Saturday, 31 May 2025

ಆರ್ಥಿಕವಾಗಿ ನಾಲ್ಕೆನೆ ಮೆಟ್ಟಿಲಲ್ಲಿ ಭಾರತ


ಈಗ ಜಾಗತಿಕ ಆರ್ಥಿಕ ವರದಿ ಬಿಡುಗಡೆಯಾಗಿದ್ದು, ಪ್ರಪಂಚದಲ್ಲಿ ಭಾರತ ನಾಲ್ಕನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ, ಇದು ಕೂಡ ಹತ್ತು ವರ್ಷಗಳ ಅವಧಿಯಲ್ಲಿ. ಇದಕ್ಕಾಗಿ ಮೋದಿಯವರು ರೂಪಿಸಿದ ಆರ್ಥಿಕ ಯೋಜನೆಗಳು ಮತ್ತು ಅವುಗಳ ಸಮರ್ಪಕ ಜಾರಿ ಕಾರಣ. ೨೦೧೪ರಲ್ಲಿ ಮೋದಿಯವರು ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಜಾಗತಿಕ ಮಟ್ಟದಲ್ಲಿ ದೇಶವನ್ನು ಬಲಗೊಳಿಸುವ ಸಂಕಲ್ಪ ಮಾಡಿದ್ದರು, ಅವುಗಳಲ್ಲಿ ಆರ್ಥಿಕತೆ ಹಾಗೂ ಸೇನಾ ವ್ಯವಸ್ಥೆಗಳು ಮುಖ್ಯವಾಗಿದ್ದವು. ಇವೆರಡೂ ಈಗ ಸಾಧ್ಯವಾಗಿದೆ. ಅವರಿಗೆ ದೇಶದ ಬಗ್ಗೆ ಇನ್ನೂ ಅನೇಕ ಆಸೆಗಳಿವೆ. ಹಂತ ಹಂತವಾಗಿ ಅವು ಜಾರಿಗೆ ಬರುತ್ತವೆ ಎಂದು ಭಾವಿಸಬಹುದು. ಅವರ ದೃಷ್ಟಿಯಲ್ಲಿ ದೇಶದ ಆರ್ಥಿಕತೆ ಮೊದಲ ಆದ್ಯತೆ ಇತ್ತು ಇದಕ್ಕಾಗಿ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ ೨೬ ಯೋಜನೆಗಳನ್ನು ಹಂತಹಂತವಾಗಿ ಜಾರಿಗೆ ತಂದರು, ಹಾಗೂ ಇವೆಲ್ಲ ಒಂದಕ್ಕೊಂದು ಪೂರಕವಾಗಿದ್ದವು, ಯಾವಾಗಲೂ ಅಷ್ಟೆ, ಯಾವುದೇ ಯೋಜನೆ ಮುಂದಿನ ಯೋಜನೆಗೆ ದಾರಿ ಮಾಡಬೇಕು, ಅವು ಪೂರಕವಾಗಿರಬೇಕು. ಈ ೨೬ಯೋಜನೆಗಳು ಹಾಗೆ ಇದ್ದುದರಿಂದ ದೇಶದ ಆರ್ಥಿಕತೆ ವೇಗವಾಗಿ ಬೆಳೆಯಲು ಸಹಕಾರಿಯಾಯಿತು. ಮೊದಲು ಅವರು ಜಾರಿ ಮಾಡಿದ್ದು ಜನಧನ್ ಯೋಜನೆ, ದೇಶದ ಬಹುತೇಕ ಜನ ಬ್ಯಾಂಕ್ ನೋಡಿಯೇ ಇರಲಿಲ್ಲ, ಅವರೆಲ್ಲ ಒಂದಲ್ಲ ಒಂದು ಬ್ಯಾಂಕ್ ಖಾತೆ ಹೊಂದುವಂತೆ ಮೊದಲು ಮಾಡಲಾಯಿತು. ಇದರಿಂದ ಜನಸಾಮಾನ್ಯರಲ್ಲಿ ವ್ಯವಹಾರದ ಬಗ್ಗೆ ತಿಳಿವಳಿಕೆ ಬರುವಂತಾಯಿತು. ಇದು ಮೊದಲ ಸಡಿಪಾಯವಾಯ್ತು. ಅನಂತರ ಕೌಶಲ್ಯಕ್ಕೆ ಮಹತ್ವ ನೀಡುವ ಯೋಜನೆ ಜಾರಿಯಾಯ್ತು.ಅನಂತರ ಕ್ರಮವಾಗಿ ಆದಶ ಗ್ರಾಮ ಹಾಗೂ ಶ್ರಮೇವ ಜಯತೆ ಜಾರಿ ಆದವು, ಜೊತೆಗೆ ಆರೋಗ್ಯ ಯೋಜನೆಗಳು, ವಿಮಾ ಯೋಜನೆಗಳು ಬಂದವು, ಸ್ಮಾರ್ಟ್ ಸಿಟಿ, ಡಿಜಿಟಲ್ ಇಂಡಿಯಾ ಉಪಕ್ರಮಗಳು ಇವುಗಳಿಗೆ ನೆರವಾದವು, ಜನರಲ್ಲಿ ಸ್ವಾವಲಂಬನೆ ಹಾಗೂ ಆತ್ಮ ವಿಶ್ವಾಸ ಹೆಚ್ಚಿಸಿದವು. ಜೊತೆಗೆ ಚಿನ್ನದ ಯೋಜನೆಗಳು, ಸ್ಟಾರ್ಟ್ಅಪ್ ಜಾರಿಯಾದವು. ಮುಖ್ಯವಾಗಿ ಪಿಎಂ ಕಿಸಾನ್ ಯೋಜನೆ ಇವುಗಳಿಗೆ ಬೆನ್ನೆಲುಬಾಯಿತು.  

ಇದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ ಹಣಕಾಸಿನ ಬಲ ನೀಡಿತು, ರೈತರಿಗೆ ಬಲ ಬರುತ್ತಿದ್ದಂತೆ ಅವರು ತಮ್ಮ ಉತ್ಪನ್ನಗಳ ಮೌಲ್ಯ ವರ್ಧಿತ ವ್ಯವಹಾರಕ್ಕೆ ತೊಡಗಿದರು. ದೇಶದ ಜಿಡಿಪಿ ಏರತೊಡಗಿತು, ಕೊರೊನಾ ಆರ್ಭಟ ದೇಶದಾರ್ಥಿಕ ಬೆಳವಣಿಗೆಗೆ ಹೊಡೆತಕೊಟ್ಟರೂ ಬೆಳವಣಿಗೆ ನಿಲ್ಲಲಿಲ್ಲ. ಜೊತೆಗೆ ಗ್ರಾಮೋದಯ ಯೋಜನೆ ಇದಕ್ಕೆ ಮತ್ತಷ್ಟು ಬಲ ನೀಡಿತು. ಎಲ್ಲಕ್ಕಿಂತ ಮುಖ್ಯವಾಗಿ ನೈಸರ್ಗಿಕ ವಿಕೋಪದಿಂದ ಕಷ್ಟಕ್ಕೆ ಒಳಗಾಗುವ ರೈತರಿಗೆ ಕೃಷಿ ಸಂಕಷ್ಟ ಯೋಜನೆ ರೈತರ ಕೈ ಹಿಡಿಯಿತು, ನಿಜವಾಗಿ ದೇಶದ ಆರ್ಥಿಕತೆಗೆ ಶಕ್ತಿ ಕೊಟ್ಟಿದ್ದು ಕೃಷಿಗೆ ಕೊಟ್ಟ ಆದ್ಯತೆಯೇ ಆಗಿದೆ. ಯಾವಾಗಲೂ ಕೃಷಿ ಬೆಳವಣಿಗೆ ಹೊಂದಿದರೆ ದೇಶ ಸಹಜವಾಗಿ ಬೆಳೆಯುತ್ತದೆ. ಕೃಷಿ ನಿರ್ಲಕ್ಷಿಸಿದರೆ ಬೇರೆ ಏನೇ ಮಾಡಿದರೂ ಉಪಯೋಗವಿಲ್ಲ, ಕುಮಾರವ್ಯಾಸ ಹೇಳುವಂತೆ ಕೃಷಿ ವಿಹೀನವಾದರೆ ಅಂಥ ದೇಶಕ್ಕೆ ಉಳಿಗಾಲವಿಲ್ಲ. ಅದು ಪಾಕಿಸ್ತಾನದಂತೆ ಆಗುತ್ತದೆ,

ಭಾರತದ ಆರ್ಥಿಕ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳನ್ನು ಅಚ್ಚರಿಗೆ ದೂಡಿದೆ. ಇದನ್ನು ಅರಿಯಲು ಪ್ರಮುಖ ದೇಶಗಳೊಂದಿಗೆ ತುಲನೆ ಮಾಡಬಹುದು. ಸದ್ಯ ಭಾರತ ಅಮೆರಿಕ, ಜರ್ಮನಿ ಹಾಗೂ ಚೀನಾಗಳ ಅನಂತರದ ನಾಲ್ಕನೆಯ ಸ್ಥಾನ ಪಡೆದಿದೆ.ವೆ.೧೯೯೦ ರಿಂದ ೨೦೨೩ರ ಅವಧಿಯಲ್ಲಿ ಈ ದೇಶಗಳ  ಸರಾಸರಿ ವಾರ್ಷಿಕ ಬೆಳವಣಿಗೆ ದರ  ಕ್ರಮವಾಗಿ ಹೀಗಿದೆ-ಅಮೆರಿಕ ಶೇ. ೩.೮,ಜರ್ಮನಿ ಶೇ,೩.೯,ಜಪಾನ್ ಶೇ.೨.೮, ಆದರೆ ಭಾರತದ ಬೆಳವಣಿಗೆ ದರ ಶೇ.೬.೭ ರಷ್ಟಿದೆ ಎಂದು ಐಎಂಎಫ್ ಹೇಳಿದೆ, ಇದನ್ನು ನಮ್ಮ ದೇಶದ ನೀತಿ ಆಯೋಗ ದೃಢೀಕರಿಸಿದೆ. ದೇಶದಲ್ಲಿ ಆಮದು ಕಡಿಮೆಯಾಗಿ ರಫ್ತು ಹೆಚ್ಚಾದುದು, ಬಹುತೇಕ ಸಾಮಗ್ರಿಗಳ ತಯಾರಿಕೆ ದೇಶದಲ್ಲೇ ಉತ್ಪಾದನೆ ಆಗುವಂತಾದುದು ಇದಕ್ಕೆ ಪ್ರಮುಖ ಕಾರಣ. ಈ ಮೊದಲು ಸಣ್ಣಪುಟ್ಟ ವಸ್ತುಗಳು ಕೂಡ ಆಮದಾಗುತ್ತಿದ್ದವು, ಎಲ್ಲಿಯವರೆಗೆಂದರೆ ಹಲ್ಲಿಗೆ ಅಂಟಿದ ಕಸ ತೆಗೆಯುವ ಟೂತ್ಪಿಕ್ ಕೂಡ ಆಮದಾಗುತ್ತಿತ್ತು. ಜೊತೆಗೆ ಇಸ್ರೋದ ಸಾಧನೆ ಇದರಲ್ಲಿ ಕಡಿಮೆಯಲ್ಲ, ಅದು ಯಶಸ್ವಿಯಾಗಿ ಉಪಗ್ರಹ ಉಡಾವಣೆ ಮಾಡಿ ಜಗತ್ತಿನ ಹಲವಾರು ದೇಶಗಳು ಇಸ್ರೋ ಮೂಲಕ ತಮ್ಮ ಉಪಗ್ರಹ ಉಡಾವಣೆ ಮಾಡಲು ಕೋಟ್ಯಂತರ ಡಾಲರ್ ಗೌರವ ಧನ ನೀಡತೊಡಗಿದ್ದು ದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿತು, ಇದು ಇನ್ನೂ ಬೆಳೆಯುತ್ತಿದೆ. ಇವೆಲ್ಲದರ ಆಧಾರದಲ್ಲಿ ಮಾನ್ಯ ಪ್ರಧಾನಿಗಳು ೨೦೪೭ರ ವೇಳೆಗೆ ನಮ್ಮ ದೇಶ ಅಭಿವೃದ್ಧಿ ಸಾಧಿಸಿದ ದೇಶವಾಗಲಿದೆ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಸದ್ಯ ನಮ್ಮ ದೇಶದಲ್ಲಿ ಸಣ್ಣ ಕೈಗಾರಿಕೆಗಳಿಗೆ ಹಾಗೂ ಗ್ರಾಮೀಣ ಮೌಲ್ಯ ವರ್ಧಿತ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗವಕಾಶಗಳು ಹೆಚ್ಚಿ ದೇಶದ ಆರ್ಥಿಕತೆ ಮತ್ತಷ್ಟು ವೇಗ ಪಡೆಯುವುದು ನಿಶ್ಚಿತ ಅನಿಸುತ್ತದೆ. ಸಾಮಾನ್ಯ ಜನರಿಗೆ ಖರೀದಿ ಶಕ್ತಿ ಹೆಚ್ಚುವುದನ್ನು ಆಧರಿಸಿ ಇಂಥ ಶ್ರೇಣಿಯನ್ನು ನೀಡಲಾಗುತ್ತದೆ. ಉದ್ಯೋಗವಕಾಸ ಹಾಗೂ ಹಣದ ಓಡಾಟ ಜನರ ಕೈಯಲ್ಲಿ ಹೆಚ್ಚಿದಾಗ ಸ್ಥಾನ ಸಹಜವಾಗಿ ಏರುತ್ತದೆ. ನಮ್ಮ ದೇಶ ಈ ನಿಟ್ಟಿನಲ್ಲಿ ವೇಗವಾಗಿ ಸಾಗುತ್ತಿದೆ.





