Monday, 28 August 2023

ಉಪಯುಕ್ತ ಕೃತಿ


'ಕನ್ನಡ ಸಂಶೋಧನೆಗೆ ಮುಂಬೈ ಕೊಡುಗೆ' ಎಂಬ ಕೃತಿಯನ್ನು ಮುಂಬೈ ವಿವಿಯ ಕನ್ನಡ ವಿಭಾಗ ಈಚೆಗೆ ಪ್ರಕಟಿಸಿದೆ. ಇದು ಅಲ್ಲಿನ ಕನ್ನಡ ವಿಭಾಗದ ವಿದ್ಯಾರ್ಥಿಯೊಬ್ಬರು ರಚಿಸಿದ ಕೃತಿ ಎನ್ನುವುದು ಗಮನಾರ್ಹ. ನಿಜ. ಇದು ನಿಜಕ್ಕೂ ಸಂಶೋಧನಾರ್ಹ ಸಂಗತಿ. ಪ್ರಸ್ತುತ ಕೃತಿಯಲ್ಲಿ ಈ ಕುರಿತು ಎಲ್ಲ ಬಗೆಯ ಪಕ್ಷಿ ನೋಟವನ್ನು ಕೊಡಲಾಗಿದೆ. ಅಂದರೆ ಬ್ರಿಟಿಷ್ ಕಾಲದ ವಿದ್ವಾಂಸರಾದ ಫ್ಲೀಟ್, ರಸೆಲ್ ಆದಿಯಾಗಿ ಸ್ಥಳೀಯರಾದ ಕರ್ಕಿ ಶಾಸ್ತ್ರಿಗಳು ರಾಹ ದೇಶಪಾಂಡೆ, ಶ್ರೀನಿವಾಸ ಹಾವನೂರ ಮೊದಲಾದ ಹಿರಿಯರ ಕೆಲಸದಿಂದ ಮೊದಲಾಗಿ ಈಚಿನ ಕನ್ನಡ ವಿಭಾಗದ ಅಧ್ಯಯನ ಪ್ರಬಂಧಗಳು, ಪಿಎಚ್ ಡಿ. ಪ್ರಬಂಧಗಳ ಪಟ್ಟಿ, ಎಂಫಿಲ್ ಪ್ರಬಂಧಗಳು ಇತ್ಯಾದಿ ಮಾಹಿತಿಗಳನ್ನು ನೀಡಲಾಗಿದೆ. ಇವನ್ನೆಲ್ಲ ಪರಿಶೀಲಿಸಿದರೆ ನಿಜಕ್ಕೂ ಇದೊಂದು ಪಿಎಚ್ ಡಿ ವಿಷಯವೇ ಆಗಿ ಕಾಣಿಸುತ್ತದೆ. ಮುಂದೆ ಯಾರಾದರೂ ಈ ಬಗ್ಗೆ ಕೆಲಸ ಮಾಡಲು ಕೂಡ ಇದು ಉತ್ತೇಜನ ನೀಡುತ್ತದೆ. ಇದು ಈ ಕೃತಿಯ ಸಾರ್ಥಕತೆ. ಕಲಾ ಭಾಗ್ವತ್ ಎಂಬ ವಿದ್ಯಾರ್ಥಿಯ ಆಸಕ್ತಿಯ ಕಾರಣದಿಂದ ಇದು ಹೊರಬಂದಿದೆ. ಇದನ್ನು ಉತ್ತೇಜಿಸಿದ ವಿಭಾಗ ಇದನ್ನು ಕೃತಿ ರೂಪವಾಗಿ ಪ್ರಕಟಿಸಿರುವುದು ನಿಜಕ್ಕೂ ಸ್ತುತ್ಯರ್ಹವಾಗಿದೆ. ಇಂಥ ಕೆಲಸಗಳಿಂದಲೇ ಮುಂಬೈ ಕನ್ನಡ ಸಂಶೋಧನೆಗಳು ಬೇರೆಕಡೆಗಳಿಂದ ಭಿನ್ನವಾಗಿರುವುದು. ಅಲ್ಲಿ ಕೆಲಸದ ಗುಣ ಮುಖ್ಯವೇ ವಿನಾ ಯಾರು ಮಾಡಿದ್ದು ಎನ್ನುವುದಲ್ಲ. 

ದೇಶದಲ್ಲಿ 1850ರ ದಶಕದಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯಗಳಲ್ಲಿ ಮದ್ರಾಸ್, ಕೊಲ್ಕೊತಾಗಳ ಜೊತೆಗೆ ಮುಂಬೈ ಕೂಡ ಒಂದು. ಬ್ರಟಿಷರು ತಮ್ಮ ಚಿಂತನೆಯನ್ನು ದೇಶಾದ್ಯಂತ ಹರಡಲು ಉನ್ನತ ಶಿಕ್ಷಣವನ್ನು ಅಸ್ತ್ರವನ್ನಾಗಿ ಮಾಡಿಕೊಂಡರು. ಇದರ ಪರಿಣಾಮವಾಗಿ ಉನ್ನತ ಶಿಕ್ಷಣ ದೇಶದೆಲ್ಲೆಡೆ ವ್ಯಾಪಿಸುವಂತಾಯಿತು. ಕರ್ನಾಟಕದ ಉತ್ತರ ¨ಭಾಗ ಅಥವಾ ಉತ್ತರ ಕರ್ನಾಟಕ ಪ್ರದೇಶಗಳು ಪ್ರದೇಶಿಕವಾಗಿ ಮುಂಬೈಗೆ ಸಮೀಪವಾದ್ದರಿಂದ ಆ ಭಾಗದ ಜನ ಉನ್ನತ ಶಿಕ್ಷಣ ಪಡೆಯಲು ಮುಂಬೈನತ್ತ ಮುಖ ಮಾಡುವುದು ಸಹಜವಾಯಿತು. ಇದರ ಫಲವಾಗಿ ಉತ್ತರ ಕರ್ನಾಟಕ ಭಾಗದ ಜನ ಕನ್ನಡದ ಬಗ್ಗೆ ಹೆಚ್ಚು ಕೆಲಸಮಾಡಲು ಸಾಧ್ಯವಾಯಿತು. ಕರ್ನಾಟಕ ಏಕೀಕರಣ ಮಾತ್ರವಲ್ಲ, ಸಂಶೋಧನೆ ಕೂಡ ಮುಂಬೈ ಪ್ರಭಾವದಿಂದ ಹೊಗೆ ಉಳಿಯಲು ಸಾಧ್ಯವಾಗಲಿಲ್ಲ. ಕರ್ಕಿಯವರಂಥ ವಿದ್ವಾಂಸರು ಆಧುನಿಕ ಕನ್ನಡದ ಅಧ್ಯಯನಕ್ಕೆ ಹಾಕಿಕೊಟ್ಟ ಅಡಿಪಾಯವನ್ನು ಕನ್ನಡಿಗರು ಮರೆಯುವಂತಿಲ್ಲ. ದುರಂತವೆಂದರೆ ಆಧುನಿಕ ಕನ್ನಡ ಅಧ್ಯಯನದಲ್ಲಿ ಈ ಸಂಗತಿಯನ್ನು ಮೈಸೂರು ಅಥವಾ ದಕ್ಷಿಣ ಕರ್ನಾಟಕ ಭಾಗದ ವಿದ್ವಾಂಸರು ಅಷ್ಟಾಗಿ ಗುರುತಿಸುವುದಿಲ್ಲ. ಅಷ್ಟೇ ಅಲ್ಲ, ಕನ್ನಡದ ಆರಂಭಿಕ ಕೃತಿಗಳು ಕೂಡ ಉತ್ತರ ಕರ್ನಾಟಕ ಭಾಗದವೇ ಆಗಿವೆ ಎಂಬುದನ್ನು ದಕ್ಷಿಣ ಭಾಗದ ಜನತೆಗೆ ಅರಗಿಸಿಕೊಳ್ಳುವುದು ಕಷ್ಟದ ಸಂಗತಿಯಾಗಿದೆ.  ಆಧುನಿಕ ಕನ್ನಡ ಸಂಶೋಧನೆ ಮಾತ್ರವಲ್ಲ,  ಶಸನಗಳ ವಿಷಯದಲ್ಲೂ ಉತ್ತರ ಕರ್ನಾಟಕದ ಪಾತ್ರ ಹಿರಿದಾದುದು. ಹನ್ನಿಡಿ ಶಾಸನ ದಕ್ಷಿಣ ಕರ್ನಾಟಕದಲ್ಲಿ ದೊರೆತರೂ ಅದು ಉತ್ತರ ಭಾಗಕ್ಕೆ ಸಂಬಂಧಿಸಿದ ಕದಂಬರಿಗೆ ಸೇರಿದ್ದು. ತಾಳಗುಂದದ ಎಲ್ಲ ಶಸನಗಳ ಅಧ್ಯಯನ ಸರಿಯಾಗಿ ಹೊರಬಿದ್ದರೆ ಪ್ರಚೀನ ಕನ್ನಡ ಶಾಸನ ದೊರೆತ ಪಟ್ಟ ಕೂಡ ಕರ್ನಾಟಕದ ದಕ್ಷಿಣ ಭಾಗಕ್ಕೆ ಲಭಿಸುವುದು ಕಷ್ಟ. ಒಟ್ಟಿನಲ್ಲಿ ಕರ್ನಾಟಕದ ಸಾಹಿತ್ಯ ಸಂಸ್ಕøತಿಗೆ ಉತ್ತರ ಭಾಗದ ಕೊಡುಗೆ ಅನನ್ಯ. ಬಹು ಪ್ರಾಚೀನವಾದ ಈ ಪರಂಪರೆಯನ್ನು ಆಧುನಿಕ ಸಂದರ್ಭದಲ್ಲಿ ಮುಂಬೈ ಪ್ರಾಂತ್ಯ ಮುಂದುವರೆಸಿದೆ, ಅದಕ್ಕೆ ಮುಂಬೈ ವಿವಿ ಕೈ ಜೋಡಿಸಿದೆ ಎಂಬುದು ಸುಳ್ಳಲ್ಲ. ಕಲ್ಯಾಣ ಕ್ರಾಂತಿಯಾದ ಬಳಿಕ ದಕ್ಷಿಣ ಕರ್ನಾಟಕದ ಕಡೆಗೆ ಬಂದ ಕವಿಶಕ್ತಿಯ ಜನ ಕರ್ನಾಟಕದ ದಕ್ಷಿಣ ಭಾಗದಲ್ಲಿ ಸಾಹಿತ್ಯ ರಚನೆಗೆ ಮುಂದಾದರು. ಅದುವರೆಗೆ ಲಭಿಸುವ ಎಲ್ಲ ಪ್ರಾಚೀನ ಕನ್ನಡ ಕೃತಿಗಳೂ ಉತ್ತರ ಕರ್ನಾಟಕ ಭಾಗಕ್ಕೆ ಸೇರಿದವೇ ಆಗಿವೆ ಎಂಬುದನ್ನು ಸಾಂದರ್ಭಿಕವಾಗಿ ಗಮನಿಸಬೇಕು. ಪ್ರಸ್ತುತ ಕೃತಿಯಲ್ಲಿ ಇದನ್ನೆಲ್ಲ ಗುರುತಿಸುವ ಸಾಹಸಕ್ಕೆ ಕೈ ಹಾಕಿಲ್ಲವಾದರೂ ಆಧುನಿಕ ಕನ್ನಡದ ಸಂಶೋಧನೆಯಲ್ಲಿ ಮುಂಬೈ ಕೊಡುಗೆಯನ್ನು ಸಮರ್ಥವಾಗಿ ಗುರುತಿಸಲಾಗಿದೆ.

128 ಪುಟಗಳ ಕಿರು ಹೊತ್ತಗೆ ಇದು. ಕನ್ನಡ ಸಂಶೋಧನೆಗೆ ಮುಂಬೈ ಕೊಡುಗೆಯಾದಿಯಾಗಿ ಸಂಶೋಧನೆಯ ಆಧುನಿಕ ಅಧ್ಯಯನ ಕ್ರಮ, ವಿಧಾನಗಳ ಬಗ್ಗೆ ಕೂಡ ಹೇಳಲಾಗಿದ್ದು ಸಂಶೋಧನೆಯ ಬಗ್ಗೆ ಆಸಕ್ತಿ ಉಳ್ಳವರಿಗೆ ಹಾಗೂ ಯುಜಿಸಿಯಂಥ ಪರೀಕ್ಷೆ ಬರೆಯುವವರಿಗೆ ಕೂಡ ಉಪಯುಕ್ತವಾಗಿದೆ. 

  


Friday, 25 August 2023

ಒಬ್ಬ ಅಸಾಧಾರಣ ಲೇಖಕನ ಸುತ್ತ


'ಭಾಷೆಗಳ ಗಡಿ ಗೆದ್ದ ಭಾರತೀಯ' ಎಂಬುದು ಮುಂಬೈ ವಿವಿಯ ಕನ್ನಡ ವಿಭಾಗ ಈಚೆಗೆ ಹೊರತಂದ ಮಾನ್ಯ ಎಸ್ ಎಲ್ ಭೈರಪ್ಪನವರನ್ನು ಕುರಿತ ಒಂದು ಪರಿಚಯಾತ್ಮಕ ಕೃತಿ.  ಇದನ್ನು ಸಂಪಾದಕರಾದ ವಿಭಾಗದ ಮುಖ್ಯಸ್ಥರ ಜೊತೆಗೆ ಉಪ ಸಂಪಾದಕರಾದ ಡಾ. ಉಮಾರಾಮರಾವ್ ಸೇರಿ ಹೊರತಂದಿದ್ದಾರೆ. ಭೈರಪ್ಪನವರ ಹೆಸರು ಕೇಳದ ದೇಶದ ಸಾಹಿತ್ಯ ಪ್ರೇಮಿ ಇಲ್ಲ. ಅವರ ಜನಪ್ರಿಯತೆ ಅಷ್ಟಿದೆ. ಈ ಕೃತಿ ಹೊರಬಂದಿದ್ದು ಈ ಕಾರಣಕ್ಕಾಗಿ ಅಲ್ಲ, ಬದಲಾಗಿ ಅಂಥ ಮಹಾನ್ ಲೇಖಕರಿಗೆ ಕಿಂಚಿತ್ತಾದರೂ ನ್ಯಾಯ ಸಲ್ಲಿಸಲು. ಇದಕ್ಕೆ ಕಾರಣವಿದೆ. ಭೈರಪ್ಪನವರು ದೇಶದಲ್ಲಿ ಕನ್ನಡಕ್ಕೆ ಇಂದಿನ ಕಾಲದಲ್ಲಿ ಗೌರವ ತಂದುಕೊಟ್ಟ ಲೇಖಕರಾದರೂ ಅವರ ಬಗ್ಗೆ ಕನ್ನಡದಲ್ಲಿ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಸಾಹಿತ್ಯಕ ಗೌರವ ಸಂದಿಲ್ಲ. ಇದಕ್ಕೆ ಸಾಹಿತ್ಯಕ ಧೋರಣೆ ಸಲ್ಲದ ಗುಂಪುಗಾರಿಕೆ ಸಾಹಿತ್ಯೇತರ ಸಿದ್ಧಾಂತದ ಕಾರಣಗಳು ಸೇರಿವೆಯಾದರೂ ಒಬ್ಬ ಸಾಹಿತಿ ಮತ್ತು ಸಾಹಿತ್ಯ ಕೃತಿಯನ್ನು ಸಾಹಿತ್ಯವಾಗಿ ನೋಡಲಾಗದ ದುರಂತದ ಸ್ಥಿತಿ ಕನ್ನಡದಲ್ಲಿ ನಿರ್ಮಾಣವಾಗಿದೆ ಎಂಬುದಕ್ಕೆ ಜ್ವಲಂತ ಉದಾಹರಣೆ ಕನ್ನಡದಲ್ಲಿ ಭೈರಪ್ಪನವರ ಕೃತಿಗಳ ಹಾಗೂ ಅವರ ಚಿಂತನೆಗಳ ಅವಗಣನೆ.

ಇದು ಬರಿಯ ಮಾತಲ್ಲ, ಪ್ರಸ್ತುತ ಕೃತಿಯ ಪ್ರಸ್ತಾವನೆಯಲ್ಲಿ ಒಂದು ನಿದರ್ಶನ ಕೊಡಲಾಗಿದೆ ಐದಾರು ದಶಕಗಳ ಹಿಂದೆ ದೆಹಲಿಯಲ್ಲಿ ಎನ್ ಬಿಟಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡಿದವರು ಉದ್ದೇಶಪೂರ್ವಕವಾಗಿ ಭೈರಪ್ಪನವರ ಕೃತಿ ಪರ್ವದ ಬಗ್ಗೆ ಉಲ್ಲೇಖ ಮಾಡುವುದಿಲ್ಲ, ಆದರೆ ಅಷ್ಟರಲ್ಲಿ ಆ ಕೃತಿಯ ಅನುವಾದ ಓದಿದ್ದ ಅನ್ಯ ಭಾಷೆಯ ಹಿರಿಯರು ಈ ಕೃತಿ ಭಾರತಕ್ಕೆ ಸೇರಿದ್ದು ಎಂಬಂತೆ ಮಾತನಾಡುತ್ತಾರೆ. ಆಗ ಕನ್ನಡ ಪ್ರತಿನಿಧಿಯ ಪ್ರತೊಕ್ರಿಯೆ ಏನಾಗಿತ್ತು ಎಂಬ ಉಲ್ಲೇಖ ಇಲ್ಲಿ ಬರುವುದಿಲ್ಲ. ಅದನ್ನು ನಾವು ಊಹಿಸಬಹುದು. ಹೀಗೆ ಲಾಗಾಯ್ತಿನಿಂದ  ಆಧುನಿಕ ಕನ್ನಡ ಸಾಹಿತ್ಯ ಹಾಗೂ ವಿಮರ್ಶೆಗಳನ್ನು ಆಳುತ್ತ ಬಂದಿರುವ ಹಿತಾಸಕ್ತ ಕನ್ನಡದಲ್ಲಿ ಆಳವಾಗಿ ಬೇರೂರಿದೆ. ಅಂಥ ಹಿತಾಸಕ್ತಿಯ ವಿರುದ್ಧ ಇದು ಒಂದು ಪ್ರಾಮಾಣಿಕ ಯತ್ನ ಮಾಡಿದೆ. ಅದರ ಫಲ ಈ ಕೃತಿ. 

ಒಂದು ಗೊತ್ತಾದ ಗುಂಪು ಅಥವಾ ಸೋ ಕಾಲ್ಡ್ ಪ್ರಗತಿಪರ ಪಡೆ ಕನ್ನಡ ಸಾಹಿತ್ಯವನ್ನು ಪ್ರತಿಗಾಮಿ ಹಾಗೂ ಪ್ರಗತಿಪರ ಎಂಬ ಗುಂಪಾಗಿ ಒಡೆದು ಪ್ರಗತಿಪರ ಎಂದು ತಾನು ಗುರುತಿಸಿದ ಲೇಖಕ ವರ್ಗದ ಸಾಹಿತ್ಯವನ್ನು ಮಾತ್ರ ಕೈಗೆತ್ತಿಕೊಳ್ಳುತ್ತದೆ. ಉಳಿದವನ್ನು ಓದುಗರು ಕೂಡ ಮುಟ್ಟದಂತೆ ದೂರ ಸರಿಸುವ ಧೋರಣೆ ತಾಳುತ್ತದೆ. ಇಂದಿಗೂ ಕನ್ನಡದ ಶೈಕ್ಷಣಿಕ ಸಂಸ್ಥೆಗಳಲ್ಲಿ ಇದು ಬದಲಾಗಿಲ್ಲ. ಹೀಗಾಗಿಯೇ ದೇಶವೇ ಹೆಮ್ಮೆಪಡುವ ಭೈರಪ್ಪರಂಥ ಲೇಖಕರ ಬರೆಹ ಎಲ್ಲಿಯೂ ಪಠ್ಯವಾಗದಂತೆ ಆ ಲಾಬಿ ಕೆಲಸ ಮಾಡುತ್ತದೆ. ಪಠ್ಯ ಮಾತ್ರವಲ್ಲ, ಪಿಎಚ್ಡಿ ಯಂಥ ಗಂಭೀರ ಅಧ್ಯಯನಕ್ಕೂ ಭೈರಪ್ಪನವರಂಥ ಲೇಖಕರು ಬಾರದಂತೆ ಅಡ್ಡಿಪಡಿಸುವ ಕೆಲಸವನ್ನೂ ವ್ಯವಸ್ಥಿತವಾಗಿ ಅದು ಮಾಡುತ್ತಿದೆ. ಆದರೇನು ಬೆಳಕನ್ನು ಮುಚ್ಚಿಡುವುದು ಹೇಗೆ? ಇಲ್ಲಿ ಅಲ್ಲದಿದ್ದರೆ ಅಲ್ಲಿ ಅದು ಹೊರಬೀಳುತ್ತದೆ. ಭೈರಪ್ಪನವರೂ ಅಷ್ಟೇ. ಮೂಲತಃ ತತ್ವ್ತಶಾಸ್ರ್ತಜ್ಞರಾದ ಅವರಿಗೆ ಇವೆಲ್ಲ ತಿಳಿಯದ ವಿಷಯವಲ್ಲ. ಹಾಗಾಗಿ ಅವರು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಬದಲು ಹೊಸ ಕೃತಿ ರಚನೆಯಲ್ಲಿ ತೊಡಗಿ ಮತ್ತೆ ಅಂಥವರ ಹೊಟ್ಟೆ ಉರಿಸುತ್ತಾರೆ. ಇದುವರೆಗೂ ಭೈರಪ್ಪರಂಥ ಭೈರಪ್ಪನವರಿಗೆ ದೇಶದ ಪ್ರತಿಷ್ಠಿತ ಜ್ಞಾನಪೀಠಪ್ರಶಸ್ತಿ ಬಾರದಂತೆ ತಡೆಯುವ ವ್ಯವಸ್ಥಿತ ಕಾರ್ಯದಲ್ಲೂ ಅಂಥ ಪಡೆ ಯಶ ಕಂಡಿದೆ. ನಿಜವಾಗಿ ನಮ್ಮ ದೇಶವಲ್ಲದೇ ಅನ್ಯದೇಶದಲ್ಲಾಗಿದ್ದರೆ ಅವರಿಗೆ ಇಷ್ಟರಲ್ಲಿ ಸಾಹಿತ್ಯಕ ನೋಬಲ್ ಬರುತ್ತಿತ್ತು ಅನಿಸುತ್ತದೆ. ಸಾಹಿತ್ಯಕ್ಕೆ ಇದುವರೆಗೆ ಸಂದ ನೋಬಲ್ ಪಟ್ಟಿ ನೋಡಿದರೆ ಈ ಮಾತು ಮತ್ತಷ್ಟು ಸ್ಪಷ್ಟವಾಗುತ್ತದೆ. ಆದರೆ ನಿಜವಾದ ಸಾಹಿತಿಗೆ ಪ್ರಶಸ್ತಿ ಅಮುಖ್ಯ. ನಿಜವಾದ ಓದುಗರೇ ಅವನ ನಿಜ ಪ್ರಶಸ್ತಿ. ಅದು ಅವರಿಗೆ ದೇಶ ಭಾಷೆಗಳ ಗಡಿ ಮೀರಿ ಲಭಿಸಿದೆ. ಹೀಗಿರುವಾಗ ಇನ್ಯಾವ ಜ್ಞಾನಪೀಠ? ಇನ್ಯಾವ ನೋಬೆಲ್ ಚಿಂತೆ? ಆ ಮಟ್ಟಿಗೆ ಭೈರಪ್ಪನವರು ಬೆಳೆಯುವುದನ್ನು ಯಾವ ಲಾಬಿಯೂ ತಡೆಯಲು ಸಾಧ್ಯವಾಗಲಿಲ್ಲ. ಛೆ. ಭೈರಪ್ಪನವರು ನಮ್ಮ ಭಾಷೆಯ ಮೂಲ ಸಾಹಿತಿ ಅಲ್ಲವಲ್ಲಾ ಎಂದು ಅಲವತ್ತುಕೊಳ್ಳುವ ಓದುಗರಿಗೆ ಕೊರತೆ ಇಲ್ಲ. ಆದರೆ ಅನುವಾದದ ಮೂಲಕ ಅಂಥ ಓದುಗರು ಭೈರಪ್ಪರನ್ನು ತಮ್ಮ ಸ್ವಂತ ಸಾಹಿತಿಯಾಗಿ ಸ್ವೀಕರಿಸಿದ್ದಾರೆ. ಮರಾಠಿಗರಂತೂ ಭೈರಪ್ಪ ತಮ್ಮದೇ ಸಾಹಿತಿ, ಕರ್ನಾಟಕದಲ್ಲಿ ಅವಕಾಶವಶಾತ್ ಇದ್ದಾರೆಂದು ಇಂದಿಗೂ ಭಾವಿಸುತ್ತಾರೆ. ಹೀಗೆ ಭೈರಪ್ಪನವರು ಇತರರ ಮನದಲ್ಲಿ ಕನ್ನಡಿಗರ ಬಗ್ಗೆ ಅಸೂಯೆ ಹುಟ್ಟುವಂತೆ ಮಾಡಿ ಅಸೂಯೆ ಕೂಡ ಗುಣಾತ್ಮಕವಾಗಬಲ್ಲುದು ಎಂದು ಸಾಧಿಸಿದ್ದಾರೆ. ಇದು ಕನ್ನಡಿಗರ ನಿಜವಾದ ಹೆಮ್ಮೆ. ಭೈರಪ್ಪನವರಿಗೆ ಕನ್ನಡಿಗರಿಂದ ಸಲ್ಲಬೇಕಾದ ಗೌರವ ಸಲ್ಲಲಿ, ಬಿಡಲಿ ಭೈರಪ್ಪನವರಂತೂ ಕನ್ನಡದ ಋಣವನ್ನು ಈ ಮೂಲಕ ಎಂದೋ ತೀರಿಸಿಬಿಟ್ಟಿದ್ದಾರೆ ಓದುಗರ ಕಡೆಯಿಂದ ಸದಾ ಇರುವ ಇಂಥ ಅತೃಪ್ತಿ ನಿಜವಾದ ಸಾಹಿತಿಗೆ ಸಲ್ಲುವ ಗೌರವ. ಅದು ಭೈರಪ್ಪನವರಿಗೆ ಯಾವಾಗಲೂ ಸಲ್ಲುತ್ತ ಬಂದಿದೆ.ಭೈರಪ್ಪನವರ ಸಾಹಿತ್ಯದ ಒಂದು ವಿಶಿಷ್ಟ ಗುಣ ಎಂದರೆ ಅವರಿಗೆ ಸದಾ ಇರುವ ಯುವ ಓದುಗ ವರ್ಗ. ಅನೇಕರಿಗೆ ಇದು ದುರ್ಲಭ. ಅವರು ಆಯ್ದುಕೊಳ್ಳುವ ವಸ್ತು ವಿಷಯಗಳಿಂದ ಹಿರಿಯರು ಅವರತ್ತ ಇರುವುದು ಸಹಜ. ಹಾಗೆಯೇ ಯುವ ಜನತೆ ಅತ್ತ ಆಕರ್ಷಿತರಾಗುವುದು ಅಚ್ಚರಿಯ ಸಂಗತಿ ಅನ್ನುವುದಕ್ಕಿಂತ ಇದಕ್ಕೆ ಅವರ ಬರೆಹದ ಆಯಸ್ಕಂತೀಯ ಶಕ್ತಿ ಕಾರಣ ಅನ್ನದೇ ಬೇರೆ ಮಾತಿಲ್ಲ. 

ಪ್ರಸ್ತುತ ಕೃತಿ ಸುಮಾರು 215 ಪುಟಗಳಷ್ಟಿದ್ದು, ಇದರಲ್ಲಿ ಪ್ರಬುದ್ಧವಾದ 15 ಲೇಖನಗಳಿವೆ. ಜೊತೆಗೆ ಭೈರಪ್ಪನವರಿಗೆ ಸಂಬಂಧಿಸಿದ ಕೃತಿ, ಪ್ರಶಸ್ತಿ ಇತ್ಯಾದಿ ವಿವರವುಳ್ಳ ಅನುಬಂಧವಿದೆ. ಭೈರಪ್ಪನವರಿಗೆ ಸಂಬಂಧಿಸಿದ ಕಿರು ವಿಶ್ವಕೋಶ ಇದಾಗಿದೆ. ಅವರ ಬಗ್ಗೆ ಅವರ ಸಾಹಿತ್ಯ ಮತ್ತದರ ಪ್ರಭಾವದ ಬಗ್ಗೆ ತಿಳಿಯಬಯಸುವ ಎಲ್ಲರಿಗೂ ಇದೊಂದು ಕೈಪಿಡಿಯಾಗಿದೆ. ತಮ್ಮ ಇಪ್ಪತ್ತೈದು ಕಾದಂಬರಿಗಳ ಮೂಲಕ ಜನಮನ ಮುಟ್ಟಿ ಎಚ್ಚರಿಸಿದ ಭೈರಪ್ಪನವರು ಮತೇನು ಬರೆಯುತ್ತಿರಬಹುದೆಂಬ ಕುತೂಹಲ ಇಂದಿನ ದಿನದಲ್ಲೂ ಹುಟ್ಟುವಂತೆ ಮಾಡಿದ್ದು ಕಡಿಮೆ ಸಾಧನೆ ಅಲ್ಲ. ಪುಸ್ತಕಗಳ ಕಡೆ ತಿರುಗಿಯೂ ನೋಡದ ವಿಚಿತ್ರ ವಾತಾವರಣ ನಮ್ಮ ಸಮಾಜದಲ್ಲಿ ರೂಪುಗೊಂಡಿರುವಾಗ, ಲೇಖಕನೊಬ್ಬ ಮುಂದೆ ಮತ್ತೇನು ಬರೆಯುತ್ತಾನೆಂದು ಜೂಜು ಕಟ್ಟುವ ಸ್ಥಿತಿ ನಿರ್ಮಿಸುವುದು ಸಣ್ಣ ಮಾತೇ? ಒಬ್ಬಲೇಖಕನ ಕೃತಿಗೆ ಮುದ್ರಣ ಪೂರ್ವ ಪುಸ್ತಕ ಬುಕಿಂಗ್, ಮುಂಗಡ ಹಣ ಪಾವ್ತಿಯಂಥ ಹೊಸ ಟ್ರೆಂಡ್ ನಿರ್ಮಿಸಿದವರು ಭೈರಪ್ಪನವರು. ಲೇಖಕನೊಬ್ಬನಿಗೆ ಇಂಥ ಗೌರವ ಲಭಿಸುವಂತಾದುದು ಕೂಡ ಅವರಿಂದಲೇ. ನಟರಿಗೆ ಮಾತ್ರ ಸಲ್ಲುತ್ತಿದ್ದ ಸ್ಟಾರ್ ಪಟ್ಟ ಸಾಹಿತಿಗೆ ಒಲಿದಿದ್ದರೆ ಅದು ಭೈರಪ್ಪರಿಂದ. ಇದಕ್ಕೆಲ್ಲ ನಿದರ್ಶನಗಳು. ಈ ಕೃತಿಯಲ್ಲಿ ಸಾಕಷ್ಟು ಲಭಿಸುತ್ತವೆ. ವೈವಿಧ್ಯಮಯ ಲೇಖನಗಳಿಂದ ಈ ಕೃತಿ ಮನಸೆಳೆಯುತ್ತದೆ. ಒಂದು ಸಂಗ್ರಹಯೋಗ್ಯ ಕೃತಿ ಇದು. ಇಂಥ ಕೃತಿಯನ್ನು ಹೊರತಂದ ಮುಂಬೈ ವಿವಿಯ ಕನ್ನಡ ವಿಭಾಗಕ್ಕೆ ಅಭಿನಂದನೆಗಳು ಸಲ್ಲಬೇಕು. ಕನ್ನಡಿಗರಿಂದ ಸೂಕ್ತ ಓದಿನ ಮೂಲಕ ಅದು ಸಲ್ಲುತ್ತದೆ ಎಂದು ಧಾರಾಳವಾಗಿ ಹೇಳಬಹುದು.

Wednesday, 23 August 2023

ಸಮಾನ ನಾಗರಿಕ ಸಂಹಿತೆ - ಒಂದು ಸ್ತುತ್ಯರ್ಹ ಪ್ರಯತ್ನ

 


ಇದೀಗ ದೇಶಾದ್ಯಂತ ನಡೆಯುತ್ತಿರುವ ಪ್ರಮುಖ ಚರ್ಚೆ ಅಂದರೆ ಅದು ಏಕರೂಪ ನಾಗರಿಕ ಸಂಹಿತೆಯ ಪರ ವಿರೋಧ ವಿಷಯ. ಮಾಧ್ಯಮಗಳಿಂದ ಹಿಡಿದು ಊರಿನ ಅರಳೀ ಕಟ್ಟೆಯವರೆಗೆ ಎಲ್ಲ ಕಡೆ ಇದು ಹರಿದಾಡುತ್ತಿದೆ. ಆದರೆ ಮಾಧ್ಯಮದಲ್ಲಿ ಚರ್ಚೆಗೆ ಬರುವವರಿಂದ ಹಿಡಿದು ಊರ ಗೌಡರವರೆಗೆ ಯಾರಿಗೂ ಈ ಸಂಹಿತೆಯ ಆಮೂಲಾಗ್ರ ಮಾಹಿತಿ ಇದ್ದಂತೆ ಕಾಣುವುದಿಲ್ಲ. ಇರುವ ಒಂದೆರಡು ಮಾಹಿತಿಯನ್ನೇ ಹಿಂದೆ ಮುಂದೆ ಮಾಡಿ ಅಥವಾ ಸಂಹಿತೆಯ ಪರ ಇಲ್ಲವೇ ವಿರೋಧ ಪಕ್ಷ ವಹಿಸಿ ವಕಾಲತ್ತು ಮಾಡುವುದೇ ಎಲ್ಲ ಕಡೆ ಕಾಣುತ್ತದೆ. ಆದರೆ ಇದರ ಹಿಂದೆ ಮುಂದೆ, ಹಾಗೂ ಮುನ್ನೋಟಗಳ ಆಳ ವಿವರ ಎಲ್ಲಿಯೂ ಸಿಗುವುದಿಲ್ಲ. ಇಂಥ ಸಂದರ್ಭದಲ್ಲಿ ಚಾಣಕ್ಯ ವಿಶ್ವವಿದ್ಯಾಲಯದ ಮಿತ್ರರು ಸೇರಿ 'ಸಮಾನ ನಾಗರಿಕ ಸಂಹಿತೆ, ನಿನ್ನೆ ಮೊನ್ನೆ, ಇಂದು-ನಾಳೆ' ಎಂಬ ಕೃತಿಯನ್ನು ಪ್ರಕಟಿಸಿ ಉಪಕರಿಸಿದ್ದಾರೆ. ಉಪಕಾರ ಏಕೆಂದರೆ, ಈ ಸಂಹಿತೆ ಬಗ್ಗೆ ಮಾತಾಡುವ ಎಲ್ಲರಿಗೂ ಪೂರಕ ಮಾಹಿತಿಯನ್ನು ಅಧಿಕೃತವಾಗಿ ಇದು ಕೊಡುತ್ತದೆ. ನಮ್ಮ ರಾಜ್ಯದಲ್ಲಿ ಸಾಕಷ್ಟು ಏಕ ವಿಷಯಕ ವಿಶ್ವವಿದ್ಯಾಲಯಗಳಿವೆ, ಕಾನೂನು ವಿವಿಯೂ ಇದೆ. ಸಾಕಷ್ಟು ಕಾನೂನು ಕಾಲೇಜುಗಳಿವೆ, ಅಸಂಖ್ಯ ಕಾನೂನು ಪಂಡಿತರಿದ್ದಾರೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸಮಗ್ರ ಸ್ವರೂಪದ ಕೃತಿಯೊಂದರ ಅಗತ್ಯ ಹಾಗೂ ಅನಿವಾರ್ಯತೆ ಇದೆ ಎಂಬುದು ಇವರ್ಯಾರಿಗೂ ಹೊಳೆಯಲೇ ಇಲ್ಲ ಎಂಬುದು ಅಚ್ಚರಿಯ ಸಂಗತಿ. ನಮ್ಮ ದೇಶದಲ್ಲಿ ಬಹಳ ಪ್ರಾಚೀನ ಕಾಲದಿಂದಲೂ ನ್ಯಾಯವಿತ್ತು, ಕಾನೂನು ಕಟ್ಟಳೆಗಳಿದ್ದವು ಎಂದು ಹೇಳುವವರು ಅಧಿಕ. ಆದರೆ ಕಾನೂನು ಎಂಬ ಪರಿಕಲ್ಪನೆ ಬಂದಿದ್ದೇ ಹೊರಗಿನಿಂದ ಎಂಬುದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ, ಇದನ್ನು ಓದುವವರೆಗೆ ನನಗೂ ಗೊತ್ತಿರಲಿಲ್ಲ. ಸ್ಮೃತಿ ಗ್ರಂಥಗಳಿವೆಯಲ್ಲಾ ಅವೇ ನಮ್ಮ ಭಾರತದ ಪ್ರಾಚೀನ ಕಾನೂನು ಕೃತಿಗಳು ಎಂಬ ಭ್ರಮೆಯಲ್ಲಿದ್ದೆ. ಇದನ್ನು ಓದಿದ ಮೇಲೆ ಈ ಗುಳ್ಳೆ ಒಡೆಯಿತು. ನಮ್ಮ ಸಮಾಜ, ನ್ಯಾಯದ ಪರಿಕಲ್ಪನೆ ಇತ್ಯಾದಿ ಕುರಿತ ಇಂಥ ಅನೇಕ ಹುಳ್ಳೆಗಳನ್ನು ಈ ಕೃತಿ ಪಟಾಪಟ್ ಎಂಬಂತೆ ಒಡೆಯುತ್ತದೆ. ಆದರೆ ಓದುಗ ಮುಕ್ತ ಮನಸ್ಸಿನಿಂದ ಓದಬೇಕು ಅಷ್ಟೇ.  ತಮ್ಮ ಪೂರ್ವಗ್ರಹವನ್ನು ಬದಿಗಿಟ್ಟು ಸುಮ್ಮನೇ ಕೃತಿಗೆ ಒಪ್ಪಿಸಿಕೊಳ್ಳುವ ಓದುಗರಿಗೆ ಮಾತ್ರ ಈ ಕೃತಿ ಹೊಸ ವಿಷಯ ಹಾಗೂ ವಿಷಯವನ್ನು ಕೊಡುತ್ತದೆ. ಇದುವರೆಗೆ ನಾವು ತಿಳಿದುಕೊಂಡ ಮಾಹಿತಿ ಎಲ್ಲ ಸತ್ಯ ಎಂಬ ಭ್ರಮೆಯೊಂದಿಗೇ  ಪುಸ್ತಕ ತೆರೆದರೆ ಏನೂ ಪ್ರಯೋಜನವಿಲ್ಲ. ಮೂಲತಃ ಸಮಾನ ನಾಗರಿಕ ಸಂಹಿತೆ ಎಂದರೇನು, ಅದರ ಮೂಲಚೂಲಗಳೇನು, ಇಂಥ ಸಂಹಿತೆ ಜಾರಿಯಾದರೆ ಆಗುವ ಪರಿಣಾಮ ಏನು? ಸಮಾನ ಸಂಹಿತೆ ಇರುವ ಸಮಾಜಗಳೆಲ್ಲ ಸೊಗಸಾಗಿವೆಯಾ? ಅಷ್ಟಕ್ಕೂ ಇಂಥ ಸಂಹಿತೆ ಕಾಣಿಸಿಕೊಂಡ ಕಾಲಘಟ್ಟ ಯಾವುದು ವರ್ತಮಾನದ ಸಂದರ್ಭದಲ್ಲಿ ಇದು ಎಲ್ಲ ಸಮಸ್ಯೆಗಳಿಗೂ ಪರಿಹಾರ ಕೊಡುತ್ತದಾ ಇತ್ಯಾದಿ ವಿಷಯಗಳನ್ನು ಆಮೂಲಾಗ್ರವಾಗಿ ಪರಿಶೀಲನೆಗೆ ಇದು ಒಡ್ಡುತ್ತದೆ. ಸಂಹಿತೆಯೊಂದಕ್ಕೆ ಸಂಬಂಧಿಸಿದ  ಪರಿಪೂರ್ಣ ಸಂಶೋಧನ ಕೃತಿ ಇದಾಗಿದೆ. ಸಂಹಿತೆಯ ಪರ ಅಥವಾ ವಿರುದ್ಧದ ನಿಲುವನ್ನು ಮೊದಲೇ ರೇಖಿಸಿಕೊಂಡು ಕೃತಿ ತಯಾರಾಗಿಲ್ಲ ಎಂಬುದು ಇದರ ಮೌಲ್ಯ ದುಪ್ಪಟ್ಟಾಗುವಂತೆ ಮಾಡಿದೆ. 

