಿಷಯಕ್ಕೆ ಹಿಂದಿರುಗೋಣ. ಕರ್ನಾಟಕದಲ್ಲಿ ತೆರಿಗೆ ಕಟ್ಟುವವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಯುತ್ತಿದ್ದರೆ ಸೌಲಭ್ಯ ಪಡೆಯುವವರ ಸಂಖ್ಯೆ ಏರುತ್ತಿದೆ. ಒಮ್ಮೆ ಯಾವುದೇ ಸೌಲಭ್ಯ ಪಡೆದವರನ್ನು ಮತ್ತೆ ಆ ಸೌಲಭ್ಯ ಪಡೆಯದಂತೆ ತಡೆಯುವ ಮಾರ್ಗಗಳು ನಮ್ಮಲ್ಲಿಲ್ಲ ಹೀಗಾಗಿ ಸವಲತ್ತು ಪಡೆದವರೇ ಮತ್ತೆ ಸೌಲಭ್ಯ ಪಡೆಯುತ್ತಾ ಅದು ಒಂದೇ ಜಾಗದಲ್ಲಿ ಸುತ್ತುತ್ತಾ ಇರುತ್ತದೆ. ಅದೇ ಸಮುದಾಯದ ಅರ್ಹರಿಗೆ ಅದು ಹೋಗುವ ಅವಕಾಶ ತಪ್ಪುತ್ತದೆ. ಯಾವುದೇ ಸೌಲಭ್ಯದ ಗತಿ ಹೀಗಾಹಬಾರದು. ಸದ್ಯ ಹಿಂದುಳಿದವರ ಸೌಲಭ್ಯ ಈ ದಾರಿಯನ್ನು ಹಿಡಿದಾಗಿದೆ. ಇದನ್ನು ತಡೆಯುವ ಯತ್ನ ಅಗದಿದ್ದರೆ ಸಮ ಸಮಾಜದ ಕಮಸು ಎಂದಿಗೂ ನನಸಾಗುವುದಿಲ್ಲ. ಮೀಸಲಾತಿಯ ಅವಾಂತರ ಆಗಾಗ ನಡೆಯುವುದನ್ನು ನೋಡಿ. ಕೆನೆಪದರಕ್ಕೆ ಒಮ್ಮೆ ಬಂದವರನ್ನು ಗುರುತಿಸಿ ಸೌಲಭ್ಯ ನಿಲ್ಲಿಸಲು ಸರ್ಕಾರ ಮುಂದಾದರೆ ಆ ಸಮುದಾಯದ ಜನ ಸರ್ಕಾರದ ಇಂಥ ಪ್ರಯತ್ನವನ್ನು ವಿರೋಧಿಸುತ್ತಾರೆ. ಬದಲಾಗಿ ಇನ್ನೂ ಸವಲತ್ತು ಕೊಡಿ ಅನ್ನುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಸೌಲಭ್ಯ ಕೊಡುವಾಗಲೇ ಅದರ ಕರಾರುಗಳನ್ನು ಸ್ಪಷ್ಟ ಮಾಡಬೇಕು. ಒಟ್ಟಿನಲ್ಲಿ ನಮ್ಮ ಜನತೆಗೆ ಯಾವುದೇ ಬಗೆಯ ಮೀಸಲಾತಿಯನ್ನು ಸೌಲಭ್ಯವನ್ನು ಪಡೆದು ಗೊತ್ತಿದೆಯೇ ವಿನಾ ತ್ಯಜಿಸಿ ಗೊತ್ತಿಲ್ಲ, ಇಂಥ ಕಡೆ ಯೋಜನೆಗಳನ್ನು ಸರ್ಕಾರ ಹೆಚ್ಚು ಎಚ್ಚರಿಕೆಯಿಂದ ಜಾರಿ ಮಾಡಬೇಕು. ಸದ್ಯ ನಮ್ಮಲ್ಲಿ ಇದಾಗುತ್ತಿಲ್ಲ. ಜನ ಕೂಡ ಇದಕ್ಕೆ ಅವಕಾಶ ಕೊಡುತ್ತಿಲ್ಲ. ಇಂಥ ಸಂದರ್ಭದಲ್ಲಿ ಸರ್ಕಾರ ಐದು ಪುಗ್ಸಟ್ಟೆ ಯೋಜನೆಗಳನ್ನು ಜಾರಿ ಮಾಡಿದೆ, ಈ ಒಂದೊಂದು ಯೋಜನೆಗಳ ಕತೆ ಒಂದೊಂದು ಪುಸ್ತಕವಾಗುವಷ್ಟಿದೆ. ಇವುಗಳಿಂದ ಸರ್ಕಾರಕ್ಕೆ ಆಗಿರುವ ನಷ್ಟ ಅಂತಿಂಥದ್ದಲ್ಲ. ಹೀಗಾಗಿ ಇದನ್ನು ಮುಂದೆ ಸರಿದೂಗಿಸುವ ಮಾರ್ಗವನ್ನು ಸರ್ಕಾರ ಈಗಿನಿಂದಲೇ ರೂಪಿಸಬೇಕಾದ ಅಗತ್ಯವಿದೆ. ಈ ಯೋಜನೆಗಳನ್ನು ಇದೇ ಸರ್ಕಾರ ರೂಪಿಸಿರುವುದರಿಂದ ಇದೇ ಸರ್ಕಾರವೇ ನಿಯಂತ್ರಿಸುವ ಮಾರ್ಗವನ್ನೂ ಹಾಕುವುದರಲ್ಲಿ ಅರ್ಥವಿದೆ. ಅದು ಈಗಿನಿಂದಲೇ ಆಗಬೇಕು.
ಸಿದ್ದರಾಮಯ್ಯನವರು ಈಗಾಗಲೇ ಅತಿ ಹೆಚ್ಚುಬಾಗಿ ನಿರಂತರ ಮುಂಗಡಪತ್ರ ಮಂಡಿಸಿದ ಸಾಲಿಗೆ ಸೇರಿದ್ದು, ದೇಶದಲ್ಲೇ ಅತಿ ಹೆಚ್ಚು ಅಂದರೆ ಹದಿನೆಂಟು ಬಾರಿ ಬಜೆಟ್ ಮಂಡಿಸಿದ ಗುಜರಾತಿನ ವಜೂಭಾಯಿ ವಾಲಾ ಅವರ ದಾಖಲೆ ಮುರಿಯಲು ಇನ್ನೆರಡು ಮಂಡನೆ ಆಗಬೇಕಿದೆ. ಇದು ಒತ್ತಟ್ಟಿಗಿರಲಿ. ಇದಲ್ಲ, ಸಾಧನೆ, ಇದರಿಂದ ಅವರು ಸಾಧಿಸಿದ್ದೇನು ಎಂಬುದು. ಹಾಗೆ ನೋಡಿದರೆ ಸಿದ್ದರಾಮಯ್ಯ ತಮ್ಮ ಪ್ರತೀ ಬಜೆಟ್ ಮಂಡನೆಯಿಂದ ಸಾಧಿಸುತ್ತಲೇ ಬಂದಿದ್ದಾರೆ. ಕಳೆದ ಬಾರಿಯ ಲಕ್ಷ್ಮಿ ಯೋಜನೆಗಳ ಸಾಧನೆ ಸಣ್ಣದಲ್ಲ, ಸದ್ಯ ಈ ಯೋಜನೆಗಳ ಪರಿಶೀಲನೆ ಆಗಬೇಲಿದೆ. ಅದರಲ್ಲೇನೂ ಇವು ವಿಫಲವಾಗುವುದಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ ಇಷ್ಟೆಲ್ಲ ಯೋಜನೆಗಳ ಜಾರಿಗೆ ಸರ್ಕಾರಕ್ಕೆ ಹೊರೆ ಎಷ್ಟೇ ಹೆಚ್ಚಿದರೂ ಅವರು ಅದನ್ನು ದಡಮುಟ್ಟಿಸುತ್ತಿದ್ದಾರೆ, ಇದಕ್ಕಾಗಿ ಮಾಡಬೇಕಾಗಿ ಬಂದ ಸಾಲದ ಹೊರೆ ಪ್ರತ್ಯೇಕ ವಿಷಯ. ಇಂಥದ್ದೊಂದು ಯೋಜನೆಯ ಯಶಸ್ವಿ ಜಾರಿ ಮುಖ್ಯ, ಅದರ ಲೋಪದೋಷಗಳ ವಿಚಾರ ಬೇರೆ. ಕಳೆದ ಬಾರಿ೩, ೪೬, ೪೦೯ ಕೋಟಿ ರೂಗಳಷ್ಟಿದ್ದ ಬಜೆಟ್ ವೆಚ್ಚ ಈ ಬಾರಿ ಐದು ಲಕ್ಷ ಕೋಟಿ ತಲುಪಿದೆ. ಆದರೆ ಖೋತಾ ಬಜೆಟ್ ಆಗದಂತೆ ನಿಗ್ರಹಿಸುವ ಸವಾಲು ಅವರ ಮುಂದೆ ಇದೆ. ಸಿದ್ದರಾಮಯ್ಯನವರು ಈಗಾಗಲೇ ಕಂದಾಯ ಮತ್ತಿತರ ಇಲಾಖೆಗಳೊಂದಿಗೆ ಅಗತ್ಯ ಸಭೆ ನಡೆಸಿ ಮುಂಗಡ ಪತ್ರ ಮಂಡನೆಗೆ ಈಗಾಗಲೇ ಸಿದ್ದವಾಗಿ ಕುಳಿತಿದ್ದಾರೆ.ವರ ಬಜೆಟ್ ಗೆ ಸಂಬAಧಿಸಿದAತೆ ಈಗಾಗಲೇ ಹತ್ತು ಹಲವು ನಿರೀಕ್ಷೆಗಳು ಗರಿಗೆದರಿವೆ. ಆದರೆ ಯಾರಿಗೂ ಹೊಸ ಭಾಗ್ಯ ಯೋಜನೆಗಳ ಜಾರಿ ಆಗುವ ನಿರೀಕ್ಷೆ ಇಲ್ಲ, ಈಗಾಗಲೇ ಇರುವ ಯೋಜನೆಗಳೇ ಕುಂಟುತ್ತಿವೆ ಅಥವಾ ಏದುಸಿರು ಬಿಡುತ್ತಿವೆಯಾದ್ದರಿಂದ ಇವೇ ನಡೆದರೆ ಸಾಕು ಎಂಬ ಅರಿವು ಜನಕ್ಕೆ ಇದೆ. ಸಾಲದ್ದಕ್ಕೆ ಇವುಗಳಿಗೆ ತಗುಲಿದ ವೆಚ್ಚ ಮತ್ತು ನಷ್ಟದ ನಿಭಾವಣೆ ಜೊತೆಗೆ ಈ ಯೋಜನೆಗಳಿಂದ ಉಳಿದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ ಎಂಬ ಆರೋಪ ಕೂಡ ಇದೆ. ಸದ್ಯದ ಸವಾಲು ಇವನ್ನು ಸಿದ್ದರಾಮಯ್ಯನವರು ಹೇಗೆ ನಿಭಾಯಿಸುತ್ತಾರೆಂದು ನೋಡಬೇಕಿದೆ. ಆದ್ದರಿಂದ ಹೊಸ ಭಾಗ್ಯ ಜನರಿಗೆ ಕೊಡುವ ಸಾಹಸವನ್ನು ಅವರು ಮಾಡಲಾರರು. ಇದು ಅವರ ೧೬ನೆಯ ಬಜೆಟ್ ಮಂಡನೆ ಆಗಲಿದೆ. ಇದುವರೆಗಿನ ಅನುಭವ ಅವರಿಗೆ ಸಮೃದ್ಧವಾಗಿದೆ. ಇದರ ಉಪಯೋಗವನ್ನು ಅವರು ಮಾಡಿಕೊಳ್ಳುತ್ತಾರೆ. ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದೆ, ಆದ್ದರಂದಲೇ ಈ ಬಜೆಟ್ ಗಾತ್ರ ಕಳೆದ ಬಾರಿಯ ಗಾತ್ರಕ್ಕಿಂತ ಶೇ. ೧೦ ದೊಡ್ಡದಾಗಿದೆ.
