ನಮ್ಮ ದೇಶದಲ್ಲಿ ಎಲ್ಲರಿಗೂ ತಿಳಿದಂತೆ ಅಸಂಖ್ಯಾತ ಸಾಧಕರು ಸಂತರು ಆಗಿಹೋಗಿದ್ದಾರೆ. ನಮ್ಮ ನೆಲದ ಗುಣ ಇದು. ಕಾಲ ಕಾಲಕ್ಕೆ ಒಬ್ಬರಲ್ಲ ಒಬ್ಬರು ಸಂತರು ಕಾಣಿಸುತ್ತಲೇ ಇರುತ್ತಾರೆ. ಹನ್ನೊಂದು- ಹನ್ನೆರಡನೆಯ ಶತಮಾನದಲ್ಲಿ ಕಾಣಿಸಿದ ಮಹಾನ್ ಸಂತ ಬಸವಣ್ಣ. ಆ ಕಾಲದಲ್ಲಿ ಸಮಾಜಕ್ಕೆ ಯಾವುದನ್ನು ತಿಳಿಸಿ ತಿದ್ದಬೇಕಿತ್ತೋ ಆ ಕೆಲಸವನ್ನು ಅವರು ಮಾಡಿದರು. ಅವರ ಚಿಂತನೆಗಳು ಅಂದಿಗೆ, ಇಂದಿಗೆ ಮಾತ್ರವಲ್ಲ. ಮಾನವ ಸಮಾಜ ಇರುವವರೆಗೂ ಪ್ರಸ್ತುತವೇ ಆಗಿರುತ್ತದೆ. ಏಕೆಂದರೆ, ಸಮಾಜದಲ್ಲಿರಬಹುದಾದ ಹುಳುಕಿನ ಬಗ್ಗೆ ಅವರು ಹಾಗೆ ನಮ್ಮನ್ನು ಸದಾ ಎಚ್ಚರವಾಗಿರುವಂತೆ ಮಾಡುವ ಕಾರಣದಿಂದ.
ಬಸವಣ್ಣನವರು ಎಂದಲ್ಲ, ನಮ್ಮ ಸಮಾಜದಲ್ಲಿ ಮೂಡಿಬಂದ ಪ್ರತಿಯೊಬ್ಬ ಮಹಾತ್ಮರೂ ಹೀಗೆಯೇ, ಬುದ್ಧನಾದಿಯಾಗಿ ಎಲ್ಲ ಮಹನೀಯರೂ ಈ ಮಾತಿನಲ್ಲಿ ಬರುತ್ತಾರೆ. ನಮ್ಮ ಸಮಸ್ಯೆ ಏನೆಂದರೆ ನಾವು ಆಯಾ ಮಹಾತ್ಮರ ದಿನಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಅಂದು ಮಾತ್ರ ಅವರನ್ನು ಅವರ ಆದರ್ಶವನ್ನು ನೆನೆಯುವ ಕಾಟಾಚಾರದ ಕೆಲಸ ಮಾಡುತ್ತಿದ್ದೇವೆ, ಹೀಗೆ ಮಾಡಿ ಕೈ ತೊಳೆದುಕೊಳ್ಳುವುದನ್ನು ಪಾಶ್ಚಾತ್ಯರಿಂದ ಕಲಿತಿದ್ದೇವೆ. ಪಾಶ್ಚಾತ್ಯ ಸಮಾಜ-ಸಂಸ್ಕೃತಿ ನಮ್ಮಂತೆ ಅಲ್ಲ, ಅವರು ಅಪ್ಪ, ಅಮ್ಮ, ಅಕ್ಕ ತಂಗಿಯರಿಗೆ ಒಂದೊಂದು ದಿನವನ್ನು ಗುರುತಿಸಿ ಆಯಾ ದಿನ ಮಾತ್ರ ಅವರಿಗೆ ಕೃತಜ್ಞತೆ ಅರ್ಪಿಸಿ ನಾಳೆ ಇನ್ನೊಂದು ದಿನಕ್ಕೆ ಸಿದ್ಧರಾಗುತ್ತಾರೆ. ನಮಗೂ ಇದೇ ಚಾಳಿ ಬಂದುಬಿಟ್ಟಿದೆ. ಹೀಗಾಗಿ ಬುದ್ಧ ಪೂರ್ಣಿಮೆಯಂದು ಎಲ್ಲೆಲ್ಲೂ ಬುದ್ಧನ ಜಪ, ಆ ದಿನ ಬಸವಣ್ಣನ ನೆನಪೇ ಆಗುವುದಿಲ್ಲ. ಬಸವಣ್ಣನ ದಿನ ಶಂಕರ ರಾಮಾನುಜರ ಮಾತು ನೆನಪಾಗುವುದಿಲ್ಲ. ವಾಸ್ತವವಾಗಿ ನಮ್ಮ ಸಮಾಜ ಹಾಗೂ ಸಂಪ್ರದಾಯ ಹೀಗೆ ಇರಲಿಲ್ಲ ಎಂಬುದು ನಮ್ಮ ಗತವನ್ನು ನೋಡಿದರೆ ಅರಿವಾಗುತ್ತದೆ. ನಾವು ಬೆಳೆದುಬಂದ ರೀತಿಯನ್ನು ತಿಳಿದರೆ ಸಹಜವಾಗಿ ಅರ್ಥವಾಗುತ್ತದೆ.
