Sunday, 31 December 2023

ಬರವಣಿಗೆಯ ಒಂದು ವ್ಯಂಗ್ಯ


ಅದು ೧೯೯೦ರ ದಶಕ. ಮೈಸೂರಿನಲ್ಲಿದ್ದ ವಯಸ್ಕರ ಶಿಕ್ಷಣ ಸಮಿತಿ ಪುಸ್ತಕ ಪ್ರಪಂಚ ಎಂಬ ನಿಯತಕಾಲಿಕವನ್ನು ಹೊರತರುತ್ತಿತ್ತು. ಅದು ಇಂಗ್ಲಿಷಿನ ಪ್ರಸಿದ್ಧ ರೀಡರ್ಸ

ಡೈಜೆಸ್ಟ್ ನ ಉಪಯುಕ್ತ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಿತ್ತು, ಕೆಲವೊಮ್ಮೆ ಸ್ವತಂತ್ರಲೇಖನಗಳನ್ನು ಕೂಡ. ನಾನು ಅನುವಾದ ಶುರುಮಾಡಿದ್ದು ಅಲ್ಲಿಂದ. ಒಂದು ಪ್ರಕಟಿತ ಪುಟಕ್ಕೆ ಆಗ ೨೦ರೂ ಸಿಗುತ್ತಿತ್ತು. ಅದು ಅಂದಿನ ಸರ್ಕಾರಿ ಲೆಕ್ಕ. ಅದು ಸಾಕಾಗುತ್ತಿತ್ತು. ಒಂದು ಕಡೆ ಓದುತ್ತ ಇನ್ನೊಂದೆಡೆ ಇಂಥ ಕಡೆ ಬರೆಯುತ್ತ, ಆಕಾಶವಾಣಿಯಲ್ಲಿ ಉಪನ್ಯಾಸಕೊಡುತ್ತ, ಬಂದ ಹಣದಲ್ಲಿ ಊಟ ವಸತಿಯ, ಓದಿನ ಅಗತ್ಯ ನಡೆಯುತ್ತಿತ್ತು. ಆಗ ಗುಜರಾತಿನ ನರ್ಮದಾ ಆಂದೋಲನ ಜೋರಾಗಿ ನಡೆಯುತ್ತಿತ್ತು. ಅದರ ಮುಂಚೂಣಿಯಲ್ಲಿದ್ದವರು ಮೇಧಾ ಪಾಟ್ಕರ್. ಅವರ ಬಗ್ಗೆ ಅಂದು ರೀಡಸ ಡೈಜೆಸ್ಟ್ ನಲ್ಲಿ ಬಂದಿದ್ದ ಲೇಖನವನ್ನು ನಾನು ಖುಷಿಯಿಂದ 'ಜನಜಾಗೃತಿಗೆ ಹಾಲೂಡಿಸುತ್ತಿರುವ ತಾಯಿ' ಎಂಬ ಲೇಖನ ಬರೆದಿದ್ದೆ.ಆದರೆ ಇಂದು ಅದೇ ಮೇಧಾ ಅವರ ಬಗ್ಗೆ ವಿಷಾದದಿಂದ / ಮುಗ್ಧಜನರ ಲೂಟಿ ಮಾಡುತ್ತಿರುವ ಚಳವಳಿಗಾರ್ತಿ ಎಂದು ಬರೆಯುತ್ತಿರುವೆ. ಜನ ಬದಲಾಗುತ್ತಾರೆ, ಸಹಜ, ಆದರೆ ಈ ಮಟ್ಟಿಗಾ? 

ನೆಹರೂ ಆಡಳಿತ ಕಾಲದಲ್ಲಿ ಭಾರತ ಹೊಸದಾಗಿ ಮೂಡತೊಡಗಿತ್ತು. ಅದರ ಮುಂದೆ ಇದ್ದ ಬಹುದೊಡ್ಡ ಸವಾಲು ಆಹಾರದ್ದು. ಇದಕ್ಕಾಗಿ ೬೦ ಮತ್ತು ೭೦ರದಶಕದಲ್ಲಿ ಆಹಾರಕ್ಕೆ ಹೆಚ್ಚು ಆದ್ಯತೆ ಕೊಡಲಾಯ್ತು, ಅದರ ಭಾಗವಾಗಿ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟುವ ಯೋಜನೆಗಳು ಜಾರಿಯಾದವು. ಗುಜರಾತಿನ ನರ್ಮದಾ ಯೋಜನೆ ಕೂಡ ಅದರಲ್ಲಿ ಒಂದಾಗಿತ್ತು. ಯೋಜನೆ ವಿರುದ್ಧ ನಡೆಸಿದ ಹೋರಾಟದಲ್ಲಿ ಜನ ಬೆಂಬಲದಿಂದ ಗೆದ್ದ ಮೇಧಾ ಅದನ್ನು ನಿಲ್ಲಿಸಿದರು. ದಶಕಗಳಕಾಲ ಈ ಯೋಜನೆ ನಿಂತಿತ್ತು.ನೂರಾರು ಹಳ್ಳಿಗಳ ಜನ ನೀರಿನ ಕೊರತೆಯಿಂದ ಕೃಷಿ ಬಿಟ್ಟು ಉದ್ಯೋಗವಿಲ್ಲದೆ ಸುತ್ತಮುತ್ತಲ ಊರು ತೊರೆಯತೊಡಗಿದ್ದರು. ನಿರುದ್ಯೋಗ ಎಲ್ಲೆಡೆ ತಾಂಡವವಾಡುತ್ತಿತ್ತು. ೨೦೧೭ರಲ್ಲಿ ಮೋದಿ ಈ ಯೋಜನೆಗೆ ಮತ್ತೆ ಚಾಲನೆನೀಡಿದರು. ಇದು ೨೦೨೨ ಸೆಪ್ಟೆಂಬರ್ ನಲ್ಲಿ ಮುಕ್ತಾಯವಾ ಯಿತು. ಈ ಅಣೆಕಟ್ಟಿನ ನೀರಿನಿಂದ ೧೯೯ ಪಟ್ಟಣಗಳ ಜನರಿಗೆ ಹಾಗೂ ೧೧,೭೭೭ ಹಳ್ಳಿಗಳಿಗೆ ನೀರು ದೊರೆಯುತ್ತಿದೆ. ಮಳೆಗಾಲದಲ್ಲಿ ೮೦,೦೦೦ ಹೆಕ್ಟೇರ್ ಭೂಮಿ ಪ್ರವಾಹಕ್ಕೆ ಸಿಲುಕಿ ೩೨೦,೦೦೦ ಜನ ಕಷ್ಟಪಡುತ್ತಿದ್ದರು. ಈ ಅಣೆಕಟ್ಟಿನಿಂದ ಈ ಎಲ್ಲ ಸಮಸ್ಯೆಗಳು ಬಗೆಹರಿದು ಜನರ ಆದಾಯ ಕೂಡ ಏರಿದೆ. ಮೊದಲು ಒಂದು ಬೆಳೆ ತೆಗೆಯುತ್ತಿದ್ದ ಜನ ಈಗ ಎರಡು ಬೆಳೆ ತೆಗೆಯುತ್ತಿದ್ದಾರೆ. ಅವರ ಆದಾಯ  ಎರಡೂವರೆಪಟ್ಟು ಏರಿದೆ. ಮೊದಲು ನಡೆದುಹೋಗುತ್ತಿದ್ದವರ ಬಳಿ ಸೈಕಲ್ ಬಂದಿದೆ.ಬೈಕ್ ಇದ್ದವರ ಬಳಿ ಕಾರು ಬಂದಿದೆ. ಇದು ಅಭಿವೃದ್ಧಿಯ ಮಾನದಂಡವೇ ಪ್ರಶ್ನೆ ಬೇರೆ. ಆದರೆ ಇದು ವಾಸ್ತವ ಎಂದು ಅಲ್ಲಿನ ಮಂತ್ರಿಯೊಬ್ಬರು ಹೇಳಿದ್ದಾರೆ.

ಮೊದಲು ಮೊದಲು ನರ್ಮದಾ ನದಿಗೆ ಪ್ರವಾಹ ಬಂದಾಗ೮೦.೦೦೦ ಹೆಕ್ಟೇರ್ ಭೂಮಿ ಕೊಚ್ಚಿಹೋಗುತ್ತಿತ್ತು.೩೨೦.೦೦ ಜನ ಸಂಕಷ್ಟ ಎದುರಿಸುತ್ತಿದ್ದರು. ಇದನ್ನು ಮುಂದಿಟ್ಟುಕೊAಡ ಹೋರಾಟಗಾರರು ಅಣೆಕಟ್ಟು ಕಟ್ಟಿದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ ಎಂದು ವಾದಿಸಿ ಜೋರಾಗಿ ಗದ್ದಲ ಎಬ್ಬಿಸಿದರು. ಈ ಹೋರಾಟಕ್ಕೆ ನಟ ಅಮೀರ್ ಖಾನ್, ಲೇಖಕಿ ಅರುಂಧತಿರಾಯ್ಮೊದಲಾದವರು ಬೆಂಬಲ ನೀಡಿದರು.೧೯೯೩ರಲ್ಲಿ ಅಣೆಕಟ್ಟು ನಿರ್ಮಾಣ ಕೆಲಸ ನಿಂತಿತು. ಮತ್ತೆ ಇದು ದಶಕಗಳ ನಂತರ ಚಾಲನೆ ಪಡೆದು ಇದೀಗ ಮುಕ್ತಾಯ ಕಂಡು ಮೊದಲಿದ್ದ ಸಮಸ್ಯೆಗಳಿಗೆ ಕೊನೆಹಾಡಿ ಸಾಕಷ್ಟು ಉಪಯೋಗಕ್ಕೆ ದಾರಿಮಾಡಿದೆ. ೧೧,೭೭೭ ಹಳ್ಳಿಗಳಿಗೆ, ೯೯ ಪಟ್ಟಣಗಳಿಗೆ ಕುಡಿಯುವ ನೀರು ಲಭಿಸಿದೆ. ಗುಜರಾತಿನಲ್ಲಿ ೮೦,೦೦೦ ಹೆಕ್ಟೇರ್, ರಾಜಸ್ಥಾನದಲ್ಲಿ ೨೪೦.೦೦೦ ಹೆಕ್ಟೇರ್ ಭೂಮಿ ನೀರಾವರಿ ಕಂಡಿದೆ. ಅಲ್ಲಿನ ರೈತರ ಆದಾಯ ಹೆಚ್ಚಿದೆ. ನರ್ಮದಾ ಆಂದೋಲನದಲ್ಲಿ ಹೋರಾಟ ಮಾಡಿದವರಿಗೆ ಈ ಆಣೆಕಟ್ಟಿನಲ್ಲಿ ಕೇವಲ ದೋಷಗಳೇ ಕಂಡಿದ್ದವು.ಆದರೆ ಈಗ ಹೋರಾಟಗಾರರ ಬಳಿ ಉತ್ತರವಿಲ್ಲ. ಅದಿರಲಿ. ದೊಡ್ಡ ದುರಂತ ಎಂದರೆ ಅಂದು ಜನಪರ ಹೋರಾಟಮಾಡಿ ಗೆದ್ದಿದ್ದ ಮೇಧಾ ಪಾಟ್ಕರ್ ವಿರುದ್ಧ ಇಂದು ಮೋಸ ಮಾಡಿದ ಪ್ರಕರಣ ದಾಖಲಾಗಿದೆ. ಅಂದು ನರ್ಮದಾ ಬಚಾವೋ ಆಂದೋಲನ ಮಾಡಿದ್ದ ಮೇಧಾ ಅನಂತರ ನರ್ಮದಾ ನವನಿರ್ಮಾಣ್ ಅಭಿಯಾನ ಆರಂಭಿಸಿ ಒಕ್ಕಲೆದ್ದ ಆದಿವಾಸಿಗಳಿಗೆ ಹಾಗೂ ನರ್ಮದಾ ಅಣೆಕಟ್ಟಿನಿಂದ ಪೀಡಿತರಾದವರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಂಸ್ಥೆ ಶುರು ಮಾಡಿದರು. ಇದು ಕಳೆದ ೧೪ ವರ್ಷಗಳಿಂದ ಸರಿಯಾದ ಲೆಕ್ಕಪತ್ರಕೊಟ್ಟಿಲ್ಲ ಹಾಗೂ ಇದರಲ್ಲಿ ೧೩.೫ ಕೋಟಿ ರೂಗಳ ವಂಚನೆ ಆಗಿದೆ ಎಂದು ೨೦೧೭ರಲ್ಲಿ

ಎಫ್ ಐ ಆರ್ ದಾಖಲಾಗಿದೆ. ಮೇಧಾ ಅವರು ಈ ನಡುವೆ ಮುಂಬೈ ಈಶಾನ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ನಿಂತು ಸೋತಿದ್ದಾರೆ. ಅದೇನೇ ಇರಲಿ ಅಂದು ಅಣೆಕಟ್ಟಿನ ವಿರುದ್ಧ ನಿಂತವರು ಇಂದು ಅದರ ಲಾಭವನ್ನು ಮನಗಂಡು ಹೊಗಳುತ್ತಿದ್ದಾರೆ. 