ಈ ನೆಪದಲ್ಲಿ ಭಾರತಕ್ಕೆ ಕಾನೂನು ಪ್ರವೇಶಪಡೆದ ಹಿನ್ನೆಲೆ ಸಮಾನ ಸಂಹಿತೆ ಭಾರತದಲ್ಲಿ ಕಾನೂನು ಬೆಳೆದುಬಂದ ಇತಿಹಾಸ, ಅದರ ವಿಕಾಸ, ವಿವಿಧ ಆಯಾಮಗಳು, ರಿಲಿಜನ್ ಮತ್ತು ಕಾನೂನುಗಳು ತಳಕು ಹಾಕಿಕೊಂಡ ಬಗೆ ಇತ್ಯಾದಿಗಳೆಲ್ಲ ಯಾವ ಕಥೆ ಕಾದಂಬರಿಗಳಿಗೂ ಕಡಿಮೆ ಇಲ್ಲದಂತೆ ಕುತೂಹಲ ಕರವಾಗಿ ನೀಡಲಾಗಿದೆ. ಗಂಭೀರ ವಿಷಯವೊಂದನ್ನು ವಿಷಯ ಪ್ರತಿಪಾದಿಸುವ ರೀತಿಯಿಂದ ಹೇಗೆ ಸ್ವಾರಸ್ಯಗೊಳಿಸಬಹುದು ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. ಕೃತಿಯನ್ನು ಓದುತ್ತ ಹೋದಂತೆ ತಾನಾಗಿಯೇ ಓದಿಸಿಕೊಂಡು ಹೋಗುತ್ತದೆ. ಇಷ್ಟು ಗಂಭೀರ ವಿಷಯ ಮತ್ತೆ ಮತ್ತೆ ಓದಿಸಿಕೊಳ್ಳುವ ಆತ್ಮೀಯ ಕಥಾನಕದ  ಸ್ವರೂಪ ಪಡೆಯುತ್ತದೆ. ಕೃತಿಯ ಶೀರ್ಷಿಕೆ ಹೇಳುವಂತೆ ಸಮಾನ ನಾಗರಿಕ ಸಂಹಿತೆಯ ನಿನ್ನೆಗಳ ಜೊತೆಗೆ ಇಂದಿನ ಸಮಸ್ಯೆ ಹಾಗೂ ನಾಳಿನ ಸವಾಲುಗಳ ನೋಟದೊಂದಿಗೆ ಸಮಗ್ರತೆಯ ರೂಪವನ್ನು ಕೊಡಲಾಗಿದೆ. ಸಮೃದ್ಧ ಪೂರಕ ಗ್ರಂಥಗಳ ವಿವರ ನೀಡಲಾಗಿದ್ದು ಕಾನೂನಿನ ಬಗ್ಗೆ ಆಸಕ್ತಿ ಇರುವವರಿಗೆ  ಸಮೃದ್ಧ ಗ್ರಾಸ ನೀಡಲಾಗಿದೆ. ಈ ಎಲ್ಲ ಕಾರಣಗಳಿಂದ ಸಮಾಜದಲ್ಲಿ ಆಗಾಗ ಕಾಣಿಸಿಕೊಳ್ಳುವ ಗಂಭೀರ ವಿಷಯವನ್ನು ನಾವು ಹೇಗೆ ಮತ್ತು ಯಾವ ದೃಷ್ಟಿಯಲ್ಲಿ ಸ್ವೀಕರಿಸಿ ಅರ್ಥ ಮಾಡಿಕೊಳ್ಳಬೇಕು ಎಂಬುದನ್ನು ಇದು ತೋರಿಸುತ್ತದೆ. ಸದ್ಯ ನಮ್ಮ ಸಮಾಜದಲ್ಲಿ ಉರಿಯುತ್ತಿರುವ ಅನೇಕ ಸಮಸ್ಯೆಗಳಲ್ಲಿ ಜ್ಞಾನವ್ಯಾಪಿ ಮಸೀದಿ ಕುರಿತ ವಿವಾದವೂ ಒಂದು, ಇಂಥ ವಿಷಯಗಳು ಆಗಾಗ ಏಳುತ್ತಲೇ ಇರುತ್ತವೆ, ಇದು ಜೀವಂತ ಸಮಾಜದ ಲಕ್ಷಣ. ಆದರೆ ಇವುಗಳಿಗೆ ಪ್ರತಿಕ್ರಿಯಿಸುವಾಗ ಭಾವನಾತ್ಮಕ ನಿಲುವಿಗೆ ಅಂಟಿಕೊಂಡು ಅಪಾಯ ಸ್ವಾಗತಿಸುವ ಸಂದರ್ಭವೇ ಹೆಚ್ಚು. ಅಂಥ ಅಪಾಯಗಳಿಗೆ ಎಡೆಕೊಡದೇ ಒಂದು ಸಂಗತಿಯನ್ನು ಶುದ್ಧ ಶೈಕ್ಷಣಿಕ ರೀತಿಯಲ್ಲಿ ನೋಡುವುದು ಹೇಗೆ ಎಂಬುದನ್ನು ಇದು ಮನಗಾಣಿಸುತ್ತದೆ. ನಮ್ಮಲ್ಲಿ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾನಿಲಯಗಳಿಗೆ ಕೊರತೆ ಇಲ್ಲ. ಆದರೆ ಆಗಾಗ ಮೇಲೇಳುವ  ಸಾಮಾಜಿಕ ಸಮಸ್ಯೆಗಳಿಗೆ ಶುದ್ಧ ಶೈಕ್ಷಣಿಕ ನಿಲುವಿನ ಮಾರ್ಗವನ್ನು ಸಮಾಜಕ್ಕೆ ತೋರಿಸುವ ನಿದರ್ಶನಗಳು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ, ಇಂಥ ಸಂದರ್ಭದಲ್ಲಿ ಇದು ಗಮನ ಸೆಳೆಯುವ ಕೃತಿಯಾಗಿದೆ. ಮುಂಬರುವ ಎಲ್ಲ ಇಂಥ ಸಂಗತಿಗಳಿಗೂ ಉನ್ನತ ಶಿಕ್ಷಣ ಸಂಸ್ಥೆಗಳು ಇದೇ ಮಾದರಿಯಲ್ಲಿ ಪ್ರತಿಕ್ರಿಯಿಸಿ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ಕೊಡಲು ಉಳಿದ ಸಂಸ್ಥೆಗಳಿಗೆ ಇದು ಮಾರ್ಗದರ್ಶಿಯಾಗಲಿ ಎಂದಷ್ಟೇ ಹೇಳಬಹುದು. ಉಳಿದಂತೆ ಕೃತಿ ಓದಿ ತಿಳಿಯುವುದು ಲೇಸು.

ಅಂದಹಾಗೆ ಈ ಕೃತಿಯನ್ನು ಯಾವುದೋ ಪ್ರಸಿದ್ಧ ಪ್ರಕಾಶನ ಸಂಸ್ಥೆ ಪ್ರಕಟಿಸಿಲ್ಲ. ಸಮಾನ ಆಸಕ್ತಿಯ ಒಂದಿಷ್ಟು ಜನ ಸೇರಿ ಕಟ್ಟಿಕೊಂಡ ಸಮನ್ವಿತ ಎಂಬ ಸಂಸ್ಥೆ ಇದನ್ನು ಹೊರತಂದಿದೆ. ಈ ಕೃತಿಯೇ ಸಂಸ್ಥೆಗೆ ದೊಡ್ಡ ಹೆಸರು ಮತ್ತು ಖ್ಯಾತಿಯನ್ನು ತರುವುದರಲ್ಲಿ ಅನುಮಾನವಿಲ್ಲ. ಆದರೆ ಈ ಜವಾಬ್ದಾರಿ ಇರುವುದು ಮುಕ್ತ ಮನಸ್ಸಿನ ಕನ್ನಡ ಓದುಗರ ಮೇಲೆ. ಈ ಕೃತಿಯನ್ನು ಶ್ರದ್ಧೆ ಹಾಗೂ ಶ್ರಮದಿಂದ ಸಂಪಾದಿಸಿದ ಚಾಣಕ್ಯ ವಿವಿಯ ಪ್ರೊ. ಎಂ. ಎಸ್. ಚೈತ್ರ ಹಾಗೂ ಕುವೆಂಪು ವಿವಿಯ ಪ್ರೊ. ಷಣ್ಮುಖ ಇವರನ್ನು ತುಂಬು ಹೃದಯದಿಂದ ನಾವೆಲ್ಲ ಅಭಿನಂದಿಸಬೇಕಿದೆ. ಹೇಳಲೇಬೇಕಿದ್ದ ಒಂದು ಮಾತನ್ನು ಮರೆಯುವ ಮುನ್ನ ಹೇಳುವೆ. ಈ ಕೃತಿಯಲ್ಲಿ 170 ಪುಟಗಳ ಸಮಗ್ರ ಕಾನೂನು ಮಾಹಿತಿಗಳಿದ್ದು ಒಂದೇ ಒಂದು ಪುಟವನ್ನೂ ಒಬ್ಬ ನ್ಯಾಯವಾದಿ ಅಥವಾ ನ್ಯಾಯ ಪಂಡಿತ ಬರೆದಿಲ್ಲ. ಬದಲಿಗೆ ಓದು ಮತ್ತು ಶಿಕ್ಷಣ ಹಾಗೂ ಯಾವುದೇ ವಿಷಯದ ಬಗ್ಗೆ ಗಂಭೀರ ಚಿಂತನೆ ಮಾಡುವ ಮನಸ್ಸಿನ ಯುವ ಉತ್ಸಾಹಿ ಮನಸ್ಸುಗಳು ಪ್ರಾಮಾಣಿಕವಾಗಿ ಬರೆದಿದ್ದಾವೆ, ಸಂಪಾದಕರೂ ಇದಕ್ಕೆ ಅಷ್ಟೇ ಶ್ರಮ ಹಾಕಿದ್ದಾರೆ. ಒಂದು ಸಸೂತ್ರತೆ, ಬದ್ಧತೆ ಇಡೀ ಕೃತಿಯಲ್ಲಿ ಇರುವಂತೆ ಸಂಪಾದಕರು ನೋಡಿಕೊಂಡಿದ್ದಾರೆ. ಇಡೀ ಕೃತಿ ತನ್ನ ಓಘದಿಂದ ಒಂದೇ ಓದಿಗೆ ಓದಿ ಮುಗಿಸುವ ಉತ್ತೇಜನ ಕೊಡುತ್ತದೆಯಾದರೂ ಕೃತಿಯ ಅಧ್ಯಾಯಗಳನ್ನು ಇಡಿಯಾಗಿಯೂ ಬಿಡಿಯಾಗಿಯೂ ಓದಿ ಆನಂದಿಸಬಹುದಾಗಿದೆ. ಇಂಥ ಗಂಭೀರ ಕೃತಿಯಲ್ಲಿ ಈ ಬಗೆಯ ಗುಣ ಇರುವುದು ಕಡಿಮೆ.

ಒಟ್ಟಿನಲ್ಲಿ ಸಮಾಜ, ಶಿಕ್ಷಣ ಹಾಗೂ ಸುತ್ತಲಿನ ವಿದ್ಯಮಾನಗಳ ಬಗ್ಗೆ ಕಿಂಚಿತ್ತಾದರೂ ಕಳಕಳಿ ಇರುವ ಸಮಸ್ತರೂ ಇದನ್ನು ಒಮ್ಮೆಯಾದರೂ ಓದಬೇಕು ಅನಂತರ ಅನೇಕ ಬಾರಿ ಕೃತಿಯೇ ಓದಿಸಿಕೊಳ್ಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂಥ ಕೃತಿ ದೇಶದ ಬಹುಭಾಷೆಗಳಲ್ಲಿ ಬರಬೇಕು. ಕನಿಷ್ಠಪಕ್ಷ ಬಹುಜನರನ್ನು ತಲಪುವ ಇಂಗ್ಲಿಷ್ ನಲ್ಲಾದರೂ ಬರಬೇಕು ಅಂಥ ಅಗತ್ಯವಿದೆ.  ಸಂಪಾದಕರು ಹಾಗೂ ಪ್ರಕಾಶಕರು ಈ ಬಗ್ಗೆ ಅವಲೋಕಿಸುವ ಅನಿವಾರ್ಯತೆ ಇದೆ. ಇದರಿಂದ ಇಂಥದೊಂದು ಕೃತಿ ಕನ್ನಡದಲ್ಲಿ ಮೊದಲು ಬಂದು ದೇಶವನ್ನು ಸುತ್ತುವಂತಾಯಿತು ಎಂಬ ಹೆಗ್ಗಳಿಕೆ ನಮ್ಮದಾಗುತ್ತದೆ. ಆದಷ್ಟು ಬೇಗ ಅದು ಸಾಧ್ಯವಾಗಲಿ ಎಂದಷ್ಟೇ ನಾವು ಬಯಸಬಹುದು.

Tuesday, 22 August 2023

ಆದರ್ಶ ವನಿತೆ ಡಾ. ಸುಧಾ ಮೂರ್ತಿ


ಮುಂಬೈ ವಿವಿಯ ಕನ್ನಡ ವಿಭಾಗ ಈಚೆಗೆ  'ಸಾಹಿತ್ಯ ಸಿದ್ಧಿ ಸಿರಿ ಸೇವೆಯ ಸಾಕಾರ - ಡಾ. ಸುಧಾ ಮೂರ್ತಿ ಎಂಬ ಕಿರು ಹೊತ್ತಿಗೆ ಪ್ರಕಟಿಸಿದೆ. ಕನ್ನಡ ಮನೆ ಮನಗಳ ನಿತ್ಯ ಮಾತಾಗಿರುವ ಸಾಧಕಿ ಡಾ. ಸುಧಾ ಮೂರ್ತಿಯವರು ಅವರ ಬಗ್ಗೆ ನಿತ್ಯ ಒಂದಲ್ಲ ಒಂದು ಮಾಧ್ಯಮದಲ್ಲಿ ಏನಾದರೂ ಗುಣಾತ್ಮಕ ಸುದ್ದಿ ಬರುತ್ತಲೇ ಇರುತ್ತದೆ. ಅಷ್ಟು ಪರಿಚಿತರು ಅವರು. ಸುದ್ದಿ ಆಗುವುದು ಮುಖ್ಯವಲ್ಲ, ಏಕೆ, ಯಾವ ಕಾರಣಕ್ಕೆ ಎಂಬುದು ಮುಖ್ಯ. ಹಾಗೆ ನೋಡಿದರೆ ಮಾಧ್ಯಮಗಳು ಸುದ್ದಿಗಳನ್ನು ಸೃಷ್ಟಿಸುತ್ತವೆ. ಸುಧಾ ಮೂರ್ತಿಯವರಿಗೆ ಇವೆಲ್ಲ ಅಗತ್ಯವಿಲ್ಲ. ಅವರು ಇರುವಲ್ಲಿ ಮಾಧ್ಯಮಗಳು ಹೋಗುತ್ತವೆ. ಅವರ ನಡೆ ನುಡಿಗಳೇ ಸುದ್ದಿಗೆ ಗ್ರಾಸವಾಗುತ್ತವೆ. ಅವರು ಇರುವುದೇ ಹಾಗೆ, ಅತ್ಯಂತ ಸಾಮಾನ್ಯ ಮನೆತನದಲ್ಲಿ ಜನಿಸಿ ತಮ್ಮ ಪ್ರಾಮಾಣಿಕತೆ, ಸರಳತೆ ಮತ್ತು ಸತ್ಯ ನಡೆಗಳಿಂದಲೇ ಜನರನ್ನು ಸೆಳೆಯುವವರು ಅವರು. ಅವರು ಸತ್ಕಾರ್ಯಕ್ಕೆ ಕೊಡುಗೈ ದಾನ ಮಾಡುತ್ತಾರೆ ಎಂಬುದು ಇನ್ನೊಂದು ಪೂರಕ ಸಂಗತಿ. ಕೇವಲ ದುಡ್ಡಿನಿಂದ, ಪ್ರಚಾರದಿಂದ ದೊಡ್ಡವರಾಗುವವರು ಬಹಳ ಜನರಿದ್ದಾರೆ, ಆದರೆ ಸುಧಾ ಅವರು ತಮ್ಮ ಕೆಲಸಗಳಿಂದ ದೊಡ್ಡವರಾದವರು.