ಆಧುನಿಕ ಪಾಶ್ಚಾತ್ಯ ಶಿಕ್ಷಣ ಪಡೆದ ಮೇಲೆ ನಾವು ಇಂಥ ಕೃತಕ ವಿಂಗಡಣೆ ಮಾಡಿಕೊಂಡು ಪರಸ್ಪರ ಕಚ್ಚಾಡುತ್ತಿದ್ದೇವೆ, ಸಲ್ಲದ ಗೊಂದಲ ಮಾಡಿಕೊಳ್ಳುತ್ತಿದ್ದೇವೆ, ಇದಕ್ಕೆ ಬಸವಣ್ಣನವರ ಜೀವನ ಮತ್ತು ಬೋಧನೆಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಬಸವಣ್ಣನವರು ಬಾಗೇವಾಡಿಯಲ್ಲಿ ಜನಿಸಿದರು, ಅವರ ತಂದೆ ತಾಯಿ ಯಾರು ಎಲ್ಲೆಲ್ಲಿ ಏನೇನು ಕೆಲಸ ಮಾಡಿದರು, ಅವರ ವಚನಗಳು ಏನು ಬೋಧಿಸುತ್ತವೆ ಎಂಬುದನ್ನೆಲ್ಲ ಒಂದೇ ರೀತಿಯಲ್ಲಿ ಉರು ಹೊಡೆದು ಹೇಳುತ್ತೇವೆ. ಅದು ಬದಲಾದರೆ ಅಪಾಯ ಎದುರಿಸುತ್ತೇವೆ, ಸಾಂಪ್ರದಾಯಿಕ ನಿಲುವು ಹೇಗಿದೆಯೋ ಅಷ್ಟನ್ನೇ ಅಂತೆಯೇ ಪುನರುತ್ಪತ್ತಿ ಆಗುತ್ತಿರಬೇಕೆಂದೂ ಅದರಲ್ಲಿ ವ್ಯತ್ಯಾಸವಾದರೆ ಸದರಿ ಭಾವನೆಗಳಿಗೆ ಅಪಚಾರ-ಅವಮಾನವೆಂದು ತಿಳಿದು ಅವಿವೇಕಿಗಳಂತೆ ವರ್ತಿಸುತ್ತೇವೆ. ಉದಾಹರಣೆಗೆ ವಚನ ಹಾಗೂ ಅವುಗಳ ವಿವರಣೆಯ ಬಗ್ಗೆ ಇತ್ತೀಚೆಗೆ ನಡೆದ ವಾಗ್ವಾದಗಳನ್ನು ಗಮನಿಸಿ ಹೇಳುವುದಾದರೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸಮಾಜ ಸಂಸ್ಕೃತಿಗಳ ಸ್ಥಳೀಯ ಅಧ್ಯಯನ ಪೀಠ ವಚನಗಳ ವಸ್ತುನಿಷ್ಠ ಅಧ್ಯಯನ, ಸಂಶೋಧನೆ ಕೈಗೊಂಡು ತಮ್ಮ ಅಧ್ಯಯನದ ಫಲಿತಗಳನ್ನು ಸಮಾಜದ ಮುಂದೆ ಚರ್ಚೆಗೆ ಇಟ್ಟಾಗ ಶೈಕ್ಷಣಿಕ ವಲಯ ಹಾಗೂ ಬಸವಣ್ಣನವರ ತತ್ವ ಪಾಲಕರು ಎಂದು ಹೇಳಿಕೊಳ್ಳುವ ಜನರು ಇನ್ನಿಲ್ಲದ ಗಲಭೆ ಎಬ್ಬಿಸಿ ಆ ಅಧ್ಯಯನ ಕೇಂದ್ರ ಮುಚ್ಚುವಂತೆ ಮಾಡಿ ಧನ್ಯತೆ ಸಾಧಿಸಿದೆವು ಅಂದುಕೊಂಡರು, ಆದರೆ ಸ್ವತಃ ಬಸವಣ್ಣನವರೇ ತಮ್ಮ ವಚನಗಳಲ್ಲಿ ಸುಳ್ಳು ನುಡಿಯಬಾರದು, ಸತ್ಯಕ್ಕೆ ಅಂಜಬಾರದು, ಜಂಗಮ ನಾನು ಯಾರಿಗೂ ಅಂಜುವವನಲ್ಲ ಅಂದಿರುವುದನ್ನು ಹಾಗೂ ಸ್ವತಃ ಅವರೇ ಅದುವರೆಗೆ ನಡೆದು ಬಂದಿದ್ದ ಸಂಪ್ರದಾಯ, ತಿಳಿವಳಿಕೆಯ ವಿರುದ್ಧ ನಿಂತು ಹೋರಾಡಿದರು ಎಂಬ ಸಂಗತಿಯನ್ನು ಮರೆಯುತ್ತಾರೆ. ಬಸವಣ್ಣನವರು ವಚನಗಳಲ್ಲಿ ಮುಕ್ತ ಚರ್ಚೆಗೆ ಅವಕಾಶ ಕೊಡುತ್ತಾರೆ, ಆದರೆ ಅವರ ಇಂದಿನ ಅನುಯಾಯಿಗಳು ಇದಕ್ಕೆ ಸಿದ್ಧರಿಲ್ಲ, ಬದಲಾಗಿ ಬಲಪ್ರಯೋಗಕ್ಕೆ ಮುಂದಾಗುತ್ತಾರೆ ಇದು ವಿಪರ್ಯಾಸ, ಬಸವಣ್ಣ ಎಂದಲ್ಲ, ಎಲ್ಲ ಮಹನೀಯರನ್ನೂ ನಾವು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತೇವೆ, ವೇದಿಕೆ ನೋಡಿ ಮಾತಾಡುತ್ತೇವೆ, ಎದುರಿಂದ ಚಪ್ಪಾಳೆ ಬಂದರೆ ಸಾರ್ಥಕ ಅಂದುಕೊಳ್ಳುತ್ತೇವೆ, ಆದರೆ ನಮ್ಮ ಸಂಪ್ರದಾಯ ನಮಗೆ ಇದನ್ನು ಕಲಿಸಿಲ್ಲ, ನಾವು ಇದನ್ನು ಹೊರಗಿನಿಂದ ಕಲಿತಿದ್ದೇವೆ.
ಇದು ಒಂದು ಸಂಗತಿ ಮತ್ತೊಂದು ವಿಚಾರ ಏನೆಂದರೆ ಬಸವಣ್ಣ ಹೇಳದಿರುವ ಮಾತನ್ನು ಅವರಿಗೆ ಅಂಟಿಸಿ ಸತ್ಯ ಶೋಧನೆ ಮಾಡದೇ ಸಂಭ್ರಮಿಸುವುದು. ನೋಡಿ- ಕಾಯಕವೇ ಕೈಲಾಸ ಎಂಬ ಮಾತು ನಮ್ಮ ಸಮಾಜದಲ್ಲಿ ಎಲ್ಲರಿಗೂ ಗೊತ್ತಿದೆ, ಇದನ್ನು ಹೇಳಿದವರು ಯಾರು ಅಂದರೆ ಎಲ್ಲರೂ ಬಸವಣ್ಣ ಅಂತಾರೆ ಅಂತಲೂ ಗೊತ್ತು. ಆದರೆ ಇದಕ್ಕೆ ಪ್ರತಿಯಾಗಿ ಸತ್ಯಶೋಧ ನಡೆಸಿ ಅಲ್ಲ ಈ ಮಾತು ಹೇಳಿದವರು ಆಯ್ದಕ್ಕಿ ಮಾರಯ್ಯ ಅಂದರೆ ಯಾರೂ ಒಪ್ಪಲು ಸಿದ್ಧರಿಲ್ಲ. ಸಾಲದ್ದಕ್ಕೆ ಹೀಗೆ ಹೇಳಿದವರು ಬಸವ ವಿರೋಧಿ ಎಂದು ಬಿಂಬಿಸಲಾಗುತ್ತದೆ. ಇಂಥ ಯತ್ನಗಳೇ ನಿಜವಾಗಿ ಬಸವ ತತ್ವ ವಿರೋಧಿ. ಈ ಗಾಗಲೇ ಉಲ್ಲೇಖಿಸಿದ ಅಧ್ಯಯನ ಕೇಂದ್ರ ಇಂಥ ಗಂಭೀರ ಸಂಗತಿಗಳನ್ನು ವಚನ ಹಾಗೂ ಅವುಗಳ ಸುತ್ತ ಹರಡಿಕೊಂಡಿರುವ ವಿಷಯಗಳ ಬಗ್ಗೆ ಗಂಭೀರವಾಗಿ ಶೋಧಿಸಿ ಕೊಟ್ಟ ಕುದುರೆಯನೇರಲರಿಯದೆ ಎಂಬ ಹೆಸರಲ್ಲಿ ಕೃತಿ ಪ್ರಕಟಿಸಿ ಸಾಮಾಜಿಕ ಚರ್ಚೆಗೆ ಬಿಟ್ಟರೆ ಆ ಕೇಂದ್ರದ ಶೋಧನೆಗಳ ಬಗ್ಗೆ ಗಂಭೀರ ಚರ್ಚೆಯ ಮೂಲಕ ಪ್ರತಿ ವಾದ ಮಾಡದೇ ಸಲ್ಲದ ಆರೋಪ ಹೊರೆಸಿ ಕೇಂದ್ರ ಬಾಗಿಲು ಹಾಕುವಂತೆ ಮಾಡಿದ್ದು ಬಸವಣ್ಣನವರ ತತ್ವಕ್ಕೆ ಮಾಡಿದ ಅನ್ಯಾಯವಲ್ಲದೇ ಇನ್ನೇನು?
ಇನ್ನೊಂದು ಸಂಗತಿ ಎಂದರೆ ಬಸವಣ್ಣನವರು ವೇದ ವಿರೋಧ ಆಗಿದ್ದರು ಎಂಬುದು, ಇದು ಕೂಡ ಸರಿಯಾದ ಮಾತಲ್ಲ, ಅವರು ವೇದ ಉಪನಿಷತ್ತುಗಳ ಅನೇಕಾನೇಕ ಮಾತುಗಳ ಧ್ವನಿಯನ್ನು ವಚನಗಳಲ್ಲಿ ಮರು ಪ್ರತಿಪಾದನೆ ಮಾಡುತ್ತಾರೆ ಎಂಬುದನ್ನು ಹಾಗೂ ಅವರು ಬ್ರಾಹ್ಮಣ ವಿರೋಧಿ ಕೂಡ ಅಲ್ಲ, ಎಂಬುದನ್ನು ಸದರಿ ಅಧ್ಯಯನ ಸಾಧಾರ ತೋರಿಸುವ ಯತ್ನ ಮಾಡಿದರೆ ಅದನ್ನೂ ಸೂಕ್ತ ಚರ್ಚೆಗೆ ತರದೇ ಬಾಯಿ ಮುಚ್ಚಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಯಿತು, ಇವೆಲ್ಲ ಯಾವ ರೀತಿಯಲ್ಲಿ ಬಸವಣ್ಣನವರನ್ನು ಗೌರವಿಸುವ ಕಾರ್ಯ ಎಂದು ಕೇಳುವ ಸ್ಥಿತಿಯಲ್ಲೂ ನಾವಿಲ್ಲ ಅಂದರೆ ಶತಮಾನಗಳ ಹಿಂದೆ ಬಸವಣ್ಣ ಪ್ರತಿಪಾದಿಸಲು ಹೆಣಗಾಡಿದ ಮುಕ್ತ ಸಮಾಜದ ಕಲ್ಪನೆಯಲ್ಲಿ ಎಳ್ಳಷ್ಟನ್ನೂ ನಾವು ಅರಿತಿಲ್ಲ ಎಂದೇ ಅರ್ಥ ಅನ್ನುವುದನ್ನು ಹಿಂಜರಿಕೆಯಲ್ಲೇ ಹೇಳಬೇಕಿದೆ. ನೋಡಿ, ಆಧುನಿಕ ಸಮಾಜದಲ್ಲಿ ಆಧುನಿಕ ಚಿಂತನೆಗಳ ಪ್ರಭಾವದಲ್ಲಿ ಆಧುನಿಕ ದೃಷ್ಟಿಯಿಂದ ಚರ್ಚಿಸಲಾದ ವಸವಣ್ಣ ಸಂಬಂಧಿ ಎಲ್ಲ ವಿಚಾರ ಹಾಗೂ ಚರ್ಚೆಗಳು ದಮನಕ್ಕೆ ಒಳಗಾಗಿವೆಯೇ ವಿನಾ ಆರೋಗ್ಯಕರ ಚರ್ಚೆಗೆ ಒಳಗಾಗಿಲ್ಲ. ಹಳೆಯ ಕರ್ಮಠ ರೀತಿ ನಿಲುವನ್ನೇ ಸ್ಥಾಪಿಸುವ ಕೆಲಸಗಳು ಇಲ್ಲೆಲ್ಲ ನಡೆದಿವೆ, ಈ ಸಾಲಿನಲ್ಲಿ ಈ ಕೇಂದ್ರದ ಮೇಲಿನ ದಬ್ಬಾಳಿಕೆ ಹೊಸದು ಅಷ್ಟೇ.