ನಮ್ಮ ದೇಶದಲ್ಲಿ ಎನ್ ಜಿಒ ನಡೆಸುವವರು ಅನೇಕ ಬಾರಿ ಪ್ರಾಣಿಗಳು, ನಿಸರ್ಗ, ಮಕ್ಕಳು ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ಸುಲಭವಾಗಿ ಹಣ ಮಾಡುವ ಮಾರ್ಗ ಕಂಡುಕೊಂಡಿದ್ದಾರೆ. ಇಂದು ನರ್ಮದಾ ಆಂದೋಲನ ಕೂಡ ಅಂಥ ಪ್ರಯತ್ನವಾಗಿತ್ತಾ ಎಂಬ ಗುಮಾನಿ ಕೂಡ ಮೂಡಿದೆ. ನಿಜವಾದ ಸೇವೆ ಮಾಡುವ ಎನ್ ಜಿ ಒಗಳು ಇದರಿಂದ ಮುಜುಗರ ಎದುರಿಸುವಂತಾಗಿದೆ. 

 


Monday, 18 December 2023

ಜಾತಿ ಗಣತಿಯ ಸುತ್ತ


ಭಾರತದಲ್ಲಿ ಸದ್ಯ ಎಲ್ಲ ಜಾತಿಗಳ ಗಣತಿಯ ಚರ್ಚೆ ಶುರುವಾಗಿದೆ. ಒಂದು ರೀತಿಯಲ್ಲಿ ಇದು ಸ್ವಾಗತಾರ್ಹ ಬೆಳವಣಿಗೆ. ಏಕೆಂದರೆ ನಮ್ಮ ದೇಶದಲ್ಲಿ ಮೊದಲ ಬಾರಿಗೆ ಜಾತಿ ಗಣತಿ ನಡೆದುದು ೧೯೩೧ರಲ್ಲಿ. ಏಕೆಂದರೆ ಆ ಗಣತಿಯನ್ನು ಆಧರಿಸಿಯೇ ಇಂದಿಗೂ ಮೀಸಲಾತಿಯನ್ನು ಕೊಡಲಾಗುತ್ತಿದೆ. ಐವತ್ತು ಅರುವತ್ತು ವರ್ಷಗಳ ಅಂತರದಲ್ಲಿ ಸಾಮಾಜಿಕ ಪರಿಸ್ಥಿತಿ ಎಲ್ಲ ಸಮುದಾಯಗಳಲ್ಲೂ ಬದಲಾಗಿರುತ್ತದೆ.ತ ಹಿಂದುಳಿದ ಸಮುದಾಯಗಳು ಎಂದು ಆ ಗಣತಿಯ ಆಧಾರದಲ್ಲಿ  ಇದುವರೆಗೆ ಅತ್ಯಂತ ಹಿಂದುಳಿದ ಸಮುದಾಯಗಳು ಎಂದು ಆ ಗಣತಿಯ ಆಧಾರದಲ್ಲಿ ನಂಬಲಾದ ಅನೇಕ ಸಮುದಾಯಗಳ ಪರಿಸ್ಥಿತಿ ಖಂಡಿತವಾಗಿಯೂ  ಆ ಕಾಲದಂತೆ ಉಳಿದಿಲ್ಲ. ಭಾರತ ರತ್ನ ಡಾ. ಅಂಬೇಡ್ಕರ್ ಅವರು ಹಿಂದುಳಿದ ಜಾತಿಗಳಿಗೆ ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಮುಂದೆ ಬರುವಂತೆ ಉತ್ತೇಜನ ನೀಡಲು ಮೀಸಲಾತಿ ಕೊಡಬೇಕು ಎಂದು ಹೇಳಿದ್ದರು. ಇದನ್ನು ಸ್ವಾತಂತ್ರೋತ್ತರ ಭಾರತದಲ್ಲಿ ರಾಜಕೀಯ ದಾಳವಾಗಿ ಮಾಡಿಕೊಂಡ ಪಕ್ಷಗಳು ಮೀಸಲಾತಿಯ ಮೂಲ ಉದ್ದೇಶವನ್ನು ಸ್ವಾರ್ಥಕ್ಕೆ ಬಳಸಿಕೊಂಡರು. ಮೀಸಲಾತಿಯನ್ನು ಸಮುದಾಯಗಳ ಅಭಿವೃದ್ಧಿಗೆ ಬಳಸುವ ಬದಲಯ ತಮ್ಮ ಮತಬ್ಯಾಂಕ್ ಆಗಿ ಮಾಡಿಕೊಂಡವು. ಹೀಗೆ ಮುಂದೆ ಇದು ಸಮಸ್ಯೆ ಆಗಬಹುದೆಂದು ಬಹುಶಃ ಮನಗಂಡಿದ್ದ ಅಂಬೇಡ್ಕರ್ ಅವರು ಮೀಸಲಾತಿ ಕೇವಲ ಹತ್ತು ವರ್ಷಕ್ಕೆ ಸೀಮಿತವಾಗಿರಲಿ ಎಂದು ಕೂಡ ಹೇಳಿದ್ದರು. ಆದರೆ ಅಧಿಕಾರ ವ್ಯಾಪ್ತಿಯ ಅವಕಾಶ ಬಳಸಿಕೊಂಡ ಪಕ್ಷಗಳು ಮೀಸಲಾತಿಯನ್ನು ಇಂದಿಗೂ ಹತ್ತು ಹತ್ತು ವರ್ಷ ಅನ್ನುತ್ತಾ ಮುಂದುವರೆಸುತ್ತಲೇ ಬಂದಿವೆ. ಈ ಆಸಕ್ತಿಯನ್ನು ಅವು ಮೀಸಲಾತಿಯ ಮೂಲ ಉದ್ದೇಶ ಈಡೇರಿಕೆಗೆ ಬಳಸಿದ್ದರೆ ಮಾನ್ಯ ಅಂಬೇಡ್ಕರ್ ಆಶಯದಂತೆ ಸಮಾಜ ಉದ್ಧಾರ ಆಗಿರುತ್ತಿತ್ತು. ಆದರೆ ಹಾಗಾಗಲಿಲ್ಲ. ಮತದ ಉದ್ದೇಶಕ್ಕೆ ಒಂದೇ ಸಮುದಾಯವನ್ನು ಅನೇಕವಾಗಿ ಒಡೆಯುವಲ್ಲಿ ಪಕ್ಷಗಳು ಯಶಸ್ವಿಯಾಗಿವೆ. ಆಧುನಿಕ ಸಮಾಜದಲ್ಲಿ ಹಿಂದಿನ ಕಾಲದ ಜಾತಿ ಪರಿಕಲ್ಪನೆ ಹಾಗೂ ಅದಕ್ಕೆ ಸಂಬಂಧಿಸಿದ ನಡವಳಿಕೆಗಳು ಸಾಕಷ್ಟು ಬದಲಾಗಿವೆ. 

ಯಾವುದೇ ಜಾತಿಗೆ ಸೇರಿದ ಜನ ಯಾವುದೇ ವೃತ್ತಿಯಲ್ಲಿ ತೊಡಗಬಹುದಾಗಿದೆ. ಯಾವುದೇ ಶಿಕ್ಷಣವನ್ನು ಪಡೆಯಬಹುದಾಗಿದೆ. ಆದರೆ ಇದರ ಲಾಭ ಎಲ್ಲ ಸಮುದಾಯಗಳಿಗೂ ದಕ್ಕಿದೆಯಾ ಎಂಬ ಪ್ರಶ್ನೆಗೆ ಉತ್ತರ ನಿರಾಶಾದಾಯಕವೇ ಆಗಿದೆ. ಇದಕ್ಕೆ ಕಾರಣ ಹಲವು. ಮುಖ್ಯ ಕಾರಣ ರಾಜಕೀಯ ಲಾಭ. ಸಮುದಾಯಗಳಿಗೆಮೀಸಲಾತಿಯ ಆಸೆ ತೋರಿಸುವ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಹತ್ತಾರು ಉದ್ಯೋಗಗಳು ಒಂದೇ ಸಮುದಾಯಕ್ಕೆ ಸೇರಿದ ಕೆಲವೊಮ್ಮೆ ಒಂದೇ ಕುಟುಂಬದ ಜನರಿಗೆ ದೊರೆಯುತ್ತದೆ. ಒಮ್ಮೆ ಮೀಸಲಾತಿಯ ಲಾಭ ಪಡೆದ ಕುಟುಂಬದ ಸದಸ್ಯರಿಗೆ ಮತ್ತೆ ಅಂಥ ಅವಕಾಶ ದೊರೆಯದಂತೆ ನಿಯಮ ಮಾಡಿದ್ದರೆ ಇಂದಿಗೆ ಮೀಸಲಾತಿಯ ಉದ್ದೇಶ ಅರ್ಧದಷ್ಟಾದರೂ ಈಡೇರಿರುತ್ತಿತ್ತು. ಕೆಲವು ಕುಟುಂಬಗಳಲ್ಲಿ ಮೀಸಲಾತಿಯ ಲಾಭ ಪಡೆದ ಎಲ್ಲ ಸದಸ್ಯರು ಎಲ್ಲ ಬಗೆಯ ಔದ್ಯೋಗಿಕ ಸೌಲಭ್ಯವನ್ನೂ ಪಡೆದುಕೊಂಡಿದ್ದರೆ ಅದೇ ಸಮುದಾಯದ ಕೆಲವು ಕುಟುಂಬಗಳಲ್ಲಿ ಯಾವುದೇ ಉದ್ಯೋಗ ಪಡೆದ ಯಾರೊಬ್ಬರೂ ಸಿಗುವುದಿಲ್ಲ. ಒಮ್ಮೆಯಾವುದೇ ಉದ್ಯೋಗ ಪಡೆದವರು ಆರ್ಥಿಕವಾಗಿ ಸಾಮಾಜಿಕವಾಗಿ ಪ್ರಬಲವಾಗಿ ಉಳಿದವರಿಗಿಂತ ಎಲ್ಲ ವಿಷಯಗಳಲ್ಲೂ ಸಮರ್ಥರಾಗುತ್ತಾರೆ. ಅದೇ ರೀತಿ ಹೀಗೆ ಪ್ರಬಲರಾದವರು ತಮ್ಮದೇ ಸಮುದಾಯದವರಿಗಿಂತ ಹೆಚ್ಚು ಶಕ್ತವಂತರಾಗಿ ಸಮುದಾಯದ ಮೇಲೆ ಹಿಡಿತಸಾಧಿಸುತ್ತಾರೆ. ಇದಕ್ಕೆ ಅಸಂಖ್ಯಾತ ನಿದರ್ಶನಗಳು ದೇಶಾದ್ಯಂತ ದೊರೆಯುತ್ತವೆ.ಸುಮ್ಮನೇ ನೋಡುವುದಾದರೆ ತಾವು ಹಿಂದುಳಿದವರು ದಲಿತರು ಎಂದು ಹೇಳಿಕೊಳ್ಳುವ ಮಾಯಾವತಿಯವರನ್ನು ಯಾವುದೇ ವಿಷಯದಲ್ಲಿ ಮುಂದುವರೆದವರೆಂದು ಕರೆಯಲಾದ ಯಾವುದೇ ಜಾತಿಯ ಅಥವಾ ಅವರದೇ ಜಾತಿಯ ವ್ಯಕ್ತಿ ಎದುರಿಸಲು ಸಾಧ್ಯವೇ?  ಇಂಥ ನಿದರ್ಶನಗಳು ಪ್ರತೀ ಊರಿನಲ್ಲಿ ದೊರೆಯುತ್ತವೆ. ಇವರು ಮೀಸಲಾತಿಯ ಲಾಭವನ್ನು ಸಾಕಷ್ಟು ಪಡೆದುಕೊಂಡವು. ಇವರ ಮಟ್ಟಕ್ಕೆ ಅಲ್ಲ, ಇವರ ಅಭಿವೃದ್ಧಿಯ ಕಾಲು ಭಾಗವನ್ನೂ ಆಯಾ ಸಮುದಾಯಗಳ ಅರ್ಧದಷ್ಟು ಜನ ತಲುಪಲು ಸಾಧ್ಯವಾಗಿಲ್ಲದಿರುವುದು ಕೂಡ ಬ್ರಿಟಿಷ್ ವಿದ್ವಾಂಸರ ಹೇಳಿಕೆಯಂತೆ ಕೆಲವು ಸಮುದಾಯಗಳು ಬಹಳಷ್ಟು ಸಮುದಾಯಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡವು ಎಂದು  ಸಾವ ಸಾಧಿಸಿಕೊಂಡು ಬಂದಿರುವಷ್ಟೇ ದೊಡ್ಡ ದುರಂತ. ಸದ್ಯ ಈಗಲಾದರೂ ಸಮುದಾಯಗಳ ನೈಜ ಜನಸಂಖ್ಯೆ ತಿಳಿಯುವ. ಅದರ ಆಧಾರದಲ್ಲಿ ಮೀಸಲಾತಿ ನಿಗದಿಪಡಿಸುವ 