ಸಾಮಾನ್ಯ ಮನೆತನದಲ್ಲಿ ಜನಿಸಿ ನಮ್ಮ ಸಾಂಪ್ರದಾಯಿಕ ರೀತಿಯಲ್ಲಿ ಜೇವಿಸಿದರೆ ಅದು ಎಷ್ಟು ಆದರ್ಶಪ್ರಾಯವಾಗಬಲ್ಲುದು ಎಂಬುದಕ್ಕೂ ನಮ್ಮ ಪರಂಪರೆಯಲ್ಲಿ ಹೆಣ್ಣಿಗೆ ಹೇಳಿ ಕೇಳುವ ಸ್ಥಾನವಿಲ್ಲ ಅನ್ನುವವರಿಗೂ ಬಹುದೊಡ್ಡ ಪ್ರಶ್ನೆ ಹಾಗೂ ಉತ್ತರ ಸುಧಾ ಅವರು. ಅವರ ಜೇವನ ರೇಖೆ ನಾವು ಅಂದುಕೊಂಡಷ್ಟು ಸುಖಮಯವಾಗಿರಲಿಲ್ಲ, ಅವರು ಬಂಗಾರದ ಚಮಚೆಯನ್ನು ಬಾಯಲ್ಲಿಟ್ಟುಕೊಂಡು ಜನಿಸಿದವರಲ್ಲ,  ಬಾಲ್ಯದಲ್ಲಿ ಸಾಕಷ್ಟು ಕಷ್ಟ ಕಂಡವರು. ನೋವು ಉಂಡವರು. ಆದರೆ ಕಷ್ಟಕ್ಕೆ ಜಗ್ಗದೇ ನಂಬಿದ ಮೌಲ್ಯಗಳನ್ನು ಬಿಡದೇ ನಿಷ್ಠರಾಗಿದ್ದರೆ ಅದು ಎಂಥ ಕೊಡುಗೆ ಕೊಡುತ್ತದೆ ಎಂಬುದನ್ನು ಅವರ ಜೇವನ ಮನಗಾಣಿಸುತ್ತದೆ. ಅವರು ಸದ್ಯದ ಭಾರತೀಯ ಮಾತ್ರವಲ್ಲ, ಜಾಗತಿಕ ಮಟ್ಟದ ಯಾವುದೇ ಸಮಾಜದಲ್ಲಿ ಸಾಕಷ್ಟು ಗೌರವ ಹೊಂದಿದ್ದಾರೆ, ಮನೆಯವರು, ಬಂಧು ಬಳಗದವರು ಸಾಕಷ್ಟು ಸಾಧನೆ ಮಾಡಿದವರು. ಸಣ್ಣ ಪುಟ್ಟ ಸಾಧನೆ ಮಾಡಿದವರು ಇಂದು ನಮ್ಮ ನಡುವೆ ತಾವುಂಟೋ ಮೂರು ಲೋಕವುಂಟೋ ಎಂಬಂತೆ ವರ್ತಿಸುವುದನ್ನು ನೋಡಿದಾಗ ಸುಧಾ ಅವರ ಬಗ್ಗೆ ಗೌರವ ನೂರ್ಮಡಿಯಾಗುತ್ತದೆ. ಅವರು ಇಂದು ಸಮಾಜದಲ್ಲಿ ಹೆಸರಾಗಿರುವುದೇ ಸರಳತೆಯಿಂದ. ಅವರ ಜೊತೆ ಫೋಟೋ ತೆಗೆಯಿಸಿಕೊಂಡು ಸುಧಾ ಅವರು ತಮಗೆ ತುಂಬ ಪರಿಚಯ ಎಂಬಂತೆ ಅಷ್ಟರಿಂದಲೇ ಸ್ಥಾನ ಮಾನ ಗಿಟ್ಟಿಸಲು ಯತ್ನಿಸುವುದು ಸುಳ್ಳಲ್ಲ. ಅಂಥಾದ್ದರಲ್ಲಿ ಸ್ವತಃ ಸುಧಾ ಅವರು ತಾವು ಏನೂ ಅಲ್ಲ, ತೀರಾ ಸಾಮಾನ್ಯರು ಎಂಬಂತೆ, ವರ್ತಿಸುವುದು ನಿಜಕ್ಕೂ ಅನುಕರಣೀಯ. ಆದರೆ ಸಮಾಜದಲ್ಲಿ ಇಂಥ ಸಂಗತಿಯನ್ನು ಬದಿಗಿಟ್ಟು ಸುಧಾ ಅವರ ಅಂತಸ್ತು, ಐಶ್ವರ್ಯಗಳನ್ನೇ ಆರಾಧಿಸುವ ವರ್ತನೆ ಸುತ್ತಲಿನ ಜನರಲ್ಲಿ ಕಾಣಿಸುತ್ತದೆ. 53 ಪುಟಗಳ ಪುಟ್ಟ ಕೃತಿ ಇದು, ಇದರಲ್ಲಿನ ಆರು ಕಿರು ಅಧ್ಯಾಯಗಳು ಹಾಗೂ ಪೂರಕ ಮಾಹಿತಿ ಕೊಡುವ ಅನುಬಂಧಗಳು ಸುಧಾ ಅವರ ಸರಳ ಜೇವನದ ಹತ್ತಾರು ಸಂಗತಿಗಳ ಅವಲೋಕನ ಮಾಡುತ್ತವೆ. ಸುಧಾ ಅವರ ಸಾಹಿತ್ಯ ಸೃಷ್ಟಿ, ಪ್ರಶಸ್ತಿಗಳ ವಿವರವನ್ನೂ ಕೊಡಲಾಗಿದೆ. ಒಟ್ಟಿನಲ್ಲಿ ಈ ಕೃತಿ ಕನ್ನಡಿಯಲ್ಲಿ ಕರಿಯನ್ನು ತೋರಿಸುವ ಯತ್ನವನ್ನು ಯಶಸ್ವಿಯಾಗಿ ಮಾಡಿದೆ. ಅವರ ಅಳಿಯ ಈಗ ಬ್ರಿಟನ್ ಪ್ರಧಾನಿ. ಅದರ ಹಮ್ಮು ಅವರಲ್ಲಿ ಕಿಂಚಿತ್ತೂ ಇಲ್ಲ. ಕೀರ್ತಿ, ಪ್ರತಿಷ್ಠೆಗಳೆಲ್ಲ ಬರುತ್ತವೆ, ಹೋಗುತ್ತವೆ, ನಾವು ಉಳಿಸಿಕೊಳ್ಳಬೇಕಾದುದು ಮನುಷ್ಯತ್ವವನ್ನು ಮಾತ್ರ ಎಂಬುದು ಅವರ  ಜೀವನ ಮೌಲ್ಯ. ಇದು ಅವರನ್ನು ಎಲ್ಲರಿಂದ ಭಿನ್ನವಾಗಿಸುತ್ತದೆ. ನಮ್ಮ ಇಂದಿನ ಸಮಾಜದಲ್ಲಿ ಎಲ್ಲರೂ ಹಣ ಅಂತಸ್ತು ಪ್ರತಿಷ್ಠೆಯ ಹಿಂದೆ ಓಡುತ್ತಿದ್ದರೆ ಸುಧಾ ಅವರು ಇದಕ್ಕೆ ವಿರುದ್ಧವಾಗಿ ಹೋಗುತ್ತಾ ಅದರಲ್ಲೇ ಸಾರ್ಥಕತೆಯನ್ನು ಕಂಡಿದ್ದಾರೆ, ಆದರ್ಶ ಸ್ಥಾಪಿಸಿದ್ದಾರೆ. 

ಮುಂಬೈ ಕನ್ನಡ ವಿಭಾಗದಲ್ಲಿ ಈಚೆಗೆ ನಡೆದ ಸಮ್ಮೇಳನದ್ದಿ ಸುಧಾ ಅವರು ಉಪನ್ಯಾಸ ನೀಡಿದ ನೆಪದಲ್ಲಿ ಅವರ ಮಾತನ್ನು ಅಕ್ಷರ ರೂಪಕ್ಕೆ ಇಳಿಸುವ ಜೊತೆಗೆ ಕೆಲವು ಪೂರಕ ಮಾಹಿತಿಗಳನ್ನೂ ಕಲೆ ಹಾಕಿ ಒಂದು ಸ್ತುತ್ಯರ್ಹ ಕೃತಿಯನ್ನು ಮುಂಬೈ ಕನ್ನಡ ವಿಭಾಗ ಮಾಡಿದೆ. ಈಗಾಗಲೇ ಹೇಳಿದಂತೆ ಸುಧಾ ಅವರ ಬಗ್ಗೆ ಸಾಕಷ್ಟು ಬರೆಹಗಳು ಈಗಾಗಲೇ ಬಂದಿವೆ, ಸಂಶೋಧನೆಗಳೂ ನಡೆಯುತ್ತಿವೆ. ಆದರೆ ಈ ಕೃತಿ ಕಿರಿದರಲ್ಲಿ ಹಿರಿದನ್ನು ಹೇಳುವ ಕಾರಣಕ್ಕೆ ಹಾಗೂ ಅನಗತ್ಯ ವೈಭವ, ಹೊಗಳಿಕೆಗಳಿಲ್ಲದೇ ಸುಧಾ ಅವರಂತೆ ಸರಳತೆಯನ್ನು ಕಟ್ಟಿಕೊಡುವ ಕಾರಣಕ್ಕೆ ಹಾಗೂ ಕನ್ನಡದಲ್ಲಿನ ಅಪರೂಪದ ವ್ಯಕ್ತಿ ಚಿತ್ರಣಕ್ಕೆ ನಿದರ್ಶನವಾಗುವ ಕಾರಣಕ್ಕೆ ಆತ್ಮೀಯ ಅನಿಸುತ್ತದೆ. ಇಂಥದೊಂದು ಕೃತಿಯನ್ನು ಹೊರತಂದ ಮುಂಬೈ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ ಎನ್ ಉಪಾಧ್ಯ ಹಾಗೂ ಅವರ ಸಿಬ್ಬಂದಿ, ವಿದ್ಯಾರ್ಥಿ ವೃಂದಕ್ಕೆ ಅಭಿನಂದನೆಗಳು. ಸುಧಾ ಅವರ ಬಗ್ಗೆ ಕುತೂಹಲ ನಿತ್ಯ ನೂತನ. ಅದು ಇರುವವರೆಗೂ ಅಂಥ ನೂರಾರು ಪುಸ್ತಕಗಳು ಬಂದರೂ ಈ ಕೃತಿ ಪ್ರಸ್ತುತವಾಗುತ್ತದೆ. ಇಂಥ ಕೃತಿ ಕೊಟ್ಟ ಉಪಾಧ್ಯ ಅವರಿಗೆ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಗಳು.  


Sunday, 20 August 2023

ಅನೇಕ ವಿಶೇಷಗಳ ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ


ಆಧುನಿಕ ಕನ್ನಡ ಸಾಹಿತ್ಯಕ್ಕೆ ಅನೇಕ ಪ್ರಕಾರಗಳು ಪಾಶ್ಚಾತ್ಯ ಸಾಹಿತ್ಯ ಸಂಪರ್ಕದಿಂದ ಬಂದವು. ಸಾಮಾಜಿಕ ನಾಟಕ ಕೂಡ ಇದರಲ್ಲಿ ಒಂದು. ಆದರೆ ನಾಟಕ ಪ್ರಕಾರ 16ನೆಯ ಶತಮಾನದ ವೇಳೆಗಾಗಲೇ ಸಂಸ್ಕೃತದ ಪ್ರಭಾವದಿಂದ ಮಿತ್ರವಿಂದಾ ಗೋವಿಂದದ ಮೂಲಕ ನಮಗೆ ಪರಿಚಯವಾಗಿತ್ತು. ಪ್ರಸ್ತುತ ಕೃತಿ ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ ಅಥವಾ ಕನ್ಯಾ ವಿಕ್ರಯದ ಪರಿಣಾಮವು ಎಂಬುದು 1879 ವೇಳೆಗೆ ಪ್ರಕಟವಾಗಿದ್ದು ಇದರ ಪ್ರತಿಗಳಾಗಲೀ ಅದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳಾಗಲೀ ಸದ್ಯ ಲಭ್ಯವಿಲ್ಲ. ಇಂಥ ಕೊರತೆಯನ್ನು ನಮ್ಮ ಮುಂಬೈ ವಿವಿಯ ಕನ್ನಡ ವಿಭಾಗ ತುಂಬುವ ಕೆಲಸ ಮಾಡಿದೆ. ಇದು ಮೊದಲು ಮುಂಬೈನಲ್ಲೇ ಪ್ರಕಟವಾಗಿತ್ತು ಎಂಬುದು ಒಂದು ವಿಶೇಷವಾದರೆ, ಇದು ಕನ್ಡದ ಉಪಭಾಷೆಯಲ್ಲಿ ರಚಿತವಾದ ಮೊದಲ ಕೃತಿ ಎಂಬುದು ಮತ್ತೊಂದು. ಸಾಮಾನ್ಯವಾಗಿ ದಲಿತ ಬಂಡಾಯ ಚಳವಳಿ ಶುರುವಾದ ಮೇಲೆ ಕನ್ನಡದ ಉಪ ಭಾಷೆಗಳಲ್ಲಿ ಸಾಹಿತ್ಯ ರಚನೆ ಆರಂಭವಾತಿತೆಂಬ ಅಭಿಪ್ರಾಯವಿದೆ. ಇದು ಸರಿಯಲ್ಲ ಎಂಬುದಕ್ಕೂ ಇದು ನಿದರ್ಶನ ಒದಗಿಸುತ್ತದೆ. ಪ್ರಸ್ತುತ ಕೃತಿಯಲ್ಲಿ ನಾಟಕಕ್ಕೆ ಸಂಬಂಧಿಸಿದಂತೆ ಹವ್ಯಕ ಭಾಷೆ, ಸಮಾಜ-ಸಂಸ್ಕೃತಿಗಳ ಸಂಕ್ಷಿಪ್ತ ನೋಟವಿದ್ದರೂ ಈ ಸಂಗತಿಯನ್ನು ಪ್ರಸ್ತಾಪಿಸದೇ ಇರುವುದು ಅಚ್ಚರಿಯನ್ನುಂಟುಮಾಡುತ್ತದೆ. 

ಶತಮಾನಗಳ ಹಿಂದಿನ ಕನ್ನಡ ಸಮಾಜದಲ್ಲಿ ಗಂಡು ಹೆಣ್ಣುಗಳ ಕುರಿತ ಸಮಾಜದ ದೃಷ್ಟಿ ಹೇಗಿತ್ತು ಎಂಬುದಕ್ಕೆ ಈ ನಾಟಕ ಪುರಾವೆ ಒದಗಿಸುತ್ತದೆ. ಮೇಲ್ನೋಟಕ್ಕೆ ಇದು ಹವ್ಯಕ ಸಮಾಜವನ್ನು ತೋರಿಸಿದರೂ ಒಟ್ಟಾರೆ ಕನ್ನಡ ಸಮಾಜದ ದೃಷ್ಟಿಯೇ ಇಲ್ಲಿ ಪ್ರತಿಪಾದಿತವಾಗಿದೆ ಎಂಬುದು ನಾಟಕದಲ್ಲಿ ಬರುವ ನ್ಯಾಯಾಲಯದ ಸನ್ನಿವೇಶ ಕಾಣಿಸುತ್ತದೆ. ಆದರೆ ಈ ನೋಟದಲ್ಲಿರುವ ಚಿಂತನಾ ದಾಟಿ ಪಾಶ್ಚಾತ್ಯ ದೃಷ್ಟಿಯದೇ ಆಗಿದೆ, ಪುರುಷ ಪ್ರಧಾನ, ಸ್ತ್ರೀ ಕೀಳರಿಮೆ ಇತ್ಯಾದಿ ದೃಷ್ಟಿಯಿಂದಲೇ ನಾಟಕದ ವಸ್ತು ಕಾಣುತ್ತದೆ. ವಸಾಹತು ಕಾಲದಲ್ಲಿ ಭಾರತದ ಸಂಪ್ರದಾಯಮ ಆಚರಣೆ ಮೊದಲಾದವನ್ನು ಪ್ರಶ್ನಿಸುವ ಕೆಲಸ ಬ್ರಿಟಿಷ ಜನರಿಂದ ನಡೆಯಿತು. ಇದನ್ನು ಆಧುನಿಕ ಶಿಕ್ಷಣದ ಮೂಲಕ ನಮ್ಮ ಜನರಿಗೂ ನೀಡಲಾಯಿತು. ಹೀಗಾಗಿ ಅವರೊಂದಿಗೆ ನಮ್ಮ ಜನರೂ ಕೈ ಜೋಡಿಸುವಂತಾಯಿತು. ಇದು ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಆ ದೃಷ್ಟಿಯೇ ಸರಿ ಎಂದು ನಮಗೆ ಸಹಜವಾಗಿ ಅನಿಸುವಷ್ಟು. ಏಕೆಂದರೆ ಅದನ್ನುಳಿದು ನಮಗೆ ಬೇರೆ ಮಾರ್ಗವಾಗಲೀ ಚಿಂತನಾ ಕ್ರಮವಾಗಲೀ ತಿಳಿದಿಲ್ಲ. ಮಾತ್ರವಲ್ಲ, ಈ ಕೃತಿ ಇನ್ನೊಂದು ವಿಷಯವನ್ನೂ ಮನಗಾಣಿಸುತ್ತದೆ- ಇದರಲ್ಲಿ ಬರುವ ಹೆಣ್ಣನ್ನು ಕುರಿತ ಮಾತುಗಳು  ನಮಗೆ ಇಂದು ಸಹಜ ಎಂಬಂತೆ ಕಾಣುತ್ತವೆ, ಆದರೆ ಇವು ನಮ್ಮ ಪರಂಪರೆಯ ಹಿನ್ನೆಲೆಯಲ್ಲಿ ಮೂಡಿಬಂದ ಕಾರಂತರ ಮೂಕಜ್ಜಿಯಂಥ ಅಥವಾ ಮೊಗಸಾಲೆಯವರ ಪಾರ್ವತಿಯಂಥ ಪಾತ್ರಗಳಲ್ಲ, ಭಾರತೀಯ ಸಮಾಜದಲ್ಲಿ ಹೆಣ್ಣನ್ನು ಹೀಗೆ ಕಾಣುತ್ತ ಬರಲಾಗಿದೆ ಹಾಗೂ ಅದೇ ಅಂತಿಮ ಸತ್ಯ ಎಂದು ಹೇಳುತ್ತ ಶಿಕ್ಷಣದ ಮೂಲಕ ಕಲಿಸುತ್ತ ಬಂದ ಕಾರಣ ಅನ್ಯ ಸಾಧ್ಯತೆ ನಮಗೆ ಗೋಚರಿಸುವುದೇ ಇಲ್ಲ. ಇದು ಬಿಟಿಷ್ ಶಿಕ್ಷಣ ನಮ್ಮ ಮೇಲೆ ಸಾಧಿಸಿದ ಯಶಸ್ಸು. ಇದು ಅಷ್ಟು ಬೇಗನೇ ನಮ್ಮಿಂದ ದೂರ ಹೋಗುವುದಿಲ್ಲ. ಅವರು ಕಟ್ಟಿಕೊಟ್ಟ ಭಾರತೀಯ ಸಮಾಜದ ಕಲ್ಪನೆಯೇ ನಮಗೆ ಅಂತಿಮ ಅನಿಸುವಂತೆ, ಅದಕ್ಕೆ ಭಿನ್ನವಾದುದನ್ನು ಹೇಳಿದರೆ ಅನುಮಾನ ಮೂಡುವಂತೆ ಶತಮಾನಗಳ ಈ ಪ್ರಯತ್ನ ನಮ್ಮಲ್ಲಿ ಯಶಸ್ವಿಯಾಗಿ ಮಾಡಿದೆ. ಈ ನಾಟಕದಲ್ಲಿ ಮಂಡಿಸುವ ನ್ಯಾಯಾಲಯ ಕಲಾಪದ ಮಾತುಗಳು ಶತಮಾನದ ಹಿಂದೆಯೇ ಇಂದಿನ ಮಾತುಗಳಂತೆ ಏಕೆ ಕಾಣುತ್ತದೆ ಎಂಬ ಸಂಶಯ ನಮಗೆ ಸ್ವಲ್ಪವಾದರೂ ಮೂಡಬೇಕು. ಆಗ ಈ ಕೃತಿಯ ಪ್ರಕಟಣೆ ಸಾರ್ಥಕ. ಇಂಥದೊಂದು ಸಾಧ್ಯತೆಯನ್ನು ನಮ್ಮ ಮುಂದೆ ಮುಂಬೈ ಕನ್ನಡ ವಿಭಾಗ ಮಾಡಿದ್ದಕ್ಕೆ ನಾವು ಆಭಾರಿಗಳು. ಹೀಗೆ ವಸಾಹತು ಕಾಲದಲ್ಲಿ ಪ್ರಕಟವಾದ ಕನ್ನಡ ಕೃತಿಗಳ ಮರು ಮುದ್ರಣ ಮಾತ್ರವಲ್ಲ, ಮರು ನೋಟವೂ ನಡೆಯಬೇಕಿದೆ. ಪ್ರಸ್ತುತ ಕೃತಿ ದಲಿತ ಬಂಡಾಯ ಚಳವಳಿ ಶುರುವಾಗುವ ಸಾಕಷ್ಟು ಮುಂಚೆಯೇ ಕನ್ನಡದ ಆಡು ಭಾಷೆ ಅಥವಾ ಒಂದು ಉಪಭಾಷೆಯಲ್ಲಿ ಸಾಹಿತ್ಯ ರಚನೆ ನಡೆದಿತ್ತು ಎಂಬ ಸತ್ಯವನ್ನು ಇದು ಕಾಣಿಸುತ್ತದೆ. ಪ್ರಸ್ತುತ ಕೃತಿಯಲ್ಲಿ ನಾಟಕ ಸಂಬಂಧಿಯಾದ ಅನೇಕ ಸಂಗತಿಗಳ ವಿಶ್ಲೇಷಣೆಗಳು ಇವೆಯಾದರೂ ಈ ಬಗ್ಗೆ ಒಂದು ಮಾತು ಕೂಡ ಇಲ್ಲದಿರುವುದು ಅಚ್ಚರಿ ಹುಟ್ಟಿಸುತ್ತದೆ. ಆದರೆ ಇಂಥದ್ದೊಂದು ಚರ್ಚೆಯ ಸಾಧ್ಯತೆಯನ್ನು ಶುರುಮಾಡಿದ ಮುಂಬೈ ಕನ್ನಡ ವಿಭಾಗಕ್ಕೆ ಧನ್ಯವಾದ ಹೇಳಬೇಕಿದೆ.