Sunday, 18 May 2025

ಹಣ್ಣುಗಳ ರಾಜ


ಇದೀಗ ವಾರ್ಷಿಕ ಆವರ್ತನದಂತೆ ಹಣ್ಣುಗಳ ರಾಜನೆಂದು ಕರೆಯಿಸಿಕೊಳ್ಳುವ ಮಾವಿನ ಹಣ್ಣಿನ ಸುಗ್ಗಿ ಶುರುವಾಗಿದೆ. ಭಾರತದಲ್ಲಿ ಮಾವಿನ ಹಣ್ಣು ಸುಮಾರು ೧,೫೦೦ ಬಗೆಯಲ್ಲಿದೆ ಎಂಬ ಅಂದಾಜು ಇದೆ, ಉತ್ತರ ಕನ್ನಡದಲ್ಲಿ ರತ್ನಾಗಿರಿ ಆಪೂಸು, ಈಶಾಡು ಎಂಬ ತಳಿಗಳಲ್ಲದೇ ನೂರಾರು ಹೆಸರಿಲ್ಲದ ದೇಸೀ ತಳಿಗಳಿವೆ. ಈ ದೇಸೀ ತಳಿಗಳಲ್ಲಿ ತಿರುಳಿಗಿಂತ ನಾರು ಹೆಚ್ಚಿರುತ್ತದೆ, ಇವನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ಊಟಕ್ಕೆ ನೆಂಚಿಕೆ ಮಾಡಲು ಬಳಸುವುದು ಹೆಚ್ಚು. ಇವೆಲ್ಲ ಮಾವಿನ ತಳಿಯ ಲೆಕ್ಕದಲ್ಲಿ ಸೇರಿಲ್ಲ, ಅಲ್ಲೇನಿದ್ದರೂ ಹೆಸರು ಮಾಡಿದ ಪ್ರಾದೇಶಿಕ ತಳಿಗಳಾದ ಕರ್ನಾಟಕದ ಆಪೂಸು, ಈಶಾಡು, ಆಂಧ್ರದ ಬೇಗಂಪಲ್ಲಿ,  ತಮಿಳುನಾಡಿನ ಬಂಗನ್‌ಪಲ್ಲಿ, ಕೃಷ್ಣಗಿರಿ ತಳಿ, ಉತ್ತರಪ್ರದೇಶ ಹಾಗೂ ಬಿಹಾರದ ದಶರತಿ, ಕೇಸರ್,ತೋತಾಪುರಿ,ಲಂಗ್ರಾ . ಗುಜರಾತಿನ ಗಿರ್ ಕೇಸರ್,ಕಲಪ್ಪಾಡಿ ಮತ್ತಿತರ ವೈವಿಧ್ಯಗಳು ಸೇರಿವೆ, ಜೊತೆಗೆ ಭಾರತ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಮಾವು ಕೃಷಿ ಮಾಡುವ ದೇಶವೆಂಬ ಖ್ಯಾತಿ ಪಡೆದಿದೆ, ಸಾಲದ್ದಕ್ಕೆ ಅತ್ಯಂತ ಹೆಚ್ಚು ಮಾವು ಬೆಳೆಯುವ ಹಾಗೂ ರಫ್ತು ರೈತ ಎಂಬ ಹೆಸರು ಕೂಡ ಭಾರತದಕ್ಕೇ ದಕ್ಕಿದೆ.  ಮುಖೇಶ್ ಅಂಬಾನಿ ನಮಗೆಲ್ಲ ಉದ್ಯಮಿಯಾಗಿ ಪರಿಚಿತ ಆದರೆ ಅವರಿಗೆ ಮಾವಿನ ಕೃಷಿಯಲ್ಲಿ ಇನ್ನೂ ಹೆಚ್ಚು ಆಸಕ್ತ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ, ಅವರಿಗೆ ಗುಕರಾತಿನಲ್ಲಿ ಆರು ಎಕರೆ ಕೃಷಿ ಜಮೀನು ಇದ್ದು ಅಲ್ಲಿ ಬರೀ ಮಾವು ಬೆಳೆಯುತ್ತಾರೆ, ಪ್ರಪಂಚದ ಪ್ರಸಿದ್ಧ ತಳಿಗಳನ್ನು ಅವರು ಇಲ್ಲಿ ಕೃಷಿ ಮಾಡುತ್ತಾರಂತೆ, ಇಲ್ಲಿ ಜಪಾನಿನ ಅತ್ಯಂತ ದುಬಾರಿ ಮಾವು ಮಿಯಾಕಿಯ ಸೇರಿದಂತೆ ಎಲ್ಲವೂ ಬೆಳೆಯುತ್ತವಂತೆ, ಇದನ್ನು ಕಾಯುವ ದೊಡ್ಡ ರಕ್ಷಣಾ ಪಡೆಯನ್ನು ಅವರು ನೇಮಿಸಿದ್ದಾರಂತೆ, ಅವರ ಕುಟುಂಬದ ಆಸಕ್ತಿ ಬರೀ ಉದ್ಯಮಕ್ಕೆ ಸೀಮಿತವಾಗಿಲ್ಲ, ಅವರ ಮಗ ಅನಂತ ಪ್ರಾಣಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದರೆ ಪತ್ನಿ ಸಾಂಸ್ಕೃತಿಕ ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿ ನಡೆಸುತ್ತಿದ್ದಾರೆ, ಮುಖೇಶರ ಮಾವಿನ ತೋಪಿನಲ್ಲಿ ೨೦೦ ಬಗೆಯ ಮಾವಿನ ಕೃಷಿ ನಡೆಯುತ್ತದೆಯಂತೆ, ಜಗತ್ತಿನ ಮಾವು ಮಾರುಕಟ್ಟೆಯಲ್ಲಿ ಶೇ ೪೦ರಿಂದ ಶೇ, ೫೨ ಭಾರತದ ಹಿಡಿತದಲ್ಲಿದೆ. ಸೌಂದರ್ಯವರ್ಧಕವಾಗಿ ಮಾವು ಬಳಕೆಯಾಗುವುದರಿಂದ ಇದರ ಬಹುತೇಕ ರಫ್ತು ಮಾರುಕಟ್ಟೆ ಭಾರತದ ಅವಲಂಬನೆಯಲ್ಲಿದೆ. ಇದು ಭಾರತದ ವಿದೇಶೀ ವಿನಿಮಯಕ್ಕೆ ದೊಡ್ಡ ಕೊಡುಗೆ ಕೊಡುತ್ತಿದೆ, ಅಪಾರ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಿದೆ.  ಮಾವು ನಮ್ಮ ದೇಶದ ಎಲ್ಲ ವಾತಾವರಣದಲ್ಲೂ ಬೆಳೆಯುತ್ತದೆ ಜೊತೆಗೆ ಮಾವಿನ ಕೃಷಿಗೆ ಅಲ್ಪ ಶ್ರಮ, ನೀರು ಸಾಕು, ಇದರಿಂದ ಇದರ ಕೃಷಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.ಕಾಶ್ಮೀರದಿಂದ ಕೇರಳದವರೆಗೆ ಬೇರೆ ಬೇರೆ ತಳಿ ಹಾಗೂ ಕಾಲದಲ್ಲಿ ಮಾವು ದೊರೆಯುತ್ತದೆ, ನಮ್ಮಲ್ಲಿ ಮಾವು ಮುಗಿಯುವ ಜೂನ್ ಜುಲೈ ವೇಳೆಗೆ ಕಾಶ್ಮೀರದಲ್ಲಿ ಅದರ ಸೀಸನ್ ಶುರುವಾಗುತ್ತದೆ, ಅದರ ರುಚಿ ಹಾಗೂ ಪರಿಮಳ ಭಿನ್ನ. ದೇಶದ ಪ್ರಸಿದ್ಧ ಮಾವುಗಳಲ್ಲಿ ದಶಹರಿ, ಅಲ್ಫಾನ್ಸೋ, ತೋತಾಪುರಿ, ಲಂಗ್ರಾಮತ್ತುಚೌಸಾಗಳು ಸೇರಿವೆ. ಇವುಗಳ ರುಚಿ ಹಾಗೂ ಸುವಾಸನೆಗಳು ಭಿನ್ನವಾಗಿವೆ. ದೇಶಾದ್ಯಂತ ಆಗಾಗ ಮಹಾ ನಗರಗಳಲ್ಲಿ ಮಾವಿನ ಮೇಳಗಳು ನಡೆದು ಮಾವಿನ ಪರಿಚಯ ಮಾಡಿಸುತ್ತವೆ, ಆದರೆ ಇಲ್ಲಿ ದೇಸೀ ತಳಿಗಳು ಪತ್ತೆ ಇರಲ್ಲ.    