 ಯತ್ನ ನಡೆಯುತ್ತಿದೆ. ಆದರೆ ಇದು ಕೆಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಉದಾಹರಣೆಗೆ ಈಗಾಗಲೇ ಇಂಥ ಗಣತಿ ನಡೆಸಿದ ಬಿಹಾರದಲ್ಲಿ ಹಾಗೂ ಕರ್ನಾಟಕದಲ್ಲಿ ಪಕ್ಷಗಳೊಳಗೆ ಅಸಮಾಧಾನ ಕಾಣಿಸಿಕೊಳ್ಳುತ್ತಿದೆ. ಆದರೆ ಇವೆಲ್ಲ ಪಕ್ಷಗಳಸಮಸ್ಯೆ ಆದ್ದರಿಂದ ಅದು ಹೇಗೋ ಬಗೆಹರಿಯಬಹುದು.  ಆದರೆ ಇಷ್ಟು ವರ್ಷಗಳಾದರೂ ಖಾಸಗಿ ಇರಲಿ, ಸರ್ಕಾರಿ ಉದ್ಯೋಗವನ್ನೂ ಕಾಣದ ಕೆಲವು ಸಮುದಾಯಗಳ ಕೆಲವು ಕುಟುಂಬಗಳಿವೆಯಲ್ಲ. ಈ ಸಮಸ್ಯೆಯನ್ನು ಇಲ್ಲವಾಗಿಸಲು ಪ್ರಸ್ತುತ ಗಣತಿ ನೆರವಾಗುತ್ತದೆಯೇ ಎಂಬುದು ಪ್ರಶ್ನೆ. ಮೀಸಲಾತಿಯ ಲಾಭವನ್ನು ಮನಗಂಡ ಪಕ್ಷಗಳು ಅದನ್ನು ಎಲ್ಲಿಗೆ ತಂದು ನಿಲ್ಲಿಸಿವೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಹೊಸದಾಗಿ ಶುರುವಾದ ಸಮಸ್ಯೆ ಅಂದರೆ ಈ ಗಣತಿ ಸಮುದಾಯಗಳನ್ನು ಮತ್ತಷ್ಟು ಒಡೆಯುತ್ತಿದೆ, ಮಾತ್ರವಲ್ಲ, ಆಯಾ ಸಮುದಾಯದಲ್ಲೇ ಬಿರುಕು ಮೂಡಿಸುತ್ತಿದೆ. ಇದು ಕಾಳಜಿಪಡಬೇಕಾದ ಸಂಗತಿ.

Sunday, 17 December 2023

ಕೃಷಿ ವಿನಾಶದತ್ತ ದೇಶ


ನೋಡುತ್ತಿದ್ದರೆ ಭಯವಾಗುತ್ತದೆ. ಕಳೆದ ವರ್ಷ ನಮ್ಮ ದೇಶದಲ್ಲಿ 2.27 ಲಕ್ಷ ಹೆಕ್ಟೇರ್ ವ್ಯಯಸಾಯ ಜಮೀನು ಬೇಸಗೆ ಬೆಳೆಯಿಂದ ದೂರವಾಗಿದೆ. ಪ್ರತಿವರ್ಷ ಹೆಚ್ಚೂ ಕಡಿಮೆ ಇಷ್ಟು ಪ್ರಮಾಣದ ಭೂಮಿ ವ್ಯಯಸಾಯ ದಿಂದ ದೂರವಾಗುತ್ತಿದೆಯಂತೆ. ಹೀಗಾದರೆ ಮುಂದೊಂದು ದಿನ ತಿನ್ನಲು ಮಣ್ಣು ಕೂಡ ಸಿಗುವುದಿಲ್ಲ. ವ್ಯಯಸಾಯ ಭೂಮಿ ಕಡಿಮೆಯಾಗಲು ಹಲವಾರು ಕಾರಣಗಳಿವೆ. ಕಾಲಕಾಲಕ್ಕೆ ಸರಿಯಾಗಿ ಮಳೆಯಾಗದೇ ಕೈಕೊಡುವುದು, ಲಾಭದ ದುರಾಸೆಯಿಂದ ಯಾವುದೋ ಹವಾಗುಣಕ್ಕೆ ಸರಿಹೋಗುವ ಬೆಳೆಯನ್ನು ಸಾಲಸೋಲ ಮಾಡಿ ಇನ್ನೆಲ್ಲೋ ಬೆಳೆದು ಕೃಷಿ ಉಪಯೋಗವಿಲ್ಲ ಎಂದು ಬಗೆದ ರೈತ ತನ್ನ ಜಮೀನು ಹಾಳುಬಿಡುವುದು ಅಥವಾ ಅನ್ಯ ಉದ್ದೇಶಕ್ಕೆ ಬಳಸುವುದು, ವಾಣಿಜ್ಯ, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತುಂಬ ಲಾಭವಿದೆ ಎಂದು ಬಗೆದು ಭೂಮಿಯನ್ನು ಮಾರುವುದು ಇತ್ಯಾದಿ. ಕರ್ನಾಟಕದ ವಿಧಾನಸಭೆಯಲ್ಲಿ ನಿನ್ನೆ ಬಯಲುಸೀಮೆ ಪ್ರದೇಶದಲ್ಲಿ ಅಡಕೆ ಬೆಳೆಗೆ ಪ್ರೋತ್ಸಾಹ ಕೊಡಬೇಕು ಎಂದು ಕೆಲವು ಶಾಸಕರು ಒತ್ತಾಯಮಾಡಿದ್ದಾರೆ. ಆದರೆ ಇದು ನೈಸರ್ಗಿಕವಾಗಿ ಸಾಧುವಲ್ಲ ಎಂಬುದು ಅವರಿಗೆ ತಿಳಿದಿಲ್ಲ. ಅಡಕೆ ಒಂದು ವಾಣಿಜ್ಯ ಬೆಳೆ ಅದರಿಂದ ಲಾಭವಾದರೆ ಆಗಲಿ ಎಂಬುದು ಸರಿ. ಆದರೆ ಅಡಕೆಗೆ ನಿರ್ದಿಷ್ಟ ರೀತಿಯ ವಾತಾವರಣದ ಅಗತ್ಯವಿದೆ, ಹವಾಗುಣದ ಅಗತ್ಯವಿದೆ. ಇವೆಲ್ಲ ಸರ್ಕಾರದ ಹಿಡಿತದಲ್ಲಿ ಇಲ್ಲ.ಮಲೆನಾಡು ಮತ್ತು ಕರಾವಳಿ ಭೂ ಪ್ರದೇಶದ ಹವಾಗುಣ ಅಡಕೆ ಬೆಳೆಗೆ ಹೇಳಿ ಮಾಡಿಸಿದ್ದು. ಬಯಲು ಸೀಮೆಯಲ್ಲಿ ಹತ್ತಿ ಒಂದು ಪ್ರಮುಖ ವಾಣಿಜ್ಯ ಬೆಳೆ. ಅದರ ಲಾಭ ಪಡೆಯುವ ಉದ್ದೇಶದಿಂದ ಮಳೆ ಹೆಚ್ಚು ಬೀಳುವ ಕರಾವಳಿ, ಮಲೆನಾಡು ಜನ ಹತ್ತಿ ಬೆಳೆಯಲು ಮುಂದಾದರೆ ಅದು ಕೃಷಿ ಮೂರ್ಖತನ. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಯಾವ ಪ್ರದೇಶಕ್ಕೆ ಯಾವ ಬೆಳೆ ಸೂಕ್ತ ಎಂಬುದನ್ನು ಜನ ಅನುಭವದಿಂದ ಕಂಡುಕೊಂಡಿದ್ದಾರೆ. ನಿದರ್ಶನಕ್ಕೆ ನೋಡುವುದಾದರೆ ತುಮಕೂರಿನಂಥ ಕಡಿಮೆ ನೀರು ಇರುವ, ಮಳೆ ಕಡಿಮೆ ಬೀಳುವ ಪ್ರದೇಶದಲ್ಲಿ ಯಾವುದೇ ಸಿರಿಧಾನ್ಯ ಬೆಳೆ ಹೇಳಿ ಮಾಡಿಸಿದ್ದು. ಅದನ್ನು ಬಿಟ್ಟು ನಾನೂ ರೈತ. ನನ್ನಭೂಮಿಯಲ್ಲಿ ಇಷ್ಟಬಂದ ಬೆಳೆ ಹಾಕುತ್ತೇನೆ ಅನ್ನಬಹುದು, ಸಾಲ ಮಾಡಿ ಕಷ್ಟಪಟ್ಟು ಕಬ್ಬು, ಬತ್ತ, ಅಡಕೆಗಳನ್ನು ಹಾಕಬಹುದು. ಆದರೆ ಆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ರೈತ ಕಂಗಾಲಾಗುವುದು ಗ್ಯಾರಂಟಿ. ಐದಾರು ವರ್ಷಗಳ ಹಿಂದೆ ಸಾಲಬಾಧೆ ತಾಳಲಾರದೇ ರೈತರ ಆತ್ಮಹತ್ಯೆ ಹೆಚ್ಚಿದಾಗ ನಾನು ತುಮಕೂರು ವಿಶ್ವವಿದ್ಯಾನಿಲಯದ ವತಿಯಿಂದ  ಈ ಬಗ್ಗೆ ಅಧ್ಯಯನ ಕೈಗೊಂಡಾಗ ಮಂಡ್ಯ ಮತ್ತು ತುಮಕೂರುಗಳಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದ್ದು ಅಂಥ ರೈತರು ಸಾಂಪ್ರದಾಯಿಕ ಮಾರ್ಗಬಿಟ್ಟು ಕೃಷಿಯಲ್ಲಿ ಆ ಪ್ರದೇಶಕ್ಕೆ ಒಗ್ಗದ ಪ್ರಯೋಗ ಮಾಡುವ ಯತ್ನಕ್ಕೆ ಕೈ ಹಾಕಿದ್ದವರೆಂದೂ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿಕೊಂಡಿದ್ದ ಒಂದೇ ಒಂದು ರೈತ ಕುಟುಂಬದಲ್ಲೂ ಸಾಲಬಾಧೆಯ ಆತ್ಮಹತ್ಯೆ ನಡೆದಿಲ್ಲ ಎಂದೂ ತಿಳಿದುಬಂದಿತ್ತು. ಅಷ್ಟಾಗಿಯೂ ಅಂಥ ಕಡೆ ಆತ್ಮ ಹತ್ಯೆ ಆಗಿದ್ದರೆ ಅದು ಅನ್ಯ ಕಾರಣಕ್ಕೇ ವಿನಾ ಕೃಷಿ ಸಾಲದಿಂದ ಅಲ್ಲ ಎಂದೂ ತಿಳಿದುಬಂದಿತ್ತು. ಅಂದರೆ ರೈತರು ಹವಾಮಾನ. ಪ್ರಕೃತಿಯನ್ನು ಎದುರು ಹಾಕಿಕೊಂಡು ಕೃಷಿ ಮಾಡಲು ಸಾಧ್ಯವಿಲ್ಲ, ಹಾಗೂ ಸರಿಯಾದ ಕೃಷಿ ಕ್ರಮದಿಂದ ನಷ್ಟವೂ ಇಲ್ಲ ಎಂದರ್ಥ. ಕೃಷಿ ಇರಲಿ, ಏನೇ ಇರಲಿ, ಪ್ರಕೃತಿಗೆ ಅನುಗುಣವಾಗಿದ್ದರೆ ಮನುಷ್ಯನಿಗೆ ಹಾನಿ ಇಲ್ಲ. ಲಾಭಕ್ಕೋ ಇನ್ಯಾವುದೋ ದುರಾಸೆಗೋ ಮತ್ತೇನೋ ಮಾಡಲು ಮುಂದಾದರೆ ವಿನಾಶ ಖಚಿತ. ಕೃಷಿ ನಾಶ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಸಂಗತಿಯಲ್ಲ, ಅದು ನಾಶವಾದರೆ ದೇಶವೇ ನಾಶವಾಗುತ್ತದೆ. ಅದು ಅನುಭವದ ಮಾತು. ಹೀಗಾಗಿಯೇ ಕುಮಾರವ್ಯಾಸ ಕೃಷಿ ವಿಹೀನ ದೇಶ ಸರ್ವನಾಶ ಕಾಣುತ್ತದೆ ಎಂದು ಹೇಳಿದ್ದಾನೆ.ಬೇಕಿದ್ದರೆ ನೀ ವೇ ಅಧ್ಯಯನ ಮಾಡಿ ನೋಡಿ ಜಗತ್ತಿನಲ್ಲಿ ಎಲ್ಲೆಲ್ಲಿ ಕೃಷಿ ಸಮೃದ್ಧವಾಗಿದೆಯೋ ಅಲ್ಲೆಲ್ಲ ದೇಶ ಸಂಪತ್ತು ಮಾತ್ರವಲ್ಲ, ಸಾಂಸ್ಕøತಿಕ ಸಂಪತ್ತು ಕೂಡ ಹೇರಳವಾಗಿರುತ್ತದೆ. ಕೃಷಿ ನಾಶವಾದಂತೆಲ್ಲ ದೇಶವೂ ಮಧ್ಯಪ್ರಾಚ್ಯ ದೇಶಗಂತೆ ಮರಳಿನಿಂದ ತುಂಬಿ ಎಲ್ಲ ದೃಷ್ಟಿಯಿಂದಲೂ ಹಾಳಾಗುತ್ತದೆ. 