Sunday, 13 August 2023

ಕಾವೇರಿ


ತಮಿಳುನಾಡು ಮತ್ತು ಕರ್ನಾಟಕಗಳ ಮಧ್ಯೆ ಕಾವೇರಿ ನೀರಿನ ಹಂಚಿಕೆ ಕುರಿತ ಗಲಾಟೆ ಆಗಾಗ ನಡೆಯುತ್ತಲೇ ಇರುತ್ತದೆ. ಆದರೆ ಈ ಗದ್ದಲಕ್ಕೆ ಶತಮಾನಗಳ ಇತಿಹಾಸ ಮತ್ತು ದಾಖಲೆಗಳಿವೆ. ನೀರು ಪ್ರಕೃತಿ ದತ್ತ. ಅದು ಯಾರಪ್ಪನ ಆಸ್ತಿಯೂ ಅಲ್ಲ ಅನ್ನುವ ಹಿನ್ನೆಲೆಯಲ್ಲಿಯೇ ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಎಂಬ ಗಾದೆ ಹುಟ್ಟಿದ್ದು ಅನಿಸುತ್ತದೆ. ಆದರೆ ಇಂದಿನ ಬದಲಾದ ಕಾಲ, ರಾಜಕೀಯ ವ್ಯವಸ್ಥೆಯಲ್ಲಿ ಯಾವ ಭೌಗೋಳಿಕ ಪ್ರದೇಶದಲ್ಲಿ ನೀರಿನ ಮೂಲ ಇರುತ್ತದೋ ಆ ನೀರಿನ ಮೊದಲ ಹಕ್ಕು ಆ ಪ್ರದೇಶದ್ದೇ ಆಗಿರುತ್ತದೆ. ಹೀಗಾಗಿ ಕಾವೇರಿಯ ಮೇಲೆ ಯಾರೊಬ್ಬ ವ್ಯಕ್ತಿಯ ಹಕ್ಕು ಇರಲು ಸಾಧ್ಯವಿಲ್ಲದಿದ್ದರೂ ಅಧಕಾರ ನಡೆಸುವ ಸರ್ಕಾರದ್ದಿರುತ್ತದೆ, ಈ ದೃಷ್ಟಿಯಿಂದ ಕರ್ನಾಟಕದಲ್ಲಿ ಮತ್ತು ತಮಿಳುನಾಡಲ್ಲಿ ಆಡಳಿತ ನಡೆಸುತ್ತಿದ್ದ ಅಧಿಕಾರಗಳು ಅಥವಾ ಜನತೆ ಶತಮಾನಗಳ ಕಾಲದಿಂದ ಕಾವೇರಿ ನೀರಿಗಾಗಿ ಕಚ್ಚಾಟ ನಡೆಸುತ್ತಿದ್ದಾರೆಂಬುದು ಕನ್ನಡದ ಪ್ರಸಿದ್ಧ ವ್ಯಾಕರಣ ಕೃತಿ ಶಬ್ದಮಣಿ ದರ್ಪಣಂನಿಂದ ತಿಳಿದುಬರುತ್ತದೆ. ಈ ಕೃತಿ ಕ್ರಿ ಶ. ಸುಮಾರು 1260ಕ್ಕೆ ಸೇರಿದೆ. ಈ ಕೃತಿಯಲ್ಲಿ ಸಮಾಸ ಪ್ರಕರಣದಲ್ಲಿ ಕ್ರಿಯ ಸಮಾಸ ಕುರಿತು ಹೇಳುವಾಗ "ಕಾವೇರೀ ಕಾಲನಾ ತಿಗುಳರೇಂ ಕಡಗೊಂಡರೋ ಬಡ್ಡಿಗೊಂಡರೋ" ಎಂದು ಕೇಳಲಾಗಿದೆ. ಆಧುನಿಕ ಭಾರತದಲ್ಲಿ ದೇಶದ ಯಾವುದೇ ಜಲ ಮೂಲವು ದೇಶದ ಸ್ವತ್ತು. 

ಆಧುನಿಕ ಭಾರತದಲ್ಲಿ ಜಲ ಮೂಲ ದೇಶದ ಸ್ವತ್ತು. ಹೀಗಾಗಿ ಕಾವೇರಿ ವಿವಾದ ದೇಶ ಮಟ್ಟಕ್ಕೇರಿದೆ. ಕೇಂದ್ರ ಸರ್ಕಾರ ಈ ವಿವಾದ ಬಗೆ ಹರಿಸಲು ಒಂದು ಪ್ರಾಧಿಕಾರ ನೇಮಿಸಿದೆ. ಇದರಿಂದ ವಿವಾದ ಬಗೆ ಹರಿಯುವ ಬದಲು ಮತ್ತಷ್ಟು ಕಗ್ಗಂಟಾಗುತ್ತಿದೆ. ಕೇಂದ್ರ ಸರ್ಕಾರ ಮತ ಗಳಿಕೆಯ ಲೆಕ್ಕಾಚಾರ ನೋಡಿ ತೀ ರ್ಮಾನ ಮಾಡುವಂತಾಗಿದೆ. ಅದೇನೇ ಇರಲಿ. ವಾಸ್ತವಾಂಶ ನೋಡುವುದಾದರೆ, ತಮಿಳುನಾಡಿಗೆ ಕಾವೇರಿ ನೀರು ಬೇಕಿರುವುದು ಅವರ ಅನಂತರದ ಸಾಂಬಾ ಬೆಳೆಗೆ. ತಮಿಳುನಾಡು ವರ್ಷಕ್ಕೆ ಕುರುವೈ(ಡಿಸೆಂಬರ್-ಜನೆವರಿ), ಸಾಂಬಾ(ಆಗಸ್ಟ್), ಅನಂತರದ ಸಾಂಬಾ ಅಥವಾ ತಳದಿ(ಸೆಪ್ಟೆಂಬರ್-ಅಕ್ಟೋಬರ್) ನವರೈ(ಡಿಸೆಂಬರ್-ಜನೆವರಿ). ಹೀಗೆ ಅವರ ಬೆಳೆ ಕ್ರಮವಿದೆ. ಇವುಗಳಲ್ಲಿ ಸಾಂಬಾ ಬೆಳೆಗೆ ನೀರು ಹೆಚ್ಚು ಬೇಕು ಎಂಬುದು ಅವರ ವಾದ. ಈ ಸಮಯದಲ್ಲಿ ಅವರು ಬತ್ತ, ಸಿರಿಧಾನ್ಯ, ಸೋಯಾ, ಮತ್ತು ಹತ್ತಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇವುಗಳಲ್ಲಿ ಯಾವ ಬೆಳೆಗೆ ಹೆಚ್ಚು ನೀರು ಅಗತ್ಯ ಎಂಬುದು ನಮಗೂ ತಿಳಿಯುತ್ತದೆ. ಸಿರಿಧಾನ್ಯಕ್ಕೆ ನೀರಿನ ಅಗತ್ಯವೇ ಇಲ್ಲ. ಸೆಪ್ಟಂಬರ್ನಿಂದ ಅಲ್ಲಿ ಈಶಾನ್ಯ ಮಾರುತದ ಮಳೆ ಶುರುವಾಗಿ ಸಾಕಷ್ಟು ನೀರು ಬಂಗಾಳ ಕೊಲ್ಲಿ ಸೇರುತ್ತದೆ. ಚೆನ್ನೈ ಮುಳುಗುವ ಸ್ಥಿತಿ ಯಾವಾಗಲೂ ಇರುತ್ತದೆ. ಇದಕ್ಕೆ ಕಾರಣ  ಈ ವೇಳೆಗೆ ಹಠ ಮಾಡಿ ಕಾವೇರಿ ನೀರನ್ನು ಪಡೆದು ಇರುವ ಅಣೆಕಟ್ಟುಗಳನ್ನು ಮೊದಲೇ ತುಂಬಿಸಿಕೊಳ್ಳುವುದು. ಅವರ ಅನಂತರದ ಸಾಂಬಾ ನೆಳೆಗೆ ನಿಜವಾಗಿ ಬೇಕಿರುವುದು ಎರಡೇ ಟಿಎಂಸಿ ನೀರು. ಆದರೆ ಅವರು ಬೇಡುವುದು ಮೂವತ್ತಕ್ಕಿಂತ ಹೆಚ್ಚು. ಈ ಅವಧಿಯಲ್ಲಿ ನಿಜವಾಗಿ ನೀರಿನ ಅಗತ್ಯ ಕುಡಿಯಲು ಅಥವಾ ಕೃಷಿಯ ಉದ್ದೇಶಕ್ಕೆ ಕರ್ನಾಟಕಕ್ಕೇ ಆಗಿದೆ. ಆದರೆ ರಾಷ್ಟ್ರೀಯ ಪ್ರಾಧಿಕಾರ ಪಕ್ಷಪಾತ ಮಾಡದೇ ಇರಬೇಕಲ್ಲ, ಹಾಗಾಗಿ ಅನಿವಾರ್ಯವಾಗಿ ತಮಿಳುನಾಡಿಗೆ ಕಾವೇರಿ ಹರಿಯುತ್ತಾಳೆ. ಆ ನೀರು ಸಮುದ್ರ ಸೇರುತ್ತದೆಯೇ ವಿನಾ ಕುಡಿಯಲೂ ಕೃಷಿಗೂ ಅಲ್ಲಿ ಬಳಕೆ ಆಗುವುದಿಲ್ಲ. ಮತ್ತೆ  ಅವರು ಏಕೆ ಹೀಗೆ ಮಾಡುತ್ತಾರೆ? ಈಗ ಕಾವೇರಿ ನೀರು ಜನರ ಸಮಸ್ಯೆ ಅಲ್ಲ, ಅದೊಂದು ರಾಜಕೀಯ ಪ್ರತಿಷ್ಠೆ ಆಗಿಹೋಗಿದೆ, ಇದರಿಂದ ಸಮಸ್ಯೆಯ ಸ್ವರೂಪ ಬದಲಾಗಿದೆ. ಅದರ ಪರಿಣಾಮ ನಮಗೆಲ್ಲ ತಿಳಿದಿದೆ. ಅದು ಈಗ ಭಾಷೆ, ಸಮಾಜ, ಸಂಸ್ಕøತಿ, ಸಾರಿಗೆ-ವಾಣಿಜ್ಯ ಹೀಗೆ ಏನೆಲ್ಲವನ್ನೂ ವ್ಯಾಪಿಸಿದೆ. ಜನಸಾಮಾನ್ಯರು ಕಾವೇರಿ ವಿವಾದ ಭುಗಿಲೆದ್ದಿದೆ ಎಂಬ ಸುದ್ದಿ  ಬಂದರೆ ಬೆಚ್ಚಿಬೀಳುತ್ತಾರೆ. ಇದು ನಿಜವಾಗಿ ರೈತರ ಸಮಸ್ಯೆ ಅಲ್ಲವೇ ಅಲ್ಲ, ಹಿಂದೆ ಎರಡೂ ರಾಜ್ಯಗಳ ರೈತರು ಪರಸ್ಪರ ಮಾತನಾಡಿ ಸಮಸ್ಯೆಯನ್ನು ತಮಣೆಗೊಳಿಸಿದ್ದರು. ಹಾಗೆ ನೋಡಿದರೆ ಕಾವೇರಿ ನೀರಿನ ವಿವಾದ ರೈತರದ್ದಾಗಬೇಕಿತ್ತು. ಆದರೆ ಇದು ರಾಜಕೀಯ, ಭಾಷಾ ಹೋರಾಟಗಾರರ ಸ್ವತ್ತಾಗಿಹೋಗಿದೆ. ಅದಕ್ಕಿಂತ ಮುಂದೆ ಹೋಗಿ ಎರಡೂ ರಾಜ್ಯಗಳ ಪ್ರತಿಷ್ಠೆಯ ವಿಷಯವಾಗಿದೆ. ವಿವಾದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಏರಿ ವಿವಾದದ ವಿಷಯದ ಚರಿತ್ರೆಯನ್ನೆಲ್ಲ ಬಗೆಯಲಾಗಿದೆ. ಅದು 1920ರ ಕಾಲದ ಬ್ರಿಟಿಷ್ ಆಡಳಿತಕ್ಕೆ ಹೋಗಿ ನಿಂತಿದೆ.

ಈಗ ಮತ್ತೆ ತಮಿಳುನಾಡು ಕಾವೇರಿ ನೀರು ಬೇಕೆಂದು ವರಾತ ತೆಗೆದಿದೆ. ನಿಯಮಾನುಸಾರ ಕರ್ನಾಟಕ ಇಷ್ಟರಲ್ಲಿ 40 ಟಿಎಂಸಿ ನೀರು ಕೊಡಬೇಕಿತ್ತು, ಕೊಟ್ಟಿಲ್ಲ ಎಂದು ಅದು ಪ್ರಾಧಿಕಾರದ ಮುಂದೆ ಅಹವಾಲು ಇಟ್ಟಿದೆ. ನಿಜವಾಗಿ ಸದ್ಯ ತಮಿಳುನಾಡಿಗೆ  ಕಾವೇರಿ ನೀರು ಬೇಕಿಲ್ಲ. ರಾಜಕೀಯ ಕಾರಣ ಬಿಟ್ಟರೆ ಇಲ್ಲಿ ಇನ್ನೇನೂ ಕಾಣಿಸುವುದಿಲ್ಲ. ಆದರೆ ಏನು ಮಾಡುವುದು ಅದು ಅಲ್ಲಿಗೆ ಹೋಗಿ ನಿಂತಾಗಿದೆ. ಪರಿಹಾರಕ್ಕೆ ಅನ್ಯ ಮಾರ್ಗವಿಲ್ಲ. ಶತಮಾನದ ಈ ಸಮಸ್ಯೆಗೆ ಕಾಲ ಏನು ತೀರ್ಪು ಕೊಡುತ್ತದೋ ನೋಡಬೇಕಿದೆ. ಆದರೆ ಅಷ್ಟು ಕಾಲ ನಾವು ನೀವು ಇರಬೇಕಲ್ಲ!

Tuesday, 8 August 2023

ಆಯಿ ನನ್ನ ಆಯಿ


ನನ್ನ ಆಯಿಯ ಕಣ್ಮರೆಯಾಗಿ ಪಂಚಾಂಗದ ತಿಥಿ ಪ್ರಕಾರ ಇಂದಿಗೆ ೧ ವರ್ಷವಾಯಿತು. ಆ ನೆಪದಲ್ಲಿ ಆಯಿಯ ಧ್ಯಾನ. 

ಅವಳು  ನನ್ನನ್ನು ಹೊತ್ತು ಹೆತ್ತವಳು. ಒಂದೆರಡು ತಿಂಗಳ ಹಿಂದೆ ಕಣ್ಣು ಮುಚ್ಚಿದಳು. ‘ಶರಣರ ಬಾಳನ್ನು ಮರಣದಲ್ಲಿ ನೋಡು’ ಎಂಬ ಮಾತಿದೆ. ಇದಕ್ಕೆ ತಕ್ಕಂತೆ ಬದುಕು ನಡೆಸಿದವಳು. ಸಾಯಲು ಒಂದೆರಡು ತಿಂಗಳಿದ್ದಾಗ ಅದೇಕೋ ಸುಸ್ತು ಅನ್ನುತ್ತಿದ್ದಳಂತೆ. ಏನೋ ಹೆಚ್ಚು-ಕಡಿಮೆ ಆಗಿರಬೇಕೆಂದು ತಲೆಕೆಡಿಸಿಕೊಂಡ ಅಣ್ಣ ವೈದ್ಯರಿಗೆ ತೋರಿಸಿದ್ದನಂತೆ. ಕೆಲವು ಔಷಧಗಳನ್ನು ಕೊಟ್ಟ ವೈದ್ಯರು ಇದನ್ನು ಪಾಲಿಸುವಂತೆ ಸೂಚಿಸಿದ್ದರಂತೆ. ಸ್ವತಃ ನಾಟಿ ವೈದ್ಯಳಾದ ಆಯಿ ಔಷಧದ ಕ್ರಮವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಳಂತೆ. ಆದರೆ ಆಕೆ ಕಣ್ಣು ಮುಚ್ಚುವ ದಿನ ಸುಸ್ತು ಅತಿಯಾಗಿ ಒಂದು ಹೆಜ್ಜೆಯನ್ನೂ ಮುಂದಿಡಲಾಗದ ಸ್ಥಿತಿಗೆ ಬಂದಿದ್ದಳಂತೆ. ಮತ್ತೆ ವೈದ್ಯರ ಬಳಿಗೆ ಕರೆದೊಯ್ದಿದ್ದರಂತೆ. ತಪಾಸಣೆ ಮಾಡಿದ ವೈದ್ಯರು ಇವರಿಗೆ ರಕ್ತಹೀನತೆ (ಅನೀಮಿಯ) ಎಂದು ಹೇಳಿ ಇವರಿಗೆ ಯಾರಾದರೂ ರಕ್ತ ಕೊಡಬೇಕಾಗುತ್ತದೆ. ಒಂದೆರಡು ದಿನದಲ್ಲಿ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿದ್ದರಂತೆ. ಆಯಿತು ಎಂದು ಹೇಳಿ ಸನಿಹದಲ್ಲೇ ಇದ್ದ ನನ್ನ ಅಕ್ಕನ ಮನೆಗೆ ವಿಶ್ರಾಂತಿಗೆ ಬಂದರಂತೆ. ಅದೂ ಇದೂ ಮಾತನಾಡುತ್ತಾ ಬಚ್ಚಲಿಗೆ ಹೋಗಿಬರುತ್ತೇನೆಂದು ಹೋಗಿ ಬರುವಾಗ ಅಲ್ಲೆಲ್ಲೋ ಕುಸಿದು ಕುಳಿತರಂತೆ. ಅನಂತರ ಅಕ್ಕನ ಕಾಲಮೇಲೆ ಒರಗಿದರಂತೆ. ಹಾಗೆಯೇ ನಿದ್ದೆಹೋದವರು ಮತ್ತೆ ಮೇಲೇಳಲಿಲ್ಲ.