ಕಂದಾಯದಿಂದ ಸರ್ಕಾರಕ್ಕೆ ಹೆಚ್ಚಿನ ಒಳಹರಿವು ಬರುತ್ತಿದೆ ಎಂಬುದು ಸರಿ ಆದರೆ ಒಂದೆಡೆ ಸವಲತ್ತು ಅನುಭವಿಸುವ ಜನತೆ ಮತೆರಡುಕಡೆ ಬೆಲೆ ಏರಿಕೆ ಹೊಡೆತ ತಿನ್ನಬೇಕಾಗಿದೆ ಎಂಬುದೂ ಸುಳ್ಳಲ್ಲ. ಹೀಗಾದರೆ ಸವಲತ್ತುಗಳ ನೈಜ ಉದ್ದೇಶ ಈಡೇರುವುದಿಲ್ಲ, ಸದ್ಯ ಸರ್ಕಾರ ೧.೯ ಲಕ್ಷಕೋಟಿ ರೂಗಳ ಆದಾಯ ತೆರಿಗೆ ನಿರೀಕ್ಷೆ ಮಾಡುತ್ತಿದೆ. ಮುಖ್ಯವಾಗಿ ಅಬಕಾರಿ ಮತ್ತು ಇಂಧನಗಳ ಬೆಲೆ ಹೆಚ್ಚಳ ಇದರ ಮೂಲ ಮಾರ್ಗ. ಇಂಧನ ಬೆಲೆ ಹೆಚ್ಚಳ ಕಂದಾಯ ಹೆಚ್ಚಿಸುವ ಜೊತೆಗೆ ಬೆಲೆ ಹೆಚ್ಚಳದ ಬರೆಯನ್ನೂ ಹಾಕುತ್ತದೆ. ಬೆಲೆ ಹೆಚ್ಚಿಸದೇ ಸೌಲಭ್ಯವನ್ನು ಕೊಡಲಾಗದು. ಇವೆರಡರ ನಡುವೆ ಸಮತೋಲ ಸಾಧಿಸುವುದು ಈ ಬಾರಿಯ ಬಜೆಟ್ ಮುಂದಿರುವ ಸವಾಲಾಗಿದೆ. ಈ ಬಾರಿಯ ಬಜೆಟ್ ಗಾತ್ರ ಹೆಚ್ಚಾಗಲು ಜನ ತೆರುತ್ತಿರುವ ತೆರಿಗೆಯ ಜೊತೆಗೆ ಕೇಂದ್ರದ ನೆರವು ಕೂಡ ಪೂರಕವಾಗಿದೆ. ಆದರೆ ಸಂಪೂರ್ಣವಾಗಿ ರಾಜ್ಯದ ಹೊಣೆ ಆಗಿರುವ ಕೆಲವು ಕ್ಷೇತ್ರಗಳ ವೆಚ್ಚ ನಿಭಾವಣೆಗೆ ಸರ್ಕಾರ ಕೈಗೊಳ್ಳುವ ನಿಲುವು ಕೂಡ ಜನರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ರಾಜ್ಯಾದಾಯದ ಶೇ. ಹತ್ತರಷ್ಟು ಹಣ ಸದಯದ ಉಚಿತ ಯೋಜನೆಗಳಿಗೆ ವ್ಯಯವಾಗುತ್ತಿದೆ. ಜೊತೆಗೆ ಇವುಗಳ ನಿರ್ವಹಣೆ ಇನ್ನೊಂದು ಸವಾಲು. ಉದಾಹರಣೆಗೆ ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದರೆ ಬಸ್ ಗಳ ನಿರ್ವಹಣೆಗೆ ಬೇರೆ ಕಡೆಯಿಂದ ಹಣ ಹೊಂದಿಸಬೇಕಾಗುತ್ತದೆ, ಇದೇ ರೀತಿ ಉಳಿದ ಯೋಜನೆಗಳು.
Friday, 14 February 2025
ದುರಂತ ಅಂತ್ಯ ಕಂಡ ಬೆಂಗಳೂರಿನ ಇನ್ನೊಂದು ನದಿ
ದಕ್ಷಿಣ ಪಿನಾಕಿನಿ ಇಂದಿನ ನಂದಿ ಬೆಟ್ಟದಲ್ಲಿ ಹುಟ್ಟುತ್ತಿತ್ತು, ಅಲ್ಲಿಂದ ಇಳಿದು ಬೆಂಗಳೂರಿನ ಕಡೆಗೆ ಹರಿದುಬರುತ್ತಿತ್ತು. ಇದು ಹರಿಯುವಾಗ ಪೂರ್ವ ದಿಕ್ಕಿಗೆ ಹರಿದು ೪೨೫ ಕಿ.ಮೀ ಪ್ರವಹಿಸಿ ತಮಿಳುನಾಡಿನ ಮೂಲಕ ಬಂಗಾಳಕೊಲ್ಲಿ ಸೇರುತ್ತಿತ್ತು, ಇದಕ್ಕೆ ಪೊನ್ನೈಯಾರ್ ಎಂಬ ತಮಿಳು ಹೆಸರೂ ಇತ್ತು. ಇದು ಜೀವಂತ ಇರುವವರೆಗೂ ಬೆಂಗಳೂರಿನ ಉತ್ತರ ಭಾಗದ ಸಂಪೂರ್ಣ ನೀರಿನ ಅಗತ್ಯವನ್ನು ಪೂರೈಸುತ್ತಿತ್ತು. ಈ ದಕ್ಷಿಣ ಪಿನಾಕಿನಿಗೆ ವೃಷಭಾವತಿಗೆ ಇರುವಷ್ಟು ಅದೃಷ್ಟವೂ ಇಲ್ಲ, ಏಕೆಂದರೆ, ವೃಷಭಾವತಿಗೆ ಅದರ ಉದ್ಧಾರದ ಉದ್ದೇಶವುಳ್ಳ ಒಂದು ಮಂಡಳಿ, ಐಐಎಸ್ ಸಿ ವರದಿ, ಒಂದು ಅಡ್ರೆಸ್ ಎಲ್ಲ ಇದೆ, ಆದರೆ ಪಿನಾಕಿನಿಗೆ ಪಾನಿ ಡಾಟ್ ಅರ್ಥ್ ನವರ ವರದಿ ಬಿಟ್ಟರೆ ಇನ್ನೇನೂ ಇಲ್ಲ, ಜೊತೆಗೆ ಕಾಡುಗೋಡಿ ಎಂಬ ಹೆಸರಿದೆ, ಕಾಡುಗೋಡಿ ಎಂಬುದಕ್ಕೆ ಎರಡು ಅರ್ಥಗಳಿವೆ, ಒಂದು- ಕಾಡಿನಲ್ಲಿರುವ ಗುಡಿ - ಅದು ಈಗಲೂ ಕಾಡುಗೋಡಿಯಲ್ಲಿರುವ ಚೋಳರ ಕಾಲದ ಕಾಶಿ ವಿಶ್ವೇಶ್ವರ ದೇಗುಲ. ಇನ್ನೊಂದು ಕಾಡಿನಿಂದ ಸಮೃದ್ಧವಾದ ಗುಡಿ ಮಣ್ಣನ್ನು ತಂದು ಹಾಕುತ್ತಿದ್ದ ಪ್ರದೇಶ. ಇವೆರಡೇ ಇದಕ್ಕಿರುವ ಸದ್ಯದ ಸಾಕ್ಷಿಗಳು. ಜೊತೆಗೆ ಬೆಳ್ಳಂದೂರಿನಂತೆ ನೊರೆ ಕಾರುತ್ತಿರುವ ವಿಷವಾದ ಕೆರೆಗಳು, ಜೊತೆಗೆ ಕಾವೇರಿ ನೀರು ಕುರಿತು ತಮಿಳುನಾಡಿನ ಗದ್ದಲ ಕೂಡ ಇರಲಿಲ್ಲ ಎಂಬುದು ಮುಖ್ಯ. ಇದರ ಒಟ್ಟೂ ೨೮, ೨೮೮ ಚದರ್ ಕಿ.ಮೀ ನೀರು ಹರಿಯುವ ಪ್ರದೇಶದಲ್ಲಿ ನೂರಾರು ಕೆರೆಗಳು, ಉಪ ನದಿಗಳು ಜೀವಂತವಾಗಿದ್ದವು.ಇದು ಕಾವೇರಿ ಮತ್ತು ಪಾಲಾರ್ ನದಿಗಳಿಗೆ ಹೊಂದಿಕೊಂಡಿತ್ತು, ಆದ್ದರಿಂದ ತಮಿಳುನಾಡಿಗೆ ನೀರಿನ ಕೊರತೆ ಆಗುತ್ತಿರಲಿಲ್ಲ, ಯಾವಾಗ ಇದು ಸತ್ತಿತೋ ಅಂದಿನಿಂದ ತಮಿಳುನಾಡಿನ ಕಣ್ಣು ಕಾವೇರಿಯ ಮೇಲೆ ಬಿತ್ತು. ಕಾವೇರಿ ನೀರಿನ ಬಗ್ಗೆ ಗದ್ದಲ ಎಬ್ಬಿಸುವ ಯಾರೊಬ್ಬರೂ ಈ ನದಿಯ ಬಗ್ಗೆ ಉಸಿರು ಎತ್ತುವುದಿಲ್ಲ, ಇದರಿಂದ ಗೊತ್ತಾಗುತ್ತದೆ ಈ ನದಿ ಎಷ್ಟು ಮುಖ್ಯವಾಗಿತ್ತೆಂದು. ಈ ನದಿ ಮೊದಲು ಕುಲಗೆಟ್ಟಿದ್ದು ಬೆಂಗಳೂರಲ್ಲಿ. ಈ ನದಿಯ ಕೊಲೆಗಾರ ಬೆಂಗಳೂರು ಎಂಬ ಮಹಾನಗರ. ನಂದಿ ಬೆಟ್ಟದಲ್ಲಿ ಹುಟ್ಟಿ ಚಿಕ್ಕಬಳ್ಳಾಪುರ, ಮಾಲೂರು, ಕಾಡುಗೋಡಿ, ಸರ್ಜಾಪುದಿಂದ ಹೊಸಕೋಟೆಗೆ ಬಂದು, ಹೊಸೂರಿಗೆ ಹೋಗಿ,ಕೃಷ್ಣಗಿರಿ ಬಳಸಿ ವಿಲ್ಲುಪುರಂನಿಂದ ಮುಂದೆ ಹೋಗಿ ಕಡಲೂರು, ಪಾಂಡಿಚೇರಿ ಬಳಿ ಬಂಗಾಳಕೊಲ್ಲಿ ಸೇರುತ್ತಿತ್ತು. ಇಷ್ಟರಲ್ಲಿ ಇದು ತುಂಬುತ್ತಿದ್ದ ಕೆರೆಗಳ ಸಂಖ್ಯೆ ಅಗಣಿತ. ಬೆಂಗಳೂರಲ್ಲಿ ಕೈಗಾರಿಕಾ ತ್ಯಾಜ್ಯ, ಕೊಳಚೆ ನೀರು ಹೊತ್ತು ಸಾಗುತ್ತ ತಮಿಳುನಾಡಿನ ಪ್ರಮುಖ ನಗರ ಪಟ್ಟಣಗಳನ್ನು ಸುತ್ತಿ ಅಲ್ಲಿನ ಕೊಚ್ಚೆ ತೊಳೆದು ಮಡಿಲಲ್ಲಿ ಹಾಕಿಕೊಂಡು ಸಾಗುತ್ತ ಕ್ರಮೇಣ ಒಣಗಿತು. ಆರಂಭದಲ್ಲಿ ಇದರ ಹಣೆಬರೆಹ ವನ್ನು ಯಾರೂ ಗುರುತಿಸಲಿಲ್ಲ, ಇದು ನಮ್ಮ ಹಣೆಬರೆಹ. ಇಂದು ನೊರೆ ಕಾರುತ್ತ ಪ್ರಪಂಚದ ಗಮನ ಸೆಳೆಯುತ್ತಿರುವ ಬೆಳ್ಳಂದೂರು ಕೆರೆ ಕೂಡ ಅಂದಕಾಲತ್ತಿಲೆ ದಕ್ಷಿಣ ಪಿನಾಕಿನಿಯ ಅಂದದ ಕೂಸಾಗಿತ್ತು. ವೃಷಭಾವತಿ ಮತ್ತು ದಕ್ಷಿಣ ಪಿನಾಕಿನಿಗಳು ಜೀವಂತ ಇರುವವರೆಗೆ ಕರ್ನಾಟಕ ಮತ್ತು ತಮಿಳುನಾಡುಗಳ ಮಧ್ಯೆ ನೀರಿನ ಗದ್ದಲವೇ ಇರಲಿಲ್ಲ. ನೋಡಿ ಈ ಗಲಾಟೆ ಇಂದು ಎಲ್ಲಿಗೆ ಬಂದು ನಿಂತಿದೆ ಮೂಲ ಕಾರಣ ಎಲ್ಲಿದೆ ಎಂದು. ದಕ್ಷಿಣ ಪಿನಾಕಿನಿಯ ಮಹತ್ವ ಅರಿತ ಶಿಡ್ಲಘಟ್ಟದ ಜನ ಇದರ ಪುನರುತ್ಥಾನಕ್ಕೆ ಯತ್ನಿಸಿದ್ದಾರೆ, ಮಾಲೂರು ಬಳಿ ಬರುವಷ್ಟರಲ್ಲಿ ಇದು ಈಗ ಒಣಗುತ್ತದೆ.ಅಲ್ಲಿಂದ ಕೊಳಚೆ ಹೊತ್ತು ಬರುತ್ತ ಬೆಂಗಳೂರು ಮೂಲಕ ಹೊಸೂರು ತಲಪುವಷ್ಟರಲ್ಲಿ ಸಂಪೂರ್ಣ ನಾಪತ್ತೆಯಾಗುತ್ತದೆ.ಇದು ಬದುಕಿದ್ದಾಗ ೪, ೭೦೦ ಹೆಕ್ಟೇರ್ ಭೂಮಿಗೆ ನೀರುಣಿಸುತ್ತಿತ್ತಂತೆ, ೨೦೧೬ರಲ್ಲಿಈ ನದಿಗೆ ಪುನರುಜ್ಜೀವ ಕೊಡುವ ಯತ್ನ ಶಿಡ್ಲ ಘಟ್ಟದಲ್ಲಿ ಸ್ವಲ್ಪ ನಡೆದು ಈಗ ನಿಂತಿದೆ, ಪಿನಾಕಿನಿ ಮತ್ತು ವೃಷಭವತಿಗಳಿದ್ದಾಗ ಬೆಂಗಳೂರಲ್ಲಿ ಸಾವಿರಕ್ಕೂ ಮಿಕ್ಕಿ ಶುದ್ಧ ನೀರಿನ ಕೆರೆಗಳಿದ್ದವು ೨೦೦೦ವೇಳೆಗೆ ೪೦೦ ರಷ್ಟಿದ್ದ ಕೆರೆಗಳು ೨೦೧೬ರಲ್ಲಿ ೨೦೦ಕ್ಕೆ ಕುಸಿದವು.ಸದ್ಯ ಬೆಂಗಳೂರಲ್ಲಿ ನೋಡಲು ಸಿಗುವ ಕೆರೆಗಳು ೧೭ ಮಾತ್ರ. ಇಂದು ಬೆಂಗಳೂರು ಬೃಹತ್ತಾಗಿ ಬೆಳೆದಿದೆ ಅಂದರೆ ಅಷ್ಟು ಕೆರೆಗಳು ಅದರ ಹೊಟ್ಟೆ ಸೇರಿವೆ ಎಂದರ್ಥ. ಬೆಂಗಳೂರಲ್ಲಿದ್ದ ಕೆರೆಗಳ ಸಂಖ್ಯೆ ಬಿಬಿಎಂಪಿ ನಕಾಸೆಯಲ್ಲೇ ಸಿಗುತ್ತವೆ, ಇಂದು ಬೆಂಗಳೂರಿನ ಯಾವೆಲ್ಲ ಜಾಗಗಳಿಗೆ ನಾಗಸಂದ್ರ, ದೊಡ್ಡಸಂದ್ರ ಇತ್ಯಾದಿ ಸಂದ್ರ ಎಂಬ ಹೆಸರಿದೆಯೋ ಅಲ್ಲೆಲ್ಲ ದೊಡ್ಡ ಕೆರೆಗಳಿದ್ದವೆಂದೇ ಅರ್ಥ, ಈಗ ಇಲ್ಲೆಲ್ಲ ಹೆಸರಲ್ಲಿ ಮಾತ್ರ ಇವೆ. ಬೆಂಗಳೂರು ಕೆರೆಗಳ ಹಣೆ ಬರೆಹ ಜಾನಕಿ ನಾಯರ್ ಅವರ ಪ್ರಾಮಿಸ್ ಆಫ್ ದಿ ಮೆಟ್ರೊಪಾಲೀಸ್ ಎಂಬ ಕೃತಿಯಲ್ಲಿ ಸೂಕ್ತವಾಗಿ ದೊರೆಯುತ್ತದೆ. ಒಂದು ಕಾಲದಲ್ಲಿ ಬೆಂಗಳೂರಿಗೆ ಇಂದಿನ ಸಿಲಿಕಾನ್ ವ್ಯಾಲಿ ಎಂಬ ಹೆಸರು ಇರಲಿಲ್ಲ, ಇದು ಆಗ ಕೆರೆಗಳ ನಗರ, ನದಿಗಳ ವ್ಯಾಲಿ ಆಗಿತ್ತು.
Wednesday, 12 February 2025
ದೆಹಲಿ ಚುನಾವಣೆ ಕಲಿಸುವ ಪಾಠಗಳು
ಇದೇ ಮೊದಲ ಬಾರಿಗೆ ದೇಶದ ಯಾವುದೇ ಚುನಾವಣೆ ಪರಿಸರ ಕಾಳಜಿಯನ್ನು ಮುಂದಿಟ್ಟುಕೊಂಡು ನಡೆದಿದೆ. ಅಲ್ಲಿನ ನರ್ಮದಾ ನದಿಯ ಶುದ್ಧೀಕರಣದ ಹೆಸರಲ್ಲಿ ಈ ಚುನಾವಣೆ ಮುಖ್ಯವಾಗಿ ನಡೆದಿದೆ. ಹೀಗೆ ಪರಿಸರ ಉದ್ದೇಶದಿಂದ ಚುನಾವಣೆಗಳು ದೇಶದಲ್ಲಿ ನಡೆಯುವಂತಾದರೆ ಸಾಮಾನ್ಯ ಜನರಲ್ಲಿ ಅನ್ನುವುದಕ್ಕಿಂತ ಕನಿಷ್ಠಪಕ್ಷ ರಾಜಕೀಯ ನೇತಾಗಳಲ್ಲಿ ಆ ಬಗ್ಗೆ ಪ್ರಜ್ಞೆ ಮೂಡುತ್ತಿದೆ ಎಂದು ಭಾವಿಸಬಹುದಲ್ಲದೇ ನಿತ್ಯದ ರಾಜಕೀಯ ಕಚ್ಚಾಟದ ಹೊರತಾಗಿಯೂ ಚುನಾವಣೆಗೆ ಬೇರೆ ವಸ್ತುಗಳಿವೆ ಎಂಬುದು ಅರಿವಾಗಿರಾಜಕೀಯಚಿಂತನೆ ಬೇರೆ ಆಯಾಮವನ್ನು ಪಡೆಯುತ್ತದೆ. ನಮ್ಮ ಸಮಾಜ ಪಾಶ್ಚಾತ್ಯ ರಾಜಕೀಯ ವ್ಯವಸ್ಥೆಯನ್ನು ಒಪ್ಪಿಕೊಂಡಂತೆ ಇದಕ್ಕೆ ಸಂಬಂಧಿಸಿದ ಚಿಂತನೆ ಹಾಗೂ ತಂತ್ರಗಳನ್ನು ಒಪ್ಪಿಕೊಂಡಿಲ್ಲ ಇದನ್ನು ನಮ್ಮ ರಾಜಕೀಯ ನೇತಾಗಳು ಹಾಗೂ ಪಂಡಿತರು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ನಮ್ಮ ದೇಶದಲ್ಲಿ ರಾಜಕೀಯ ವಿಶ್ಲೇಷಣೆ ನಡೆಸುವ ತಥಾಕಥಿತ ವಿಶ್ಲೇಷಣೆಯ ಸಿದ್ಧಾಂತ ನಡೆಯುವುದಿಲ್ಲ, ಹಾಗಾಗಿ ಈ ತಂತ್ರದಲ್ಲಿ ಜೀವನ ನಡೆಸುವ ಸೆಫಾಲಜಿಸ್ಟ್ ಗಳು, ಭವಿಷ್ಯ ಹೇಳುವ ಜ್ಯೋತಿಷಿಗಳು ಎಲ್ಲ ಪಕ್ಕಕ್ಕೆ ಸರಿದಿದ್ದಾರೆ, ಒಂದು ರೀತಿಯಲ್ಲಿ ರಾಜಕೀಯ ವಿಶ್ಲೇಷಣೆ ನಡೆಸುವ ತಜ್ಞರಿಗಿಂತ ಜ್ಯೋತಿಷಿಗಳೇ ವಾಸಿ. ಇದನ್ನು ಈಚಿನ ಅನೇಕ ಚುನಾವಣಾ ಫಲಿತಾಂಶಗಳು ಸಾಬೀತು ಮಾಡಿವೆ. ಇದನ್ನು ನಮ್ಮ ಪಂಡಿತರು ಗಂಭೀರವಾಗಿ ಪರಿಗಣಿಸಿಲ್ಲ, ಈ ಬಗ್ಗೆ ಅಧ್ಯಯನವನ್ನೂ ಮಾಡುತ್ತಿಲ್ಲ.ನಮ್ಮಲ್ಲಿ ನೂರಾರು ವಿಶ್ವವಿದ್ಯಾನಿಲಯಗಳಿವೆ, ನೂರಾರು ರಾಜಕೀಯ ಅಧ್ಯಯನ ಕೇಂದ್ರಗಳಿವೆ, ಆದರೆ ಎಲ್ಲಿಯೂ ಚುನಾವಣೆಯ ಸಂದರ್ಭದಲ್ಲಿ ನಮ್ಮ ಜನ ಯೋಚಿಸುವ ರೀತಿ ಎಂಥದ್ದು, ಅವರು ಮತದಾನ ಮಾಡುವ ಮಾನದಂಡ ಏನು ಎಂಬ ಬಗ್ಗೆ ಯಾವ ಅಧ್ಯಯನವೂ ಆಗಿಲ್ಲ, ಆಗುತ್ತಿಲ್ಲ, ನಿಜಕ್ಕೂ ಇದು ರಾಜಕೀಯ ವಿಷಯದಲ್ಲಿ ಹೊಸ ಒಳ ನೋಟ ಕೊಡುವ ಸಂಗತಿಯಾಗುತ್ತದೆ. ನೋಡಿ, ಚುನಾವಣೆಯ ಸಂದರ್ಭದಲ್ಲಿ ಯಾವುದೇ ಪಕ್ಷ ಏನೇ ಕೊಡಲಿ, ತಮ್ಮ ಹಕ್ಕು ಎಂಬಂತೆ ಅದನ್ನು ಸ್ವೀಕರಿಸುವ ನಮ್ಮ ಜನ ಮತ ಹಾಕುವಾಗ ಮಾತ್ರ ಮೊದಲೇ ನಿರ್ಧಾರ ಮಾಡಿಕೊಂಡಿದ್ದ ವ್ಯಕ್ತಿಗೆ ಮಾತ್ರ. ಇಂಥ ಕಡೆ ಕೊಡುಗೆ ತೆಗೆದುಕೊಂಡು ಕೂಡ ಅವರಿಗೆ ಮತದಾನ ಮಾಡಿಲ್ಲ ಎಂಬ ಪ್ರಜ್ಞೆ ಕೂಡ ಅವರನ್ನು ಕಡುವುದಿಲ್ಲ, ಇಲ್ಲಿ ನಮ್ಮ ಸಂಪ್ರದಾಯ ಹೇಳುವ ಮಾತು ತಪ್ಪುವ ಅಪರಾಧ ಅವರನ್ನು ಬಾಧಿಸುವುದಿಲ್ಲ, ಬದಲಾಗಿ ಮೂರ್ಖ ರಜಕೀಯ ಪಕ್ಷಗಳು ತಾವು ಜನಕ್ಕೆ ಅದೂ ಇದು ಕೊಟ್ಟಿದ್ದೇವೆ ಹಾಗಾಗಿ ಇವರೆಲ್ಲರ ಮತ ತಮ್ಮದೇ ಎಂಬ ಭ್ರನೆಯಲ್ಲಿರುತ್ತಾರೆ, ಫಲಿತಾಂಶ ಬಂದಾಗ ತಾವು ಮೋಸ ಹೋಗಿದ್ದು ಪಕ್ಷಗಳಿಗೆ ಅರಿವಾಗುತ್ತದೆ. ಇಂಥ ಸಂದರ್ಭದಲ್ಲಿ ಪಕ್ಷಗಳ ಹತಾಶೇ ಕೂಡ ಹೊರ ಬರುಬರುವುದಿದೆ. ಕರ್ನಾಟಕದಲ್ಲಿ ಈಚೆಗೆ ಲೋಕಸಭೆ ಚುನಾವಣೆ ನಡೆದಾಗ ವಿಧಾನ ಸಭಾ ಚುನಾವಣೆಯಲ್ಲಿ ಉಚಿತಗಳ ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದ್ದ ಪಕ್ಷ ಇಲ್ಲಿಯೂ ಅದು ನಡೆಯುತ್ತದೆ ಎಂಬ ಭ್ರಮೆಯಲ್ಲಿ ಬೀಗುತ್ತಿತ್ತು, ಆದರೆ ಫಲಿತಾಂಶ ಬಂದಾಗ ನಿರಾಸೆ ಕಾದಿತ್ತು, ಆ ಪಕ್ಷದ ಅಭ್ಯರ್ಥಿಗಳು ಎಲ್ಲೆಲ್ಲಿ ಸೋತಿದ್ದಾರೋ ಆ ಪ್ರದೇಶದ ಅಭಿವೃದ್ಧಿಗೆ ನೆರವು ಕೊಡಲಾಗದೆಂಬ ಮಟ್ಟಕ್ಕೂ ಸರ್ಕಾರ ಹೋಗಬೇಕಾಯಿತು. ಉಚಿತ ಯೋಜನೆಗಳ ಘೋಷಣೆಯಿಂದ ಅಧಿಕಾರಕ್ಕೆ ಬರಬಹುದೆಂಬ ಭ್ರಮೆಯಲ್ಲಿ ಇದನ್ನೇ ಮಾದರಿಯಾಗಿ ಪರಿಗಣಿಸಿ ಕರ್ನಾಟಕ ಮಾದರಿ ಎಂದು ದೇಶದೆಲ್ಲೆಡೆ ಬಿಂಬಿಸಿ ಮತ ಸೆಳೆಯಲು ಮಾಡಿದ ಯತ್ನವೆಲ್ಲ ವಿಫಲವಾಗಿದೆ, ಬಿಜೆಪಿ ಹಿಂದುತ್ವದ ಕಾರ್ಡ್ ಬಳಸಿ ಗೆಲ್ಲುತ್ತದೆ ಎಂಬುದೂ ಸಾಕಷ್ಟು ಕಡೆ ಸುಳ್ಳಾಗಿದೆ. ಹಾಗಂತ ಅಭಿವೃದ್ಧಿಯೇ ಮತ ತರಬಲ್ಲದು ಎಂಬುದೂ ಸುಳ್ಳಾಗಿದ್ದಿದೆ, ರಸ್ತೆ, ಮನೆ, ನೀರು, ಮೂಲ ಸೌಕರ್ಯ ಇತ್ಯಾದಿಗಳನ್ನು ಶಕ್ತಿ ಮೀರಿ ಒದಗಿಸಿದ ಅಭ್ಯರ್ಥಿ ಕೂಡ ಸೋತಿದ್ದಿದೆ. ವೈಯಕ್ತಿಕ ವರ್ಚಸ್ಸು ಕೂಡ ಎಲ್ಲ ಬಾರಿ ನಡೆಯುವುದಿಲ್ಲ, ಆಡಳಿತ ವಿರೋಧಿ ನೀತಿಯಿಂದ ಜನ ಬದಲಾವಣೆ ಬಯಸಿ ಮತ ಹಾಕುತ್ತರೆಂಬುದೂ ಇಲ್ಲಿ ಸಂಪೂರ್ಣ ಸತ್ಯವಾಗಿ ಉಳಿದಿಲ್ಲ.
ಇನ್ನೊಂದು ಸಂಗತಿಯನ್ನು ಗಮನಿಸಬೇಕು. ಎಎಪಿಹಿಂದೆ ದೆಹಲಿ ಗದ್ದುಗೆ ಗೆದ್ದಾಗ ಅದು ಅದರ ಮೊದಲ ಚುನಾವಣೆ ಅಗಿತ್ತು, ಆಗ ತಾನೇ ಹುಟ್ಟಿತ್ತು. ಕಾಂಗ್ರೆಸ್ ಪಕ್ಷ ನೂರು ವರ್ಷಗಳನ್ನು ಕಂಡಿತ್ತು, ಸಾಕಷ್ಟು ಚುನಾವಣೆಗಳನ್ನು ಎದುರಿಸಿತ್ತು. ಆದರೆ ಎಎಪಿಮುಂದೆ ಅಂಗಾತ ಮಲಗಿತು, ಅನುಭವವಿದ್ದ ಬಿಜೆಪಿ ಕೂಡ ಗೆಲ್ಲ ಲಾಗಲಿಲ್ಲ, ಈ ಬಾರಿ ಅಚ್ಚರಿ ಎಂಬಂತೆ ಹಿಂದೆ ಎಎಪಿ ಗೆಲ್ಲಿಸಿದ್ದ ಜನ ಈ ಬಾರಿ ಆಘಾತವಾಗುವಂತೆ ಎಎಪಿಯನ್ನು ಸೋಲಿಸಿದ್ದಾರೆ. ಅಂದರೆಹಿಂದೆ ಗೆದ್ದಾಗಲೂ ಎಎಪಿಗೆ ಶಾಕ್ ಆಗಿತ್ತು, ಈಗ ಸೋತಾಗಲೂ ಅಷ್ಟೇ ಆಘಾತವಾಗಿದೆ, ನಮ್ಮದು ತುಂಬಾ ಹಳೆಯ ಪಕ್ಷ, ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ, ಸಿಕ್ಕಾಪಟ್ಟೆ ತ್ಯಾಗ ಮಾಡಿದ್ದೇವೆ ಎಂಬುದೆಲ್ಲ ಇಲ್ಲಿ ನಡೆಯುವುದಿಲ್ಲ, ಜನಕ್ಕೆ ಏನು ಬೇಕು, ಬಯಸುತ್ತಾರೆ ಎಂಬುದು ಯಾವಾಗಲೂ ಆಯಾ ಸಂದರ್ಭವನ್ನು ಅವಲಂಬಿಸಿರುತ್ತದೆ ಎಂದಷ್ಟೇ ಇದರಿಂದ ಹೇಳಬಹುದು. ಹಾಗಾಗಿ ನಮ್ಮ ದೇಶದ ಚುನಾವಣೆ ನಡೆಯುವಾಗಲೂ ಅದು ಹೊಸದೇ ಆಗಿರುತ್ತದೆ, ಹೊಸ ಅಗತ್ಯ. ಅನಿವಾರ್ಯತೆಯನ್ನೇ ಜನತೆ ಬಯಸುತ್ತಾರೆ ಅನ್ನಬಹುದು. ಹಾಗಾದರೆ ಇನ್ನೇನು ಎಂಬುದನ್ನು ರಾಜಕೀಯ ಪಂಡಿತರು ಅಧ್ಯಯನ ಮಾಡಬೇಕಿದೆ.