ಹಣ್ಣುಗಳು ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು ಅನ್ನುತ್ತಾರೆ, ಆದರೆ ಯಾವ ಹಣ್ಣನ್ನು ಯಾವಾಗ ತಿಂದರೆ ಒಳ್ಳೆಯದು ಎಂದು ನಮ್ಮ ಹಿರಿಯರು ಅನುಭವದಿಂದ ಕಂಡು ಹೇಳಿದ್ದಾರೆ, ಗಾದೆಗಳಿವೆ, ಉಂಡು ಮಾವು ತಿನ್ನು ಹಸಿದು ಹಲಸು ತಿನ್ನು ಎಂಬ ಗಾದೆ ಇದೆ, ‘ಯೇ’ ಯಾರು ಹೇಳಿದ್ದಾರೆ ಅನ್ನುತ್ತಾ ಇದನ್ನು ಉಲ್ಟಾ ಮಾಡಿ ನೋಡಿ, ನಿಮ್ಮ ಆರೋಗ್ಯ ದಿನ ಒಪ್ಪತ್ತಿನಲ್ಲಿ ಕೆಡದಿದ್ದರೆ ಹೇಳಿ. ಮಾವಿನ ಆರೋಗ್ಯ ಕಾರಣಗಳು ಹಲವಾರಿವೆ ಅನ್ನುತ್ತಾರೆ ವೈದ್ಯರು

ನಿಜ, ನಮ್ಮ ದೇಶದಲ್ಲಿ ಭೂಪ್ರದೇಶ ಹೇಗೆ ವೈವಿಧ್ಯಮಯವಾಗಿದೆಯೋ ಹಾಗೆ ಇಲ್ಲಿನ ಆಹಾರ ಕೂಡ. ಒಂದೊಂದು ಭಾಗದಲ್ಲಿ ಒಂದೊಂದು ಆಹಾರ ಗುರುತಿಸಿಕೊಂಡಿದೆ, ಸಸ್ಯಾಹಾರ, ಮಾಂಸಾಹಾರ ಎಂದಲ್ಲ, ಸಾಮಾನ್ಯವಾಗಿ ಆಹಾರದ ವಿಷಯ ಬಂದಾಗ ಸಸ್ಯಾಹಾರ ಮತ್ತು ಮಾಂಸಾಹಾರವೆಂದು ಯಾವುದು ಶ್ರೇಷ್ಠವೆಂದು ಕೆಲಸಕ್ಕೆ ಬಾರದ ಗದ್ದಲ ಮಾಡಲಾಗುತ್ತದೆ, ಆದರೆ ಆಹಾರ ಎಂದರೆ ವಾಹನಕ್ಕೆ ಇಂಧನ ಇದ್ದಂತೆ ಮಾತ್ರ ಎಂಬುದನ್ನು ನಾವು ಮರೆಯುತ್ತೇವೆ.   ಯಾವ ವಾಹನಕ್ಕೆ ಯಾವ ಇಂಧನ ಸೂಕ್ತವೋ ಅದನ್ನು ಬಳಸಿದರೆ ಆಯುತು, ಈಗ ಇಂಧನಗಳಲ್ಲಿ ಪೆಟ್ರೋಲ್ ಶ್ರೇಷ್ಠವೋ ಡೀಸಲ್ಲೋ ಎಂದು ಒಣ ಚರ್ಚೆ ಮಾಡುತ್ತ ನಾವು ಎಂದೂ ಕೂರುವುದಿಲ್ಲ,ಆಹಾರದಲ್ಲೂ ಹೀಗೆ ಇರಲು ಏನು ಕಷ್ಟ? ನಿಮ್ಮ ಬಳಿ ಪೆಟ್ರೋಲ್ ವಾಹನವಿದೆ ಅಂದುಕೊಳ್ಳಿ, ಅದು ಡೀಸಲ್ ನಲ್ಲೂ ಸೀಮೆ ಎಣ್ಣೆಯಲ್ಲೂ ಓಡಬಹುದು, ಆದರೆ ಅದರಿಂದ ವಾಹನದ ದಕ್ಷತೆ ಕಡಿಮೆ ಆಗುತ್ತದೆ ಎಂಬುದನ್ನು ಗಮನಿಸಬೇಕು, ಆಹಾರ ಸೇವಿಸುವ ಎಲ್ಲ ಜೀವಿಗಳ ದೇಹದ ಗುಣ ಲಕ್ಷಣದ ಆಧಾರದಲ್ಲಿ ಅದರ ಆಹಾರ ಏನು ಯಾವುದು ಸರಿ ಎಂದು ನಿರ್ಧಾರವಾಗುತ್ತದೆ. ಆಹಾರವನ್ನು ಹೆಬ್ಬಾವೂ ಸೇವಿಸುತ್ತದೆ, ನಾವೂ ಸೇವಿಸುತ್ತೇವೆ, ಆದರೆ ಎರಡರ ಜೀರ್ಣ ವ್ಯವಸ್ಥೆ ಬೇರೆಯಾದ ಕಾರಣ ಎರಡೂ ಆಹಾರ ಸೇವಿಸುವ ಕ್ರಮ ಬೇರೆ, ಹೆಬ್ಬಾವಿನಂತೆ ನಾವು ಆಹಾರ ಸ್ವೀಕರಿಸಿದರೆ ನಾವು ಬದುಕಲು ಸಾಧ್ಯವಿಲ್ಲ. ನಮ್ಮ ಜೀರ್ಣ ವ್ಯವಸ್ಥೆ ಹಣ್ಣು, ತರಕಾರಿ ಹಾಗೂ ಸುಲಭವಾಗಿ ಜೀರ್ಣವಾಗುವ ನಾರಿನ ಆಹಾರಕ್ಕೆ ಹೇಳಿ ಮಾಡಿಸಿದೆ ಎಂದು ವೈದ್ಯ ವಿಜ್ಞಾನ ಹೇಳುತ್ತದೆ, ಬೇರೆ ತಿನ್ನಬಾರದೆಂದಲ್ಲ, ಆದರೆ ಅದರ ಪರಿಣಾಮಗಳು ನಮ್ಮ ದೇಹದ ಮತ್ತು ಮನಸ್ಸಿನ ಮೇಲೆ ಬೇರೆಯಾಗುತ್ತದೆ, ಇದನ್ನು ತಿಂದು ಅನುಭವಿಸಿ ತಿಳಿಯಬೇಕು, ನಾರಿನಂಶವುಳ್ಳ, ಸುಲಭವಾಗಿ ಜೀರ್ಣವಾಗುವ ಹಗುರ ಆಹಾರ ಸೇವಿಸಿದಾಗ ನಮ್ಮ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ, ಜಡವಾದ ಘನ ಆಹಾರ ಸ್ವೀಕರಿಸಿದಾಗ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಆಧಾರದ ಮೇಲೆ ನಾವು ನಮ್ಮ ದೇಹಕ್ಕೆ ಯಾವ ಆಹಾರ ಸೂಕ್ತ ಎಂದು ಕಂಡುಕೊAಡರೆ ಕತೆ ಮುಗಿಯಿತು. ಇಲ್ಲ, ಸಸ್ತಾಹಾರವೇ ಶ್ರೇಷ್ಠ ಎಂದು ಕೆಲವರು, ಇಲ್ಲ ಮಾಂಸಾಹಾರ ಶ್ರೇಷ್ಠ ಸಸ್ಯಾಹಾರ ಅಂದರೆ ಪುರೋಹಿತಶಾಹಿ ಉತ್ಯಾದಿ ಎಂದು ವಿರೋಧಗಳು ಕಚ್ಚಾಡಿ ಆನಂದಿಸುತ್ತಾರೆ, ಇದರ ಬದಲು ಅವರವರಿಗೆ ಇಷ್ಟವಾದ ಆಹಾರ ತಿಂದು ಸುಖವಾಗಿರಬಾರದಾ? ಆದರೆ ಹಣ್ಣುಗಳ ವಿಷಯ ಹೀಗೆ ಸಸ್ಯಾಹಾರ, ಮಾಂಸಾಹಾರ ಎಂದಿಲ್ಲ, ಇಲ್ಲಿರುವುದು ಕಾಲದ ವಿಷಯ ಮಾತ್ರ, ಯಾವ ಕಾಲದಲ್ಲಿ ಪ್ರಕೃತಿಯಲ್ಲಿ ಯಾವ ತಿನ್ನಬಲ್ಲ ಹಣ್ಣು ಸಿಗುತ್ತದೋ ಅದನ್ನು ಆಗ ಸುಮ್ಮನೇ ಸೇವಿಸಬೇಕು. ಅಕಾಲದಲ್ಲಿ ಬಾಯಿ ಚಪಲಕ್ಕಾಗಿ ಕೃತಕ ರೀತಿಯಲ್ಲಿ ಬೆಳೆಸಿ ನಿಸರ್ಗ ನಿಯಮ ವಿರುದ್ಧ ಹಣ್ಣು ಸೇವನೆ ಒಳಿತಲ್ಲ, ಇಷ್ಟೇ ಇಲ್ಲಿರುವುದು. ಈಗೀಗ ವಷಧವಿಡೀ ಹಲಸಿನ ಹಣ್ಣು ಸಿಗುವ ಸಂಶೋಧನೆ ಮಾಡಿ ಯಶಸ್ಸು ಕಾಣಲಾಗಿದೆ, ಆದರೆ ಹಲಸಿನ ನಿಜವಾದ ಕಾಲ ಮುಂಗಾರಿನ ವೇಳೆ. ಅದನ್ನು ಬಾಯಿ ಚಪಲಕ್ಕೆ ಚಳಿಗಾಲದಲ್ಲಿ ತಿಂದರೆ ಜೀರ್ಣ ಕ್ರಿಯೆ ಕೆಡುವುದು ನಿಜ. ಸಹಜವಾಗಿ ಕಾಲಕಾಲಕ್ಕೆ ಕಭಿಸುವ ಕಾಡು ಹಣ್ಣುಗಳನ್ನು ಎಷ್ಟು ಬೇಕಾದರೂ ತಿನ್ನಬಹುದು, ಈಗ ಕಾಡೂ ಇಲ್ಲ, ಇರುವಲ್ಲಿ ಸಿಗುವ ಹಣ್ಣುಗಳ ಪರಿಚಯ ಇರುವವರೂ ವಿರಳ. ಹೀಗಿರುವಾಗ ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳನ್ನೇ ನೆಚ್ಚಬೇಕು, ಆದರೆ ವ್ಯಾಪಾರದ ಆಸೆಗೆ ಮಾರುಕಟ್ಟೆ ಏನೇನೋ ಅಡ್ಡ ಮಾರ್ಗ ಹಿಡಿದು ಮೋಸ ಮಾಡಿ ಆರೋಗ್ಯ ಕೆಡಿಸುತ್ತದೆ, ಇದರ ಬಗ್ಗೆ ಎಚ್ಚರ ಅಗತ್ಯ, ನಾನು ಮಲೆನಾಡಿನಿಂದ ಬೆಂಗಳೂರಿಗೆ ಬಂದ ಹೊಸದರಲ್ಲಿ ಒಂದೆರಡು ಬಾರಿ ಮಾತ್ರ ಗೇರು ಹಣ್ಣುಗಳನ್ನು ನೋಡಿ ಖರೀದಿ ಮಾಡಿದ್ದೆ, ಆಮೇಲೆ ಅದನ್ನು ಎಲ್ಲಿಯೂ ಮಾರುವುದನ್ನು ಕಂಡಿಲ್ಲ, ಇದರ ಕತೆಯೇ ಹೀಗಾದರೆ ಇನ್ನು  ಗುಡ್ಡೆ ಕೇರು, ಮುಳ್ಳುಹಣ್ಣುಗಳಂಥ ಹಣ್ಣುಗಳ ಕತೆಯನ್ನು ಹೇಳುವುದೇ ಬೇಡ. ಇನ್ನೂ ನೂರಾರು ಬಗೆಯ ಕಾಡು ಹಣ್ಣುಗಳಿದ್ದು ಅವು ಆಯಾ ಕಾಲಕ್ಕೆ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ ಆರೋಗ್ಯ ಕಾಪಾಡುತ್ತದೆ, ಇವುಗಳ ಬಗ್ಗೆ ನಮ್ಮ ತಿಳಿವಳಿಕೆ ಬಹಳ ಕಡಿಮೆ. ಆಧುನುಕ ಶಿಕ್ಷಣ ಕೂಡ ಈ ವಿಷಯವನ್ನು ಕಡೆಗಣಿಸುತ್ತದೆ, ಇದು ನಮ್ಮ ದುರಂತ ಮಾತ್ರವಲ್ಲ, ನಿಸರ್ಗದಿಂದ ನಾವು ದೂರವಾಗಲು ಕೂಡ ಕಾರಣ. ಇದನ್ನು ಮರಳಿ ಗಳಿಸುವ ಕೆಲಸ ಆಗಬೇಕಿದೆ.

Friday, 16 May 2025

ಪಾಕಿಸ್ತಾನ ಅನುಭವಿಸಲೇಬೇಕಾದ ಹುಣ್ಣು- ಬಲೂಚಿಸ್ತಾನ


ಭಾರತ ಮತ್ತು ಪಾಕಿಸ್ತಾನ ನಡುವಿನ ಕದನದ ಸಂದರ್ಭದಲ್ಲಿ ಗಲಾಟೆ ಎಬ್ಬಿಸಿ ತಮ್ಮದು ಪ್ರತ್ಯೇಕ ದೇಶವೆಂದು ಬಲೂಚಿಗಳು ಘೋಷಿಸಿಕೊಂಡಿದ್ದಾರೆ, ಹಾಗೆ ನೋಡಿದರೆ ಬಲೂಚಿಗಳ ಗದ್ದಲ ಇಂದು ನಿನ್ನೆಯದಲ್ಲ, ಅವರು ತಮ್ಮ ಪ್ರತ್ಯೇಕತೆಗಾಗಿ ೧೯೫೦, ೬೦ ಮತ್ತು ೭೭ರಲ್ಲಿ ತೀವ್ರ ಸ್ವರೂಪದ ಗದ್ದಲ ಮಾಡಿದ್ದರು, ಇದಕ್ಕೂ ಬಲವಾದ ಕಾರಣವಿದೆ.ಅಷ್ಟು ಹಿಂದಿನಿಂದಲೂ ತಮ್ಮ ಅಸಮಾಧಾನವನ್ನು ಅವರು ಉಳಿಸಿಕೊಂಡೇ ಬಂದಿದ್ದಾರೆ ಅಥವಾ ಪಾಕಿಸ್ತಾನ ಉಳಿಸಿಕೊಂಡು ಬಂದಿದೆ, ಬಲೂಚಿಸ್ತಾನ ಸದ್ಯದ ಪಾಕಿಸ್ತಾನದಲ್ಲಿನ ಅತ್ಯಂತ ದೊಡ್ಡ ಪ್ರದೇಶ, ಜೊತೆಗೆ ಹೆಚ್ಚು ನೈಸರ್ಗಿಕ ಸಂಪತ್ತು ಹೊಂದಿದ ಭೂಭಾಗ. ಅಲ್ಲಿಂದ ಸಂಪತ್ತು ಸುಲಿಯುವ ಪಾಕಿಸ್ತಾನ ಅಲ್ಲಿಗೆ ಯಾವ ಸವಲತ್ತನ್ನೂ ಕೊಡದೇ ಮೂಲೆಗುಂಪು ಮಾಡಿತ್ತು. ಸಾಲದ್ದಕ್ಕೆ ಬಲೂಚಿಗಳ ಮೇಲೆ ಅಪರಾಧ, ಅತ್ಯಾಚಾರ ಮೊದಲಾದವನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನದ ಶೇ.೪೪ ಭೂಭಾಗದಲ್ಲಿ ಈ ಪ್ರದೇಶ ಹರಡಿದೆ. ಸಾಲದ್ದಕ್ಕೆ ಜನಸಂಖ್ಯೆ ಕಡಿಮೆ.ಪಾಕ್ ನ ಒಟ್ಟೂ ಜನಸಂಖ್ಯೆಯ ಶೇ.೫ರಷ್ಟು ಜನಸಂಖ್ಯೆ ಮಾತ್ರ ಇಲ್ಲಿಯದು.ಇಲ್ಲಿನ ಹೆಚ್ಚಿನ ಜನ ಸುನ್ನಿ ಜನ, ಇವರಿಗೂ ಶಿಯಾ ಜನಕ್ಕೂ ಆಗಾಗ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇದು ಇರಾನಿನ ದಕ್ಷಿಣ ಭಾಗ, ಸಿಸ್ತಾನ್ ಮತ್ತು ಪಾಕಿಸ್ತಾನದ ಬಲೂಚ್ ಪ್ರದೇಶಗಳನ್ನು ಹಾಗೂ ಈಶಾನ್ಯದಲ್ಲಿ ಆಪ್ಘನ್‌ನ ಹೆಲ್ ಮಾಂಡ್ ಭೂಭಾಗಗಳನ್ನು ಒಳಗೊಳ್ಳುತ್ತದೆ. ಆದರೆ ಒಣ ಗುಡ್ಡಗಾಡು ಹಾಗೂ ಮರುಭೂಮಿ ಇಲ್ಲಿ ಹೆಚ್ಚಾದ ಕಾರಣಕ್ಕೆ ಬಲೂಚಿನ ಹೆಚ್ಚಿನ ಜನವಸತಿ ಪಾಕಿಸ್ತಾನಕ್ಕೆ ಸೇರಿದ ಜಾಗದಲ್ಲಿದ್ದಾರೆ.ಮೊದಲು ಬ್ರಿಟಿಷ್ ಆಡಳಿತಕ್ಕೆ ಸೇರಿದ್ದ ಇದು ರಾಜರ ಆಳಿಕೆಗೆ ಸೇರಿತ್ತು. ೧೮ನೆಯ ಶತಮಾನದಲ್ಲಿ ಇಂದಿನ ಬಲೂಚಿಸ್ತಾನವನ್ನು ಕಲತ್, ಮಕ್ರಾನ್ಲಾಸ್ ಬೇಲಾ ಎಂದು ವಿಂಗಡಿಸಲಾಗಿತ್ತು ಬಲೂಚಿಸ್ತಾನ ನೈಸರ್ಗಿಕವಾಗಿ ಸಮೃದ್ಧ. ಅಲ್ಲಿ ಕಲ್ಲಿದ್ದಲು, ಚಿನ್ನದಂಥ ನಿಕ್ಷೇಪ ಹೇರಳವಾಗಿದೆ. ಬಲೂಚಿಸ್ತಾನದ ಭೂಪ್ರದೇಶ ೩೪೭, ೧೯೦ ಚದರ್ ಕಿಲೋಮೀಟರುಗಳು, ಇದರ ಪಾಕಿಸ್ತಾನದ ನೈಋತ್ಯದಲ್ಲಿ  ಇದು ಇದ್ದು,  ಉತ್ತರ ಮತ್ತುವಾಯವ್ಯದಲ್ಲಿ ಅಪ್ಘಾನಿಸ್ತಾನ,  ನೈಋತ್ಯದಲ್ಲಿ ಇರಾನ್, ಈಶಾನ್ಯದಲ್ಲಿ ಪಂಜಾಬ್, ಸಿಂಧ್, ಖೈಬರ್ ಹಾಗೂ ಒಕ್ಕೂಟ ವ್ಯವಸ್ಥೆ ಆಡಳಿತದ ಆದಿವಾಸಿ ಜನವಸತಿಗಳಿವೆ.ದಕ್ಷಿಣದಲ್ಲಿ ಅರಬ್ಬಿ ಸಮುದ್ರವಿದೆ, ಬಲೂಚಿಸ್ತಾನ ಇರಾನ್ ಪ್ರಸ್ಥಭೂಮಿಯ ಈಶಾನ್ಯ ವಲಯದಲ್ಲಿದೆ, ಇದು ಮಧ್ಯಪ್ರಾಚ್ಯ ಮತ್ತು ಏಷ್ಯಾದ ನೈಋತ್ಯ, ದಕ್ಷಿಣ ಭಾಗದಲ್ಲಿದೆ.ಮಧ್ಯ ಏಷ್ಯಕ್ಕೆ ಬರುವ ಎಲ್ಲ ಹಡಗುಗಳಿಗೆ ಹೆಬ್ಬಾಗಿಲು ಎನಿಸಿದ ಹರ್ಮಾಜ್ ಕೊಲ್ಲಿ ಇಲ್ಲೇ ಇದೆ. ಬಲೂಚಿಸ್ತಾನ ಪ್ರತ್ಯೇಕತಾವಾದಿಗಳು ಇಷ್ಟು ಕಾಲ ಕಾದಿದ್ದು ಇದೀಗ ತಮ್ಮದು ಪ್ರತ್ಯೇಕದೇಶವೆಂದು ಘೋಷಿಸಿಕೊಂಡುಬಿಟ್ಟಿದ್ದಾರೆ, ಭಾರತದಲ್ಲಿ ಬಲೂಚಿಸ್ತಾನದ ರಾಯಭಾರ ಕಚೇರಿಯನ್ನೂ ಆರಂಭಿಸಲಾಗಿದೆ. ಅಲ್ಲಿನ ಉನ್ನತ ಹುದ್ದೆಗೆ ಪಾಕಿಸ್ತಾನಿ ಮೂಲದ ಹಿಂದೂ ಮಹಿಳೆ ಕಾಶಿಶ್ ಚೌಧರಿ ಅನ್ನುವವರನ್ನು ಅಲ್ಲಿನ ಕಮಿಶನರ್ ಹುದ್ದೆಗೆ ಆಯ್ಕೆ ಮಾಡಿಕೊಂಡಿದೆ. ಸಾಮಾಜಿಕ ರೀತಿಯಲ್ಲಿ ಬಲೂಚಿಸ್ತಾನ ಪಾಕಿಸ್ತಾನಕ್ಕಿಂತ ಉತ್ತಮ ನಡವಳಿಕೆ ಹೊಂದಿದೆ ಎಂಬುದು ಇದರಿಂದ ತಿಳಿಯುತ್ತದೆ. ತಮ್ಮನ್ನು ದೇಶವಾಗಿ ಪರಿಗಣಿಸಿ ಎಂದು ಭಾರತ ಹಾಗೂ ವಿಶ್ವಸಂಸ್ಥೆಗೆ ಅದು ಕೋರಿದೆ, ಭಾರತ ಈಗಾಗಲೇ ಇದಕ್ಕೆ ಗುಣಾತ್ಮಕವಾಗಿ ಸ್ಪಂದಿಸಿ ಬಲೂಚಿಸ್ತಾನದ ರಾಯಭಾರ ಕಚೇರಿಯನ್ನು ಆರಂಭಿಸಿದೆ, ಬಲೂಚಿಗಳ ಮುಖಂಡ ಮಿರ್‌ಯಾರ್ ಬಲೂಚ್ ದೇಶದ ಮುಖಂಡತ್ವವನ್ನು ವಹಿಸಿಕೊಂಡು ಯಶಸ್ಸು ಕಂಡಿದ್ದಾನೆ. ಬಲೂಚಿಸ್ತಾನದಲ್ಲಿ ಕ್ರಿಪೂ ೭೦೦೦ ವರ್ಷದಷ್ಟು ಹಳೆಯದೆಂದು ಹೇಳಲಾದ ಮಾನವ ವಸತಿ ಪ್ರದೇಶ ಕೂಡ ದೊರೆತಿದೆ, ಅದಕ್ಕೆ ವಾಸ್ತವಿಕವಾಗಿ ಪಾಕಿಸ್ತಾನಕ್ಕಿಂತ ದೊಡ್ಡ ಇತಿಹಾಸ ಹಾಗೂ ಬೆಳೆಯುವ ಶಕ್ತಿ ಖಂಡಿತ ಇದೆ. ಆದರೆ ಈ ಶುರುವಾತಿನಲ್ಲಿ ಅದಕ್ಕೆ ಎಂಥ ಮುಖಂಡತ್ವ ದೊರೆಯುತ್ತದೆ ಎಂಬುದು ಮುಖ್ಯ, ನಿಜವಾಗಿ ಪಾಕಿಸ್ತಾನದ ಶತ್ರು ಭಾರತವಲ್ಲ, ಅದು ಬಲೂಚಿಸ್ತಾನ. ೧೯೪೭ರಲ್ಲಿ ಬ್ರಿಟಿಷರು ಬಿಟ್ಟು ಹೋದ ಕೆಲವುಕಾಲ ಸ್ವತಂತ್ರವಾಗಿತ್ತು, ಅಲ್ಲದೇ ಆ ಪ್ರದೇಶದಲ್ಲಿ ಇದು ಪಾಕಿಸ್ತಾನಕ್ಕಿಂತ ಮುಂಚೆ ಹುಟ್ಟಿv ಪಾಕಿಸ್ತಾನ ಭಾರತದಿಂದ ಬೇರ್ಪಟ್ಟಾಗ ಬಲೂಚಿಗಳ ನ್ನು ನಂಬಿಸಿದ ಜಿನ್ನಾ ಸ್ವಲ್ಪ ಕಾಲದ ನಂತರ ಪ್ರತ್ಯೇಕ ಮಾಡುವುದಾಗಿ ನಂಬಿಸಿ ಕಲಾತ್ ನ ರಾಜನಿಗೆ ಮೋಸ ಮಾಡಿದ, ಬಲೂಚಿಸ್ತಾನದಲ್ಲಿರುವ ಕಚ್ಚಾತೈಲ, ತಾಮ್ರ, ಚಿನ್ನದಂಥ ನೈಸರ್ಗಿಕ ಸಂಪನ್ಮೂಲಕ್ಕಾಗಿ ಪಾಕಿಸ್ತಾನ ಅದನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು, ಇದನ್ನರಿತ ಕಲಾತ್ ರಾಜನ ಸಹೋದರ ಪಾಕಿಸ್ತಾನವನ್ನು ವಿರೋಧಿಸುತ್ತಲೇ ಇದ್ದ, ಜೊತೆಗೆ ಪಾಕಿಸ್ತಾನ ಚೀನಾದೊಂದಿಗೆ ಸೇರಿ ಬಲೂಚಿಸ್ತಾನ ಪ್ರದೇಶದಲ್ಲಿ ವಾಣಿಜ್ಯ ಕಾರಿಡಾರ್ ಮಾಡಿದ್ದು ಹಾಗೂ ಅಲ್ಲಿನ ಸಂಪನ್ಲೂಲವನ್ನು ಚೀನಾ ಲೂಟಿ ಮಾಡಿದರೂ ಬಲೂಚಿಗಳಿಗೆ ಏನೂ ಉದ್ಯೋಗ ಕೊಡದಿದ್ದುದು ಬಲೂಚಿಗಳಿಗೆ ಮತ್ತಷ್ಟು ಅಸಮಾಧಾನ ಉಂಟುಮಾಡಿತ್ತು, ಇದರಿಂದ ಚೀನಾ ಜನರನ್ನು ಬಲೂಚಿಗಳು ಹಿಂಸಿಸತೊಡಗಿದರು. ಈಚೆಗೆ ಬಲೂಚಿಗಳು ಪಾಕಿಸ್ತಾನದ ಸೇನೆ ಇದ್ದ ಇಡೀ ರೈಲನ್ನು ಅಪಹರಿಸಿದ್ದರು, ಬಲೂಚಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಬಲೂಚಿಗಳನ್ನು ಇನ್ನಿಲ್ಲದಂತೆ ಕಾಡಿಸಿ ಹತ್ಯೆ ಮಾಡಲಾರಂಭಿಸಿತ್ತು. ಮೊದಲೇ ದಿವಾಳಿ ಎದ್ದ ಪಾಕಿಸ್ತಾನ ಬಲೂಚಿಸ್ತಾನ ಕೈಬಿಟ್ಟರೆ ಮತ್ತಷ್ಟು ಕೆಡುತ್ತದೆಯಾದ್ದರಿಂದ ಅದು ತನ್ನ ಬಳಿಯೇ ಇರಲೆಂದು ಪಾಕಿಸ್ತಾನ ಹವಣಿಸಿತ್ತು, ಆದರೆ ಬಲೂಚಿಸ್ತಾನ ಸ್ವತಂತ್ರವಾಗಿದೆ, ಇಷ್ಟರಲ್ಲೇ ಪಾಕಿಸ್ತಾನ ಸಂಪೂರ್ಣನಾಶವಾಗುತ್ತದೆ ಎಂಬುದು ಸ್ಪಷ್ಟ, ಇಷ್ಟಾಗಿಯೂ ಪಾಕಿಸ್ತಾನ ಉಳಿದರೆ ಬಲೂಚಿಸ್ತಾನದಿಂದ ಅದಕ್ಕೆ ಆಗುವ ಸಮಸ್ಯೆ ನಿರಂತರವೇ ಆಗುತ್ತದೆ, ಸದ್ಯ ತನ್ನನ್ನು ತಾನು ಸರಿಯಾಗಿ ಕಟ್ಟಿಕೊಳ್ಳಲು ಬಲೂಚಿಸ್ತಾನ ಸರಿಯಾದ ಆಡಳಿತಗಾರರನ್ನು ಹಾಗೂ ಸೂಕ್ತ ನಾಯಕರನ್ನು ಹುಡುಕುತ್ತಿದ್ದು ಅದಕ್ಕೆ ಭಾರತ ನೆರವಾಗುತ್ತಿದೆ. ಇದರಿಂದ ಪಾಕಿಸ್ತಾನದ ನಾಶದ ಜೊತೆಗೆ ಭಾರತಕ್ಕೆ ಹೊಸ ಮಿತ್ರ ದೊರೆತಂತಾಗುತ್ತದೆ, ಇದರಿಂದ ಎರಡೂ ದೇಶಗಳಿಗೆ ಲಾಭವಿದೆ, ಬಲೂಚಿಗಳ ಸ್ವಾತಂತ್ರ್ಯದಿದ ಪಶ್ತೂನರು, ವಹಾಬಿಗಳು ಮತ್ತಿತರ ಪಾಕಿಸ್ತಾನದ ಆಂತರಿಕ ವಿರೋಧಿಗಳು ಪಾಕ್ ನಿಂದ ಬೇರೆಯಾಗುವ ತಯಾರಿ ನಡೆಸುತ್ತಿವೆ, ಇದರಿಂದ ಪಾಕಿಸ್ತಾನ ಐದಾರು ಭಾಗವಾಗುವ ಸಾಧ್ಯತೆ ಹೆಚ್ಚಾಗಿದೆ, ಇದನ್ನು ಪಾಕಿಸ್ತಾನ ತಡೆಯಲಾರದು. ಏಕೆಂದರೆ ದಶಕಗಳ ಹಿಂದೆ ಬಲಿಷ್ಠ ರಷ್ಯಾದಲ್ಲೂ ಇಂಥ ಹೋರಾಟ ನಡೆದು ಅದು ಹೋಳಾಗಿ ಹೋಗಿತ್ತು. ಅಷ್ಟಕ್ಕೂ ಬಲೂಚಿಗಳು ರಿಲಿಜನ್ ಹೆಸರಲ್ಲಿ ಬೇರಾಗುತ್ತಿಲ್ಲ, ಅವರು ಹೋರಾಡುತ್ತಿರುವುದು ತಮ್ಮ ಸಂಪನ್ಮೂಲ ಉಳಿಸಿಕೊಳ್ಳಲು. ಇದು ಸಕಾರಣವಾಗಿದೆ. ಆದರೆ ಹೊಸದಾಗು ಹುಟ್ಟಿಕೊಳ್ಳುತ್ತಿರುವ ಬಲೂಚಿಸ್ತಾನಕ್ಕೆ ಇರುವ ಸಮಸ್ಯೆ ಅಲ್ಲಿನ ಹೋರಾಟಗಾರರನ್ನು ಕೆಲವು ದೇಶಗಳು ಉಗ್ರರೆಂದು ಪರಿಗಣಿಸಿರುವುದು, ಜೊತೆಗೆ ಸುತ್ತಲೂ ಶಿಯಾ-ಸುನ್ನಿ ಗದ್ದಲ ಉಳ್ಳ ದೇಶಗಳು ಬಲೂಚಿಗಳಿಗೆ ದೊಡ್ಡ ತಲೆಬೇನೆ ಆಗಲಿದೆ, ಇದರಿಂದ ಅದು ಉತ್ತಮ ದೇಶವಾಗಿ ರೂಪುಗೊಳ್ಳಲು ಕಷ್ಟವಾಗುತ್ತದೆ.   