ನಮ್ಮ ದೇಶದ ಎಲ್ಲ ರಾಜ್ಯಗಳಲ್ಲೂ ಕೃಷಿ ಇಲಾಖೆಗಳಿದ್ದು ಆಯಾ ಪ್ರದೇಶದ ಹವಾಮಾನಕ್ಕೆ ಒಗ್ಗುವ ಬೆಳೆಗೆ ಅವು ಉತ್ತೇಜನ ಕೊಡಬೇಕು. ಆದರೆ ಇವು ಹೆಚ್ಚೆಂದರೆ ಕಾಟಾಚಾರಕ್ಕೆ ಮಳೆ ಯಾವಾಗ ಬೀಳುತ್ತದೆ ಎಂಬ ಅಂದಾಜಿನ ಸುದ್ದಿ ಕೊಟ್ಟು ತಮ್ಮ ಕೆಲಸ ಇಷ್ಟೇ, ಹೆಚ್ಚೆಂದರೆ ರೈತರು ಕೇಳುವ ಬೀಜ ಮತ್ತು ಗೊಬ್ಬರ ವಿತರಿಸುವುದು ಫಸಲು ಹಾಳಾದಾಗ ಸರ್ಕಾರದಿಂದ ಹಣ ಬಿಡುಗಡೆಮಾಡಿಸಿ ಕಮಿಶನ್ ಪಡೆದು ರೈತರಿಗೆ ಒಂದಿಷ್ಟು ಪರಿಹಾರ ಕೊಡಿಸುವುದು ಎಂಬುದನ್ನು ಬಿಟ್ಟರೆ ಬೇರೆ ಏನಾದರೂ ರೈತೋಪಕಾರಿ ಕೆಲಸ ಮಾಡುತ್ತವಾ ನೋಡಿ. ಇನ್ನು ಇವುಗಳ ಹಿರಿಯಣ್ಣ ಕೃಷಿ ವಿಶ್ವವಿದ್ಯಾಲಯಗಳ ಬಗ್ಗೆ ಹೇಳದಿರುವುದೇ ವಾಸಿ. ರೈತರಿಗೆ ನೆರವಾಗುವ ಕತ್ತಿ ಕುಡಗೋಲನ್ನೂ ಅವು ಆವಿಷ್ಕರಿಸಿದ ನಿದರ್ಶನವಿಲ್ಲ. ಇವರೆಲ್ಲ ಸೇರಿ ಎಲ್ಲಿನ ರೈತರು ಯಾವ ಬೆಳೆ ತೆಯುತ್ತಾರೆ ಅಲ್ಲಿ ಅದೆಷ್ಟು ಸೂಕ್ತ ಎಂಬ ಬಗ್ಗೆ ರೈತರಿಗೆ ತಿಳಿವಳಿಕೆ ಕೊಟ್ಟು ಕೃಷಿಯೂ ಆ ಮೂಲಕ ದೇಶವೂ ಅಭಿವೃದ್ಧಿಯತ್ತ ಹೋಗುವಂತೆ ಮಾಡಲು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ನಮಗ್ಯಾರಿಗೂ ಉಳಿಗಾಲವಿಲ್ಲ.

Friday, 15 December 2023

ಟಿಪ್ಪು ಕುರಿತ ಒಂದು ಕಾದಂಬರಿ


ಕನ್ನಡ ಕಾದಂಬರಿ ಪ್ರಕಾರದಲ್ಲಿ ಈಗೀಗ ಹೊಸ ಹೊಸ ಪ್ರಯೋಗಗಳು ಶುರುವಾಗಿವೆ. ಒಂದು ದೃಷ್ಟಿಯಿಂದ ಗುಲ್ವಾಡಿ ವೆಂಕಟರಾಯರ ಇಂದಿರಾಬಾಯಿ ಕೃತಿಯಿಂದ ಹಿಡಿದು ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ಯವರೆಗೂ ಇಂಥ ಹೊಸತನ ಕನ್ನಡ ಕಾದಂಬರಿಯಲ್ಲಿ ಆಗುತ್ತಲೇ ಬರುತ್ತಿದೆ. ಆದರೆ ಪಾಶ್ಚಾತ್ಯ ಸಾಹಿತ್ಯಕ-ಸೈದ್ಧಾಂತಿಕ-ಐಡಿಯಾಲಜಿ ಪರಿಕಲ್ಪನೆಗಳ ಪ್ರಭಾವದಿಂದ ಹೊರಬಂದು ಸ್ವಂತ ಅನುಭವ ಹಾಗೂ ಗ್ರಹಿಕೆಯ ಹಿನ್ನೆಲೆಯಲ್ಲಿ ಕಾದಂಬರಿ ರಚಿಸುವ ವಿಶಿಷ್ಟ ಪ್ರಯತ್ನಗಳು ನಡೆಯುತ್ತಿವೆ. ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’(2004); ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ (2009); ವಿ ಟಿ ಶಿಗೇಹಳ್ಳಿಯವರ ‘ತಲೆಗಳಿ’ (2010); ನಾ.ಮೊಗಸಾಲೆಯವರ ‘ಮುಖಾಂತರ’ (2014) ಕಾದಂಬರಿಗಳು ಈ ಮಾತಿಗೆ ಸಾಕ್ಷಿ. ಇದೇ ಬಗೆಯ ಹೊಸತನ ತೋರಿಸಿದ ಮತ್ತೊಂದು ಕಾದಂಬರಿ ಕೃಷ್ಣಮೂರ್ತಿ ಹನೂರು ಅವರ ‘ಮತ್ತೊಬ್ಬನ ಆತ್ಮಚರಿತ್ರೆ’ (2012). ಇವು ಸ್ಥಳೀಯ ಸಮುದಾಯಗಳ ಜೀವನ ಕ್ರಮವನ್ನೋ ಹಿರಿಯರಿಂದ ಹರಿದುಬಂದ ‘ಇತಿಹಾಸ’ದ ಆಧಾರದಲ್ಲೋ ವಸ್ತುವನ್ನು ಹೆಕ್ಕಿ ಕಥೆಯನ್ನು ಹಣೆದು ಭಾಷೆ, ನಿರೂಪಣಾ ಕ್ರಮ, ವಿನ್ಯಾಸ ಮೊದಲಾದ ಕಾರಣಗಳಿಂದ ಹೊಸತನವನ್ನು ಮೆರೆದಿವೆ.

ಆಧುನಿಕ ಜೀವನ ಶೈಲಿ ನಾಶಗೊಳಿಸಿದ ನಮ್ಮ ಸಾಂಪ್ರದಾಯಿಕ ಜ್ಞಾನ ಸಂವಹನ ಕ್ರಮಗಳಲ್ಲಿ ಕಥನಗಾರಿಕೆಯೂ ಸೇರಿದೆ. ಇಂದಿನ ಒತ್ತಡದ ಜೀವನ ಕ್ರಮದಲ್ಲಿ ಕಥೆ ಹೇಳುವವರಿದ್ದರೂ ಕೇಳುಗರಿಲ್ಲ. ಹೀಗಾಗಿಯೇ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಮನೆಬಾಗಿಲಿಗೆ ಬಂದು ಹಾಡು, ಕಥೆ ಹೇಳುತ್ತಿದ್ದ ಜನಪದರು ಇಂದು ವಿರಳಾತಿವಿರಳವಾಗಿದ್ದಾರೆ. ಕಥೆ ಹೇಳುವವರು ಮತ್ತು ಕೇಳುವವರು ಆಧುನಿಕ ತಂತ್ರಜ್ಞಾನದ ಮೊರೆಹೊಗುತ್ತಿದ್ದಾರೆ. ಹೇಳುವವರು ಟಿವಿ ಧಾರಾವಾಹಿಗಳ ಮೂಲಕ ಕಥೆ ಹೇಳಿದರೆ ಕೇಳುಗರು ಅದನ್ನೇ ನೋಡುತ್ತಾರೆ! ಹೀಗಾಗಿ ಕಥೆ ‘ಹೇಳುವುದನ್ನು’ ‘ನೋಡುವ’ ಪ್ರವೃತ್ತಿ ಕಾಣಿಸಿಕೊಂಡಿದೆ. ಹೇಳುವುದನ್ನು ಕೇಳಬೇಕೇ ವಿನಾ ನೋಡುವುದಲ್ಲ. ಅಸಮಂಜಸವಾಗುವ ಈ ಸಂವಹನದಿಂದಾಗಿ ಕಥೆಗಾರರು ‘ನೋಡುವ’ ಕ್ರಮಕ್ಕೆ ಒತ್ತುಕೊಟ್ಟೇ ಕಥೆ ‘ಹೇಳಬೇಕಾದ’ ಪರಿಸ್ಥಿತಿ ಉಂಟಾಗಿದೆ. ಕಾಲಕ್ಕೆ ತಕ್ಕಂತೆ ಬದಲಾದ ಇಂಥ ಕಥನ ಕ್ರಮ ಹಾಗೂ ಸಮಯವಿಲ್ಲದ ಜೀವನ ಶೈಲಿಗಳಿಂದ ದೀರ್ಘ ಸ್ವರೂಪದಲ್ಲಿ ಕಥೆ ಹೇಳುವ ಕಾದಂಬರಿಯಂಥ ರಚನೆ ಮಾಡುವ ಹೊಸ ತಲೆಮಾರಿನ ಸಾಹಿತಿಗಳೇ ಇಲ್ಲ ಎನ್ನುವ ಪರಿಸ್ಥಿತಿ ಕನ್ನಡದಲ್ಲಿ ಉಂಟಾಗಿದೆ. ಕನ್ನಡದ ಸಣ್ಣಕಥಾ ಪ್ರಕಾರದಲ್ಲಿ ಗುರುತಿಸಿಕೊಂಡ ಹೊಸ ತಲೆಮಾರಿನ ಅನೇಕಾನೇಕ ಲೇಖಕರಿದ್ದಾರೆ. ಆದರೆ ಕನ್ನಡ ಕಾದಂಬರಿ ಪ್ರಕಾರದಲ್ಲಿ ಹೊಸ ತಲೆಮಾರಿನ ಲೇಖಕರು ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿದೆ. ದಟ್ಟ ಜೀವನಾನುಭವ, ಪಕ್ವತೆ ಮೊದಲಾದವು ದೀರ್ಘ ಕಥನಗಾರಿಕೆಗೆ ಅನಿವಾರ್ಯವಾದ ಕಾರಣದಿಂದಲೇ ಅರ್ಧ ವಯಸ್ಸು ದಾಟಿದ ಕಾದಂಬರಿಕಾರರೇ ಕನ್ನಡದಲ್ಲಿದ್ದಾರೆ.

ಪ್ರೊ. ಕೃಷ್ಣಮೂರ್ತಿ ಹನೂರರು ನಾಲ್ಕೈದು ದಶಕಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ, ಸಂಸ್ಕೃತಿ ಅಧ್ಯಯನ, ಅಧ್ಯಾಪನ, ಸಂಶೋಧನೆ, ಪತ್ರಿಕಾ ಬರವಣಿಗೆಗಳನ್ನು ನಡೆಸಿಕೊಂಡುಬಂದಿದ್ದರೂ ಅವರ ನಿಜವಾದ ಕಾಳಜಿ ಮತ್ತು ಕ್ಷೇತ್ರ ಜಾನಪದ. ಮೇಲ್ಕಂಡ ವಿವಿಧ ಕ್ಷೇತ್ರಗಳಲ್ಲಿನ ಅವರ ಎಲ್ಲ ಕೆಲಸದ ಮೇಲೂ ಜಾನಪದ ಪ್ರಭಾವ ಬೀರಿದೆ. ಇಲ್ಲಿ ‘ಜಾನಪದ’ ಎನ್ನುವುದನ್ನು ಸ್ಥಳೀಯ ಸಮುದಾಯಗಳ ಸಂಪ್ರದಾಯ ಹಾಗೂ ತಲೆತಲಾಂತರದಿಂದ ಹರಿದುಬಂದ ಬಗೆ ಬಗೆಯ ಮೌಖಿಕ ಜ್ಞಾನ ಎನ್ನುವ ಅರ್ಥದಲ್ಲಿ ಗ್ರಹಿಸಬೇಕು. ಭಾರತೀಯ ಸಂಪ್ರದಾಯದಲ್ಲಿ ಕಥೆ ಕೇವಲ ಕಲೆಯಲ್ಲ, ಅದು ಜ್ಞಾನ ಸಂವಹನ ಕ್ರಮ. ಅದು ಸಮುದಾಯದ ಸ್ಮೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುತ್ತಿರುತ್ತದೆ. ಕಥೆ ಹೇಳುವವನಿಂದ ಕೇಳುವವನು ಅನೇಕಾನೇಕ ಸಂಗತಿಗನ್ನು ಕಲಿಯುತ್ತಿರುತ್ತಾನೆ. ಕಥನಕಾರನಿಗೆ ಏನನ್ನು ಹೇಗೆ ಹೇಳಬೇಕು ಹಾಗೂ ಎಷ್ಟು ಹೇಳಬೇಕು ಎಂಬುದು ಕರಗತವಾಗಿರುತ್ತದೆ. ಈ ಕ್ರಮದಲ್ಲಿ ಆಧುನಿಕ ಕಥಾ ಕ್ರಮದಲ್ಲಿ ಸಾಮಾನ್ಯವಾಗಿರುವಂತೆ ಕೇವಲ ಗದ್ಯವಿರುವುದಿಲ್ಲ; ಪದ್ಯ, ನಾಟಕೀಯತೆಗಳೆಲ್ಲ ಸಂದರ್ಭಾನುಸಾರಿಯಾಗಿ ಸೇರಿಕೊಳ್ಳುತ್ತವೆ. ಇಂಥ ಸಾಂಪ್ರದಾಯಿಕ ಕಥನ ಕ್ರಮವನ್ನು ಅರಿತ ಅಥವಾ ಅದರಲ್ಲೇ ಬೆಳೆದ ಪ್ರೊ. ಕೃಷ್ಣಮೂರ್ತಿ ಹನೂರರು ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ಯಲ್ಲಿ ಇದನ್ನೇ ಮಾಡಿದ್ದಾರೆ.