ಮಾಸ್ತಿಯವರು ರಚಿಸಿದ ಚೆನ್ನ ಬಸವನಾಯಕ ಕೃತಿ, ಸಂಶೋಧಕರಾದ ಎಂ ಎಂ ಕಲ್ಬುರ್ಗಿ ಅವರ ಮಾರ್ಗ, ಪಿ ವಿ ನಾರಾಯಣ ಅವರ ಧರ್ಮಕಾರಣ ಕೃತಿ, ಎಚ್ ಎಸ್ ಶಿವ ಪ್ರಕಾಶರ ಮಹಾಚೈತ್ರ ಕೃತಿ, ಬಂಜಗೆರೆ ಜಯಪ್ರಕಾಶ ಅವರ ಆನು ದೇವಾ ಹೊರಗಣವನು ಕೃತಿಗಳು ಎಬ್ಬಿಸಿದ ವಿವಾದಗಳನ್ನು ಗಮನಿಸಿ. ಇವೆಲ್ಲ ಸಂದರ್ಭಗಳಲ್ಲೂ ಮುಕ್ತ ಚರ್ಚೆಗೆ ಬದಲಾಗಿ ಹಳೆಯ ತಥಾ ಕಥಿತ ಮಾತಿಗೆ ಬದ್ಧರಾಗುವಂತೆ ಬಲಾತ್ಕರಿಸಲಾಯಿತು. ಇದು ನಿಜಕ್ಕೂ ಬಸವಣ್ಣನವರಿಗೂ ಅವರ ತತ್ವಕ್ಕೂ ಯಾವ ರೀತಿಯಲ್ಲಿ ಗೌರವ ತರುತ್ತದೆ ಎಂಬುದನ್ನು ಯಾರೂ ತಿಳಿಸಿ ಹೇಳಲಾರರು, ಬದಲಾಗಿ ನಾವು ಬಸವಣ್ಣವನರಿಗೆ ಏನು ಮಾಡಿದ್ದೇವೆ? ಅವರ ಪ್ರತಿಮೆಗಳನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸ್ಥಾಪಿಸುತ್ತೇವೆ, ಅದಕ್ಕೆ ಏನಾದರೂ ಧಕ್ಕೆ ಆದರೆ ದೊಡ್ಡ ದೊಂಬಿ ಎಬ್ಬಿಸುತ್ತೇವೆ, ದೇಶ ಮಾತ್ರವಲ್ಲದೇ ವಿದೇಶದಲ್ಲೂ ಅವರ ಪ್ರತಿಮೆ ಸ್ಥಾಪಿಸಿ ಬೀಗುತ್ತೇವೆ, ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಪುರುಷ ಅವರೇ ಎಂದು ಹಾಡಿ ಹೊಗಳುತ್ತೇವೆ. ಈ ಮಾತುಗಳಿಗೇನಾದರೂ ಬಸವಣ್ಣನವರು ಅಂದು ಕೇಳಿದಂತೆ ಅಯ್ಯಾ ಹೇಗಯ್ಯಾ ಎಂದು ಕೇಳಿದರೆ ನಿಮ್ಮ ಸಿರ ಹಾರುವುದು ಎಂದು ಧಮಕಿ ಕೊಡುತ್ತೇವೆ. ಅಲ್ವಾ? ನಿಜಕ್ಕೂ ನಮಗೆ ಬಸವಣ್ಣನವರು ಹಾಕಿಕೊಟ್ಟ ಮಾರ್ಗ ಇದೇನಾ? ಇದು ಪರಿಶೀಲಿಸುವ ಸಂದರ್ಭ ಇದು. ಹೀಗೆ ಮಾಡಿಕೊಂಡು ನಮ್ಮ ನೈಜ ಮಾರ್ಗ ಕಂಡುಕೊಂಡರೆ ಬಸವಣ್ಣನವರಿಗೆ ಸಲ್ಲಿಸುವ ನಮನ ಅದೇ. ನಾವೆಲ್ಲ ಇಷ್ಟು ಮಾಡಿದರೆ ಸಾಕು ಅನಿಸುತ್ತದೆ.