ಜಿನ್ನಾಗೆ ಬಲೂಚಿಸ್ತಾನವನ್ನು ಪಾಕಿಸ್ತಾನದೊಳಗೆ ಸೇರಿಸಿಕೊಳ್ಳುವುದು ಇಷ್ಟವಿರಲಿಲ್ಲವೆಂದು ಹೇಳಲಾಗುತ್ತದೆ. ಆಗಿನಿಂದಲೂ ಬಲೂಚಿಗಳು ಪಾಕಿನೊಂದಿಗೆ ವಿರೋಧ ತೋರಿಸುತ್ತಲೇ ಇದ್ದಾರೆ, ಜುಲ್ಫಿಕರ್ ಅಲಿ ಭುಟ್ಟೋ ಬಲೂಚಿಗಳ ವಿರುದ್ಧ ಸೇನೆ ಬಳಸಿದ್ದರು. ಬಲೂಚಿಗಳ ದೊಡ್ಡ ಸಮಸ್ಯೆ ಅಂದರೆ ಅವರ ಜನಸಂಖ್ಯೆ ಹೆಚ್ಚು ಇಲ್ಲದಿರುವುದು ಹಾಗೂ ಬಲೂಚಿಗಳು ಎಲ್ಲೆಡೆ ಹರಿದು ಹಂಚಿಹೋಗಿರುವುದು, ಇವರನ್ನು ಭಾಷೆ ಜನಾಂಗ ಮುಂತಾದ ಸುಲಭದಲ್ಲಿ ಒಗ್ಗೂಡಿಸುವ ಸಂಗತಿಗಳಿಂದ ಒಂದಾಗಿಸಲಾಗದು, ಇದರ ಲಾಭವನ್ನೂ ಪಾಕಿಸ್ತಾನ ಪಡೆಯುತ್ತಿದೆ, ಹೋರಾಟವನ್ನು ಬಲೂಚಿಗಳು ಮಾಡಬಹುದು ಆದರೆ ದೇಶವಾಗಿ ಅದು ರೂಪುಗೊಳ್ಳುವ ಸವಾಲು ಬಹಳ ದೊಡ್ಡದಿದೆ.

ಬಲೂಚಿಸ್ತಾನಕ್ಕೆ ನೈಸರ್ಗಿಕ ಸಂಪತ್ತು ಇರುವುದೇ ಬಹುದೊಡ್ಡ ಆಪತ್ತಿಗೆ ಕಾರಣವಾಗಿದೆ. ಇಂದಲ್ಲ ನಾಳೆ ಅದಕ್ಕೆ ವಿಪತ್ತು ಇರುವುದೇ ಈ ಸಂಪನ್ಮೂಲದಿAದ. ಈಗಾಗಲೇ ಚೀನಾ ವಾಣಿಜ್ಯ ಕಾರಿಡಾರ್ ನೆಪದಲ್ಲಿ ಬಲೂಚಿ ಪ್ರದೇಶದಲ್ಲಿ ಕಾಲಿಟ್ಟಿದೆ.  ಅದರ ಉದ್ದೇಶ ಸ್ಪಷ್ಟವಾಗಿದೆ, ಅಲ್ಲಿನ ಸಂಪನೂಮೂಲವನ್ನು ಸೂರೆ ಮಾಡುವುದು ಅದರ ಗುರಿ, ಜನಸಂಪನ್ಮೂಲ ಕಡಿಮೆ ಇರುವ ಬಲೂಚಿಸ್ತಾನದಲ್ಲಿ ಬೌದ್ಧಿಕ ಆಸ್ತಿ ಕೂಡ ಇಲ್ಲದ ಕಾರಣಕ್ಕೆ ಹೊಸದಾಗಿ ದೇಶಕಟ್ಟುವುದು ಸವಾಲಿನ ಕೆಲಸವಾಗಲಿದೆ, ಅದರ ಸುತ್ತ ಶತ್ರು ರಾಷ್ಟçಗಳೇ ತುಂಬಿವೆ, ಇಸ್ರೇಲ್ ಕೂಡ ಇಂಥ ಸ್ಥಿತಿಯಲ್ಲಿದ್ದರೂ ಅದಕ್ಕೆ ಬೌದ್ಧಿಕ ಸಂಪತ್ತು ಸಮೃದ್ಧವಾಗಿತ್ತು. ಅದು ಎಲ್ಲವನ್ನೂ ಎದುರಿಸಿತು, ಎದುರಿಸುತ್ತಿದೆ. ಆದರೆ ಬಲೂಚಿಗಳಿಗೆ ಇದು ಕಷ್ಟ. ಇದನ್ನೇ ಬಳಸಿಕೊಳ್ಳುತ್ತಿರುವ ಚೀನಾ ಹಳೆಯ ಪಾಕಿಸ್ತಾನಕ್ಕೆ ನೆರವಾಗುವ ನೆಪದಲ್ಲಿ ಬಲೂಚಿಸ್ತಾನದಲ್ಲಿ ತನ್ನ ಕಾರ್ಮಿಕ ವರ್ಗವನ್ನು ಸಾಕಷ್ಟು ತೂರಿಸಿದೆ, ನಿಧಾನವಾಗಿ ಅದನ್ನು ತನ್ನ ಜನರ ಮೂಲಕ ವಶಮಾಡಿಕೊಳ್ಳುವುದು ಅದಕ್ಕೆ ಸುಲಭವಾಗಲಿದೆ. ಇದರ ಬಗ್ಗೆ ಬಲೂಚಿಗಳು ಸದಾ ಎಚ್ಚರದಿಂದ ಇರಬೇಕಿದೆ.