ಒಂದು ಸಂಗತಿಯನ್ನು ಲೇಖಕರು ಸ್ಪಷ್ಟಪಡಿಸಿದ್ದಾರೆ: ‘ನಾನು ಜಾನಪದ ಕ್ಷೇತ್ರಕಾರ್ಯದಲ್ಲಿದ್ದಾಗ್ಗೆ ಅನುಭವಕ್ಕೆ ಬಂದ ಐತಿಹಾಸಿಕ ವಿವರಗಳು ನಾವು ತರಗತಿಯಲ್ಲಿ ಓದುವ, ಬೋಧಿಸುವ, ಪಠ್ಯವಿವರಗಳಿಗಿಂತ ಬೇರೆಯೇ ಆಗಿದ್ದವು. ಅವೆಲ್ಲವೂ ಯುದ್ಧವನ್ನು ಪರಾಕ್ರಮ ಇಲ್ಲವೇ ವಿಜಯದ ಸಂಕೇತವಾಗಿ ಭಾವಿಸುವುದಕ್ಕಿಂತ ತಮ್ಮೆಲ್ಲರ ಬದುಕಿನ ಪಡಿಪಾಟಲು ಮತ್ತು ದುರಂತ ಸಂಗತಿಯಾಗಿ ವಿವರಿಸಿದ್ದೇ ಹೆಚ್ಚಾಗಿತ್ತು’. ಜನಪದ ಜೀವನದ ಭಾಗವೇ ಆಗಿಹೋದ ಇಂಥ ಸಂಗತಿಗಳನ್ನು ಸೃಜನಶೀಲ ಬರವಣಗೆಯ ರೂಪದಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. 

ಯುದ್ಧ ಮತ್ತು ಹೋರಾಟಗಳನ್ನು ಲಿಖಿತ ಕಾವ್ಯ ಸಾಹಿತ್ಯದಲ್ಲಿ ಗ್ರಹಿಸಿದ ರೀತಿಯೇ ಬೇರೆ. ಪಂಪ, ರನ್ನ, ಕುಮಾರವ್ಯಾಸ ಮೊದಲಾದ ಕವಿಗಳೆಲ್ಲ ಸಮರವನ್ನು ವೀರ, ರೌದ್ರ, ಬೀಭತ್ಸದಂಥ ಕಾವ್ಯ ಮೀಮಾಂಸೆಯ ‘ರಸ’ದ ಅರ್ಥದಲ್ಲಿ ಕಂಡರಿಸಿದ್ದರೆ ಜನಸಾಮಾನ್ಯರು ತಮ್ಮ ಬದುಕಿನ ಅನುಭವದ ಭಾಗವಾಗಿ ಗ್ರಹಿಸಿದ್ದಾರೆ ಎಂಬುದು ಗಮನಾರ್ಹ. ಹಿಂದೆ ಆಗಿಹೋದ ಯುದ್ಧದ ಘಟನಾವಳಿಗಳನ್ನು ಇತಿಹಾಸದ ಭಾಗವಾಗಿ, ಅದರಲ್ಲಿ ಪಾಲ್ಗೊಂಡ ಸೇನಾ ಮುಖ್ಯಸ್ಥರನ್ನು ‘ನಾಯಕ’ರಾಗಿ, ಅದರಲ್ಲಿ ಪಾಲ್ಗೊಂಡು ಜೀವತೆತ್ತ ನೂರಾರು, ಸಾವಿರಾರು ಜನಸಾಮಾನ್ಯರನ್ನು ಅಲಕ್ಷಿಸಿ ಕಥೆ ಕಟ್ಟುವ ಅದನ್ನು ಪಠ್ಯವಾಗಿಸುವ ಪರಿಪಾಠ ಆರಂಭವಾದುದು ಬ್ರಿಟಿಷರ ಬಳುವಳಿಯಾಗಿ ಬಂದ ಆಧುನಿಕ ಶಿಕ್ಷಣ ಕ್ರಮದಿಂದ. ಹೀಗಾಗಿ ಇಂಥ ಪಠ್ಯಕ್ಕೂ ನೈಜ ಬದುಕಿನ ಗ್ರಹಿಕೆಗೂ ಸಂಬಂಧವೇ ಇಲ್ಲದಂತಾಗಿದೆ. ಇದನ್ನೇ ಲೇಖಕರು ಕ್ಷೇತ್ರಕಾರ್ಯದಲ್ಲಿ ಮನಗಂಡಿರುವುದು. ಈ ಸಂದರ್ಭದಲ್ಲಿ ಪುರಾತತ್ತ್ವ ಹಾಗೂ ಇತಿಹಾಸ ಕುರಿತು ಫುಕೋ ಹೇಳುವ ಮಾತನ್ನು ನೆನೆಯಬಹುದು: “ಘಟನೆ ಮತ್ತು ವಸ್ತುಗಳಾಗಿ ಒಟ್ಟಾಗಿಸುವ ಹೇಳಿಕೆಗಳನ್ನು ನಿಲ್ಲಿಸುವ ಪ್ರಕ್ರಮ ಇದು. ಭೂತ ಮತ್ತು ಸಮಕಾಲೀನ ವಾಸ್ತವ ಘಟನೆಗಳ ಚಿಂತನೆಗಳೂ ಕಾರ್ಯಕಾರಣ ಸಂಬಂಧದಿಂದ ಹುಟ್ಟುವುದಿಲ್ಲ. ಅವು ಕೇವಲ ಆಕಸ್ಮಿಕ (ಆಕ್ಸಿಡೆಂಟ್). ಚರಿತ್ರೆಯಲ್ಲಿ ನಾವು ಗುರುತಿಸಬೇಕಾದುದು ಮೌಲಿಕ ಘಟ್ಟಗಳನ್ನೇ ವಿನಾ ಸಂಪ್ರದಾಯಬದ್ಧ ಎಳೆಗಳನ್ನಲ್ಲ”. ಕಾದಂಬರಿ ಕುರಿತು ಫುಕೋ ಹೇಳುವ ಇನ್ನೊಂದು ಮಾತು ಕೂಡ ಇಲ್ಲಿ ಗಮನಾರ್ಹ: “ಕಾದಂಬರಿ ಒಂದು ವ್ಯಾಖ್ಯಾನಾತ್ಮಕ ಘಟನೆ. ಅದು ಚರಿತ್ರೆಯನ್ನು ಪ್ರತಿಬಿಂಬಿಸುವುದಿಲ್ಲ. ಬದಲಾಗಿ ಅದೇ ‘ಚರಿತ್ರೆ’. ಹೊಸ ಸಂಬಂಧಗಳ ಜೋಡಣೆ ಅದು. ವ್ಯಾಖ್ಯಾನಾತ್ಮಕ ಘಟನೆಯ ಒಂದು ಭಾಗವೇ ಪಠ್ಯ”. ಈ ಕೃತಿಗೆ ಇವೆರಡು ಮಾತುಗಳೂ ಸೂಕ್ತವಾಗಿ ಒಗ್ಗುತ್ತವೆ.

ಈ ಸಂದರ್ಭದಲ್ಲಿ ನಮ್ಮ ದೇಶದ ‘ಇತಿಹಾಸ’ ಮತ್ತು ಸಂಸ್ಕೃತಿಯನ್ನು ಭಿನ್ನವಾಗಿ ಗ್ರಹಿಸುವ ಸಂಸ್ಕೃತಿ ಚಿಂತಕರಾದ ಬಾಲಗಂಗಾಧರ ಅವರ ಅಭಿಪ್ರಾಯವನ್ನು ಗಮನಿಸಬಹುದು: “ಭಾರತದಲ್ಲಿ ಇತಿಹಾಸ ಪ್ರಜ್ಞೆ ಇಲ್ಲ ಎಂಬುದು ಯೂರೋಪ್ ಮೂಲದ ಶಿಕ್ಷಣ ವ್ಯವಸ್ಥೆ ಹಾಗೂ ಯೂರೋಪಿನ ಇತಿಹಾಸದ ದೃಷ್ಟಿ ಹೇಳಿರುವ ಮಾತು. ನಮ್ಮ ದೇಶದಲ್ಲಿ ಕಾವ್ಯ, ಕಥೆ, ಪುರಾಣಗಳೇ ಇತಿಹಾಸದ ಕೆಲಸವನ್ನು ಪೂರೈಸುತ್ತವೆ. ವಸಾಹತುಶಾಹಿ ಆರಂಭವಾದ ಮೇಲೆ ಬ್ರಿಟಿಷ್ ಆಡಳಿತಗಾರರು ಮತ್ತು ವಿದ್ವಾಂಸರು ಈ ದೇಶವನ್ನು ಅರ್ಥಮಾಡಿಕೊಳ್ಳುವ ಹಿನ್ನೆಲೆಯಲ್ಲಿ ದೇಶದ ಇತಿಹಾಸವನ್ನು ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಕಟ್ಟತೊಡಗಿದರು”.

ಸಾಮಾನ್ಯವಾಗಿ ಯೂರೋಪಿನ ಇತಿಹಾಸ ಉತ್ತರ ಹುಡುಕುವ ಯಾವಾಗ? ಯಾಕೆ? ಹೇಗೆ? ಎನ್ನುವಂಥ ಪ್ರಶ್ನೆಗಳಿಗೆ ಖಚಿತ ಸಾಕ್ಷ್ಯಾಧಾರ, ದಿನಾಂಕ, ಸ್ಥಳ ಮೊದಲಾದವನ್ನು ಗುರುತಿಸುವ ಯತ್ನವೂ ಇಲ್ಲಿ ನಡೆಯಿತು. ಕೆಲವು ಸಂಗತಿಗಳಿಗೆ ಇವು ಸರಿಹೋದರೆ ಬಹಳಷ್ಟು ಸಂಗತಿಗಳಿಗೆ ಈ ದೃಷ್ಟಿ ತಾಳೆಯೇ ಆಗಲಿಲ್ಲ. ದೇಶದಲ್ಲಿ ವ್ಯಾಪಕವಾಗಿರುವ ರಾಮಾಯಣ, ಮಹಾಭಾರತದಂಥ ಕಾವ್ಯಗಳಿಗೆ, ಮಲೆ ಮಹದೇಶ್ವರ, ಮಂಟೇಸ್ವಾಮಿಯಂಥ ಪ್ರಾಂತೀಯ ಜನಪದ ಕಥನಗಳ ಸಂಗತಿಗಳಿಗೂ ಯೂರೋಪಿನ ಇತಿಹಾಸ ದೃಷ್ಟಿಯನ್ನು ತೊಟ್ಟು ಅಳೆಯಲು ಆರಂಭಿಸಲಾಯಿತು. ಇಂಥ ಯತ್ನ ಕೊನೆ ಮೊದಲಿಲ್ಲದ ಗೊಂದಲಗಳನ್ನು ಸೃಷ್ಟಿಸಿತೇ ವಿನಾ ಯೂರೋಪಿನ ವಿದ್ವಾಂಸರು ನಿರೀಕ್ಷಿಸಿದ ಇತಿಹಾಸದ ಉತ್ತರಗಳನ್ನು ಕೊಡಲು ವಿಫಲವಾಯಿತು. ಏಕೆಂದರೆ ನಮ್ಮ ಪರಂಪರೆಯಲ್ಲಿ ಇತಿಹಾಸ ಎನ್ನುವುದು ಆಗಿಹೋದ ಘಟನೆಯಲ್ಲ. ಮಾತ್ರವಲ್ಲ, ನಮ್ಮ ಜನರಿಗೆ ಅವುಗಳಲ್ಲಿರುವ ಸಂತಿಗಳು ನಿಜಕ್ಕೂ ಇದ್ದವೋ ಇಲ್ಲವೋ ಎಂಬುದೂ ಮುಖ್ಯವಲ್ಲ. ಆದರೆ ಇವೆಲ್ಲವನ್ನೂ ನಮ್ಮ ಜನ ಬದುಕುತ್ತಾರೆ.