ಇವೆಲ್ಲದರ ಮಧ್ಯೆ ದೆಹಲಿ ಕೇವಲ ತನ್ನ ಸ್ವತ್ತು ಅಂದುಕೊಂಡು ಮಾತಾಡುತ್ತ, ನಮ್ಮನ್ನು ಇಲ್ಲಿನ ಚುನಾವಣೆಯಲ್ಲಿ ಸೋಲಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ ಅನ್ನುತ್ತಿದ್ದ ಎಎಪಿ ಪಕ್ಷದ ಮುಖಂಡ ಕೇಜ್ರಿವಾಲನ ಪಕ್ಷವಿರಲಿ, ಸ್ವತಃ ಆತನನ್ನೇ ಜನ ಸೋಲಿಸಿದ್ದಾರೆ, ಅಂದರೆ ನಾನು ಎನ್ನುವ ಅಹಂಕಾರ ಕೂಡ ಇಲ್ಲಿ ನಡೆಯುವುದಿಲ್ಲ. ಹಾಗಾದರೆ ಜನ ಬಯಸುವುದೇನು? ಇದೊಂದು ಕುತೂಹಲಕಾರಿ ಅಧ್ಯಯನ ವಿಷಯ ಎಂದು ನಮ್ಮ ರಾಜಕೀಯ ಪಂಡಿತರಿಗೆ ಇಷ್ಟು ಕಾಲ ಅನಿಸದಿರುವುದೇ ಅಚ್ಚರಿಯ ಸಂಗತಿ. ಇದೇ ತೋರಿಸುತ್ತದೆ, ಪಾಶ್ಚಾತ್ಯ ವಾದಗಳಿಂದ ನಾವು ಎಷ್ಟು ಪ್ರಭಾವಿತರಾಗಿದ್ದೇವೆ ಎಂಬುದನ್ನು ಅರಿಯಲು. ಈ ಎಲ್ಲ ಕಾರಣವನ್ನು ಎತ್ತಿ ತೋರಿಸುವ ಕೆಲಸವನ್ನು ಹಾಗೂ ನೇತಾಗಳಿಗೆ ದೊಡ್ಡ ಪಾಠವನ್ನು ಇದು ಕಲಿಸಿದೆ. ಇದರಿಂದ ಕಲಿಯಬೇಕಾದುದು ಬಹಳಷ್ಟಿದೆ. ನಮ್ಮ ರಾಜಕೀಯ ಶೈಲಿಯೇ ಬೇರೆ, ನಾವೇ ಬೇರೆ, ಇಂಥ ಜಾಗತಿಕ ಸಿದ್ಧಾಂತಗಳು ನಮ್ಮಲ್ಲಿ ನಡೆಯುವುದಿಲ್ಲ ಎಂಬ ಸ್ವಂತಿಕೆಯನ್ನು ಸ್ಥಾಪಿಸಲು ನಮ್ಮ ರಾಜಕೀಯ ಪಂಡಿತರಿಗೆ ಇದು ಸಕಾಲ. ಆದಷ್ಟು ಬೇಗ ಅವರು ಇದನ್ನು ಸಾಧಿಸಲಿ. ನಿಜ. ಹಿಂದೆ ಎಎಪಿ ಅಧಿಕಾರಕ್ಕೆ ಬರುವಾಗ ಅದು ರಾಜಕೀಯದಲ್ಲಿ ಆಳವಾಗಿ ಬೇರೂರಿದ್ದ ಭ್ರಷ್ಟಚಾರವನ್ನು ಸವಾಲಿಗೆ ಒಡ್ಡಿ ಅಧಿಕಾರಕ್ಕೆ ಬಂದಿತ್ತು, ದುರಂತವೆಂದರೆ ಅದೇ ಕೂಪದಲ್ಲಿ ಈಗ ಅದು ಕಾಲು ಜಾರಿ ಬಿದ್ದಿದೆ. ಬಿಜೆಪಿ ನಿಜಕ್ಕೂ ಇಷ್ಟು ಅಪೂರ್ವ ಎಂಬಂತೆ ಗೆದ್ದುದು ಹೇಗೆ? ಮೋದಿಯ ವರ್ಚಸ್ಸೇ, ರಾಮ ಮಂದಿರ, ಕುಂಭ ಮೇಳಗಳೇ ಎಂಬುದು ಕೂಡ ಸಿದ್ಧವಾಗಿಲ್ಲ, ಎಎಪಿಯಂತೆ ಬಿಜೆಪಿ, ಕಾಂಗ್ರೆಸ್ ಕೂಡ ಆಮಿಷ ಒಡ್ಡಿದ್ದವು. ಆಮಿಷಗಳ ಸ್ಪರ್ಧೆಯೇ ಅಲ್ಲಿ ನಡೆದಿತ್ತು, ಆದರೂ ಬಿಜೆಪಿ ಗೆದ್ದಿದ್ದು ಹೇಗೆ ಎಂಬುದಕ್ಕೆ ಯಾವುದೇ ಒಂದು ಕಾರಣ ಸಿಕ್ಕಿಲ್ಲ, ಇಂಥ ಸಂಗತಿಗಳು ನಮ್ಮ ರಾಜಕೀಯ ಪಂಡಿತರಿಗೆ ಅಧ್ಯಯನ ವಸ್ತುಗಳಾಗಬೇಕಿದೆ, ಇದರಿಂದ ನಮ್ಮ ಸಮಾಜದ ಇನ್ನೊಂದು ಆಯಾಮ ಬಿಚ್ಚಿಕೊಳ್ಳುತ್ತದೆ. ಇದು ಆಗುವಂತಾಗಲಿ.
Monday, 10 February 2025
ವೃಷಭಾವತಿಯ ಸುತ್ತು ಮುತ್ತ
ಹೌದು ೨೦೨೦ರಲ್ಲಿ ನಡೆಯಬೇಕಿದ್ದ ಬೆಂಗಳೂರು ಮಹಾನಗರಪಾಲಿಕೆಯ ಚುನಾವಣೆ ಕರೋನಾ ಮೊದಲಾದ ಕಾರಣಕ್ಕೆ ತಡವಾಗಿ ೨೦೨೫ರ ಏಪ್ರಿಲ್ ವೇಳೆಗೆ ನಡೆಯಲಿದೆ. ೧೮೬೨ರಲ್ಲಿ ಸೃಷ್ಟಿಯಾದ ಬೆಂಗಳೂರು ಗರಪಾಲಿಕೆ ಈಗ ಮಹಾನಗರಪಾಲಿಕೆಯಾಗಿ ಬೆಳೆದು ನಗರದ ಹತ್ತಾರು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಹಾಗೆಯೇ ಇಲ್ಲಿಯೇ ಹುಟ್ಟಿ ಜನರ ದನಗಳ ಎಲ್ಲ ಅಗತ್ಯವನ್ನು ಪೂರೈಸುತ್ತಿದ್ದ ವೃಷಭಾವತಿ ನದಿಯ ಸುವರ್ಣಯುಗ ಹಾಗೂ ಇಂದಿನ ಅವನತಿಗೂ ಸಾಕ್ಷಿಯಾಗಿದೆ. ದೆಹಲಿ ಚುನಾವಣೆ ಯಮುನೆಯ ಹೆಸರಲ್ಲಿ ನಡೆದುದಕ್ಕಿಂತ ಬೆಂಗಳೂರಿನ ವೃಷಭಾವತಿಯ ಹೆಸರಲ್ಲಿ ಬಿಬಿ ಎಂಪಿ ಚುನಾವಣೆ ನಡೆದರೆ ನಿಜಕ್ಕೂ ಅದು ಭಾರೀ ರೋಮಾಂಚಕವಾಗಿರುತ್ತದೆ, ಇದಕ್ಕೆ ಕಾರಣವಿಲ್ಲದಿಲ್ಲ, ಅದಕ್ಕೆ ಕಾಲ ಕೂಡಿಬರುತ್ತಿದೆ. ಇದಕ್ಕೆ ೧೯೪೯ರಲ್ಲಿ ಬೆಂಗಳೂರು ನಗರಪಾಲಿಕೆ ಎಂಬ ಹೆಸರು ಬಂದಿತು. ಚುನಾಯಿತ ನಾಯಕರಿಲ್ಲದ ಕಾರಣ೨೦೨೦ರಿಂದ ಸರ್ಕಾರದ ಅಧಿಕಾರಿಗಳು ಪಾಲಿಕೆಯನ್ನು ನಡೆಸುತ್ತಿದ್ದಾರೆ. ಒಟ್ಟೂ ೨೪೩ ಸ್ಥಾನಗಳ ಪಾಲಿಕೆ ಸದ್ಯ ಚುನಾಯಿತ ಸದಸ್ಯರಿಲ್ಲದೆ ಇದೆ. ಬರುವ ಏಪ್ರಿಲ್ ವೇಳೆಗೆ ನಡೆಯಲಿದೆ ಅನ್ನಲಾದ ಈ ಚುನಾವಣೆಗೆ ವೃಷಭಾವತಿ ಅದ್ಭುತ ವಿಷಯವಾಗಬಲ್ಲುದು. ಮುಂದಿನ ಚುನಾವಣೆಗೆ ಸೆಣೆಸಾಡಲು ಎಲ್ಲ ಪಕ್ಷಗಳಿಗೂ ಈ ವಿಷಯವೇ ಮುಖ್ಯವಾಗಬೇಕು. ಎಲ್ಲ ಪಕ್ಷಗಳೂ ವೃಷಭಾವತಿಯ ಉದ್ಧಾರದ ಸೂತ್ರ ಹಿಡಿದು ಜನರ ಬಳಿ ಮತ ಕೇಳುವಂತಾಗಬೇಕು. ಇಷ್ಟು ವರ್ಷ ಮಾಡಿದ ರಾಜಕೀಯ ಮೇಲಾಟ, ಕೆಸರೆರೆಚಾಟವೆಲ್ಲ ಸಾಕು, ಅದು ಪಾಲಿಕೆಯಾಗಲಿ, ರಾಜ್ಯ ಚುನಾವಣೆಯಾಗಲೀ ಇಂಥ ರಚನಾತ್ಮಕ ಕೆಲಸ ಚುನಾವಣೆಗಳ ಉದ್ದೇಶವಾಗಬೇಕು. ಅದರ ಆರಂಭ ನಮ್ಮ ವೃಷಭಾವತಿಯಿಂದ ಮೊದಲಾಗಲಿ.