ಬಲೂಚಿಗಳ ಶಕ್ತಿ ಅವರ ಸಂಪ್ರದಾಯ ನಿಷ್ಠೆ. ಅವರ ಸಂಸ್ಕೃತಿ ಅಲೆಮಾರಿಗಳು, ಆದಿವಾಸಿಗಳು ಮೊದಲಾದ ಮಿಶ್ರಣದಿಂದ ಸಮೃದ್ಧವಾಗಿದೆ. ಆದರೆ ಈ ನೆಪದಲ್ಲಿ ಅವರು ಪರಸ್ಪರ ಕಚ್ಚಾಡುತ್ತಿಲ್ಲ, ತಮ್ಮ ಸಂಪ್ರದಾಯಕ್ಕೆ ಅವರು ಬದ್ಧರು. ಇದು ಅವರನ್ನು ಒಗ್ಗೂಡಿಸಿದೆ, ಪರಸ್ಪರ ಗೌರವ ಅವರಲ್ಲಿ ದೊಡ್ಡ ಮೌಲ್ಯ, ಸಿಂಧಿ, ಪಶ್ತೋ,ಬ್ರೂಹಿ ಮತ್ತು ಬಲೂಚಿ ಭಾಷೆಯನ್ನು ಅವರು ಬಳಸುತ್ತಾರೆ, ಬಲೂಚಿ ಜನಪದ ನೃತ್ಯ, ಸಂಗೀತಗಳು ಸಂಪದ್ಭರಿತವಾಗಿದೆ. ಸದ್ಯ ತಾತ್ಕಾಲಿಕವಾಗಿ ಅದರ ರಾಜಧಾನಿಯಾಗಿರುವ ಕ್ವೆಟ್ಟಾದಲ್ಲಿ ಪ್ರಾಚೀನ ಸ್ಮಾರಕಗಳಿವೆ, ಪ್ರತಿವರ್ಷ ಮಾರ್ಚ್ ೨ರಂದು ತಮ್ಮ ಸಾಂಸ್ಕೃತಿಕ ಹಬ್ಬ ಆಚರಿಸಿಕೊಳ್ಳುವ ಬಲೂಚಿಗಳು ತಮ್ಮ ಎಲ್ಲ ಹಳ್ಳಿಗಳ ನೃತ್ಯ, ಆಟೋಟಗಳನ್ನು ಜಾತ್ರೆಗಳನ್ನು ಒಂದೆಡೆ ಸೇರಿ ಆಚರಿಸಿ ಸಂಭ್ರಮಿಸುತ್ತಾರೆ. ಗಾಳಿ ಮತ್ತು ಸಮುದ್ರ ಶಕ್ತಿಯನ್ನು ಹೆಚ್ಚಾಗಿ ನಂಬುವ ಇವರು ಇವುಗಳಿಂದ ಕೆಟ್ಟ ದೃಷ್ಟಿ ಮನುಷ್ಯರ ಮೇಕೆ ಉಂಟಾಗುತ್ತದೆ ಎಂದು ನಂಬುತ್ತಾರೆ, ಅವರ ಪಶ್ತೋ ಭಾಷೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಾತನಾಡುವ ೯೯ ನೆಯ ಸ್ಥಾನದಲ್ಲಿದೆ.

Sunday, 11 May 2025

ಭಾರತ-ಪಾಕ್ ಕದನ


ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಹತ್ತು ಹಲವು ಆಯಾಮಗಳಿವೆ, ಇದರಲ್ಲಿ ನಮ್ಮ ದೇಶದ ಅಮಾಯಕ ನಾಗರಿಕರ ಮೇಲೆ ಸುಖಾ ಸುಮ್ಮನೇ ದಾಳಿ ಮಾಡಿ ಸಾಯಿಸಿದ್ದು ಒಂದು ಮುಖವಾದರೆ ಭಾರತದ ಆರ್ಥಿಕ ಶಕ್ತಿ ಬಲವಾಗಿ ಜಗತ್ತಿನ ಕಣ್ಣು ಕೆಂಪಗಾಗಿಸಿದ್ದು ಇನ್ನೊಂದು ಪ್ರಮುಖ ಕಾರಣ. ಇಡೀ ವಿಶ್ವಕ್ಕೆ ಗೊತ್ತಿದೆ, ಎಲ್ಲೋ ಇದ್ದ ಭಾರತ ಜಾಗತಿಕ ಮಟ್ಟದಲ್ಲಿ ಹತ್ತೇ ವರ್ಷಗಳಲ್ಲಿ ನಾಲ್ಕನೆಯ ಸ್ಥಾನ ಪಡೆದಿದೆ, ಇನ್ನು ಒಂದೆರಡುವರ್ಷಗಳಲ್ಲಿ ಮೂರನೆಯ ಸ್ಥಾನ ಪಡೆದೇ ಪಡೆಯುತ್ತದೆ ಎಂದು, ಇದನ್ನು ಸಹಿಸಲಾಗದ ಅಮೆರಿಕವೂ ಸೇರಿದಂತೆ ಚೀನಾ ಮತ್ತು ಇತರ ದೇಶಗಳು ಭಾರತವನ್ನು ಹತ್ತಿಕ್ಕಲು ಹವಣಿಸುತ್ತಿದ್ದವು, ಈಗ ಅವುಗಳಿಗೆ ಅವಕಾಶ ಸಿಕ್ಕಂತಾಗಿದೆ, ಪಾಕಿಸ್ತಾನವನ್ನು ಛೂ ಬಿಡುತ್ತ ಹಿಂದೆ ಸೂತ್ರ ಹಿಡಿದುಕೊಂಡು ಆಡಿಸುತ್ತಿವೆ, ನಿಜ, ಭಾರತಕ್ಕೆ ಯುದ್ಧ ಬೇಕಿಲ್ಲ, ಆದರೆ ಬರೀ ಶಾಂತಿಮಂತ್ರವೂ ಬೇಕಿಲ್ಲ, ನಮ್ಮ ಪರಂಪರೆ ಸಮಾಧಾನದಿಂದ ಸುಮ್ಮನಿರಲು ಹೇಳುವಂತೆ  ಕ್ರೋಧದಿಂದ ಸಿಡಿದೇಳಲೂ ಹೇಳುತ್ತದೆ, ಹೀಗಾಗಿ ನಮ್ಮಲ್ಲಿ ಗಾಂಧಿ ಇರುವಂತೆ ಭಗತ್ ಸಿಂಗ್ ರಾಣಾ ಪ್ರತಾಪ್ ಸಿಂಗ್ ಕೂಡ ಇದ್ದಾರೆ, ಯಾವಾಗ ಗಾಂಧಿ ಆಗಬೇಕು, ಯಾವಾಗ ಸಿಂಗ್ ಆಗಬೇಕು ಎಂಬ ಪಾಠ ನಮಗೆಲ್ಲ ಸಂಪ್ರದಾಯದಿಂದ ಬಂದಿದೆ, ವೃಥಾ ಮನೆಯ ಹೆಣ್ಣುಮಕ್ಕಳಿಗೆ ತೊಂದರೆ ಮಾಡಿದರೆ ನಮ್ಮಲ್ಲಿ ಗಾಂಧಿಯಂತಾಗು ಎಂದು ಯಾರೂ ಹೇಳುವುದಿಲ್ಲ, ಹೆಣ್ಣುಮಕ್ಕಳ ಮಾನ ಪ್ರಾಣ ರಕ್ಷಣೆಯ ವಿಷಯ ಬಂದಾಗ ಕೆಚ್ಚಿನಿಂದ ಹೋರಾಡುವುದೇ ನಮ್ಮ ಸಂಪ್ರದಾಯ. ಮಹಾಭಾರತ- ರಾಮಾಯಣಗಳು ಇನ್ನೇನು ಹೇಳುತ್ತವೆ? ರಾಮ ಶಾಂತನೂ ಹೌದು, ರುದ್ರನೂ ಹೌದು, ಸಜ್ಜನರ ಕೊತೆಗೆ ಶಾಂತಮೂರ್ತಿ, ದುಷ್ಟರೆದುರು ರುದ್ರ ಸ್ವರೂಪಿ, ಇದನ್ನೇ ನಾವು ಕಲಿಯುವುದು, ದುಷ್ಟತೆ ಅನ್ನುವುದಕ್ಕೂ ನಮ್ಮಲ್ಲಿ ವ್ಯಾಖ್ಯಾನವಿದೆ, ಯಾವುದನ್ನು ದುಷ್ಟ ಅನ್ನಬೇಕು ಎಂಬುದರಲ್ಲಿ ಗೊಂದಲವಿಲ್ಲ, ದುಷ್ಟತನವನ್ನು ನಾಶಮಾಡುವುದೇ ಸರಿ, ಈಗ ಭಾರತ ಹೊರಟಿರುವುದು ಅದಕ್ಕೆ, ಅದು ಅನ್ಯ ರಾಷ್ಟ್ರ ಎಂಬ ಕಾರಣಕ್ಕೆ ಖಂಡಿತ ಅಲ್ಲ. 

ಶಾಂತಿ ಎಂಬುದು ಮನುಕುಲದ ಹುಟ್ಟಿನೊಂದಿಗೆ ಜಾಣಿಸುತ್ತದೆ. ಇದು ವೈಯಕ್ತಿಕ ಹಾಗೂ ಸಾಮಾಜಿಕ ಮಟ್ಟದಲ್ಲಿ ಗುರುತಿಸಬಹುದು. ವ್ಯಕ್ತಿಯ ಮಾನಸಿಕ ನೆಮ್ಮದಿ ಇರುವ ಸ್ಥಿತಿಯೇ ಅವನ ಮಟ್ಟಿಗಿನ ಶಾಂತಿ, ಸಾಮಾಜಿಕ ಘರ್ಷಣೆ, ಯುದ್ಧ ಮೊದಲಾದವು ಸಾಮಾಜಿಕ ನೆಮ್ಮದಿ ಹಾಗೂ ಶಾಂತಿಯನ್ನು ಕೆಡಿಸುತ್ತದೆ, ಇದಕ್ಕಿರುವ ಏಕೈಕ ಮಾರ್ಗವೆಂದರೆ ಪರಸ್ಪರ ಘರ್ಷಣೆಯ ಮಾರ್ಗವನ್ನು ತ್ಯಜಿಸುವುದು, ವ್ಯಕ್ತಿ ಅಥವಾ ಸಾಮಾಜಿಕ ಮಟ್ಟದಲ್ಲಿ ಸ್ವಾರ್ಥವೇ ಅಶಾಂತಿಯ ಮೊದಲ ಕಾರಣ. ಬುದ್ಧನ ಪ್ರಕಾರ ಆಸೆಯೇ ದುಃಖ ಅಥವಾ ಅಶಾಂತಿಗೆ ಕಾರಣವಾಗುತ್ತದೆ. ನಿತ್ಯದ ಜೀವನವನ್ನು ಘರ್ಷಣೆ ಇಲ್ಲದೆ ಸುಖ ಸಂತೋಷದಿಂದ ಕಳೆಯುವುದೇ ಶಾಂತಿಯ ಜೀವನ.