 ಸುಮಾರು 230 ಪುಟಗಳ ಕೃತಿ ಇದು. 2015ರಲ್ಲಿ ಎರಡನೆಯ ಮುದ್ರಣವನ್ನು ಕಂಡಿದೆ. ಪೌರಾಣಿಕ ಕಥನ ಕ್ರಮದಲ್ಲಿ ಆರಂಭವಾಗುವ ಇದರಲ್ಲಿ ದಫ್ತರು, ಶಾಸನ, ದಂತಕಥೆ, ನಂಬಿಕೆ, ಆಚರಣೆ ಇತ್ಯಾದಿ ಇತ್ಯಾದಿಗಳೆಲ್ಲ ಸೇರಿಕೊಂಡಿವೆ. ಟಿಪ್ಪು ಸುಲ್ತಾನನ ಕಾಲದ ದಳವಾಯಿಯೊಬ್ಬ ತನ್ನ ನೆನಪಿನ ಬುತ್ತಿ ಬಿಚ್ಚಿಡುವಂತೆ ಆರಂಭಗೊಳ್ಳುತ್ತದೆ. ಕಥಾವಸ್ತುವಿಗೆ ಪೂರಕವಾಗಿ ಶಿಕ್ಷಣ ಕಲಿಸಿದ ‘ಇತಿಹಾಸ’ ಜನಪದ ಕಥನದೊಳಗಿನ ‘ಗತ’ ಗಳೆಲ್ಲ ಸೇರಿಕೊಳ್ಳುತ್ತವೆ. ಇಷ್ಟಾದರೂ ಇದು ಇತಿಹಾಸವಲ್ಲ, ‘ಚರಿತ್ರೆ’. 

Monday, 4 December 2023

ಗಮನಸೆಳೆಯುವ ಇನ್ನೊಂದು ಕೃತಿ


ಕನ್ನಡದ ಯುವ ಬರೆಹಗಾರ, ಚಿಂತಕರಾದ ಅಜಕ್ಕಳ ಗಿರೀಶ್ ಭಟ್ ಅವರು ಇನ್ನೋದು ಕೃತಿಯನ್ನು ಓದುಗರ ಮುಂದೆ ಇಟ್ಟಿದ್ದಾರೆ. ಇದರ ಹೆ¸ರೇ ಮಜವಾಗಿದೆ. ಅಂದಹಾಗೆ ಈ ಪುಸ್ತಕದ ಹೆಸರು 'ಮುಂದಿನ ರದ್ದಿ'. ಹೌದು, ಜಾಗತಿಕ ಸಂಗತಿ ಹಾಗಿರಲಿ. ಕನ್ನಡದಲ್ಲಿ ಓದುಗರ ಸಂಖ್ಯೆ ಕುಸಿಯುತ್ತಿದೆ ಇತ್ಯಾದಿ ಕೂಗು ಏನೇ ಇರಲಿ, ನಿತ್ಯ ಸುಮಾರು 30 ಹೊಸ ಪುಸ್ತಕಗಳು ಪ್ರಕಟವಾಗುತ್ತಿವೆ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಇದರ ಜೊತೆಗೆ ಹತ್ತಾರು ರಾಷ್ಟ್ರ ಮಟ್ಟದ ಪತ್ರಿಕೆಗಳು, ಲೆಕ್ಕವಿಲ್ಲದಷ್ಟು ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ  ದಿನ ಪತ್ರಿಕೆಗಳು, ವಾರ, ಮಾಸ ಪತ್ರಿಕೆಗಳು ಇತ್ಯಾದಿ ಇತ್ಯಾದಿಗಳಿವೆ. ನಷ್ಟವೇ ನಷ್ಟ ಅಂತಿದ್ದರೆ ಇಷ್ಟೆಲ್ಲ ಇರುತ್ತಿದ್ದವೇ? ಸುಮ್ಮನೇ ಗಮನಿಸಿ. ಇವೆಲ್ಲ ಸೇರಿ ಬರೀ ಕನ್ನಡದಲ್ಲಿ ದಿನಕ್ಕೆ ಒಂದೆರಡು ಟನ್ ರದ್ದಿ ತಯಾರಾಗುತ್ತದೆ. ವರ್ಷಕ್ಕೆ ಅದೆಷ್ಟು ಪ್ರಮಾಣ ಊಹಿಸಿ. ಪತ್ರಿಕೋದ್ಯಮದಂತೆಯೇ ರದ್ದಿ ಪತ್ರಿಕೆ ಸಂಗ್ರಹ ಹಾಗೂ ವಿಲೇವಾರಿಯೂ ನಮ್ಮಲ್ಲಿ ಬಹುದೊಡ್ಡ ಉದ್ಯಮ. ದಿನ ಪತ್ರಿಕೆಯ ಹಣೆಬರೆಹ ನೋಡಿ. ಅದನ್ನು ಓದುವವರೆಗೆ ಮಾತ್ರ ಅದು ಹೊಸದು. ಒಮ್ಮೆ ಅದರ ಮೇಲೆ ಕಣ್ಣುಹಾಯಿಸುತ್ತಿದ್ದಂತೆಯೇ ಅದು ರದ್ದಿಯಾಗುತ್ತದೆ. ಹಾಗೆ ನೋಡಿದರೆ ಅಜಕ್ಕಳ ಅವರು ಇಲ್ಲಿ ಎರಡು ರದ್ದಿಗಳನ್ನು ಉತ್ಪಾದಿಸಿಕೊಟ್ಟಿದ್ದಾರೆ. ಇದರಲ್ಲಿ ಸಂಕಲಿತವಾದ 16 ಲೇಖನಗಳು ಒಂದಲ್ಲ ಒಂದು ಪತ್ರಿಕೆಯಲ್ಲಿ ಪ್ರಕಟವಾಗಿ ರದ್ದಿಯಾಗಿ ಹೋದವು. ಇವನ್ನೆಲ್ಲ ಮತ್ತೆ ಸಂಕಲಿಸಿ ಹೊಸ ಪುಸ್ತಕ ರೂಪದಲ್ಲಿ ಕೊಟ್ಟು ಮತ್ತೆ ಹೊಸ ರದ್ದಿಯನ್ನು ತಯಾರಿಸಿಕೊಟ್ಟಿದ್ದಾರೆ. ಒಂದು ಸಂಗತಿಯನ್ನು ಗಮನಿಸಬೇಕು. ಪಂಪನ ಕೃತಿ ರಚನೆಯಾಗಿ ಸಾವಿರ ವರ್ಷಗಳೇ ಸಂದಿವೆ. ಅದರ ಪ್ರಸ್ತುತತೆ ಇಂದಿಗೂ ಉಳಿದು ಅದಿನ್ನೂ ರದ್ದಿಯಾಗಿಲ್ಲ. ಅಂದರೆ ಪ್ರಸ್ತುತ ಅನಿಸುವ ಯಾವ ಬರೆಹವೂ ರದ್ದಿಯಾಗಲು ಸಾಧ್ಯವಿಲ್ಲ ಅಂದಾಯಿತು. ದಿನಪತ್ರಿಕೆಗಳ ಆಯಸ್ಸು ಒಂದೇ ದಿನ ಆದ್ದರಿಂದ ಅದು ಆದಿನವೇ ರದ್ದಿಯಾಗುತ್ತದೆ. ಆದರೆ ಪುಸ್ತಕಗಳು ರದ್ದಿಯಾಗಲು ಸ್ವಲ್ಪ ಕಾಲಾವಕಾಶ ಬೇಕು. ಪಠ್ಯ ಪುಸ್ತಕವಾದರೆ ಅದಕ್ಕೆ ವರ್ಷಗಳ ಆಯಸ್ಸು. ಉತ್ತಮ ಕಾದಂಬರಿಯಾದರೆ ಭೈರಪ್ಪನವರ ಕೃತಿಗಳಂತೆ ಅನಿಶ್ಚಿತ. ಶಬ್ದಕೋಶಗಳು ಬೇಗ ಈ ಗುಂಪಿಗೆ ಬರುವುದಿಲ್ಲ.ಆಗಲಿ. ಪ್ರಸ್ತುತ ಲೇಖಕರು ಈ ಕೃತಿಗೆ ಈ ಹೆಸರು ಕೊಟ್ಟಿದ್ದರೂ ಇದರಲ್ಲಿನ ಹತ್ತಕ್ಕಿಂತ ಹೆಚ್ಚು ಲೇಖನಗಳಿಗೆ ಬೇಗ ರದ್ದಿಯಾಗುವ ಯೋಗವಿಲ್ಲ. ಅವು ಪರಾಮರ್ಶನ ಯೋಗ್ಯವಾಗಿವೆ, ಮತ್ತಮತ್ತೆ ಅಗತ್ಯವಾದವಾಗಿವೆ.ಹಾಗೆ ನೋಡಿದರೆ ಒಮ್ಮೆ ಬರೆದು ಪ್ರಕಟವಾದರೆ ಅದು ರದ್ದಿ ಲೆಕ್ಕವೇ. ಆದರೆ ಇದರಲ್ಲಿ ಸಂಕಲಿತವಾದ ಕೆಲವು ಲೇಖನಗಳ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ.ಉದಾಹರಣೆಗೆ ಧರ್ಮ ಸಂಕಟ, ಭಾರತೀಯ ಮನಸ್ಸು ಇತ್ಯಾದಿ ಲೇಖನಗಳು ಬಹಳ ಗಂಭೀರ ಪ್ರಶ್ನೆಂiÀ. 106 ಪುಟಗಳ ಸಣ್ಣ ಪುಸ್ತಕ ಇದು. ಆದರೆ ಬೀರುವ ಪರಿುನ್ನು ಎತ್ತುತ್ತವೆ. ಇವೆಲ್ಲ ಎಂದಿಗೂ ಹಳೆಯದಾಗುವುದಿಲ್ಲ, ಕಾರಣ ರದ್ದಿ ಸಾಲಿಗೆ ಹೋಗುವುದಿಲ್ಲ. ಇದು 106 ಪುಟಗಳ ಸಣ್ಣ ಕೃತಿ ಇದು.ಆದರೆ ಬೀರುವ ಪರಿಣಾಮ ಹಿರಿದು. ಸಣ್ಣ ಗಾತ್ರದ ಪುಸ್ತಕದಲ್ಲಿ ದೊಡ್ಡ ಪರಿಣಾಮ ಬೀರುವ ಕೃತಿ ರಚನೆ ಮಾಡಬೇಕಾದುದು ಇಂದಿನ ಲೇಖಕರಮುಂದಿನ ಸವಾಲು. ಬೃಹತ್ ಗಾತ್ರದ ಪುಸ್ತಕ ಬರೆಯುವ ಓದುವ  18-19ನೆಯ ಶತಮಾನದ ಟ್ರೆಂಡ್ ಇಂದು ಯಾರಿಗೂ ಇಲ್ಲ.ಜೀವನ ಶೈಲಿ ಹಾಗಿದೆ.ಸಮಯವಿಲ್ಲ. ಅದರಿಂದ ಉಪಯೋಗವೂ ಇಲ್ಲ.ಹೀಗಾಗಿ ಪ್ರಸ್ತುತ ಕೃತಿ ಅನುಪಯುಕ್ತವಾಗಿಬಿಟ್ಟಿದೆ ಅನ್ನುವಂತೆ ಲೇಖಕರು ಮೊದಲೇ ಇದು ಅನುಪಯುಕ್ತ ಅನ್ನುವಂತೆ ಇದನ್ನು ರದ್ದಿ ಅಂದುಬಿಟ್ಟಿದ್ದಾರೆ. ಆದರೆ ವಾಸ್ತವ ಹಾಗಿಲ್ಲ. ಇಂದಿನ ತಂತ್ರಜ್ಞಾನ ಕೂಡ ಬದಲಾಗಿ ರದ್ದಿಯ ಪ್ರಶ್ನೆಯೇ ಎದುರಾಗದಂತೆ ಎಲ್ಲವನ್ನೂ ಡಿಜಿಟಲ್ ರೂಪದಲ್ಲಿ ಕೊಡುವಂತೆ ಮಾಡಿಬಿಟ್ಟಿದೆ. ಹೀಗಾಗಿ ಮುಂದೆ ಒಂದು ದಿನ ರದ್ದಿ ಎಂಬ ಪದವೇ ಜಣ್ಮರೆ ಆಗಬಹುದು- ಆಗುತ್ತದೆ. ಅದರ ಬದಲು ಅನಗತ್ಯ ಎಂಬ ಪದ ಬರಬಹುದು.

ಹಾಗೆಂದ ಮಾತ್ರಕ್ಕೆ ಬರೆದುದೆಲ್ಲ ರದ್ದಿ ಅಲ್ಲ. ಹಾಗಿದ್ದರೆ ಕನ್ನಡದ ಅನೇಕ ಕೃತಿಗಳು ಶತಮಾನಗಳ ಕಾಲ ಉಳಿದುಬರುತ್ತಿರಲಿಲ್ಲ. ಕೃತಿಯೊಂದರ ಯೋಗ್ಯತೆ ಅದರ ಹಣೆಬರೆಹವನ್ನು ನಿರ್ಧರಿಸುತ್ತದೆ. ಅದು ಓದುಗರ ಕೈಲಿದೆ. ಈ ಕಾರಣದಿಂದ ಲೇಖಕು ಇದನ್ನು ರದ್ದಿ ಅಂದರೂ ಅದಿನ್ನೂ ಸಿದ್ಧವಾಗಿಲ್ಲ. ಲೇಖಕರಿಗೆ ಒಳಿತಾಗಲಿ.