ನಮ್ಮ ಸಂಪ್ರದಾಯದ ಮುಖ್ಯ ಲಕ್ಷಣವೊಂದನ್ನು ಇಲ್ಲಿ ಗಮನಿಸಬೇಕು. ನಮ್ಮಲ್ಲಿ ಆಗಿಹೋದ ಎಲ್ಲ ಮಹನೀಯರೂ ಮನುಷ್ಯತ್ವದ ಸಮಾನತೆಯ ಸಾಧನೆಗೆ ಕರೆದೊಯ್ಯಲು ಶ್ರಮಿಸಿದವರೇ ವಿನಾ ಸಮಾಜದಲ್ಲಿ ಒಡಕು ಮಾಡಲು ಯತ್ನಿಸಿದವರಲ್ಲ. ಇವರ ಬೋಧನೆಗಳನ್ನು ಸೂಕ್ಮವಾಗಿ ಅರಗಿಸಿಕೊಳ್ಳದೆ, ಜಾತಿ ಸಮುದಾಯಗಳ ಹೆಸರಲ್ಲಿ ಶ್ರೇಷ್ಠತೆ ಮೆರೆಯುವುದು ಕೂಡ ನಮ್ಮ ಮೂರ್ಖತನ. ಉದಾಹರಣೆಗೆ, ಜಾತಿ ಅಸಮಾನತೆ ಎಂಬ ಮಾತುಗಳನ್ನು ಮುಂದಿಟ್ಟುಕೊಂಡ, ನಮ್ಮ ಸಮಾಜದಲ್ಲಿ ಅಸಮಾನತೆ ಇಲ್ಲವಾಗಿಸಲು, ಎಲ್ಲರಿಗೂ ಅಧ್ಯಾತ್ಮದ ಮಾರ್ಗ ತೋರಿಸಲು ಮೊದಲು ಶ್ರಮಿಸಿದವರು ಬಸವಣ್ಣ ಎಂದು ಕೂಡ ಆಗಾಗ ಹೇಳುವುದು ಸರಿಯಲ್ಲ. ಇಂದಿನ ಕಾಲದ ಗಣನೆಯಲ್ಲಿ ಬಸವಣ್ಣನವರಿಗಿಂತ ಮೊದಲು ಬಂದ ಶಂಕರ, ರಾಮಾನುಜ, ಮಧ್ವರು ಕೂಡ ಒಂದಲ್ಲ ಒಂದು ರೀತಿಯಲ್ಲಿ ಅಧ್ಯಾತ್ಮಿಕ ಸಾಧನೆ ಎಲ್ಲರಿಗೂ ಸಮಾನವೆಂದು ಪ್ರತಿಪಾದಿಸಿದ್ದಾರೆ. ಜೈನ ಮುನಿಗಳೂ ಈ ಕೆಲಸ ಮಾಡಿದ್ದಾರೆ. ಇವನ್ನೆಲ್ಲ ಸಮಗ್ರವಾಗಿ, ಶಾಂತ, ಪೂರ್ವಗ್ರಹ ತಹಿತ ಮನಸ್ಥಿತಿಯಲ್ಲಿ ಗ್ರಹಿಸಿದರೆ ಮಾತ್ರ ನಮ್ಮ ಸಂಪ್ರದಾಯ ಅಥವಾ ಪರಂಪರೆಯ ಶ್ರೇಷ್ಠತೆ ನಿಜವಾಗಿ ಅರಿವಾಗುತ್ತದೆ. ನಮ್ಮ ಪರಂಪರೆಯಲ್ಲಿನ ಬಸವಣ್ಣನಂಥ ಮಹನೀಯರ ಬೋಧನೆಯ ಸೂಕ್ಮಗಳನ್ನು ಅರ್ಥ ಮಾಡಿಕೊಳ್ಳಲು ಮುಂದಾದರೆ ಈ ದಿನ ಸಾರ್ಥಕ.

.jpg)