ಭಾರತ ಶಾಂತಿಪ್ರಿಯ ದೇಶ ಸರಿ, ಆದರೆ ಅದು ದೇಶವಾಗಿ ಉಳಿಯಲು ಅದಕ್ಕೆ ಸೇನೆಯೂ ಬೇಕು, ಸ್ವಂತ ಧರ್ಮ, ಅಸ್ತಿತ್ವಗಳಿಗೆ ಧಕ್ಕೆ ಬಂದಾಗ ಹೋರಾಟ ಅನುವಾರ್ಯ, ಈಗ ಆಗಿರುವುದು ಅದೇ, ಹೌದು, ಭಾರತವನ್ನು ಕೆಣಕಿದರೆ ತನಗೆ ಉಳಿಗಾಲವಿಲ್ಲ ಎಂಬುದು ಪಾಕಿಸ್ತಾನಕ್ಕೆ ತಿಳಿದಿದೆ, ಆದರೂ ಅನ್ಯರ ಕುಮ್ಮಕ್ಕಿನಿಂದ ಅದು ಕಾಲು ಕೆರೆದಿದೆ, ಆದರೆ ಭಾರತ ಸಹನೆಯಿಂದ ತಾಳ್ಮೆಯಿಂದ ಯುದ್ಧದ ತಂತ್ರಗಾರಿಕೆಯನ್ನು ಹಂತಹಂತವಾಗಿ ಬಿಚ್ಚಿದೆ, ಮೊದಲು ಶತ್ರು ದೇಶದ ಜಲಮೂಲ ನಿಲ್ಲಿಸಿ ಸೂಚನೆ ಕೊಟ್ಟಿದೆ, ಇಲ್ಲ, ರಾಜತಾಂತ್ರಿಕ ಕಠಿಣ ನಿರ್ಧಾರಗಳ ಮೂಲಕ ಸನ್ನೆ ಮಾಡಿ ಸಾಮ, ಭೇದ, ದಮಗಳನ್ನು ತೋರಿಸಿದೆ, ಅಂತಿಮವಾಗಿ ಯಾವುದಕ್ಕೂ ಕಿವಿಗಿಡದೇ ಮೊಂಡಾಟವಾಡುತ್ತಿದ್ದ ಕಾರಣ ದಂಡಕ್ಕೆ ಇಳಿದಿದೆ. ಒಂದು ದೇಶವಾಗಿ ಇದು ಮಾಡಲೇ ಬೇಕಾದ ಕೆಲಸ. ಆದರೆ ಇಲ್ಲಿ ಪಾಕಿಸ್ತಾನದ ಹೇಯ ಕೃತ್ಯ ಮಾತ್ರ ನಮಗೆ ಕಾಣಿಸುತ್ತಿದೆ, ಉಳಿದಂತೆ ಹಿತಶತ್ರು ರಾಷ್ಟ್ರಗಳ ಕುಟಿಲತೆ ಕಾಣುತ್ತಿಲ್ಲ, ಪಾಕಿಸ್ತಾನದ ಹಿಂದೆ ಅಮೆರಿಕದ ಯುದ್ಧ ಸಾಮಗ್ರಿ ಮಾರುವ ಹುನ್ನಾರವೂ ಚೀನಾ ಏಷ್ಯದ ಮೇಲೆ ತನ್ನ ಹಿಡಿತ ಸಾಧಿಸಿಕೊಳ್ಳುವ ಕುತಂತ್ರದ ಉದ್ದೇಶವೂ ಇದೆ, ಸುಮಾಎಉ ಒಂದೆರಡು ದಶಕಗಳಿಗೊಮ್ಮೆ ಯಾವುದಾದರೂ ನೆಪದಲ್ಲಿ ಎಲ್ಲಾದರೂ ಯುದ್ಧ ಮಾಡಿ ತನ್ನ ಶಸ್ತçಗಳನ್ನು ಬರಿದು ಮಾಡಿಕೊಳ್ಳುವುದು ಅಮೆರಿಕದ ಚಾಳಿ. ವಿಯೆಟ್ನಾಮ್, ಮಧ್ಯಪ್ರಾಚ್ಯ ಯುದ್ಧ ಕಾಲದಿಂದಲೂ ನೋಡಿ, ಆದರೆ ಈಚಿನ ದಶಕಗಳಲ್ಲಿ ಅಮೆರಿಕಕ್ಕೆ ಅಂಥ ಅವಕಾಶ ಎಲ್ಲಿಯೂ ಸಿಕ್ಕಿಲ್ಲ, ತನ್ನ ಯುದ್ಧ ಸಾಮಗ್ರಿ ತನ್ನಲ್ಲೇ ಕೊಳೆಯುವುದು ಅದಕ್ಕೆ ಇಷ್ಟವಿಲ್ಲ. ಪಾಕಿಸ್ತಾನ ಅದಕ್ಕೆ ಸೂಕ್ತ ದೇಶ, ಒಂದರಡೆ ಸಾಲ ಕೊಟ್ಟು ಅದೇ ಹಣವನ್ನು ಯುದ್ಧ ಸಾಮಗ್ರಿ ದರದ ರೂಪದಲ್ಲಿ ಮರಳಿ ಪಡೆಯುವುದು ಅಮೆರಿಕದ ಚಾಳಿ. ಪಾಕಿಸ್ತಾನ ಇಂಥ ಬಲೆಯೊಳಗೆ ಬಿದ್ದು ಈಗಾಗಲೇ ೨.೫ ದಶಲಕ್ಷ ಡಾಲರ್ ಅಂತಾರಾಷ್ಟ್ರೀಯ ಸಾಲದ ಸುಳಿಯಲ್ಲಿದೆ, ಆ ಹಣ ಅಲ್ಲಿನ ಜನರ ಅಭಿವೃದ್ಧಿಗೆ ಬಳಕೆ ಆಗುವ ಬದಲು ಉಗರರಿಗೆ, ಶಸ್ತ್ರಾಸ್ತ್ರ ಖರೀದಿಗೆ ವ್ಯಯವಾಗಿದೆ, ಭಾರತದ ಮೇಲೆ ಪಾಕಿಸ್ತಾನ ಯುದ್ಧ ಮಾಡಿದರೆ ಅಮೆರಿಕದ ಮಾರುಕಟ್ಟೆಯ ಬಾಗಿಲು ದೊಡ್ಡದಾಗಿ ತೆರೆದುಕೊಳ್ಳುತ್ತದೆ, ಸದ್ಯ ಹೊಟ್ಟೆಯುರಿದುಕೊಳ್ಳುತ್ತಿರುವ ಚೀನಾಕ್ಕೂ ಸ್ವಲ್ಪ ಮಾರುಕಟ್ಟೆ ದಕ್ಕುತ್ತದೆ, ಭಾರತದ ಆರ್ಥಿಕ ಅಭಿವೃದ್ಧಿಗೆ ತಡೆಯಾಗುತ್ತದೆ, ಯಾವುದೇ ದೇಶದಲ್ಲಿ ಯುದ್ಧ ನಡೆಯುತ್ತಿದ್ದರೆ ಯಾರೂಅಲ್ಲಿ ಬಂಡವಾಳ ಹೂಡಲು ಮುಂದಾಗುವುದಿಲ್ಲ, ಪಾಕ್ ವಿರುದ್ಧ ಗೆಲುವು ಎರಡನೆಯ ವಿಷಯ, ಆದರೆ ಇಲ್ಲಿ ಯುದ್ಧ ವಾತಾವರಣ ಇದೆ ಎಂಬುದು ಜಾಹೀರಾದರೆ ಕೋಟ್ಯಂತರ ಡಾಲರ್ ಹಣ ಹೂಡಿಕೆ ತಪ್ಪಿ ಭಾರತದ ಅಭಿವೃದ್ಧಿಗೆ ಹಿನ್ನೆಡೆ ಆಗುತ್ತದೆ, ಇದರಿಂದ ಸಂತೋಷ ಪಡುವ ದೇಶಗಳಿಗೆ ಲೆಕ್ಕವಿಲ್ಲ, ಇದು ನಿಜವಾಗಿ ಈ ಯುದ್ಧದ ಹಿಂದಿನ ನೈಜ ಮುಖ. ತಮಾಷೆಯ ಸಂಗತಿ ಎಂದರೆ ಮಾನವ ಕುಲ ಹುಟ್ಟಿದಾಗಿನಿಂದಲೂ ಶಂತಿ ಸ್ಥಾಪನೆಗಾಗಿ ಹಲವಾರು ಯುದ್ಧಗಳಾಗಿವೆ. ಈಗ ಆಗುತ್ತಿರುವುದೂ ಅದೇ. ಯುದ್ಧದಿಂದ ಹಿಂಸೆ ಆಗುತ್ತದೆ ಆದರೆ ಅಹಿಂಸೆಯ ಸ್ಥಾಪನೆಗೆ ಈ ಹಿಂಸೆ ಅಗತ್ಯ. ಇದು ನಾಗರಿಕ ಸಮಾಜದ ವ್ಯಂಗ್ಯ. ಅನ್ಯ ಮಾರ್ಗವೇ ಇದಕ್ಕಿಲ್ಲ.ಒಂದು ರೀತಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆನೀಡಲಾಗಿದ್ದ ೩೭೦ನೆಯ ವಿಧಿಯನ್ನು ಕಿತ್ತು ಹಾಕಿದ್ದು ಇದಕ್ಕೆ ಕಾರಣವೆನ್ನಲಾಗುತ್ತದೆ, ಒಂದು ರೀತಿಯಲ್ಲಿ ಹೌದು. ೩೭೦ ವಿಧಿ ೧೯೪೭ರಲ್ಲಿ ಹುಟ್ಟಿಕೊಂಡ ಸಂದರ್ಭ ಹಾಗಿತ್ತು, ಆಗ ಕಾಶ್ಮೀರದಲ್ಲಿ ಹರಿಸಿಂಗನ ಆಳ್ವಿಕೆ ಇತ್ತು. ಮುಸ್ಲಿಮರೇ ಹೆಚ್ಚಾಗಿದ್ದ ಆ ಪ್ರದೇಶ ಹರಿಸಿಂಗ್ ಆಳುತ್ತಿದ್ದ, ಇದಕ್ಕೆ ಜಿನ್ನಾ ಸೇರಿದಂತೆ ರಶೀದ್ ಅನ್ನುವವರ ತೀವ್ರ ವಿರೋಧವಿತ್ತು, ಜಮ್ಮು ಮತ್ತು ಕಾಶ್ಮೀರ ಎಂದಿಗೂ ಭಾರತದ ಭಾಗವಾಗಬಾರದೆಂಬುದು ಜಿನ್ನಾ ನಿಲುವಾಗಿತ್ತು, ಆದರೆ ಬಲಾತ್ಕಾರದಿಂದ ಅದನ್ನು ಕಿತ್ತುಕೊಳ್ಳಲು ಪಾಕಿಸ್ತಾನ ಸಮರ ಸಾರಿತು, ಆಗ ಹರಿಸಿಂಗ್ ಭಾರತದ ನೆರವು ಕೋರಿದ, ಆಗ ಭಾರತದ ಭಾಗವಾಗಲು ಒಪ್ಪಿದರೂ ತನ್ನ ಹಿಡಿತ ಉಳಿಸಿಕೊಳ್ಳಲು ಭಾರತದ ಉಳಿದ ರಾಜ್ಯಗಳಿಗೆ ಸಂಸತ್ತಿನ ತೀರ್ಮಾನ ಅನ್ವಯವಾದರೂ ಕಾಶ್ಮೀರದ ಹಿತದ ದೃಷ್ಟಿಯಿಂದ ತಾನು ಒಪ್ಪುವವರೆಗೆ ಅದು ಅಲ್ಲಿ ಅನ್ವಯವಾಗದಂತೆ ಕರಾರು ಮಾಡಿಕೊಂಡ, ೧೯೬೩ರಲ್ಲಿ ನೆಹರೂ ಜಮ್ಮು ಮತ್ತು ಕಾಶ್ಮೀರದ ಈ ಹಕ್ಕಿಗೆ ಸಂಬಂಧಿಸಿ ಮಸೂದೆ ಪ್ರಸ್ತಾಪಿಸಿ ೩೭೦ನೆಯ ವಿಧಿ ಜಾರಿ ಆಗುವಂತೆ ಮಾಡಿದರು,ಇದರ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಭಾರತದೊಳಗೆ ಇದ್ದರೂ ಪ್ರತ್ಯೇಕ ಧ್ವಜ, ಸಂವಿಧಾನ ಇತ್ಯಾದಿಗಳನ್ನು ಪಡೆದುಕೊಂಡಿತ್ತು. ಇದನ್ನು ೨೦೧೯ರಲ್ಲಿ  ಮೋದಿ ಸರ್ಕಾರ ಕಿತ್ತುಹಾಕಿ ಅದನ್ನು ಭಾರತದ ಅವಿಭಾಹ್ಯ ಅಂಗವಾಗಿಸಿತು, ಅದುವರೆಗೆ ಪಾಕಿಸ್ತಾನದ ಉಗ್ರ ಚಟುವಟಿಕೆಗಳಿಗೆ ಸುರಕ್ಷಿತ ಜಾಗವಾಗಿದ್ದ ಅದು ಭಾರತದ ಬಿಗ್ರಹಣೆಗೆ ಒಳಗಾಗಿ ಉಗರ ಚಟುವಟಿಕೆ ನಡೆಯದಂತಾಗಿ ಪಾಕಿಸ್ತಾನ ಕೈ ಹಿಸುಕಿಕೊಳ್ಳುವಂತಾಯಿತು. ಜೊತೆಗೆ ೩೭೦ನೆಯ ವಿಧಿ ಜಾರಿ ಇರುವವರೆಗೆ ಹೇಳಿಕೊಳ್ಳುವ ಆರ್ಥಿಕ ಬೆಳವಣಿಗೆ ಕಾಣದ ಜಮ್ಮು ಕಾಶ್ಮೀರ ೩೭೦ ನೆಯ ವಿಧಿಯನ್ನು ತೆಗೆಯುತ್ತಿದ್ದಂತೆ ಶಿಕ್ಷಣ, ವ್ಯಾಪಾರ, ಪ್ರವಾಸೋದ್ಯಮಗಳಿಂದ ತೀವ್ರ ಬೆಳವಣಿಗೆ ಕಾಣಲು ಆರಂಭಿಸಿ ಪಾಕಿಸ್ತಾನದ ಉಗ್ರ ಚಟುವಟಿಕೆಗೆ ಯಾವ ಬೆಂಬಲವೂ ಸ್ಥಳೀಯರಿಂದ ದೊರೆಯದಂತಾಗಿ ಪಾಕಿಸ್ತಾನದ ಮಸಲತ್ತು ನಡೆಯದಂತಾಗಿತ್ತು. ಜಮ್ಮು ಕಾಶ್ಮೀರದ ಆರ್ಥಿಕತೆಗೆ ಹೊಡೆತ ಕೊಟ್ಟು ಮತ್ತೆ ಅದನ್ನು ತನ್ನ ವಶದಲ್ಲಿಟ್ಟುಕೊಳ್ಳುವುದು ಪಾಕಿಸ್ತಾನದ ಈ ದಾಳಿಯ ಹಿಂದಿನ ಮುಖ್ಯ ಉದ್ದೇಶ. ಆದರೆ ಇದಾಗಲು ಭಾರತ ಅವಕಾಶ ಕೊಡುವುದಿಲ್ಲ. ಈಗಿರುವ ಭಾರತದ ಸೇನಾ ಶಕ್ತಿಯ ಮುಂದೆ ಪಾಕಿಸ್ತಾನ ನೇರ ಯುದ್ಧದಲ್ಲಿ ಹೆಚ್ಚೆಂದರೆ ಏಳು ದಿನ ಉಳಿಯಬಲ್ಲದು ಎಂದು ಅಂದಾಜಿಸಲಾಗಿತ್ತು, ಆದರೆ ಅದು ಮೂರೇ ದಿನಗಳಲ್ಲಿ ಮಂಡಿಯೂರಿ ಕುಳಿತಿದೆ. ಕುತಂತ್ರವನ್ನು ಆರಂಭಿಸಿದೆ. ಒಂದೆಡೆ ಶಾಂತಿ ಅನ್ನುತ್ತ ಇನ್ನೊಂದೆಡೆ ಶಾಂತಿ ಭಂಗ ಮಾಡುವುದನ್ನು ಮಾಡುತ್ತಿದೆ, ಇದರಿಂದ ನಮ್ಮ ಆರ್ಥಿಕತೆ ಹಿನ್ನೆಡೆ ಕಾಣುತ್ತಿದೆ. ಪಾಕಿಸ್ತಾನ ಈ ವಿಷಯದಲ್ಲಿ ಸ್ವಲ್ಪ ಯಶಸ್ಸು ಕಾಣಬಹುದಷ್ಟೇ. 