83 ವರ್ಷಗಳ ಕಾಲ ಹೊಲಗದ್ದೆ ತೋಟ ಜನ-ದನಕ್ಕೆ ಔಷಧ ಓದುವ ಮಕ್ಕಳಿಗೆ ಊಟೋಪಚಾರ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಆಯಿ ಯಾರಿಂದಲೂ ಒಂದು ಲೋಟ ನೀರನ್ನು ಕುಡಿಸಿಕೊಳ್ಳದೇ ಕಣ್ಣು ಮುಚ್ಚಿದ್ದರು. ಒಂದು ಅರ್ಥದಲ್ಲಿ ಇದು ದೇವರಿಂದ ಕೇಳಿಕೊಂಡುಬಂದ ಸಾವು. ಹಿರಿಯರು ಹೇಳುತ್ತಾರಲ್ಲ- ‘ವಿನಾ ದೈನ್ಯೇನ ಜೀವನಂ, ಅನಾಯಾಸೇನ ಮರಣಂ’ ಎನ್ನುವಂತೆ ಬದುಕು ಸಾವನ್ನು ಕಂಡವರು ಅವರು. ಒಮ್ಮೆ ಘೋರ ಮಳೆಯಿಂದಾಗಿ ಬೆಳೆದ ಬೆಳೆಯಲ್ಲ ಕೈಕೊಟ್ಟಿತ್ತು. ಸಾಲದ್ದಕ್ಕೆ ಮನೆಯಲ್ಲಿದ್ದ ಪಾತ್ರೆಪಗಡೆಗಳನ್ನು ಒಂದೂ ಬಿಡದಂತೆ ಕಳ್ಳರು ಗುಡಿಸಿಕೊಂಡು ಹೋಗಿದ್ದರು. ನಾವು ಆರೇಳು ಮಕ್ಕಳು. ಜೊತೆಗೆ ಶಾಲೆಗೆ ಹೋಗುವ ನಾಲ್ಕಾರು ವಿದ್ಯಾರ್ಥಿಗಳು. ಈ ಚಿತ್ರಣ ಅಪ್ಪನ ನೆನಪಿನ ಸರಣಿಯಲ್ಲಿ ಈಗಾಗಲೇ ಬಂದಿದೆ. ಇಂಥ ಹೀನಾಯ ಸ್ಥಿತಿಯಲ್ಲಿ ಮನೆಯಲ್ಲಿದ್ದ ಮಣ್ಣಿನ ಮಡಕೆಯನ್ನು ಮುಂದಿಟ್ಟುಕೊಂಡು ಸೌದೆ ಓಲೆಯಲ್ಲಿ  ಗಂಜಿ ಬೇಯಿಸಿ ತಿಂಗಳಾನುಗಟ್ಟಲೆ ಎಲ್ಲರ ಹೊಟ್ಟೆ ತುಂಬಿಸಿದ್ದಳು. ಆದರೆ ಗಂಜಿ ಬಡಿಸಲು ಬಟ್ಟಲುಗಳಿರಲಿಲ್ಲ. ಅಂಥ ಸಂದರ್ಭದಲ್ಲಿ ತೆಂಗಿನ ಚಿಪ್ಪನ್ನು ನಾಜೂಕಾಗಿ ಕೆತ್ತಿ ಬಟ್ಟಲು ಮಾಡಿ ನಮಗೆಲ್ಲಾ ಊಟಹಾಕಿದ್ದಳು. ಯಾರ ಮುಂದೆಯೂ ಏನನ್ನೂ ತೋರಿಸಿಕೊಂಡಿರಲಿಲ್ಲ. ಪರಿಸ್ಥಿತಿ ನಿಧಾನವಾಗಿ ಸುಧಾರಿಸಿತು. ನಮಗೆಲ್ಲ ಯಾವ ಪರಿಸ್ಥಿತಿಯಲ್ಲಿ ಹೇಗಿರಬೇಕೆಂದು ಕೆಲಸದ ಮೂಲಕವೇ ಕಲಿಸಿದ್ದಳು. ಜೀವನದ ಶಿಷ್ಟಾಚಾರಗಳನ್ನು ಆಗಾಗ ಕ್ರಿಯೆಯ ಮೂಲಕ ತೋರಿಸಿ ಕಲಿಸುತ್ತಿದ್ದಳು. ಇದರಿಂದಾಗಿ ನಾವೆಲ್ಲ ಪುಟ್ಪಾತಿನಿಂದ ಫೈವ್‍ಸ್ಟಾರ್ ಹೊಟೇಲಿನ ತನಕ ಎಲ್ಲಿ ಹೇಗಿರಬೇಕೆಂದು ಕಲಿಸಿದಳು. ನಾವು ಎಲ್ಲಾದರು ಸೈ ಅನ್ನುವಂತೆ ಬದುಕುವಂತೆ ರೂಪಿಸಿದಳು. ನಮಗೆಲ್ಲಾ ಕೆಲವು ಸಂಪ್ರದಾಯ, ಆಚರಣೆ, ಹಾಡು-ಹಸೆಗಳ ಪರಿಚಯ ಮಾಡಿಸಿದಳು. ಕೆಲವು ಅಪರೂಪದ ಕ್ರಮ ಕಲಿಸಿದಳು. ಈಗ ಮೊಸರು ಮಾಡುವುದು ತುಂಬ ಸುಲಭ. ಎಲ್ಲಾದರೂ ಮಜ್ಜಿಗೆ ಅಥವಾ ಮೊಸರು ಸಿಗುತ್ತದೆ. ಡೈರಿ ಉತ್ಪನ್ನಗಳಿವೆ. ಆದರೆ ಐದಾರು ದಶಕಗಳ ಹಿಂದೆ ಪ್ರತಿ ವರ್ಷ ಹೊಸದಾಗಿ ಮೊಸರು ಮಾಡಿಕೊಂಡು ವರ್ಷ ಪೂರ್ತಿ ಅದನ್ನು ಬಳಸುತ್ತಿದ್ದರು. ಹೊಸದಾಗಿ ಮೊಸರು ಮಾಡುವುದು ಹೇಗೆ? ಮನೆಯ ಸುತ್ತ ಬಾಳೆ ಗಿಡಗಳಿದ್ದವು. ಚಳಿಗಾಲ ಬಂತೆಂದರೆ ಆಯಿ ಹೊಸ ಮೊಸರು ಮಾಡಲು ತಯಾರಾಗುತ್ತಿದ್ದಳು. ಕಾಯಿಸಿದ ಉಗುರು ಬೆಚ್ಚಗಿನ ಹಾಲಿಗೆ ಬಾಳೆಗಿಡದ ಹೊಸ ಎಲೆ ಚಿಗುರುವ ಕುಡಿಯನ್ನು ತೆಗೆದು ಆ ಹಾಲಿನಲ್ಲಿ ಹಾಕುತ್ತಿದ್ದಳು. ಇದನ್ನು ಮುಚ್ಚಿಟ್ಟರೆ ಬೆಳಿಗ್ಗೆ ವೇಳೆಗೆ ರುಚಿಕಟ್ಟಾದ ಮೊಸರು ಸಿದ್ಧವಾಗಿರುತ್ತಿತ್ತು. ಇದು ಮೊಸರಿನ ‘ಮದರ್ ಕಲ್ಚರ್’ ಅಕಸ್ಮಾತ್ ಮೊಸರೇ ಇಲ್ಲ ಅಂದರೆ ಹೊಸದಾಗಿ ಮೊಸರು ಮಾಡಿಕೊಳ್ಳಲು ನಮಗೆ ಇಂದು ತಿಳಿದಿಲ್ಲ. ಜನಪದ ಜ್ಞಾನದ ಅರಿವನ್ನು ಮತ್ತು ಅದರ ಮುಂದುವರಿಕೆ ಎಷ್ಟೋ ವಿಷಯಗಳಲ್ಲಿ ಹೀಗೆ ತುಂಡಾಗಿ ಹೋಗಿದೆ. ಇಂಥ ಅನೇಕ ಸಂಗತಿಗಳನ್ನು ಆಯಿ ನಮಗೆ ವರ್ಗಾಯಿಸಿದ್ದಳು. ಇದಕ್ಕಾಗಿ ನಾವೆಲ್ಲ ಅವಳಿಗೆ ಋಣಿಗಳು. ಅಂಥ ಆಯಿ ನಿಮಗೆಲ್ಲ ಬದುಕಲು ಮತ್ತು ನನಗಿರುವ ತಿಳಿವಳಿಕೆಯನ್ನೆಲ್ಲಾ ಧಾರೆ ಎರೆದಿದ್ದೇನೆ. ಚನ್ನಾಗಿ ಬದುಕಿ ಎಂದು ಹೇಳುತ್ತಾ ಹೋಗೇ ಬಿಟ್ಟಳು. ಆದರೆ ಅವಳ ಜೀವನದ 83 ವರ್ಷ ಸಣ್ಣದೇನೂ ಆಗಿರಲಿಲ್ಲ. ಅವಳು ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳನ್ನು ಕಂಡಿದ್ದಳು. ಬದುಕಿನಲ್ಲಿ ತನ್ನಿಂದ ಸಾಧ್ಯವಾದ ಎಲ್ಲ ನೆರವನ್ನು ಸುತ್ತಲಿನ ಜನ-ದನಗಳಿಗೆ ಕೈತುಂಬ ಮಾಡಿದ್ದಳು. ಜೀವನದಲ್ಲಿ ಅವಳಿಗೊಂದು ತೃಪ್ತಿ ಇತ್ತು. ಇದು ಆಕೆ ಸತ್ತಾಗ ಅವಳ ಮುಖದಲ್ಲಿ ಎದ್ದು ಕಾಣುತ್ತಿತ್ತು. ನಾವೆಲ್ಲ ಮಕ್ಕಳು ಮೊಮ್ಮಕ್ಕಳು ದೂರದೂರಿನಿಂದ ಅವಳ ಸ್ಥಾನ ತಲುಪಲು ಅವಳು ತೀರಿಕೊಂಡ ಮೇಲೆ ಹೆಚ್ಚೂ ಕಡಿಮೆ ಒಂದೂವರೆ ದಿನ ಬೇಕಾಯಿತು. ಅಲ್ಲಿಯವರೆಗೆ ಅವಳ ಶವಸಂಸ್ಕಾರ ಅಗಿರಲಿಲ್ಲ. ಮನೆಯ ಅಂಗಳದಲ್ಲಿ ಒಂದು ಮೂಲೆಯಲ್ಲಿ ಅಂಗಾತ ಮಲಗಿಸಿದ್ದರು. ಏನೇನೋ ವಿಧಿ ಸಂಸ್ಕಾರಗಳು ನಡೆಯುತ್ತಿದ್ದವು. ಅದನ್ನು ಕಂಡು ಇನ್ನಿಲ್ಲದಂತೆ ದುಃಖ ಉಮ್ಮಳಿಸಿಬಂತು. ಆದರೆ ಅವಳ ಮುಖವನ್ನು ಕಂಡಾಗ ಸಮಾಧಾನ ಆಗುತ್ತಿತ್ತು. ಏಕೆಂದರೆ ಆಕೆ ಕಣ್ಣು ಮುಚ್ಚಿ ಎರಡು ದಿನಗಳಾಗುತ್ತಾ ಬಂದಿದ್ದರೂ ಅವಳ ಮುಖ ಕೊಂಚವೂ ಬಾಡಿರಲಿಲ್ಲ. ಈಗ ತಾನೇ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಂತೆ ಇನ್ನೇನು ಚಹಾ ಸೇವಿಸಲು ಎದ್ದೇಳುತ್ತಾರೆ ಅನ್ನುವಂತೆ ಹೊಳೆಯುತ್ತಿತ್ತು. ಇದನ್ನು ಕಂಡಾಗ ಬದುಕಿನಲ್ಲಿ ಅವರು ಕಂಡ ತೃಪ್ತಿ ಎದ್ದು ಕಾಣುತ್ತಿತ್ತು. ಯಾರಿಗೇ ಆಗಲಿ, ಅವರ ಆಪ್ತರು ಎಷ್ಟು ವರ್ಷ ಜೊತೆಗಿದ್ದರೂ ತೃಪ್ತಿ ಇರುವುದಿಲ್ಲ. ನಮ್ಮ ಆಯಿ ನಮ್ಮ ಜೊತೆಗೆ ಇನ್ನೂ ಮುನ್ನೂರು ವರ್ಷ ಇದ್ದಿದ್ದರೂ ನಮಗೆ ಸಾಕಾಗುತ್ತಿರಲಿಲ್ಲ. ಪ್ರಶ್ನೆ ಇದಲ್ಲ ಅವರು ಹೇಗೆ ಬದುಕಿದರು ಎಂಥ ಸಾವು ಕಂಡರು ಎಂಬುದು.

ನನಗೆ ಮತ್ತೆ ಮತ್ತೆ ನೆನಪಾಗುವ ಘಟನೆ ಎಂದರೆ ನಾವು ಓದಲು ಮೈಸೂರಿಗೆ ಹೊರಟ ಸಂದರ್ಭ. ಆಗ ನಮ್ಮ ಬಳಿ ನಯಾಪೈಸೆ ಹಣವಿರಲಿಲ್ಲ. ಹೊಟ್ಟೆ-ಬಟ್ಟೆ ಕಟ್ಟಿಕೊಂಡು ಅಪ್ಪ ಕೂಡಿಟ್ಟ ಸ್ವಲ್ಪ ಹಣ ನಮ್ಮ ನೆರವಿಗೆ ಬಂದಿತ್ತು. ಯಾವಾಗಲಾದರೂ ಊರಿಗೆ ಬರಬೇಕಾದರೆ ಬಸ್ಸು ರೈಲುಗಳ ಪ್ರಯಾಣ ವೆಚ್ಚ ತಲೆ ಬಿಸಿ ಉಂಟುಮಾಡುತ್ತಿತ್ತು. ಆದರೆ ನಮಗೆ ಬರುತ್ತಿದ್ದ ವಿದ್ಯಾರ್ಥಿ ವೇತನ ಇದಕ್ಕೆ ನೆರವಾಗುತ್ತಿತ್ತು. ಊರಿಗೆ ಬಂದಾಗ ಆಯಿ ‘ಛೇ ನಿಮಗೆಲ್ಲ ನಾನೇನೂ ಮಾಡಲಾಗಲಿಲ್ಲ. ತೆಗೆದುಕೊಳ್ಳಿ ಏನಾದರೂ ಒಳ್ಳೆಯದಕ್ಕೆ ಬಳಸಿಕೊಳ್ಳಿ’ ಅನ್ನುತ್ತಾ ತನ್ನ ಬಳಿ ಇದ್ದ ಹತ್ತಿಪ್ಪತ್ತು ರೂಗಳನ್ನು ಕೈಯೊಳಗೆ ತುರುಕುತ್ತಿದ್ದಳು. ಈ ಹಣ ಅವಳು ಎಲ್ಲಾದರೂ ಅರಿಸಿನ ಕುಂಕಮಕ್ಕೆ ಹೋದಾಗ ಬಂದದ್ದು ಅಥವಾ ಅಡಕೆ ಸುಲಿಯಲು ಹೋದಾಗ ಬಂದ ಕೂಲಿ ಹಣವಾಗಿರುತ್ತಿತ್ತು. ಇದು ತಿಳಿದ ನಾವು ನೀನೇ ಇಟ್ಟುಕೋ ಎಂದರೆ ನನಗ್ಯಾವ ಖರ್ಚು ನಿಮಗೆ ಬೇಕಾಗುತ್ತದೆ ಎನ್ನುತ್ತಿದ್ದಳು. ಅವಳ ಔದಾರ್ಯಕ್ಕೆ ಪಾರವೇ ಇರಲಿಲ್ಲ. ಇಂಥ ಆಯಿ ಈಗ ಕೇವಲ ನೆನಪಾಗಿ ಹೋಗಿದ್ದಾಳೆ. ಅವಳಿಗೆ ಎಷ್ಟುಬಾರಿ ಹೇಗೆ ವಂದಿಸಬೇಕು. ಅವಳ ಋಣವನ್ನು ಎಂದಾದರೂ ತೀರಿಸಲು ಸಾಧ್ಯವೇ ಎಂಬುದು ಎಂದೂ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ.

Sunday, 6 August 2023

ಒಂದು ಅಪರೂಪದ ಅಭಿನಂದನ ಕೃತಿ


ಇದೀಗ 'ಪಥದರ್ಶಿ' ಎಂಬ ಅಭಿನಂದನ ಕೃತಿಯೊಂದು ಬಿಡುಗಡೆ ಆಗಿದೆ. ಇದು ಮೂಲತಃ ಶಿಕ್ಷಕ, ಸಮಾಜ ಸೇವಕ, ಸಂಘಟಕರಾದ ಅನಂತರ ರಾಜಕೀಯ ಕ್ಷೇತ್ರದಲ್ಲೂ ಹೆಸರು ಮಾಡಿದ ಪಿವಿಕೆ ಎಂದೇ ಹೆಸರಾದ ಪ್ರೊ. ಪಿ ವಿ ಕೃಷ್ಣ ಭಟ್ ಇವರನ್ನು ಕುರಿತ ಗ್ರಂಥವಾಗಿದೆ. ಒಬ್ಬ ಶಿಕ್ಷಕ ಏನೆಲ್ಲ ಮಾಡಬಹುದು ಎಂಬುದಕ್ಕೆ ಉತ್ತಮ ಜೀವಂತ ಉದಾಹರಣೆ ಕೊಡಿ ಎಂದು ಯಾರಾದರೂ ಕೇಳಿದರೆ ಸ್ವಲ್ಪವೂ ಯೋಚಿಸದೇ ಹೇಳಬಹುದಾದ ಹೆಸರು ಪಿವಿಕೆ. ಹೌದು, ಅವರು ಹಾಗೆಯೇ ಇದ್ದಾರೆ, ಇದಕ್ಕೆ ಕಾರಣಗಳು ಒಂದೆರಡಲ್ಲ, ನೂರಾರು. ಇದು ಹೊಗಳಿಕೆಯ ಮಾತಲ್ಲ, ಪ್ರಸ್ತುತ ಕೃತಿಯಲ್ಲಿ ಒಟ್ಟು ನೂರಾ ಹದಿನೈದು ಲೇಖನಗಳಿವೆ. ಇಲ್ಲಿನ ಒಂದೊಂದು ಲೇಖನಗಳೂ ಪಿವಿಕೆಯವರ ವೈವಿಧ್ಯಮಯ ಪ್ರಭಾವಶಾಲಿವ್ಯಕ್ತಿತ್ವವನ್ನು ತೋರಿಸುತ್ತವೆ, ಹಾಗೆಂದು ಇದು ಬಣ್ಣ ಬಣ್ಣದ ಲೋಕವಲ್ಲ, ಕಪ್ಪು ಬಿಳುಪು ಚಿತ್ರ. ಎಲ್ಲವೂ ಢಾಳುಢಾಳು. ಹೌದು. ಪಿವಿಕೆ ಇರುವುದೇ ಹಾಗೆ. ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಎಲ್ಲರೂ ತಮ್ಮ ಪರಿಚಿತರಿಗೆ ಗೊತ್ತಿರುವವರಿಗೆ ನೋವು ಸಂಕಟವಾದಾಗ ನೆರವಾಗಿ ಅವರನ್ನು ಸಮಾಧಾನಿಸಿ ಅದನ್ನು ಸೇವೆ ಎಂದು ಅಂದುಕೊಳ್ಳುತ್ತಾರೆ. ಆದರೆ ಪಿವಿಕೆಯವರು ಸ್ವಲ್ಪ ಉಲ್ಟಾ. ನೋವಿನಲ್ಲಿ ಇರುವವರನ್ನು ಗುರುತಿಸಿ ಅವರಿಗೆ ನೆರವಾಗಿ ಅವರನ್ನು ತಮ್ಮವರನ್ನಾಗಿ ಮಾಡಿಕೊಳ್ಳುವುದು ಅವರ ಗುಣ. ಹಾಗೂ ಅದನ್ನೆಂದೂ ಅವರು ಸೇವೆ ಅನ್ನುವುದಿಲ್ಲ, ಬದಲಾಗಿ ಮನುಷ್ಯನಾಗಿ ತಮ್ಮ ಕರ್ತವ್ಯ ಅನ್ನುತ್ತಾರೆ. ಬಹುಶಃ ಇದು ಸಂಘದ ಜನ್ಮಜಾತ ಗುಣವಿರಬೇಕು. ಅದನ್ನವರು ಎಂದೂ ಬಿಟ್ಟಿಲ್ಲ.