ವೃಷಭಾವತಿ ಎಂಬ ನದಿಯೊಂದು ಬೆಂಗಳೂರಲ್ಲೇ ಹುಟ್ಟುತ್ತಿತ್ತು ಅನಂತರ ಅದು ಅಲ್ಲೇ ಸತ್ತು ಹೋಯಿತು ಎಂದು ರಾಜ್ಯದ ಬಹುತೇಕರಂತೆ ನಾನೂ ತಿಳಿದಿದ್ದೆ. ಆದರೆ ಅದು ಸತ್ತಿಲ್ಲ, ಇನ್ನೂ ಕೋಮಾದಲ್ಲಿದೆ, ಸರ್ಕಾರ ಮನಸ್ಸು ಮಾಡಿದರೆ ಅದಕ್ಕೆ ಜೀವ ತಂದು ಅಮರತ್ವವನ್ನು ಸರ್ಕಾರ ಪಡೆಯಬಹುದು, ಊಹಿಸಿಕೊಳ್ಳಿ ತುಲಾ ಸಂಕ್ರಮಣದ ದಿನ ತಲಕಾವೇರಿಯಲ್ಲಿನ ಸಂಭ್ರಮವನ್ನು. ಬೆಂಗಳೂರಲ್ಲಿ ಯಾವುದಾದರೂ ಒಂದು ಸಂದರ್ಭ ಕೊಟ್ಟರೆ? ಅದೊಂದು ದೊಡ್ಡ ಹಬ್ಬ ಆಗುವುದಾದರೆ? ಅಬ್ಬಾ! ಅಂದಹಾಗೆ ೨೦೧೭ರಲ್ಲಿ ವೇಷಭಾವತಿಯ ಮೂಲ ನಕ್ಷೆ ಇತ್ಯಾದಿಗಳ ಬಗ್ಗೆ ಐಐಎಸ್ ಸಿ ದೀರ್ಘ ವರದಿಯನ್ನು ಸರ್ಕಾರಕ್ಕೆ ಕೊಟ್ಟಿದೆ, ಅದೆಲ್ಲೋ ವಿಧಾನ ಸೌಧದಲ್ಲಿ ಧೂಳು ತಿನ್ನುತ್ತಾ ಬಿದ್ದಿರಬಹುದು. ಆದರೆ ವೃಷಭಾವತಿ ಸತ್ತಿಲ್ಲ ಕಣ್ರಿ, ಅದು ಕೋಮಾದಲ್ಲಿದೆ. ಅದರ ಮೂಲ ಇನ್ನೂ ಜೀವಂತವಾಗಿ ದೊಡ್ಡ ಬಸವನ ಪಾದದಡಿ ಇದೆ. ಅದು ಮುಂದೆ ಹರಿಯುವ ಸ್ಥಳವನ್ನು ಭಕ್ತಿ, ಶ್ರದ್ಧೆಗಳಿಂದ ಸಂಸದರಾಗಿದ್ದ ಅನಂತ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಒದಗಿಸುವ ಯೋಜನೆಯಾದ ಅದಮ್ಯ ಚೇತನ ಕಟ್ಟಡದ ಒಳಗೆ ‘ದಕ್ಷಿಣಗಂಗೆ’ ಎಂಬ ಹೆಸರಲ್ಲಿ ಕಾದಿಟ್ಟುಕೊಂಡಿದ್ದಾರೆ, ಅದು ಅಲ್ಲಿ ಎಂಥ ಶುದ್ಧ ರೂಪದಲ್ಲಿದೆ ಅಂತೀರಾ. ನಿಜಕ್ಕೂ ಗಂಗೋತ್ರಿಯ ಗಂಗೆಯಷ್ಟು ಶುದ್ಧ, ಆಗ ನಿಮಗೆ ಇಂದಿನ ªವೃಷಭಾವತಿ ಎಂದು ನಾವೆಲ್ಲ ತಿಳಿದ ಕೆಂಗೇರಿಯ ಮಹಾ ಜಲಪಾತದ ನೆನಪು ಕೊಚ್ಚಿಹೋಗುತ್ತದೆ. ಅಲ್ಲದೇ ದೊಡ್ಡ ಬಸವನ ಪಾದದಡಿ ವೃಷಭಾವತಿ ಉಗಮ ಕುರಿತ ಶಾಸನವೊಂದು ಈಗಲೂ ಸುಸ್ಥಿತಿಯಲ್ಲಿದೆ. ಆಸಕ್ತರು ಈಗಲೂ ಅದನ್ನು ಹೋಗಿ ನೋಡಬಹುದು, ತುಲಾ ಸಂಕ್ರಮಣದ ದಿನ ಕಾವೇರಿ ಉಗಮಿಸುವಂತೆ ವೃಷಭಾವತಿಯೂ ಒಂದು ದಿನ ಹುಟ್ಟುವ ಬಗ್ಗೆ ಜನಪದರಲ್ಲಿ ಪ್ರತೀತಿ ಇರಬಹುದು ಅಂಥ ದಿನವನ್ನು ಗುರುತಿಸಿ ಸರ್ಕಾರ ಹಬ್ಬ ಮಾಡಿದರೆ ಎಂಥ ವಿಶಿಷ್ಟ ಪುನರುತ್ಥಾನವಾಗುತ್ತದೆ ಅಲ್ವಾ? ಯಾವ ಸರ್ಕಾರ ಅಂಥ ಘನ ಕಾರ್ಯಕ್ಕೆ ಮುಂದಾಗುತ್ತದೆಯೋ ನೋಡೋಣ. ವೃಷಭಾವತಿಯ ಸಂಭ್ರಮದ ಬಗ್ಗೆ ಹಿರಿಯರಾದ ಡಿ.ವಿ.ಜಿ., ಮಾಸ್ತಿ ಮೊದಲಾದವರು ಸಾಕಷ್ಟು ಬರೆದಿದ್ದಾರೆ.ಅದಿರಲಿ, ಆದರೆ ಇದಕ್ಕೆ ಹೊಸ ರೂಪ ಕೊಡಲಾಗದು ಎಂದೇನೂ ಇಲ್ಲ, ಇದರ ಸಮಗ್ರ ನಕ್ಷೆ ಕುರಿತು ಐಐಎಸ್ ಸಿ ಆಗಲೇ ವರದಿ ನೀಡಿದೆ.
ಸರ್ಕಾರದಲ್ಲಿ, ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದಕ್ಕೆ ಪಾನಿ ಡಾಟ್ ಅರ್ಥ್ ಕೈ ಜೋಡಿಸಿತ್ತು. ಆದರೆ ಇದರಿಂದ ಯಾರಲ್ಲಿಯೂ ಯಾವ ಜಾಗೃತಿಯೂ ಹುಟ್ಟಲಿಲ್ಲ, ದುರಂತ. ಇಂಥ ವಿಷಯಗಳ ಬಗ್ಗೆ ಸರ್ಕಾರಗಳ, ನಮ್ಮ ನೇತಾಗಳ ಗಮನ ಏಕೆ ಬೀಳುವುದಿಲ್ಲ ಎಂಬುದೇ ಅಚ್ಚರಿ. ಸರ್ಕಾರಕ್ಕೆ ಇದನ್ನು ಆಗುಮಾಡಲು ಈಗಲೂ ಅವಕಾಶವಿದೆ, ನಿತ್ಯದ ರಾಜಕೀಯ ಏನಾದರೂ ಇರಲಿ, ಇಂಥ ಸಂಗತಿ ಮುಖ್ಯವಾಗಬೇಕು. ವೃಷಭಾವತಿ ಜೀವ ಪಡೆದರೆ ಅದು ಹೇಗೆ ಇರಬಹುದೆಂದು ಕೂಡ ಐಐ ಎಸ್ ಸಿ ನಕಾಸೆ ಕೊಟ್ಟಿದೆ. ಆ ವರದಿಯೇನಾದರೂ ಜಾರಿಆಗಿಬಿಟ್ಟರೆ ಬೆಂಗಳೂರು ವೆನಿಸ್, ಅಮೆರಿಕ, ಮೊದಲಾದ ನಗರಗಳ ನಡುವಿನ ನದಿ ವಾತಾವರಣ ಮೀರಿಸುವ ಸ್ಥಾನ ಪಡೆದು ಶಾಶ್ವತವಾಗುವುದಂತೂ ಖಚಿತ. ಆದರೆ ಇದಕ್ಕೆ ಬೇಕಾದ ಇಚ್ಛಾಶಕ್ತಿ ನಮ್ಮಲ್ಲಿ ಎಲ್ಲಿದೆ? ಮಾಡಿದರೆ ಈ ಸರ್ಕಾರವೇ ಮಾಡಬೇಕು, ಇಂದಿನ ನಮ್ಮ ಸಿಎಂ ಮನಸ್ಸು ಮಾಡಿದರೆ ಏನು ಬೇಕಾದರೂ ಇಂಥ ಕೆಲಸ ಮಾಡಬಲ್ಲರು. ಬೆಂಗಳೂರಿಗೆ ಗಾರ್ಡನ್ ಸಿಟಿ, ಲೇಕ್ ಸಿಟಿ ಇತ್ಯಾದಿ ಹೆಸರುಗಳು ಇರುವಂತೆಯೇ ವ್ಯಾಲಿ ಸಿಟಿಯೂ ಹೌದು. ಸದ್ಯ ವೃಷಭಾವತಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಐದು ಕಿಲೋ ಮೀಟರ್ ಹರಿಯುತ್ತದೆ. ೧೯೭೦ ರ ದಶಕದವರೆಗೆ ಅದು ಬೆಂಗಳೂರಿನ ಕುಡಿಯುವ ನೀರು, ಸ್ನಾನ ಜಾನುವಾರುಗಳ ಅಗತ್ಯ ಮೊದಲಾದವನ್ನು ಪೂರೈಸುತ್ತಿತ್ತು, ಇಂದು ಅದು ನಮ್ಮ ನವ ನಾಗರಿಕತೆಯ ಶಾಪವಾಗಿ ಪರಿವರ್ತಿತವಾಗಿದೆ, ಇದರ ಶಾಪ ವಿಮೋಚನೆ ಕೂಡ ಕಷ್ಟವಲ್ಲ - ಇಷ್ಟಾದರೆ ಬೆಂಗಳೂರಿನ ನೀರಿನ ಮೂಲ ಮತ್ತೆ ಜೀವ ಪಡೆದು ನಿಲ್ಲುತ್ತದೆ.
ಸರ್ಕಾರ ಮುಂದಾದರೆ. ಈ ನದಿ ಜೀವಂತವಾಗಿದ್ದಾಗ ಕೆಂಪಾಬುಧಿ, ಯಡಿಯೂರು, ಸದಾಶಿವ ನಗರ ಕೆರೆ ಮೊದಲಾದವುಗಳ ಜೀವ ನಾಡಿ ಆಗಿತ್ತು ಅನ್ನಲಾಗಿದೆ. ಇವೆಲ್ಲ ವೃಷಭಾವತಿಯೊಂದಿಗೆ ಪುನರುಜ್ಜೀವಗೊಂಡು, ವೃಷಭಾವತಿ ಸಂಕ್ರಮಣದ ದಿನ ಇಲ್ಲೆಲ್ಲ ಸಂಭ್ರಮದ ಹಬ್ಬ ನಡೆಯಬೇಕು. ನಮ್ಮ ಆಧುನಿಕ ಕಾಲದ ಈ ಜೀವನದಲ್ಲಿ ಇಂಥ ಹೊಸ ಹಬ್ಬಕ್ಕೆ ಮಹತ್ವ ಬರುತ್ತದೆ. ದೊಡ್ಡ ಬಸವನ ಬಳಿ ಹುಟ್ಟುತ್ತಿದ್ದ ಈ ನೀರು ಕೇವಲ ಮೂರು ಸೆಂ ಮೀ ಗಾತ್ರದ್ದು, ಮುಂದೆ ಇದರೊಂದಿಗೆ ಕತ್ರಿಗುಪ್ಪೆ ಮತ್ತು ಕೇತಮಾರನ ಹಳ್ಳಿಯ ಬಳಿ ತೊರೆಗಳು ಸೇರಿ ದೊಡ್ಡದಾಗಿ ಹರಿಯುತ್ತಿತ್ತು ಅನ್ನಲಾಗಿದೆ, ಎಲ್ರಿ ಇದೆಲ್ಲ ಈಗ? ವೃಷಭಾವತಿ ಮತ್ತು ಅದಕ್ಕೆ ಸೇರುತ್ತಿದ್ದ ತೊರೆಗಳು ಇಂದಿನ ಮಲ್ಲೇಶ್ವರದ ಪೈಪ್ ಲೈನ್ ಗಾಳಿ ಆಂಜನೇಯ ಗುಡಿ ಬಳಿ ಒಂದಾಗಿ ರಾಜ ರಾಜೇಶ್ವರಿ ನಗರದ ಕಡೆ ಹರಿದು ದಕ್ಷಿಣಾಭಿಮುಖ ಆಗುತ್ತಿದ್ದವು ಈಗ ಇದು ದೊಡ್ಡ ಮೋರಿ ರೂಪ ಪಡೆಯುವುದೇ ಇಲ್ಲಿ ಅಂದರೆ ಅಪರಾಧದ ಮೂಲ ಎಲ್ಲಿದೆ ಎಂದು ತಿಳಿಯುತ್ತದೆ. ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ೧೪೨೫ರಲ್ಲಿ ಕಟ್ಟಲಾಗಿತ್ತು, ಆಗ ಅಲ್ಲಿ ಇನ್ನೂ ವೃಷಭಾವತಿ ಮೈದುಂಬಿಕೊಂಡಿದ್ದಳು. ಗವಿಗಂಗಾಧರ, ಕಾಡು ಮಲ್ಲೇಶ್ವರ ದೇಗುಲಗಳು ಹುಟ್ಟಿದವು. ಈ ಜಾಗಗಳಲ್ಲಿ ಕೈಗಾರಿಕೆಗಳು ಬರತೊಡಗಿದಂತೆ ವೃಷಭಾವತಿಯ ಆಕಾರ ಕೆಡಲಾರಂಭಿಸಿತು. ಈಗ ಪಾಪ ನೋಡಿ ಆಕೆ ಹೇಗಾಗಿದ್ದಾಳೆ. ಅವಳಿಗೆ ಮೂಲರೂಪ ಕೊಡಲು ಯಾವ ಬ್ಯೂಟಿ ಆರ್ಲರ್ ಬೇಡ, ರಾಜಕೀಯ ಇಚ್ಛಾಶಕ್ತಿ ಸಾಕು, ಅದಾಗುವುದೇ?