ಮುಂದಿನ ರದ್ದಿ

ಲೇ. ಅಜಕ್ಕಳ ಗಿರೀಶ ಭಟ್, ಆಕೃತಿಆಶಯ ಪಬ್ಲಿ ಕೇಶನ್ಸ್, ಮಂಗಳೂರು. ಬೆಲೆ- 150 ರೂ.

Saturday, 2 December 2023

ಕನ್ನಡ ಸಂಶೋಧನೆಯ ಸುತ್ತ


ಇದೀಗ ನನ್ನ ಮುಂದೆ ಯುವ ಚಿಂತಕರು, ಗಮಕಿಗಳು ಮತ್ತು ಹೊಸ ತಲೆಮಾರಿನ ವಿದ್ವಾಂಸರಾದ ಡಾ. ಅಜಕ್ಕಳ ಗಿರೀಶ್ ಭಟ್ ಅವರ ತತ್ತ್ವ ದತ್ತ ಎಂಬ ಕೃತಿ ನಿರಾಳವಾಗಿ ಕುಳಿತಿದೆ. ಎರಡು ದಿನಗಳಿಂದ ಅದರ ಪುಟಪುಟಗಳನ್ನು ಹಿಂಜಿ ಹಿಂಜಿ ಓದುತ್ತಿದ್ದೇನೆ. ಓದುತ್ತ ಹೋದಂತೆ ಸಂಶೋಧನೆಯ ಒಲವು ನಿಲವುಗಳ ಬಗ್ಗೆ ಸ್ಪಷ್ಟತೆಯೂ ಅಲ್ಲಲ್ಲಿ ನಡೆಯುತ್ತಿರುವ ಗಂಭೀರ ಸಂಶೋಧನೆಯ ಹೆಸರಿನ ವಂಚನೆಗಳ ಬಗ್ಗೆ ವಿಷಾದವೂ ಉಂಟಾಯಿತು. ಸದರಿ ಕೃತಿ ಹುಟ್ಟಿದ್ದೇ ಸಂಶೋಧನೆಯನ್ನು ಹೇಗೆ ಮಾಡಬೇಕು ಅದರಲ್ಲಿ ಸರಿಯಾವುದು ತಪ್ಪು ಯಾವುದೆಂದು, ವಿಧಾನ ಏನು ಎಂಬುದನ್ನು ಕನ್ನಡದಲ್ಲಿ ಮೊದಲಬಾರಿ ವಿಶಿಷ್ಟವಾಗಿ ಕೊಡಲಾಗುತ್ತಿದೆ ಅನ್ನಲಾದ ಕೃತಿಯೊಂದನ್ನು ಜಾಲಾಡುವ ಉದ್ದೇಶದಿಂದ ಅನ್ನುವುದು ಗಮನಾರ್ಹ, ಉನ್ನತ ಶಿಕ್ಷಣ ವಲಯದಲ್ಲಿ ಬೋಧನೆ, ಸಂಶೋಧನೆ ಕುರಿತು ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ತುಮಕೂರು ವಿವಿಯ ಪ್ರಾಧ್ಯಾಪಕರಾದ ನಿತ್ಯಾನಂದ ಶೆಟ್ಟಿಯವರು ಈಚೆಗೆ ಸಂಶೋಧನೆಯ ವಿಧಾನ ಕುರಿತು ಕನ್ನಡದಲ್ಲಿ ಅಲಭ್ಯವಾದ ಕ್ಷೇತ್ರದ ಕೃತಿಯೊಂದನ್ನು ಪ್ರಕಟಿಸಿದ್ದರು, ಅದಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳೂ ಸಕಾರಾತ್ಮಕವಾಗಿ ಬಂದಿದ್ದವು. ಆದರೆ ಅದರ ನೈಜ ಲೋಪ ಅದು ಪ್ರಸ್ತಾಪಿಸುವ ಮೂಲ ಉದ್ದೇಶದಲ್ಲೇ ಇದೆ ಅನ್ನುವುದು ಚೋದ್ಯವೂ ಹೌದು, ವ್ಯಂಗ್ಯವೂ ಹೌದು. ಚೋದ್ಯ ಏಕೆಂದರೆ, ನಿತ್ಯಾನಂದರು ಕನ್ನಡ ಉನ್ನತ ಶಿಕ್ಷಣ ವಲಯದ ಸಂಶೋಧನೆ ಹೇಳಿಕೊಳ್ಳುವ ಗುಣಮಟ್ಟದಲ್ಲಿಲ್ಲ, ಇದಕ್ಕೆ ಕಾರಣ ಸರಿಯಾದ ದಿಕ್ಕು ದೆಸೆಗಳನ್ನು ಸಂಶೋಧಕರಿಗೆ ಕೊಡಲು ಉನ್ನತ ಶಿಕ್ಷಣ ವಿಫಲವಾದುದು ಅನ್ನುತ್ತಾ ಸರಿಯಾದ ಸಂಶೋಧನೆಯ ಮಾರ್ಗವನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾಗಿ ಹೇಳುತ್ತಾರೆ. ಸೂಕ್ತ ಸಂಶೋಧನೆಯ ವಿಧಿ ವಿಧಾನವನ್ನು ಹೇಳುತ್ತಾ ಕೃತಿಚೌರ್ಯದ ಬಗ್ಗೆ ಗಂಭೀರವಾಗಿ ಹೇಳುತ್ತಾ ಯಾವುದೆಲ್ಲ ಕೃತಿಚೌರ್ಯವಾಗುತ್ತದೆ, ಅದು ಹೇಗೆ ಅನೈತಿಕ ಎಂದು ಹೇಳುತ್ತಾರೆ. ಇಂದಿನ ಸಂಶೋಧನೆಯಲ್ಲಿ ಪ್ರಕಟಿತ ಕೃತಿಯೊಂದರ ಸಾಲುಗಳನ್ನು ಮೂಲ ಉಲ್ಲೇಖಿಸದೇ ಅನಾಮತ್ತಾಗಿ ದಾಖಲಿಸುವುದಷ್ಟೇ ಅಲ್ಲ, ಮೂಲ ಚಿಂತನೆಯ ಎಳೆ ವಿಚಾರಧಾರೆಯ ಸೂತ್ರವನ್ನು ಬಳಸಿಕೊಳ್ಳುವುದು ಕೂಡ ಕೃತಿಚೌರ್ಯವಾಗುತ್ತದೆ ಅನ್ನುವ ಲೇಖಕರು ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಕೆಲಸವನ್ನು ಸದರಿ ಅನ್ವೇಷಣೆ ಕೃತಿಯಲ್ಲಿ ಮಾಡಿ ಮುಂದಿನ ಸಂಶೋಧಕರಿಗೆ ಸಾಧಾರ ಸಾಕ್ಷಿಯನ್ನೂ ಕೊಟ್ಟುಬಿಟ್ಟಿದ್ದಾರೆ ಅನ್ನುವುದು ವ್ಯಂಗ್ಯ. ಇದನ್ನು ಅಜಕ್ಕಳ ಅವರು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಾರೆ. ಸದರಿ ಸಂಶೋಧಕರು ಹೇಳುವ ಮಾತು, ಬಳಸಿದ ನಿರೂಪಣಾ ಕ್ರಮ ಮೂಲತಃ ಎಲ್ಲಿಯದು ಎಂಬುದನ್ನು ಸಾಧಾರವಾಗಿ ಕೊಡುವುದನ್ನು ಓದುವಾಗ ನಿತ್ಯಾನಂದರ ಆಶಯದ ಬಗ್ಗೆ ಪಿಚ್ಚೆನಿಸುತ್ತದೆ. ಮತ್ತೆ ಅವರು ವ್ಯಕ್ತಪಡಿಸುವ ಅಭಿಪ್ರಾಯದ ಬಗ್ಗೆ ಅನುಕಂಪೆ ಮೂಡುತ್ತದೆ. 

ಅದಿರಲಿ, ನಿತ್ಯಾನಂದರ ಆಶಯ ಸರಿಯಾದುದು. ಉನ್ನತ ಶಿಕ್ಷಣದಲ್ಲಿ ಗಂಭೀರ ಸಂಶೋಧನೆ ತೃಪ್ತಕರವಾಗಿಲ್ಲ, ಕುವೆಂಪು ಅವರು ಒಂದೆಡೆ ಬೇರೆ ಸಂದರ್ಭದಲ್ಲಿ ಹೇಳುವ ಒಬ್ಬರ ಕೈ ಮುಂದೆ ಇರುವವರ ಜೇಬಿನಲ್ಲಿ ಅನ್ನುವಂತಿದೆ. ನೈಜ ಸಂಶೋಧನೆ ಹೀಗೆ ಇರಬಾರದು ಕನ್ನಡ ಸಾಹಿತ್ಯ ಅಂತಲ್ಲ, ದೇಶದ ,ಮಾನವಿಕ ಅಧ್ಯಯನದಲ್ಲೇ ಇಂಥ ಪರಿಸ್ಥಿತಿ ಇದೆ. ಹೆಚ್ಚೆಂದರೆ ಯಾವುದಾದರೂ ಒಂದು ಚಿಂತನೆ ಅಥವಾ ವಿಚಾರಧಾರೆಗೆ ಒಡ್ಡಿಕೊಂಡ ಅಧ್ಯಯನಗಳು ಅಲ್ಲಲ್ಲಿ ಕಾಣಿಸುತ್ತವೆ. ಆದರೆ ಹೀಗೆ ಐಡಿಯಾಲಜಿಗೆ ಅಂಟಿಕೊಂಡ ಸಂಶೋಧನೆಗಳ ಅಗತ್ಯ ಪ್ರಸ್ತಾಪಿಸುವ ನಿತ್ಯಾನಂದರ ದೃಷ್ಟಿಯ ಸಂಶೋಧನೆಯ ಮಿತಿಯನ್ನೂ ಅಜಕ್ಕಳ ಢಾಳಾಗಿ ತೋರಿಸುತ್ತಾರೆ. ಕೃತಿಯನ್ನು ಓದುತ್ತ ಹೋದಂತೆ ನಿತ್ಯಾನಂದರು ಸೋತಿದ್ದು ತಮ್ಮನ್ನು ತಾವು ಪಾಶ್ಚಾತ್ಯ ಸಂಶೋಧನೆಯ ದೃಷ್ಟಿಗೆ ಸಂಪೂರ್ಣ ಮಾರಿಕೊಂಡ ಕಾರಣಕ್ಕೆ ಅನ್ನುವುದು ಮನದಟ್ಟಾಗುತ್ತದೆ.

ಕನ್ನಡ ಉನ್ನತ ಶಿಕ್ಷಣ ಹಾಗೂ ಸಂಶೋಧನೆಯ ಸ್ಥಿತಿ ತಿಳಿಯಲು ಈ ಎರಡೂ ಕೃತಿಗಳನ್ನು ಓದಬೇಕು. ಇವೆರಡರಲ್ಲೂ ಹೇಳಿರದ ಇನ್ನೊಂದು ಸಂಗತಿ ಇದೆ. ಕನ್ನಡದ ಕೆಲವು ಕೃತಿಗಳು ನಿಜವಾಗಿ ಆ ಲೇಖಕರ ಕೃತಿಗಳಲ್ಲ. ಒಂದು ನಿದರ್ಶನ. ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಂಡಿತರೂ ಅಗಾಧ ಓದಿನ ಪ್ರೊ. ಕಿರಂ ನಾಗರಾಜ್ ಇದ್ದರು. ಅವರು ಹೊಸ ಹೊಸ ಒಳನೋಟ ಕೊಡುತ್ತಿದ್ದರು,ಅದು ಬೇಂದ್ರೆ, ಕುವೆಂಪು ಅಂತಲ್ಲ, ಯಾವುದೇ ಸಾಹಿತ್ಯ ಕೃತಿಗೆ, ಆದರೆ ಅವರು ಮಾತಾಡಿದ್ದನ್ನು ಎಲ್ಲೂ ದಾಖಲಿಸಲಿಲ್ಲ. ಅವರು ಬರೆದಿದ್ದೇ ಕಡಿಮೆ. ಅವರು ತರಗತಿಯಲ್ಲಿ ಮಾಡುತ್ತಿದ್ದ ಪಾಠ, ಬಿಡುವಿನಲ್ಲಿ ಆಡುತ್ತಿದ್ದ ಮಾತುಗಳ ಎಳೆ ಹಿಡಿದೋ ಸಂಪೂರ್ಣವಾಗಿ ಬರೆದುಕೊಂಡೋ ಹಲವರು ಹತ್ತಾರು ಪುಸ್ತಕಗಳನ್ನು ತಮ್ಮ ಹೆಸರಲ್ಲಿ ಮಾಡಿಕೊಂಡಿದ್ದಾರೆ. ಕಿರಂ ಅವರು ಕಣ್ಮರೆ ಆದಮೇಲೆ ಕೆಲವರ ಕೃತಿಗಳೇ ಹೊರಬರುತ್ತಿಲ್ಲ. ಏಕೆಂದರೆ ಮೂಲವೇ ಬತ್ತಿಹೋಗಿದೆ. ಇದು ಒಂದಾದರೆ, ಕೆಲವರು ಉನ್ನತ ವ್ಯಾಸಂಗ ಮಾಡುವಾಗ ಹಿರಿಯ ಮೇಷ್ಟ್ರುಗಳು ಮಾಡುತ್ತಿದ್ದ ಪಾಠಗಳು ಅಥವಾ ಟಿಪ್ಪಣಿಗಳನ್ನು ಸ್ವಂತ ಹೆಸರಲ್ಲಿ ಪುಸ್ತಕ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ಆದ್ಯ ಆಕರ ಎಂಬಂತೆ ಬಿಂಬಿಸಿ ಹಣ ಮಾಡುತ್ತಲೇ ಇದ್ದಾರೆ. ಇಲ್ಲೆಲ್ಲ ಯಾವ ನೈತಿಕತೆ ಕೆಲಸಮಾಡಬಲ್ಲುದು? ಇಲ್ಲೆಲ್ಲ ಕಾಡುವುದು ನಿತ್ಯಾನಂದರ ಗಂಭೀರ ಕಾಳಜಿ ಮಾತ್ರ ನೆನಪಾಗುತ್ತದೆ.  