ಪಿವಿಕೆ ಮೂಲತಃ ಒಬ್ಬ ಶಿಕ್ಷಕರು, ಒಬ್ಬ ಗುರು. ನಮ್ಮ ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಕಾಲ ಕಾಲದ ಸಮಾಜದ ಅಗತ್ಯವನ್ನು ಗುರುತಿಸಿ ಅದಕ್ಕೆ ತಕ್ಕಂತೆ ಸಮಾಜವನ್ನು ಆ ದಿಕ್ಕಿಗೆ ಸರಿಯಾಗಿ ತಳ್ಳುವುದು ಅವನ ಮುಖ್ಯ ಕೆಲಸ. ಆರು ದಶಕಗಳ ಕಾಲ ಪಿವಿಕೆಯವರು ಮಾಡಿದ್ದು ಇದೇ, ಈ ಅರ್ಥದಲ್ಲಿ ಅವರು ತಾವು ಕಲಿಸಿದ, ಕೆಲಸ ಮಾಡಿದ ಸ್ಥಳದಲ್ಲಿ ಮಾತ್ರವಲ್ಲ, ಸಮಾಜದಲ್ಲಿ ಹೋದಲ್ಲಿ ಬಂದಲ್ಲೆಲ್ಲ ಶಿಕ್ಷಕರು, ಗುರುಗಳು. ಇಂದಿನ ಕಾಲದಲ್ಲಿ ಯಾವುದೋ ಸಂಸ್ಥೆಯಲ್ಲಿ ಅಚಾನಕ್ಕಾಗಿ ಶಿಕ್ಷಕ ವೃತ್ತಿಗೆ ನೇಮಕವಾದವರೆಲ್ಲ ತಮ್ಮ ಪಟಾಲಮ್ಮಿನಿಂದ 'ಮೇಷ್ಟು' ಎಂದು ಕರೆಯಿಸಿಕೊಂಡು ಬೀಗುತ್ತಾರೆ, ಪಿವಿಕೆಅವರನ್ನು ಇಂಥವರ ಜೊತೆ ಹೋಲಿಸುವುದಲ್ಲ, ಆ ಸಾಲಿನಲ್ಲಿ ಇವರ ಹೆಸರು ಕೂಡ ಬರಬಾರದು. ಹಾಗಿದ್ದಾರೆ ಇವರು.  ಏಕೆಂದರೆ ಮೊದಲನೆಯದಾಗಿ ಪಿವಿಕೆ ಅವರಿಗೆ ಪಟಾಲಂ ಇಲ್ಲ, ಅದರ ಅಗತ್ಯವೂ ಇಲ್ಲ, ಎರಡನೆಯದಾಗಿ ಅವರು ಅಚಾನಕ್ಕಾಗಿಯೋ ಹೊಟ್ಟೆಪಾಡಿಗೋ ಶಿಕ್ಷಕ ವೃತ್ತಿಗೆ ಬಂದವರಲ್ಲ, ಅದು ಅವರ ಇಷ್ಟದ ಆಯ್ಕೆ. ಅವರು ಮನಸ್ಸು ಮಾಡಿದ್ದರೆ, ಬೇರೆ ಯಾವುದೋ ಹುದ್ದೆಗೋ ಸಾಕು ಬೇಕಾದಷ್ಟು ಹಣ ಮಾಡಲು ಹೇರಳ ಅವಕಾಸವಿತ್ತು. ಇಲ್ಲ, ಅವರು ಹಠಮಾಡಿ ಅಂಟಿಕೊಂಡಿದ್ದು ಎಂಥ ಕಷ್ಟದ ಸಮಯದಲ್ಲೂ ಶಿಕ್ಷಕ ವೃತ್ತಿಗೆ ಮಾತ್ರ. ಅದು ಅವರ ನಿಷ್ಠೆ ಮಾತ್ರವಲ್ಲ, ಕಾಯಕ ಶ್ರದ್ಧೆ.ಇಂತಪ್ಪ ಪಿವಿಕೆ ಅವರ ಬಗ್ಗೆ ಅವರ ಮಾರ್ಗದರ್ಶನದಿಂದ ತಮ್ಮ ಜೀವನದಲ್ಲಿ ಕೃತಕೃತ್ಯತೆ ಕಂಡವರು ಅವರ ಒಪ್ಪಿಗೆಗೂ ಕಾಯದೆ ಪ್ರೀತಿಯಿಂದ ಹೊರತಂದ ಗ್ರಂಥ ಪಥದರ್ಶಿ. ಹೀಗಾಗಿ ಇದು ವಿಶಿಷ್ಟ, ಮಾತ್ರವಲ್ಲ, ಈಗ ನಮ್ಮ ಸುತ್ತ ಮದುವೆಯಾಗಿ ಗಂಡ ಹೆಂಡತಿ ವರ್ಷಗಟ್ಟಲೆ ಒಟ್ಟಿಗೇ ಜೀವಿಸಿದ್ದಾರೆ ಎಂಬ ಕಾರಣಕ್ಕೆ, ಈ ಭೂಮಿಯ ಮೇಲೆ ಐದಾರು ದಶಕ ಓಡಾಡಿಕೊಂಡಿದ್ದಾರೆ, ಹಣ ಮಾಡಿದ್ದಾರೆ, ದೊಡ್ಡ ಪಟಾಲಂ ಕಟ್ಟಿದ್ದಾರೆ ಇತ್ಯಾದಿ ಏನೇನೋ ಕಾರಣಕ್ಕೆ ಅಭಿನಂದನ ಗ್ರಂಥಗಳು ಹೊರಬರುತ್ತಿವೆ. ವ್ಯಕ್ತಿಗೆ ಒಂದು ಐವತ್ತು ವರ್ಷವಾದರೆ ಸಾಕು . ಅಕ್ಕಪಕ್ಕದ ಮನೆಯವರೋ (ಅವರೊಂದಿಗಾದರೂ ಹೊಂದಿಕೊಂಡಿದ್ದಾರೆ) ಹೆಂಡತಿ ಮಕ್ಕಳು, ಮೊಮ್ಮಕ್ಕಳು, ಸೊಸೆ, ನಾಲ್ಕಾರು ಗೆಳೆಯರು ಮೊದಲಾದವರಿಂದ ಏನಾದರೂ ಕೆತ್ತಿಸಿ ದೊಡ್ಡ ವೈಭವೋಪೇತ ಸಮಾರಂಭ ಏರ್ಪಡಿಸಿ ಅವರಿಗೊಂದು ಅಭನಂದನ ಗ್ರಂಥ ಅರ್ಪಿಸುವ ಕೆಟ್ಟ ಚಾಳಿ ಬೆಳೆದಿದೆ. ಇದರಿಂದ ಸಾಹಿತ್ಯಕ್ಕಾಗಲೀ ಸಮಾಜಕ್ಕಾಗಲೀ  ಏನುಪಯೋಗ ಎಂಬುದು ಯಾರಿಗೂ ಗೊತ್ತಿರುವುದಿಲ್ಲ, ಆದರೆ ಅದರಿಂದ  ಕಾಗದ ಬಳಕೆಯಿಂದ ಪರಿಸರ ಹಾನಿ, ಪುಸ್ತಕ ತೂಕದಿಂದ ಒಂದಿಷ್ಟು ಭೂಭಾರವಂತೂ ಖಂಡಿತ ಆಗುತ್ತದೆ. ಸದ್ಯದ ಗ್ರಂಥ ಹೀಗಲ್ಲ, ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯ ವಲಯದಲ್ಲಿ ತೀನಂಶ್ರೀ, ಕುವಂಪು ಅವರಿಗೆ ಸಂದ ಅಭಿನಂದನ ಕೃತಿಗಳಂತೆ ಶಿಕ್ಷಕ ವರ್ಗದ ಅಭಿನಂದನ ಗ್ರಂಥಗಳ ಸಾಲಿನಲ್ಲಿ ಇದಕ್ಕೊಂದು ಶಾಶ್ವತ ಸ್ಥಾನ ಸಿಗಲಿದೆ- ಮುಂದೆ ಇಂಥ ಪರಂಪರೆ ಮುಂದರೆದರೆ. ಅಷ್ಟಂತೂ ಗ್ಯಾರಂಟಿ ಈ ಕೃತಿಯಲ್ಲಿದೆ. ಏಕೆಂದರೆ, ಒಬ್ಬ ಶಿಕ್ಷಕನ ವೃತ್ತಿ ಬೇರೆ ವೃತ್ತಿಯವರು ಹೊಟ್ಟೆ ಉರಿದುಕೊಳ್ಳುವಂಥದ್ದು-ಆತ ನಿಜವಾದ ಶಿಕ್ಷಕನಾಗಿದ್ದರೆ. ಆತನಿಂದ ಪಾಠಕಲಿತ ಹತ್ತಾರು ಮಕ್ಕಳು ಸಮಾಜದ ಹತ್ತಾರು ದಾರಿಗಳಲ್ಲಿ ಸಾಗಿ ಏನಾದರೂ ಸಾಧಿಸುತ್ತಾರೆ. ಇದಕ್ಕೆ ಗಡಿ-ಮಿತಿ ಎರಡೂ ಇಲ್ಲ.  ಆದ್ದರಿಂದ ಅಂಥ ಶಕ್ಷಕ ಯಾವಾಗಲೂ ಪ್ರಸ್ತುತನಾಗಿರುತ್ತಾನೆ,  ಅವನಿಂದ ಪಾಠ ಕಲಿತವರು ತಮ್ಮ ಮಕ್ಕಳಿಗೋ ಮುಂದಿನ ತಲೆಮಾರಿಗೋ ಇಂಥ ಶಿಕ್ಷಕರೊಬ್ಬರು ನನಗಿದ್ದರೆಂದು ಹೇಳಿ ಅವರನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಾರೆ. ಅವರು ನಮ್ಮ ತಂದೆಯೋ ತಾತನೋ ಅವರ ಶಿಕ್ಷಕರ ಬಗ್ಗೆ ಹೀಗೆ ಹೇಳುತ್ತಿದ್ದರೆಂದು ಮುಂದರಿಸುತ್ತಾರೆ. ಹೀಗೆ ನಿಜ ಶಿಕ್ಷಕ ಅಜರಾಮರವಾಗುತ್ತಾನೆ. ಇಂಥ ಅಸಂಖ್ಯ ಶಿಕ್ಷಕರು ನಮ್ಮ ನಡುವೆ ಇದ್ದಾರೆ, ಅಂಥ ಸಾಲಿಗೆ ಸೇರಿದವರು ಪಿವಿಕೆ, ಅವರು ಶಿಕ್ಷಕರ ಹೆಮ್ಮೆ, ಅಭಿಮಾನ. ಇದು ಏಕೆ ಅನ್ನುವುದಕ್ಕೆ ಇಲ್ಲಿನ ಲೇಖನಗಳ ಪುಟಪುಟದಲ್ಲಿಯೂ ನಿದರ್ಶನಗಳಿವೆ.ಆದರೆ ಎಲ್ಲರಿಗೂ ಇಂಥ ಗ್ರಂಥ ಪಡೆಯುವ ಭಾಗ್ಯ ಇರುವುದಿಲ್ಲ, ಈ ದೃಷ್ಟಿಯಿಂದಲೂ ಪಿವಿಕೆ ಅಭಿನಂದನೀಯರು. 

ಪ್ರಸ್ತುತ ಕೃತಿ ಬಹುತೇಕ ಅಭನಂದನ ಕೃತಿಗಳಂತೆ ಸದರಿಯವರ ಭಜನೆಗೆ ಸೀಮಿತವಲ್ಲ, ಪಿವಿಕೆ ಏಕೆ, ಹೇಗೆ ಯಾವ ಕಾರಣಕ್ಕೆ ತಮ್ಮನ್ನು ಮುಟ್ಟಿದರು ಎಂಬ ಸಕಾರಣ ಸಂಗತಿಗಳು ಇಲ್ಲಿ ದಾಖಲಾಗಿವೆ. ಒಬ್ಬರಿಗೆ ವಾರಾನ್ನ ನೀಡಿ ಓದಲು ನೆರವಾದ ಕಾರಣಕ್ಕೆ, ಮತ್ತೊಬ್ಬರಿಗೆ ಈ ಜೀವನ ಸಾಕು ಅನಿಸಿದಾಗ ಬದುಕುವ ಹುಮ್ಮಸ್ಸು ತುಂಬಿದ್ದಕ್ಕಾಗಿ, ಜೀವನಕ್ಕೊಂದು ದಾರಿ ಕಾಣಿಸಿದ್ದಕ್ಕಾಗಿ- ಹೀಗೆ ಒಂದೇ ಎರಡೇ. ನೂರಾ ಹದಿನೈದು ಕಾರಣಗಳು ಪಿವಿಕೆಯವರ ಸುತ್ತ ಸದ್ಯ ಸುತ್ತುತ್ತಿವೆ. ಒಬ್ಬ ಶಿಕ್ಷಕನ ಧನ್ಯತೆಗೆ ಇಷ್ಟು ಸಾಕಲ್ಲ! 

ಪಿವಿಕೆ ಮೂಲತಃ ಮಲೆನಾಡಿನ ಜನ. ಅವರಿಗೆ ಚಿಲ್ಲರೆ ಜಾತಿ ಮತಗಳೆಲ್ಲ ಲೆಕ್ಕಕ್ಕಿಲ್ಲ, ಜೊತೆಗೆ ಪಿವಿಕೆ ಬೆಳೆಯುತ್ತ ಬೆಳೆಯುತ್ತ ರಾಜ್ಯ, ಭಾಷೆಗಳ ಗಡಿಯನ್ನೂ ಮೀರಿ ದೇಶದ ಸಂತರಾಗಿದ್ದಾರೆ. ನಮ್ಮ ಸಂತ ಪರಂಪರೆಯಲ್ಲಿನ ಬಹುದೊಡ್ಡ ಪರಿಕಲ್ಪನೆ ಅಂದರೆ ಸಮಾಜ, ಸಂಸಾರದೊಳಗಿದ್ದುಕೊAಡೇ ಎಲ್ಲವನ್ನೂ ಕಟ್ಟಿಕೊಂಡುಅವನ್ನೆಲ್ಲ ಬಿಚ್ಚಿಕೊಂಡ ಅವಧೂತನಂತೆ ಇರುವುದು. ಅವರಿಗೆ ಏಕಕಾಲಕ್ಕೆ ಎಲ್ಲವೂ ಸ್ವಂತ ಹಾಗೂ ಸಂಬಂಧ ಇಲ್ಲದ್ದಾಗಿರುತ್ತದೆ. ಅಂಥವರು ಪಿವಿಕೆ ಇಲ್ಲಿ ಅವರದೇನಿದ್ದರೂ ಸದಾ ಎಚ್ಚರ ಹಾಗೂ ಕರ್ತವ್ಯ ಅಷ್ಟೇ. ಹೀಗಾಗಿ ಪಿವಿಕೆ ಸದ್ಯ ನಮ್ಮ ನಡುವಿನ ಸಂತಾವಧೂತ. ಸಂತರು, ಅವಧೂತರು ಪವಾಡ ಮಾಡುತ್ತಾರೆ ಅನ್ನಲಾಗುತ್ತದೆ, ಪಿವಿಕೆ ಕೂಡ ಪವಾಡ ಮಾಡಿದ್ದಾರೆ, ಆರು ದಶಕಗಳ ಅವರು ಬರಿಗೈನಲ್ಲಿ ಕಟ್ಟಿದ ಸಂಸ್ಥೆಗಳು, ರೂಪಿಸಿದ ಜೀವಚೈತನ್ಯಗಳೆಲ್ಲ ಪವಾಡಗಳೇ. ಈ ಕೃತಿ ಅದಕ್ಕೆ ಸಾಕ್ಷಿ! ಈ ಕೃತಿಯಲ್ಲಿ ಒಂದು ಹಿಂದೀ, ೧೫ ಇಂಗ್ಲಿಷ್ ಸೇರಿ ೧೧೫ ಲೇಖನಗಳಿವೆ, ಮಲೆನಾಡಿನ ಮೂಲೆಯಿಂದ ದೂರದ ಜೈಪುರದವರೆಗಿನ ವಿಳಾಸ ಹೊಂದಿದ ಪಿವಿಕೆ ಕುರಿತ ಲೇಖನಗಳಿವೆ. ಕಟ್ಟಡವೊಂದು ಎತ್ತರವಾದಂತೆ ಅದರ ನೆರಳು ಹಾಸುವ ವ್ಯಾಪ್ತಿ ಕೂಡ ವಿಸ್ತಾರವಾಗುತ್ತದೆ, ಪಿವಿಕೆ ಹೀಗೆ. ಅವರು ತಾವು ಮಾತ್ರ ಬೆಳೆಯಲಿಲ್ಲ, ತಮ್ಮ ಸುತ್ತಲನ್ನೂ ಬೆಳೆಸಿದರು. ಇಲ್ಲಿ ಶಿಕ್ಷಕರು, ಕುಲಪತಿಗಳು, ವಿಜ್ಞಾನ ತಂತ್ರಜ್ಞಾನ, ಸಮಾಜಸೇವೆ, ಪತ್ರಿಕೋದ್ಯಮ ಹೀಗೆ ಹತ್ತಾರು ವಲಯದ ಜನ ಪಿವಿಕೆಯವರನ್ನು, ಅವರ ವ್ಯಕ್ತಿತ್ವವನ್ನು ಕುರಿತು ಚಿತ್ರಿಸಿದ್ದಾರೆ. ಇವೆಲ್ಲ ಒಟ್ಟಾಗಿ ಒಬ್ಬ ಪಿವಿಕೆ ಕಾಣಿಸುತ್ತಾರೆ, ಅಥವಾ ನಾವು ಅವರನ್ನು ಹಾಗೆ ಗ್ರಹಿಸಬೇಕು. ಅವರು ಸಮಾಜ ಸೇವೆಯ ಹೆಸರಲ್ಲಿ ಮನೆ ಮಠ ಮರೆತವರಲ್ಲ, ವೃತ್ತಿಗೂ ಎಳ್ಳು ನೀರು ಬಿಟ್ಟವರಲ್ಲ, ಹೋದಲ್ಲಿ ಬಂದಲ್ಲಿ ಎಲ್ಲವನ್ನೂ ಉಳಿಸಿ ಬೆಳೆಸಿದವರು, ಅವರು ತಮ್ಮ ಕ್ಷೇತ್ರವ್ಯಾಪ್ತಯನ್ನು ಹುಡುಕಿ ಹೋದವರಲ್ಲ, ಅವೆಲ್ಲ ಅವರ ಜೀವನದೊಂದಿಗೆ ತಾವಾಗಿ ಬಂದವು. ಅವನ್ನೆಲ್ಲ ಅವರು ಪ್ರಾಮಾಣಿಕವಾಗಿ ನಿಭಾಯಿಸಿ ಸೈ ಅನಿಸಿಕೊಂಡವರು. ಅವರ ನಡೆದುಬಂದ ದಾರಿ ಲೇಖನದಲ್ಲಿ ಇದು ಸ್ಪಷ್ಟವಾಗುತ್ತದೆ, ಒಟ್ಟಿನಲ್ಲಿ ಸಮಾಜದಲ್ಲಿ ಸಾಧಿಸಲು ಜೀವನ ಪ್ರೀತಿ ಸಹಜೀವಿಗಳ ಬಗ್ಗೆ ಸಹಾನುಭೂತಿ, ಪ್ರಾಮಾಣಿಕತೆಗಳಿದ್ದರೆ ಬದುಕು ಸಾರ್ಥಕ ಎಂಬುದನ್ನು ಅರಿಯಲು ಈ ಕೃತಿ ನೆರವಾಗುತ್ತದೆ. ಸರಳ ಜೀವನದಲ್ಲಿ ಸಾಧಿಸುವುದೆಷ್ಟಿದೆ ಎಂಬುದನ್ನೂ ಇದು ಮನಗಾಣಿಸುತ್ತದೆ. ಈ ಕಾರಣಕ್ಕೆ ಈ ಕೃತಿ ಕನ್ನಡ ಓದಿನ ಸಾಗರಕ್ಕೆ ಹೊಸದಾಗಿ ಸೇರಿದ ಅಮೂಲ್ಯ ಹನಿ ಎಂದು ಘಂಟಾಘೋಷವಾಗಿ ಹೇಳಬಹುದು. ಇದನ್ನು ಸಂಪಾದಿಸಿದ ದ.ಗು. ಲಕ್ಷಣ ಹಾಗೂ ಸಂಪಾದಕ ಮಂಡಳಿಗೆ, ಲೇಖನ ಬರೆದ ಎಲ್ಲರಿಗೆ ಕನ್ನಡ ಓದುಗ ಸಮುದಾಯ ಕೃತಜ್ಞ. ಈ  ಕೃತಿಯನ್ನು ಶೃಂಗೇರಿಯ  ಶಾರ್ವರಿ ಪ್ರಕಾಶನ  ಹೊರತಂದಿದೆ.

Wednesday, 2 August 2023

ತರಹೇವಾರಿ ವಿದ್ಯೆಗಳು


ಭಾರತವನ್ನು ಬ್ರಿಟಿಷರು ಆಳಿದ ಮೇಲೆ ಪ್ರಪಂಚದಲ್ಲಿ ಭಾರತದ ಮರ್ಯಾದೆಯ ಸ್ಥಾನ ಕೀಳಾಯಿತು. ಇದಕ್ಕೆ ಕಾರಣಗಳು ಹಲವು. ಇದನ್ನು ಧರ್ಮಪಾಲರು ತಮ್ಮ ಪ್ರಸಿದ್ಧ ಕೃತಿ "ದಿ ಬ್ಯೂಟಿಫುಲ್ ಟ್ರೀ"ಯಲ್ಲಿ ವಿವರಿಸುತ್ತಾರೆ. ನಿಜ. ಬ್ರಿಟಿಷರ ಆಳ್ವಿಕೆ ಆದ ಮೇಲೆ ನಮ್ಮ ದೇಶದಲ್ಲಿ ಪ್ರಚಲಿತವಾಗಿದ್ದ ತರಹೇವಾರಿ ಸಂಪ್ರದಾಯಗಳು, ಚಿತ್ರವಿಚಿತ್ರ ಎನಿಸುವ ವಿದ್ಯೆಗಳು ಕೂಡ ನಾಮಾವಶೇಷವಾದವು. ಅಂಥವುಗಳಲ್ಲಿ ನಾನು ಕಂಡ, ಕೇಳಿದ ಅಳಿವಿನಂಚಿನ ಕೆಲವು ವಿದ್ಯೆಗಳ ಪ್ರಸ್ತಾಪವನ್ನು ಇಲ್ಲಿ ಮಾಡುವ ಯತ್ನ ಮಾಡುತ್ತೇನೆ. ಇಂಥವು ದೇಶದ ವಿವಿಧ ಹಳ್ಳಿಗಳಲ್ಲಿ ಇಂದಿಗೂ ಚಾಲ್ತಯಲ್ಲಿವೆ. ಆದರೆ ಮೂಲೆ ಸೇರುತ್ತಿವೆ.