ಬಸವನಗುಡಿಯಲ್ಲಿ ಹುಟ್ಟಿ ಮಲ್ಲೇಶ್ವರ ಕಡೆಗೆ ಹೋಗಿ ಯಶವಂತಪುರ ಸುತ್ತಿ, ಅಲ್ಲಿಂದ ವರ್ತುಲ ರಸ್ತೆಯ ಅಕ್ಕ ಪಕ್ಕದ ಎಲ್ಲ ಏರಿಯಾವನ್ನು ತೊಳೆದುಕೊಂಡು ಬಂದು ಗಾಳಿ ಆಂಜನೇಯನ ಬಳಿ ಬಂದು ರಾಜರಾಜೇಶ್ವರಿ ನಗರದ ಮೂಲಕ ಕೆಂಗೇರಿ ತಲುಪುವಷ್ಟರಲ್ಲಿ ಇಡೀ ಬೆಂಗಳೂರನ್ನು ತೊಳೆದು ಸ್ವಚ್ಛಮಾಡಿ ತಾನು ಮಲಿನವಾಗಿ ಕುರೂಪವಾಗುತ್ತದೆ, ಇದನ್ನೆಲ್ಲ ಸರಿಪಡಿಸಿ ವೃಷಭಾವತಿಗೆ ಮೂಲರೂಪ ಕೊಡುವ ಸಾಹಸಕ್ಕೆ ಯಾರು ಕೈಹಾಕುತ್ತಾರೆ? ರೀ ಆಗಲೇ ಕುಲಗೆಟ್ಟು ಹೋಗಿ ಕಪ್ಪುನಾಯಿಯಾದ ಈ ನದಿಯನ್ನು ಮತ್ತೆ ಬಿಳಿದು ಮಾಡಿ ಆಗುವುದೇನಿದೆ? ಎಲ್ಲರಿಗೂ ಆಗುವಷ್ಟು ಉಪಯೋಗ ವಾಗುವ ನೀರು ಅದರಲ್ಲಿಲ್ಲ ಅಂದಮೇಲೆ ಅದರ ಜಾಗ ಮೋರಿ ಅಗುವುದೇ ಸರಿ ಎಂಬ ವಾದವೂ ಇದೆ.
ವೃಷಭಾವತಿಯ ಕೊಡುಗೆ ಸಣ್ಣದಲ್ಲ, ಸುಮ್ಮನೇ ಈ ಲೆಕ್ಕ ನೋಡಿ - ೧೯೭೦ರ ದಶಕದವರೆಗೆ ಈ ಕಣಿವೆಯ ಪ್ರದೇಶದಲ್ಲಿ ೭೧ ಕೆರೆಗಳಿದ್ದು ೨೦೧೭ರ ವೇಳೆಗೆ ೩೫ಕ್ಕೆ ಇಳಿಯಿತು. ಇರುವ ಕೆರೆಗಳಲ್ಲೂ ಬಹುತೇಕ ಕೆರೆಗಳು ಕಸ ಸುರಿದು ತ್ಯಾಜ್ಯ ಹಾಕಲು ಜಾಗಗಳಾದವು. ಕೈಗಾರಿಕಾ ತ್ಯಾಜ್ಯಗಳನ್ನು ಸುಲಭವಾಗಿ ಎಸೆಯುವ ಜಾಗ ಎಂದರೆ ಇಂಥ ಕೆರೆಗಳೇ. ಇಷ್ಟಾದ ಮೇಲೆ ಇಂಥ ಕೆರೆ ಜಾಗ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗುತ್ತದೆ. ಸರ್ಕಾರಕ್ಕೂ ಈ ಹಾಳುಬಿದ್ದ ಜಾಗದಿಂದ ಒಂದಷ್ಟು ಆದಾಯ ಬರಯವ ಆಸೆಯಿಂದ ಅದರ ಕನ್ವರ್ಶನ್ ಮಾಡಿಕೊಡುತ್ತದೆ. ಇಲ್ಲಿಗೆ ಕೆರೆ ಪೂರ್ಣ ಕದ್ದಂತಾಯಿತು. ಹೀಗೆ ಕದ್ದುಹೋದ ಕೆರೆಗಳ ಸಂಖ್ಯೆ ಬೆಂಗಳೂರಲ್ಲಿ ೧೯೬೦ ರಿಂದ ೨೦೦೪ರವರೆಗೆ ಸುಮಾರು ೪೦೦ ಎಂಬ ಲೆಕ್ಕವಿದೆ. ಹೀಗೆ ಕೆರೆ ಕದಿಯುವ ಜನಕ್ಕೆ ಯಃಕಃಶ್ಚಿತ್ ಬತ್ತಿದ ವೃಷಭಾವತಿ ಕದಿಯುವುದು ಕಷ್ಟವಾ? ಆಯಿತು, ಅದು ಹರಿಯುವ ಜಾಗದ ಮೇಲೆ ಒಂದಿಷ್ಟು ಸ್ಲಾಬ್ ಹಾಕಿ ಮುಚ್ಚಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿದ್ದೂ ಆಯಿತು, ಇಲ್ಲಿಗೆ ವೃಷಭಾವತಿ ಸಂಪೂರ್ಣ ಸತ್ತಂತಾಯಿತು ಎಂದು ಜನರೆಲ್ಲ ತಿಳಿಯುವಂತಾಯಿತು. ಆದರೆ ಅದು ಕೋಮಾದಲ್ಲಿದೆ ಎಂಬುದು ಈಗ ಜನಕ್ಕೆ ಅರಿವಾಗಿದೆ, ಅವರೆಲ್ಲ ಸರ್ಕಾರದ ಕ್ರಮ ಏನು ಎಂಬುದನ್ನು ಕಾಯುತ್ತಿದ್ದಾರೆ. ಇಂಥ ಬೆಳವಣಿಗೆಯಿಂದ ಕೇವಲ ನೀರಿನ ಮೂಲ ಮಾತ್ರ ಹಾಳಾಗಿಲ್ಲ, ಬದಲಾಗಿ ಪರಿಸರ ವ್ಯವಸ್ಥೆ ಕೂಡ ಹಾಳಾಗಿದೆ. ಎಷ್ಟೊಂದು ಬಗೆಯ ಹಕ್ಕಿಗಳು ಬೆಂಗಳೂರಲ್ಲಿದ್ದವು ಈ ಮುಂಚೆ ನೋಡಿ, ವೃಷಭಾವತಿ ಸತ್ತ ಮೇಲೆ ಏನಾಯ್ತು ನೋಡಿ, ದುಃಖವಾಗುತ್ತದೆ. ಇಂಡಿಯನ್ ಬರ್ಡ್ಸ್ ಇನ್ ಇಂಡಿಯಾದ ೩ನೆಯ ಸಂಪುಟದಲ್ಲಿ ಇದರ ಸಮಗ್ರ ವಿವರಗಳಿವೆ. ಹಾಗೆ ನೋಡಿದರೆ ಬೆಂಗಳೂರಿನ ದುಃಸ್ಥಿತಿಗೆ ೧೯೭೦ರ ವೇಳೆಯ ಬೆಂಗಳೂರಿನ ರಾಜಕಾರಣಿಗಳು ಹಾಗೂ ದೂರದೃಷ್ಟಿ ಇಲ್ಲದ ಅಧಿಕಾರಿಗಳು ಕಾರಣ. ಅವರ ಬಿರ್ಲಕ್ಷ್ಯ ಇಂದಿನ ಕೆಟ್ಟ ಬೆಂಗಳೂರಿಗೆ ಕಾರಣವಾಗಿದೆ. ಅವರು ಯಾರಾದರೂ ಈಗ ಬದುಕಿದ್ದರೆ ಅವರನ್ನು ಸಾರ್ವಜನಿಕ ವೇದಿಕೆಗೆ ಕರೆದು ಜನ ಪ್ರಶ್ನಿಸಬೇಕಿದೆ. ಯಾಕೆ ಹೀಗಾಯಿತೆಂದು ತಿಳಿಯಬೇಕಿದೆ. ಯಾವುದಾದರೂ ಮಾಧ್ಯಮ ಈ ಕೆಲಸ ಮಾಡುವ ಅಗತ್ಯವಿದೆ. ವೃಷಭಾವತಿಗೆ ನೀರು ತರುತ್ತಿದ್ದ ನೀರು ಹರಿವಿನ ಪ್ರದೇಶ, ೨೦೨೧ರ ವೇಳೆಗೆ ಪಾತಾಳಕ್ಕೆ ಹೋಯಿತು. ಈ ಜಾಗವೆಲ್ಲ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗಿದೆ. ಇಂಥ ದುರವಸ್ಥೆಗೆ ಮೊದಲು ಕಾರಣವಾದವರು ಒಬ್ಬ ಅಧಿಕಾರಿ ಹಾಗೂ ಒಬ್ಬ ರಾಜಕಾರಣಿ ಆಗಿರುತ್ತಾರೆ. ಮುಂದೆ ಬಂದವರು ಅದನ್ನು ಪ್ರಸೀಡೆನ್ಸ್ ಎಂದು ಪರಿಗಣಿಸಿ ಮುಂದುವರೆಸಿಕೊಂಡು ಹೋಗಿ ಇಂದಿನ ಈ ಸ್ಥಿತಿಗೆ ಕಾರಣವಾಗಿದ್ದಾರೆ. ವೃಷಭಾವತಿ ಮರುಜನ್ಮ ಪಡೆಯಲಿ, ಬಿಡಲಿ. ಇಂಥ ದರಿದ್ರಗಳನ್ನು ಅವರು ಬದುಕಿದ್ದರೆ ಪತ್ತೆ ಹಚ್ಚಲೇಬೇಕು. ಮೊದಲು ಇದಾಗಲಿ. ಪುಣ್ಯ ಎಂದರೆ ವೃಷಭಾವತಿಯ ಕೊಳಚೆ ನೀರನ್ನು ಶುದ್ಧೀಕರಿಸುವ ಕೆಲಸ ಸ್ವಲ್ಪ ನಡೆದಿದೆ. ಹೀಗೆ ಮಾಡುವ ಕೆಲಸ ವೃಷಭಾವತಿಯ ಪುನರುಜ್ಜೀವನಕ್ಕೆ ಆಗುವುದಿಲ್ಲ, ನೀರಿನ ಬೇಡಿಕೆಯನ್ನು ಸ್ವಲ್ಪ ನಿವಾರಿಸುತ್ತದೆ ಅಷ್ಟೆ.