ಏನೇ ಆದರೂ ಇಷ್ಟು ವರ್ಷಗಳ ತರುವಾಯವಾದರೂ ಕನ್ನಡ ಸಂಶೋದನೆಯ ಕ್ಷೇತ್ರದಲ್ಲಿ ಗಂಭೀರ ಚರ್ಚೆ ಆರಂಭವಾದುದು ಮಾತ್ರ ಸ್ವಾಗತಾರ್ಹ. ಬೇರೆ ಏನಾದರೂ ಇರಲಿ, ಇಂಥ ವಾದಕ್ಕೆ ನಿತ್ಯಾನಂದರು ತಮ್ಮ ಅನ್ವೇಷಣೆಯ ಮೂಲಕ ಮಾರ್ಗ ಹಾಕಿಕೊಟ್ಟರು, ಅದು ಪ್ರಕಟವಾಗದಿದ್ದರೆ ಇಂಥ ಬೆಳವಣಿಗೆ ಆಗುತ್ತಿರಲಿಲ್ಲ ಅನ್ನುವುದನ್ನು ಮಾತ್ರ ಅಲ್ಲಗಳೆಯಲಾಗುವುದಿಲ್ಲ. ಇದಕ್ಕಾಗಿ ನಿತ್ಯಾನಂದರನ್ನು ಅಭಿನಂದಿಸಬೇಕಿದೆ.ಮಾರ್ಗವೊಂದರ ಅನ್ವೇಷಣೆಯ ಹಿಂದೆ ನಿಜವಾಗಿ ಏನಿದೆ ಅನ್ನುವುದನ್ನು ತೋರಿಸುತ್ತಲೇ ಸಂಶೋಧನ ಕ್ರಮದ ಹೊಸ ನೋಟಕ್ಕಾಗಿ ಕೃತಿಯೊಂದನ್ನು ರಚಿಸಿದ ಅಜಕ್ಕಳ ಅವರನ್ನು ಅಭಿನಂದಿಸಬೇಕಿದೆ.

Friday, 1 December 2023

ಭಾರತ ಮತ್ತು ಅದರ ಜಿ.ಡಿ.ಪಿ.


ಭಾರತದ ಜಿಡಿಪಿ ಈ ವರ್ಷದಲ್ಲಿ ಅಂದರೆ 2022-23ರ ಸಾಲಿನಲ್ಲಿದ್ದ 38.78 ಲಕ್ಷ ಕೋಟಿ ರೂಗಳಿಗೆ ಪ್ರತಿಯಾಗಿ ಈ ಸಾಲಿನ ಎರಡನೆಯ ಅವಧಿಯಲ್ಲಿ 41.74 ಲಕ್ಷ ಕೋಟಿ ರೂಗಳಿಗೇರಿದೆ. 2022-23ನೆಯ ಹಣಕಾಸಿನ ವರ್ಷದಲ್ಲಿ65.67 ಲಕ್ಷ ಕೋಟಿ ರೂ ಇದ್ದ ಆದಾಯ ಈ ಸಾಲಿನಲ್ಲಿ 71.76 ಲಕ್ಷ ಕೋಟಿ ರೂ ಆಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.ಇದೀಗ ದೇಶದ ಜಿಡಿಪಿ 7.6 ಪ್ರತಿಶತವಾಗಿದೆ ಎಂದು ರಿಸರ್ವ ಬ್ಯಾಂಕ್ ಹೇಳಿದೆ. ಈ ಬೆಳವಣಿಗೆ  ಸ್ವಾಗತಾರ್ಹವೇನೋ ಸರಿ. ಆದರೆ ಈ ಜಿಡಿಪಿ ಬಂದುದು  ಕಟ್ಟಡ ನಿರ್ಮಾಣ, ವಾಣಿಜ್ಯ, ವ್ಯಾಪಾರದಿಂದ ಆಗಿದೆ. ಆದರೆ ಕೃಷಿ ಜಿಡಿಪಿ ಶೇ.3.3ರಷ್ಟಿದೆ. ಇದು ಆತಂಕಕಾರಿ. ಅಭಿವೃದ್ಧಿ ಬೇರೆ ಕ್ಷೇತ್ರದಲ್ಲಿ ಆಗುವುದಕ್ಕೂ ಕೃಷಿಯಲ್ಲಿ ಆಗುವುದಕ್ಕೂ ತುಂಬಾ ವ್ಯತ್ಯಾಸವಿದೆ. ಕೃಷಿಯಲ್ಲಿ ಏನಾದರೂ ನಮ್ಮ ದೇಶ ಇಷ್ಟು ಏರಿಕೆ ಕಂಡರೆ ಪ್ರಪಂಚದಲ್ಲಿ ಯಾರೂ ನಮ್ಮನ್ನು ಹಿಡಿಯಲಾರರು. ಕೃಷಿಯಲ್ಲಿ ಆಗುವ ಬೆಳವಣಿಗೆಯಿಂದ ಹತ್ತಾರು ವಲಯಗಳು ಬೆಳೆಯುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚುತ್ತದೆ. ಮೂಲಸೌಕರ್ಯಗಳು ಅಭಿವೃದ್ಧಿಯಾಗಿ ದೇಶದ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗುತ್ತದೆ. ಆದ್ದರಿಂದ ಈಗ ಜಿಡಿಪಿ ಏರಿದೆ ಎಂದು ಸಂಭ್ರಮಿಸುವ ಅಗತ್ಯವಿಲ್ಲ. ಕೃಷಿ ಕ್ಷೇತ್ರ ಬೆಳೆಯದೇ ನಮ್ಮ ದೇಶಕ್ಕೆ ಮಾತ್ರವಲ್ಲ, ಯಾರಿಗೂ ಭವಿಷ್ಯವಿಲ್ಲ. ಈ ಕಾರಣಕ್ಕೇ ಕುಮಾರವ್ಯಾಸ ಶತಮಾನಗಳ ಹಿಂದೆಯೇ ಕೃಷಿ ವಿಹೀನ ದೇಶ ವಿನಾಶ ಕಾಣುತ್ತದೆ ಎಂದು ಸಾರಿದ್ದಾನೆ. 

ಕೃಷಿ ಜಿಡಿಪಿ ಏರಿದಾಗ ಸಹಜವಾಗಿ ಸಾಮಾನ್ಯ ಜಿಡಿಪಿ ದರ ಕೂಡ ಏರುತ್ತದೆ. ಆದರೆ ಸಾಮಾನ್ಯ ಜಿಡಿಪಿ ಏರಿದರೆ ಕೃಷಿ ಜಿಡಿಪಿ ಏರಬೇಕಿಲ್ಲ. ಇದು ವಾಸ್ತವವನ್ನು ತೋರಿಸುತ್ತದೆ. ಏಕೆಂದರೆ ಸಾಮಾನ್ಯ ಜಿಡಿಪಿ ಏರಲು ಅನ್ಯ ಕ್ಷೇತ್ರಗಳ ಬೆಳವಣಿಗೆಯಿದ್ದರೂ ಸಾಕು. ಆದರೆ ಕೃಷಿ ಕ್ಷೇತ್ರದ ಜಿಡಿಪಿಯಿಂದ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಹಾಗಾಗಿ ಯಾವಾಗಲೂ ಕೃಷಿಗೆ ಉತ್ತೇಜನ ಕೊಡಿ ಅನ್ನುವುದು. ಆದರೆ ಸಾಮಾನ್ಯವಾಗಿ ಕೃಷಿಯನ್ನು ಎಲ್ಲ ಕಡೆಗೂ ಅಲಕ್ಷಿಸಲಾಗುತ್ತದೆ. ಇದು ದುರಂತ. ಇಂದಿಗೂ ಭಾರತ ಹಳ್ಳಿಗಳನ್ನು ಹೆಚ್ಚಾಗಿ ಹೊಂದಿದೆ. ಅಲ್ಲಿನ ವಿಶೇಷ ಚಟುವಟಿಕೆ ಕೃಷಿಯಾಗಿದೆ. ಅದು ಬೆಳೆದರೆ ದೇಶ ಸಹಜವಾಗಿ ಬೆಳೆಯುತ್ತದೆ. ಯಾವುದೇ ಆರ್ಥಿಕ ವರ್ಷವನ್ನು ಗಮನಿಸಿ. ಕೃಷಿ ಬೆಳವಣಿಗೆ ಕುಸಿದಾಗ ದೇಶ ಹಿಂದೆ ಬಿದ್ದಿದೆ.ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆದ್ದರಿಂದಲೇ ಹೇಳಿದ್ದು. ಈಗಿನ ನಮ್ಮ ಸಾಮಾನ್ಯ ಜಿಡಿಪಿ ದರವನ್ನು ನೋಡಿ ಸಂಭ್ರಮಪಡುವ ಅಗತ್ಯವಿಲ್ಲ. ಕೃಷಿ ಜಿಡಿಪಿ ಏರಿದಾಗ ಬೇಕಾದಷ್ಟು ಸಂಭ್ರಮಿಸಿ. ಅದರಲ್ಲಿ ತಪ್ಪಿಲ್ಲ. ಸಿನಿಮಾ ವಲಯದ ಆದಾಯ ಏರಿದರೆ ದೇಶದ  ಉಳಿದ ಯಾವ ಕ್ಷೇತ್ರಕ್ಕೆ  ಹಿತವಾಗುತ್ತದೆ?ಅದರಿಂದ  ಆ ಉದ್ಯಮ ಬೆಳೆಯುತ್ತದೆಯೇ ವಿನಾ ಇನ್ನೇನೂ ಆಗುವುದಿಲ್ಲ. ಇದರಂತೆ ಉಳಿದ ಬಹುತೇಕ ಕ್ಷೇತ್ರಗಳ ಬೆಳವಣಿಗೆಗೆ ಕೊಂಡಿಯಂಥ ಸಂಪರ್ಕವಿಲ್ಲ. ಆದರೆ ಕೃಷಿಗೆ ಹಾಗೂ ಉಳಿದ ಕ್ಷೇತ್ರಗಳಿಗೆ ಪರಸ್ಪರ ಕೊಂಡಿಯಂಥ ಸಂಪರ್ಕವಿದೆ. ಒಂದಕ್ಕೆ ನೆರವಾದರೆ ಅಥವಾ ಮುಂದೆ ಜರುಗಿದರೆ ಉಳಿದವು ತಾನಾಗಿ ಮುಂದೆ ಸರಿಯುತ್ತವೆ. ಇದಕ್ಕೆ ನಿದರ್ಶನವಾಗಿ ನಮ್ಮ ದೇಶದ ಜಾರ್ಖಂಡ್ ರಾಜ್ಯವನ್ನೇ ನೋಡಬಹುದು. ಕೆಲವು ವರ್ಷಗಳ ಹಿಂದೆ ಯಾವ ಅಭಿವೃದ್ಧಿಯೂ ಇಲ್ಲದಿದ್ದ ಈ ರಾಜ್ಯ ಕೃಷಿ ಬೆಳವಣಿಗೆಯ ಕಾರಣದಿಂದ ಬಹಳ ಮುಂದೆ ಬಂದಿದೆ. ಅಲ್ಲಿ ಕೇವಲ ಕೃಷಿಗೆಹಾಗೂ ಶಿಕ್ಷಣಕ್ಕೆ ಪ್ರಾಧಾನ್ಯ ಕೊಡಲಾಗುತ್ತಿದೆ, ನಮಗೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇಂಥ ಪ್ರಯೋಗಕ್ಕೆ ರಾಜ್ಯಗಳು ತೆರೆದುಕೊಳ್ಳದೇ ಸಾಂಪ್ರದಾಯಿಕ ಕ್ರಮವನ್ನೇ ಮುಂದುವರೆಸಿಕೊಂಡುಹೋಗುತ್ತಿವೆ. ಇನ್ನಾದರೂ ಹೊಸ ವಿಧಾನಗಳಿಗೆ ತೆರೆದುಕೊಳ್ಳಬೇಕಿದೆ.