ಅದು ಹಾವು ಕಡಿತಕ್ಕೆ, ಸರ್ಪದ ಹುಣ್ಣು ಅಥವಾ ನಾಗರ ಸುತ್ತು ಅಥವಾ ಹರ್ಪಿಸ್ ಎಂದು ಕರೆಯಲಾಗುವ ಚರ್ಮವ್ಯಾಧಿಗೆ ಕೊಡುವ ಪಾರಂಪರಿಕ ಚಿಕಿತ್ಸೆ. ಇದರಲ್ಲಿ ಎರಡು ವಿಧಗಳನ್ನು ನೋಡಿದ್ದೇನೆ, ಒಮ್ಮೆ ಸ್ವತಃ ಅನುಭವಿಸಿಯೂ ನೋಡಿದ್ದೇನೆ. ಇದು ನಂಬಲು ಅಸಾಧ್ಯ. ಅಥವಾ ಆಧುನಿಕ ಶಿಕ್ಷಿತರು ಸಾಮಾನ್ಯವಾಗಿ ಕರೆಯುವಂತೆ ಒಂದು ಬಗೆಯ ಮೌಢ್ಯ!

ನಮ್ಮೂರಿನ ಒಂದು ಮಂತ್ರ ಚಿಕಿತ್ಸಕರ ಮನೆ. ತಲೆ ತಲಾಂತರದಿಂದ ಅದು ಅವರ ಮನೆಯ ಸದಸ್ಯರಿಗೆ ಕೈ ಹತ್ತಿದ ವಿದ್ಯೆ. ಊರಲ್ಲಿ ಯಾರಿಗೇ ಸರ್ಪಸುತ್ತು ಆದರೆ ಮೊದಲು ಜನ ಹೋಗುವುದು ಇವರ ಬಳಿ. ಅವರು ಪ್ರತಿಯಾಗಿ ಪಡೆಯುವುದು ಒಂದೆರಡು ತೆಂಗಿನಕಾಯಿ ಮತ್ತು ಹಣ್ಣು ಮಾತ್ರ. ಅದೂ ಜನ ಕೊಟ್ಟರೆ, ಇಲ್ಲವಾದಲ್ಲಿ ಅದೂ ಇಲ್ಲ. ಹಾವು ಕಡಿದವರು ಅಥವಾ ಸರ್ಪಸುತ್ತು ಆದವರನ್ನು ತಮ್ಮ ಎದುರು ಕೂರಿಸಿಕೊಂಡು ಮಂತ್ರ ಪಠಿಸುತ್ತ, ನವಿಲುಗರಿಯಿಂದ ಗಾಳಿ ಬೀಸುತ್ತ, ಒಂದು ಸುತ್ತಿನ ಮಂತ್ರ ಪಠಣೆ ಆದ ಮೇಲೆ ಗರಿಯ ಚೂರನ್ನು ಮುರಿಯುತ್ತಾರೆ. ಇದನ್ನು ಸೂರ್ಯ ಮುಳುಗಿದ ಮೇಲೆ ಮಾಡುವುದಿಲ್ಲ, ಅಲ್ಲದೇ ಹೀಗೆ ಮಾಡುವವರು ಕಟ್ಟುನಿಟ್ಟಿನ ಜೀವನ ಕ್ರಮ ನಡೆಸುತ್ತಾರೆ. ಒಂಟಿಯಾಗಿ ಯಾರೊಂದಿಗೂ ಮಾತನಾಡದೇ ಊಟ ಮಾಡುವುದು, ಆ ಸಮಯ ಬಳೆ ಶಬ್ದ ಕೂಡ ಕೇಳಿಸಿಕೊಳ್ಳಬಾರದು, ನಿಯತವಾಗಿ ಜಪತಪಾದಿ ಮಾಡಬೇಕು, ಮಡಿಮೈಲಿಗೆ ಕಡ್ಡಾಯವಾಗಿ ಅನುಸರಿಸಬೇಕು, ಇನ್ನೂ ಹತ್ತಾರು ನಿಯಮಗಳು ಅವರಿಗೆ ಇರುತ್ತದೆ. ಜೀವಮಾನಪರ್ಯಂತ ಅವರು ಇದನ್ನನುಸರಿಸಬೇಕು. ಹೀಗೆ ಮಾಡದಿದ್ದರೆ ಆ ವಿದ್ಯ  ಕೈಬಿಟ್ಟುಹೋಗುತ್ತದೆ, ಮಾತ್ರವಲ್ಲ, ಅವರಿಗೆ ಕೇಡುಂಟಾಗುತ್ತದೆ ಅನ್ನುತ್ತಾರೆ. ಅದೆಷ್ಟು ನಿಜವೋ ಸುಳ್ಳೋ ತಿಳಿಯದು. ಇದೆಲ್ಲ ನಮ್ಮ ತರ್ಕ. ಆದರೆ ಅವರ ಚಿಕಿತ್ಸೆಯ ಫಲ ಕಂಡವರಿಗೆ ಲೆಕ್ಕವಿಲ್ಲ.

ನನ್ನಪ್ಪ ಇವರ ಬಳಿ ಆದ ತನ್ನ ಅನುಭವ ಹೇಳುತ್ತಿದ್ದ. ಒಮ್ಮೆ ಆತ ಕಷ್ಟಪಟ್ಟು ಖರೀದಿಸಿದ್ದ ಎತ್ತಿಗೆ ಹಾವು ಕಡಿದು ಅದು ಸಾಯುವುದು ಖಚಿತ ಅನ್ನುವ ಸ್ಥಿತಿ ಏರ್ಪಟ್ಟಿತ್ತಂತೆ. ದಾರಿ ಕಾಣದ ಅಪ್ಪ ಐದಾರು ಮೈಲಿ ದೂರದ ಇವರ ಬಳಿ ಹೋಗಿ ಕಷ್ಟ ಹೇಳಿದನಂತೆ, "ಎತ್ತು ಎಲ್ಲಿದೆ?" ಎಂದು ಅವರು ಕೇಳಿದಾಗ "ಮನೆಯಲ್ಲಿ" ಅಂದನಂತೆ. ಎತ್ತಿನ ಹೆಸರು ಕೇಳಿದ ಅವರು ಒಂದು ಬಿಳಿ ಬಣ್ಣದ ಕಲ್ಲು ಎತ್ತಿಕೊಂಡು ಅದರ ಮುಂದೆ ಪರಿಸ್ಥಿತಿ ಹೇಳಿ ಕಲ್ಲನ್ನು ಅಲ್ಲೇ ಇಡುವಂತೆ ಹೇಳಿದರಂತೆ. ಅನಂತರ ಅವರು  ಮಂತ್ರ ಪಠಿಸುತ್ತ ಸ್ವಲ್ಪ ಹೊತ್ತಾದ ಮೇಲೆ ಕಲ್ಲು ನೋಡುವಂತೆ ಹೇಳಿದರಂತೆ. ಆ ಕಲ್ಲು ಕಪ್ಪು ಬಣ್ಣಕ್ಕೆ ತಿರುಗಿತ್ತಂತೆ. ಅವರು "ಚಿಂತೆ ಮಾಡಬೇಡ. ನಿನ್ನ ಎತ್ತು ಆರಾಮವಾಗಿದೆ ಹೋಗು" ಅಂದರಂತೆ. ಮನೆಗೆ ಧಾವಿಸಿದ ಅಪ್ಪ ನೋಡಿದರೆ ಎತ್ತು ಮನೆ ಬಳಿ ಹುಲ್ಲು ಮೇಯುತ್ತ ಸುಖವಾಗಿ ನಲಿಯುತ್ತಿತ್ತಂತೆ.

ಇನ್ನೊಂದು ವಿಧ. ಅವರು ಮೈಸೂರಿನಲ್ಲಿರುವ ಸಂಸ್ಕೃತ ಪ್ರಾಧ್ಯಾಪಕರು. ಅವರೂ ಈ ವಿದ್ಯೆ ಕಲಿತವರು. ಹಿರಿಯ ಜನಪದ ವಿದ್ವಾಂಸರಾಗಿದ್ದ ಜೇಶಂಪ ಅವರು ಇದೇ ಕಾಹಿಲೆಯಿಂದ ಬಳಲುತ್ತಿದ್ದರು. ಅಮೆರಿಕ್ಕೂ ಹೋಗಿ ಚಿಕಿತ್ಸೆ ಪಡೆದಿದ್ದರು. ಹೈ ಡೋಸೇಜಿನ ಔಷಧ ತಿಂದು ಬಳಲಿದ್ದರು. ಆದರೆ ಅದು ಸ್ವಲ್ಪ ದಿನಕ್ಕೆ ಮರುಕಳಿಸುತ್ತಿತ್ತು. ಅವರು ನನ್ನ ಪ್ರೀತಿಯ ಮೇಷ್ಟ್ರು ಬೇರೆ. ಅವರ ಕಷ್ಟ ನೋಡಲಾಗದೇ ನಾನು "ಸರ್ ಹೀಗೊಂದು ವಿಧಾನವಿದೆ ಏಕೆ ಒಮ್ಮೆ ಪ್ರಯತ್ನಿಸಬಾರದು?" ಅಂದೆ. ಇವೆಲ್ಲ ಆಗಲ್ಲ ಅಂದ್ರು. ಒತ್ತಾಯಿಸಿದೆ. "ಸರ್ ಒಂದು ಬಾಟಲು ಶುದ್ಧ ಕೊಬ್ಬರಿ ಎಣ್ಣೆ ಎರಡು ತೆಂಗಿನಕಾಯಿ ಮಾತ್ರ ಇದಕ್ಕೆ ತಗಲುವ ವೆಚ್ಚ. ಬನ್ನಿ ಸರ್. ನೀವು ಹೇಗಿದ್ದರೂ ಮೈಸೂರಲ್ಲೇ ಇದ್ದೀರ" ಎಂದು ಒತ್ತಾಯಿಸಿದೆ. ಅವರಿಗೆ ಸಕ್ಕರೆ ಕಾಹಿಲೆ ಬೇರೆ ಇದ್ದ ಕಾರಣ ಸರ್ಪಸುತ್ತಿನ ವ್ರಣ ಹುಣ್ಣಾಗಿ ಕೀವು ಬರುತ್ತಿತ್ತು. ಅಸಾಧ್ಯ ಉರಿ, ನೋವು ಅನ್ನು ತ್ತಿದ್ದರು. ನಾನು ಅವರನ್ನು ಈ ಚಿಕಿತ್ಸಕರ ಬಳಿ ಕರೆದೊಯ್ದೆ. ಪರಿಸ್ಥಿತಿ ನೋಡಿದ ಅವರು ವಾರಕ್ಕೆ ಮೂರುಬಾರಿ ಮಂತ್ರ ಚಿಕಿತ್ಸೆ ಆಗಬೇಕು ಅಂದ್ರು. ಒಂದು ಬಾರಿ ಒಂದುಗಂಟೆಯ ಕೆಲಸ. "ಆಯ್ತು ಇದನ್ನೂ ಮಾಡಿಬಿಡೋಣ" ಅಂದ್ರು ಮೇಷ್ಟ್ರು. "ಸರಿ ಸರ್" ಅಂದೆ. ಕೆಲವು ಪಥ್ಯ ಹೇಳಿದ ವೈದ್ಯರು ಮಂತ್ರಿಸಿದ ಎಣ್ಣೆಯನ್ನು ಮಲಗುವ ಮುಂಚೆ ಲೇಪಿಸಿಕೊಳ್ಳಲು ಹೇಳಿದರು. ಅವರು ಹದಿನೈದು ದಿನ ನಿಷ್ಠೆಯಿಂದ ಮಾಡಿದರು, ಎಲ್ಲ ಗುಣವಾಯ್ತು. ಕೆಲ ಕಾಲ ಆರಾಮವಾಗಿದ್ದ ಅವರು ಬೋನ್ ಕ್ಯಾನ್ಸರ್ ಇಂದ ಕಾಲವಾದರು. ಆ ಮಾತು ಬೇರೆ. ಆದರೆ ಸರ್ಪಸುತ್ತಿನಿಂದ ಅವರು ಸಂಪೂರ್ಣ ಗುಣವಾಗಿದ್ದರು. ಗಾಯವೂ ಮಾಸಿತ್ತು. ಇದೊಂದು ವಿಚಿತ್ರ ವಿದ್ಯೆ ಎಂದು ಮೆಚ್ಚಿಕೊಂಡಿದ್ದ ಅವರು ಹೋದಲ್ಲಿ ಬಂದಲ್ಲಿ ಪರಂಪರೆಯ ಈ ವಿದ್ಯೆಯನ್ನು ಮನಸಾರೆ ಹೊಗಳುತ್ತಿದ್ದರು.

ಒಮ್ಮೆ ಅಲ್ಲೇ ಕ್ಷೇತ್ರಕಾರ್ಯದಲ್ಲಿದ್ದ ನನಗೆ ವಿಷದ ಹುಳವೊಂದು ಕಡಿಯಿತು. ಕೈ ಅಸಾಧ್ಯ ನೋವು ಉರಿ ಮತ್ತು ಊತದಿಂದ ಕಾಲಿನ ಗಾತ್ರ ಪಡೆದಿತ್ತು. ಕೈ ಎತ್ತಲೂ ಆಗುತ್ತಿರಲಿಲ್ಲ. ಹತ್ತಿರದಲ್ಲಿ ಆಸ್ಪತ್ರೆಯೂ ಇರಲಿಲ್ಲ. ಗತಿ ಇಲ್ಲದೇ ಅವರ ಬಳಿ ಹೋದೆ. ಇಂದು ನಾಳೆ ಎರಡು ಬಾರಿ ಚಿಕಿತ್ಸೆ ಸಾಕು ಅಂದರು. ಸರಿ ಅಂದೆ. ಮೊದಲದಿನ ಚಿಕಿತ್ಸೆ ನಂತರ ಊತ ದಿಢೀರನೆ ಇಳಿಯಿತು. ಮರುದಿನವೇ ನೋವು ನಾಪತ್ತೆ. ಆಮೇಲೆ ಅದು ಮರೆತೇ ಹೋಯ್ತು. ಈಗ ಕಲೆ ಮಾತ್ರ ಉಳಿದಿದೆ. ನನಗೆ ಇದು ಇಂದಿಗೂ ಅಚ್ಚರಿ. ಆಧುನಿಕ ವೈದ್ಯರು ಅಥವಾ ಶಿಕ್ಷಣ ಪಡೆದವರ ಪ್ರತಿಕ್ರಿಯೆ ಇದಕ್ಕೆ ಏನಿರಬಹುದೆಂಬುದು ನಿರೀಕ್ಷಿತ. ಆದರೆ ಅನುಭವವನ್ನು ನಿರಾಕರಿಸಲು ಆಗದು. ಅಭಿಪ್ರಾಯ ಏನೇ ಇರಲಿ.

ಇನ್ನೊಬ್ಬರಿದ್ದರು ಬೈರಾಗಿಯಂತೆ ಅಲೆಯುತ್ತಿದ್ದರು. ಆದರೆ ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ ಕಳೆದಿದ್ದರೆ ಅದರ ಖಚಿತ ಮಾಹಿತಿಯನ್ನು ಕುಳಿತಲ್ಲೇ ಕೊಡುತ್ತಿದ್ದರು. ಒಮ್ಮೆ ನಮ್ಮನೆಯ ಎಮ್ಮೆ ಮನೆಗೆ ಬರದೇ ಎರಡು ದಿನವಾಗಿತ್ತು. ತಲೆ ಕೆಡಿಸಿಕೊಂಡ ಅಪ್ಪ ಅವರನ್ನು ಭೇಟಿಯಾದ. "ಅದು ನಿಮ್ಮ ಜಮೀನಲ್ಲೇ ಇದೆ. ಹಳ್ಳದಲ್ಲಿ ದಿಕ್ಕು ಕಾಣದೇ ನಿಂತಿದೆ ನೋಡಿ" ಅಂದರು. ನಮ್ಮ ಜಮೀನಿನ ಸುತ್ತ ಎರಡು ಹಳ್ಳಗಳಿವೆ. ಎಲ್ಲ ಹುಡುಕಿದ್ದಾಯ್ತು. ಒಂದುಕಡೆ ಎಮ್ಮೆ ಸುಮ್ಮನೆ ನಿಂತಿತ್ತು. ಎಮ್ಮೆ ಸಿಕ್ಕ ಖುಷಿ ಒಂದು ಕಡೆ. ಇದು ಅವರಿಗೆ ಹೇಗೆ ಗೊತ್ತಾಯ್ತು ಎಂಬ ಅಚ್ಚರಿ ಮತ್ತೊಂದು ಕಡೆ. ಇಂಥವರ ಸಂತತಿ ಈಗ ಇಲ್ಲವೇ ಇಲ್ಲ ಎಂಬಷ್ಟು ಅಪರೂಪವಾಗಿದೆ. ಇಂಥ ವಿಚಿತ್ರಳು ಎಲ್ಲಿ ಬೇಕಾದರೂ ನಡೆಯಬಹುದು. ತುಮಕೂರು ವಿವಿಯ ಪ್ರಸಾರಾಂಗ ಪ್ರಕಟಿಸಿದ  ಸಿನಿಮಾ ಮತ್ತು ರಂಗಭೂಮಿಯ ಪರಿಶ್ರಮಿ ಶಂಕರೇಗೌಡರನ್ನು ಕುರಿತ ಕೃತಿಯಲ್ಲಿ ಅವರಿಗೆ ತಿಳಿದಿದ್ದ ಇಂಥ ವಿದ್ಯೆಯ ಉಲ್ಲೇಖವಿದೆ. ಕವಿ ಸಿದ್ದಯ್ಯನವರು ಇದನ್ನು ಕುರಿತು ವಿಶೇಷ ಉಪನ್ಯಾಸ ಕೂಡ ಮಾಡಿದ್ದರು. 

ಇಂಥ ವಿದ್ಯೆಗಳು ಬ್ರಿಟಿಷರ ಅಪರಿಚಿತ ಸಂಪ್ರದಾಯದ ಹಿನ್ನೆಲೆಯ ಅಪನಂಬಿಕೆ ಹಾಗೂ ಅವಿಶ್ವಾಸದ ಕಾರಣ ವೈಜ್ಞಾನಿಕ ದಾಖಲೆ, ಪುರಾವೆ ಇತ್ಯಾದಿಗಳ ನೆಪದಲ್ಲಿ ಗೇಲಿಗೆ ಒಳಗಾಗಿ ಮೂಲೆಗುಂಪಾದವು. ಅವರ ಶಿಕ್ಷಣ ಪಡೆದ ನಾವು ಕೂಡ ಅದನ್ನೇ ನಂಬಿ ನಮ್ಮ ಅಮೂಲ್ಯ ಜ್ಞಾನ ಪರಂಪರೆಯನ್ನು ಸ್ವತಃ ಬದಿಗೆ ತಳ್ಳಿ  "ಯೇ ಇವೆಲ್ಲ ನಂಬಕಾಗಕಿಲ್ಲ" ಅನ್ನುತ್ತ ಮೆರೆಯುತ್ತಿದ್ದೇವೆ. ಕಲಿಯುವ ಆಸಕ್ತಿ ಇದ್ದರೂ ಈಗ ಕಲಿಸುವವರಿಲ್ಲ. ಅವೆಲ್ಲ ವಿದ್ಯೆಗಳ ಪರಂಪರೆ ಸಂದುಹೋಗಿ ನಾಲ್ಕಾರು ತಲೆಮಾರು ಕಳೆದಿದೆ. ಈಗ ಏನು ಮಾಡ್ತೀರಿ? ಇಂಥವೆಲ್ಲ ಸುಳ್ಳು ಅನ್ನುವವರಿಗೆ ಒಂದೋ ಅನುಭವದ ಕೊರತೆ ಅಥವಾ ನಮ್ಮ ಪರಂಪರೆಯ ಬಗ್ಗೆ ಅಪನಂಬಿಕೆ. ಇಂಥವರು 'ಯೇಗ್ದಾಗೆಲ್ಲ ಐತೆ' ಕೃತಿ ಓದಬೇಕು. ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕು. ಬೇರೆ ದಾರಿ ಇಲ್ಲ.