ಒಟ್ಟಿನಲ್ಲಿ ಶತಮಾನಗಳ ಸಕಲಜೀವೋಪಕಾರಿ ನದಿ ನಮ್ಮ ಸ್ವಾರ್ಥಕ್ಕೆ ಬಲಿಯಾಗಿ ಹೋಗಿದೆ, ಅದನ್ನು ಉದ್ಧರಿಸುವ ಪುಣ್ಯಾತ್ಮ ಎಲ್ಲಾದರೂ ಇದ್ದಾನಾ? ಇನ್ನೂ ಹುಟ್ಟಿ ಬರಬೇಕಿದೆಯಾ? ಗೊತ್ತಿಲ್ಲ. ಕಾಲವೇ ಉತ್ತರಿಸಬೇಕು. ಇದನ್ನು ಪುನರುಜ್ಜೀವಗೊಳಿಸುವ ಉದ್ದೇಶ ಇಟ್ಟುಕೊಂಡು ನಮ್ಮ ರಾಜ್ಯ ಹೋಗಲಿ, ಮಹಾನಗರ ಪಾಲಿಕೆಯ ಚುನಾವಣೆ ಎದುರಿಸುವ ತಾಕತ್ತು ಯಾವುದಾದರೂ ಪಕ್ಷಕ್ಕೆ ಇದೆಯೇ? ಹೋಗಲಿ, ನಮ್ಮ ಜನರಾದರೂ ಇದನ್ನು ಬಯಸುತ್ತಾರಾ? ಇವೆಲ್ಲ ಹೋಗಲಿ, ವೃಷಭಾವತಿ ಐತಿಹಾಸಿಕವಾಗಿ ಎಷ್ಟು ಮುಖ್ಯ ಅಂದರೆ ಈ ನೀರು ಸ್ವಚ್ಛವಾಗಿ ಹರಿಯುತ್ತಿದ್ದ ಕಾಲದಲ್ಲಿ ಬೆಂಗಳೂರಿಗೆ ಬಂದಿದ್ದ ಮಹಾತ್ಮ ಗಾಂಧಿಯವರು ಈಗಿನ ಜ್ಞಾನಭಾರತಿ ಆವರಣದಲ್ಲಿ ಅದರಲ್ಲಿ ಸ್ನಾನ ಮಾಡಿದ್ದರಂತೆ. ಈ ಕಾರಣಕ್ಕಾಗಿ ಆ ಜಾಗದಲ್ಲಿ ಗಾಂಧಿ ಭವನ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಗಾಂಧಿ ಭಜನೆ ಮಾಡುವ ರಾಜಕೀಯ ನೇತಾಗಳು ಈ ಕಾರಣಕ್ಕಾದರೂ ವೃಷಭಾವತಿಯ ಉದ್ಧಾರಕ್ಕೆ ಮುಂದಾಗಬೇಕಿದೆ.
ನಮ್ಮ ಜನ ಸ್ವಾರ್ಥ ಬಿಟ್ಟು ಒಮ್ಮೆಯಾದರೂ ಈ ಬಗ್ಗೆ ಯೋಚಿಸುವರಾ?ಬದುಕಿರುವಷ್ಟು ಕಾಲ ಕಾದು ನೋಡುವಾ.
Sunday, 2 February 2025
ನಕ್ಸಲರ ಶರಣಾಗತಿ ಕಹಾನಿ
ಏನೇ ಆಗಲಿ, ಆಯುಧಗಳನ್ನು ಬಿಟ್ಟು ಅಹಿಂಸಾ ಮಾರ್ಗಕ್ಕೆ ಅವರು ಬಂದರಲ್ಲ, ಅದೇ ಸರ್ಕಾರದ ಗೆಲುವು, ಜಯ ಸಾಧಿಸಲು ಸಾಮ ಭೇದ, ದಂಡ ಮೊದಲಾದ ಮಾರ್ಗಗಳು ನಮ್ಮಲ್ಲಿ ಮೊದಲಿಂದಲೂ ಇವೆ, ಇದು ಅಂಥ ಒಂದು ಮಾರ್ಗ. ಹೋರಾಟದಿಂದಲೇ ಎಲ್ಲವನ್ನೂ ಸಾಧಿಸಲು ಆಗದು ಎಂಬ ಅರಿವು ಈಗಲಾದರೂ ನಕ್ಸಲರಿಗೆ ಆಯ್ತಲ್ಲ, ಅದು ದೊಡ್ಡದು. ಅಹಿಂಸಾ ಮಾರ್ಗಕ್ಕೆ ಸಿಕ್ಕ ಜಯ ಇದು. ರಾಜ್ಯ ಸರ್ಕಾರ ನಕ್ಸಲರ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಕೇಂದ್ರ ಸರ್ಕಾರ ಇನ್ನೆರಡು ತಿಂಗಳಲ್ಲಿ ನಕ್ಸಲರ ಸಂಪೂರ್ಣ ನಿರ್ನಾಮಕ್ಕೆ ಪಣ ತೊಟ್ಟಿತ್ತು. ಅರಣ್ಯದಲ್ಲೇ ದಿನದೂಡುತ್ತ, ಒಣ ಆದರ್ಶದ ಹೆಸರಲ್ಲಿ ಊಟ ತಿಂಡಿಗೂ ಗತಿ ಇಲ್ಲದ ನಕ್ಸಲರು ಸರ್ಕಾರಗಳ ವಿರುದ್ಧ ಶಸಸ್ತ್ರ ಹೋರಾಟ ಮಾಡುತ್ತೇವೆಂದು ಹೋರಾಡುತ್ತ ಹೈರಾಣಾಗಿದ್ದರು. ಇಂದಲ್ಲ ನಾಳೆ ಯಾವ ಪ್ಯಾಕೇಜೂ ಇಲ್ಲದೆ ಅವರೆಲ್ಲ ನಾಗರಿಕ ಸಮಾಜಕ್ಕೆ ಹಿಂತಿರುತ್ತಿದ್ದರು, ಅನುಮಾನವಿಲ್ಲ. ಆದರೆ ಅದುವರೆಗೆ ಸಮಾಜ ಮತ್ತು ಸರ್ಕಾರಕ್ಕೆ ಆಗುತ್ತಿದ್ದ ಜೀವ, ಹಣಗಳ ನಷ್ಟವನ್ನು ಈ ಪ್ಯಾಕೇಜಿನ ಮೂಲಕ ಜಾಣ್ಮೆಯಿಂದ ಸರ್ಕಾರ ನಿಲ್ಲಿಸಿದೆ. ಒಂದು ರೀತಿಯಲ್ಲಿ ಇದು ಸ್ವಾಗತಾರ್ಹ ಕ್ರಮ.
ಈ ನೇರ ನಕ್ಸಲರು ಶರಣಾದರು - ಸರಿ ಆದರೆ ಇವರಿಗೆ ಪ್ರೇರಣೆ ಕೊಡುತ್ತಿದ್ದ ನಗರ ನಕ್ಸಲರ ಕತೆ ಏನು? ಅವರೆಲ್ಲ ವಿಚಾರವಾದಿಗಳು, ಚಿಂತಕರ ಹೆಸರಲ್ಲಿ ಎಲ್ಲ ಸೌಲಭ್ಯ ಪಡೆಯುತ್ತ ಜನರ ತಲೆ ಕೆಡಿಸುತ್ತಲೇ ಇದ್ದಾರೆ, ಇವರದೇನು ಕತೆ? ಅವರು ಶರಣಾದರು - ಶಸ್ತ್ರ ಕೆಳಗೆ ಇಟ್ಟರು. ಆದರೆ ಇವರು? ತಮ್ಮ ಕೆಲಸವನ್ನು ನಿರಾಳವಾಗಿ ಮುಂದುವರೆಸಿದ್ದಾರೆ, ಇವರ ಮೂಲ ಹೋಗದಿದ್ದಲ್ಲಿ ನಕ್ಸಲರ ಬೇರುಗಳು ಹಾಗೆಯೇ ಇರುತ್ತವೆ. ಸರ್ಕಾರ ಇವರನ್ನು ಕೂಡ ಇಲ್ಲವಾಗಿಸಬೇಕು. ಇಲ್ಲವಾದಲ್ಲಿ ಇವರು ಇರುವವರೆಗೂ ನಕ್ಸಲರು ಹೊಸದಾಗಿ ಹುಟ್ಟುತ್ತಲೇ ಇರುತ್ತಾರೆ. ಇಂಥವರನ್ನು ಪ್ಯಾಕೇಜು ಮೂಲಕ ಹೊರ ಸೆಳೆಯಲಾಗದು. ಇದು ಆಗುವವರೆಗೂ ಸಿನಿಮಾದಲ್ಲಿ ಕೊನೆಯಲ್ಲಿ ತೋರಿಸುವಂತೆ ’ದಿ ಎಂಡ್’ ಎಂದು ಹೇಳುವಂತಿಲ್ಲ, ಈ ಪ್ಯಾಕೇಜ್ ಕಂಡು ನಿರುದ್ಯೋಗಿಗಳು ತಾವೂ ನಕ್ಸಲರು ಎಂದು ಹೇಳಿಕೊಂಡು ವಾರದೊಪ್ಪತ್ತಿನಲ್ಲಿ ಶರಣಾಗಿ ಪ್ಯಾಕೇಜ್ ಪಡೆಯುವ ಸಾಧ್ಯತೆ ಇದೆ. ಏಕೆಂದರೆ ಸದ್ಯ ಸರ್ಕಾರದ ಬಳಿ ನಕ್ಸಲರ ಖಚಿತ ಗುರುತಿನ ಪಟ್ಟಿ ಲಭ್ಯವಿಲ್ಲ, ಆದ್ದರಿಂದ ಹೊಸ ನಕ್ಸಲರ ಸೃಷ್ಟಿಯ ಸಾಧ್ಯತೆ ಇಲ್ಲದಿಲ್ಲ.
ಅವರನ್ನು ಹತ್ತಿಕ್ಕುವ ಮಾರ್ಗ ಸರ್ಕಾರಕ್ಕೆ ತಿಳಿದಿಲ್ಲ ಎಂದಲ್ಲ, ಈಗ ಮಾಡಿದ ಕೆಲಸ ಅರ್ಧ ಮಾತ್ರ, ಇದು ಬೃಹತ್ತಾಗಿ ಬೆಳೆದ ಮರದ ಕೊಂಬೆಯನ್ನು ಮಾತ್ರ ಬೋಳಿಸಿದಂತೆ ಆಗಿದೆ. ಬೇರು ಇರುವವರೆಗೆ ಮರ ಸಂಪೂರ್ಣವಾಗಿ ಇಲ್ಲವಾಗುವುದಿಲ್ಲ. ಆ ಕೆಲಸ ಆದಲ್ಲಿ ನಕ್ಸಲರ ವಿರುದ್ಧ ಸರ್ಕಾರ ಸಂಪೂರ್ಣವಾಗಿ ಗೆದ್ದಂತೆ, ಆದಷ್ಟು ಬೇಗ ಅದಾಗಲಿ. ಇಷ್ಟೇ ನಾಗರಿಕರ ಆಶಯ.