ಆದರೆ ಭಾರತ ತನ್ನಾರ್ಥಿಕ ಅಭಿವೃದ್ಧಿಗೆ ಹಾನಿಯಾಗದಂತೆ ಎಚ್ಚರಿಕೆಯ ನಡೆ ಹಾಕುತ್ತಿದೆ, ಒಂದೆಡೆ ಯುದ್ಧ ನಡೆಯುತ್ತಿದ್ದರೂ ದೇಶದೊಳಗಿನ ಆರ್ಥಿಕತೆ ವ್ಯತ್ಯಾಸವಾಗದಂತೆ ನಿಗಾ ವಹಿಸಲಾಗುತ್ತಿದೆ, ಈ ಯುದ್ಧದಿಂದ ಯಾವುದೇ ಅಗತ್ಯ ವಸ್ತಿಗಳ ಪೂರೈಕೆ ಅಥವಾ ಬೆಲೆಯಲ್ಲಿ ವ್ಯತ್ಯಾಸ ಆಗಿಲ್ಲ. ಯಾವುದೇ ವಿದೇಶ ಭಾರತಸ ಪ್ರತ್ಯುತ್ತರ ನೀತಿಯನ್ನು ಪ್ರಶ್ನಿಸಿಲ್ಲ ಎಂಬುದನ್ನು ಗಮನಿಸಬೇಕು. ಇದು ಭರತದ ನೈಜ ಗೆಲುವು. ಹಾಗೆ ನೋಡಿದರೆ ಭಾರತ ಈಗ ಪಾಕಿಸ್ತಾನದ ಮೇಲೆ ಪೂರ್ಣ ರೂಪದಲ್ಲಿ ಹೋರಾಟ ನಡೆಸಿಲ್ಲ, ಹೊರ ತೆಗೆದ ಒಂದೆರಡು ಅಸ್ತçಗಳಿಗೆ ಅದು ಹೈರಾಣಾಗಿದೆ, ಇನ್ನುಪಾಕಿಸ್ತಾನಕ್ಕೆ ತನ್ನೊಳಗಿನ ಬಲೂಚಿಗಳು, ಪಶ್ತೂನರು, ವಹಾಬಿಗಳು ಹಾಗೂ ಪಠಾಣರನ್ನು ಸುಮ್ಮನಿರಿಸುವ ಕೆಲಸ ಈಗ ದೊಡ್ಡದಾಗಿದೆ. ಈಗಾಗಲೇ ಇಂಥ ಯುದ್ಧವನ್ನು ಕಾಯುತ್ತದ್ದವರಂತೆ ಬಲೂಚಿ ಹೋರಾಟಗಾರರು ಬಲೂಚಿಸ್ತಾನವನ್ನು ಪ್ರತ್ಯೇಕ ದೇಶವೆಂದು ಘೋಷಿಸಿಕೊಂಡು ತಿರುಗಿಬಿದ್ದಿದ್ದಾರೆ, ಇನ್ನು ಪಶ್ತೂನರು ಮತ್ತು ವಹಾಬಿಗಳು ಎದ್ದರೆ ಪಾಕಿಸ್ತಾನ ತಾನಾಗಿಯೇ ನಾಮಾವಶೇಷವಾಗುತ್ತದೆ, ಆಗ ಯುದ್ಧದ ಅಗತ್ಯವೇ ಇರುವುದಿಲ್ಲ, ಪಾಕಿಸ್ತಾನ ಸ್ವತಃ ಅಂಥ ಸ್ಥಿತಿಯನ್ನು ತಂದುಕೊಂಡಿದೆ, ದುಷ್ಟತನ ಎಷ್ಟು ಕಾಲ ಇರಬಲ್ಲುದು?

Friday, 9 May 2025

ನಮ್ಮ ಪ್ರಸನ್ನರು


ಅವರು ಎ ವಿ ಪ್ರಸನ್ನ. ಹೌದು. ಅದು ೧೯೯೦ರ ದಶಕ. ನಾ ನು ಮೈಸೂರಿನಲ್ಲಿ ಉನ್ನತ ಶಿಕ್ಷಣ ಮುಗಿಸಿ ಪಿ ಎಚ್ ಡಿ ಸಂಶೋಧನೆ ಮಾಡುತ್ತಿದ್ದೆ. ಆಗ ಗುಲ್ಬರ್ಗದಿಂದ ಪ್ರಕಟವಾಗುತ್ತಿದ್ದ ಪ್ರೊ. ಸಂಗಮೇಶ ಸವದತ್ತಿಮಠ ಅವರು ಹೊರತರುತ್ತಿದ್ದ ಸಂಶೋಧನ ವ್ಯಾಸಂಗ ಪತ್ರಿಕೆಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರತಿನಿಧಿಯಾಗಿ ಸಂಶೋಧನಾ ಚಟುವಟಿಕೆಗಳ ಕುರಿತು ಮಾಹಿತಿ ಕೊಡುತ್ತಿದ್ದೆ, ಹೀಗೆ ಬೇರೆ ಬೇರೆ ವಿಶ್ವವಿದ್ಯಾನಿಲಯಗಳ ಇಂಥ ಮಾಹಿತಿ ಅದರಲ್ಲಿ ಬರುತ್ತಿತ್ತು. ಆಗ ನನಗೆ ಪರಿಚಯವಾದದ್ದು ಎ ವಿ ಪ್ರಸನ್ನರ ಹೆಸರು, ಅಷ್ಟರಲ್ಲಾಗಲೇ ಅವರ ಹೆಸರು ಗಮಕದ ಮೂಲಕ ಪರಿಚಯವಾಗಿತ್ತು, ಯೋಗಾಯೋಗ. ನಾನು ೨೦೧೧ರಲ್ಲಿ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಸಹಾಯಕ ಪ್ರಾಧ್ಯಾಪಕನಾಗಿ ಸೇರಿಕೊಂಡೆ. ವಿಶ್ವವಿದ್ಯಾನಿಲಯ ನನ್ನ ಮೇಲೆ ನಂಬಿಕೆ ಇಟ್ಟು ಕುಮಾರವ್ಯಾಸ ಪೀಠ ಸ್ಥಾಪಿಸಿ ಅದರ ಕೆಲಸವನ್ನು ನನಗೆ ವಹಿಸಿ ಸಂಯೋಜಕನಾಗಿ ನೇಮಿಸಿತು, ಏನಾದರೂ ಒಳ್ಳೆಯ ಕೆಲಸ ಮಾಡಿ ತೋರಿಸುವ ಹಠ ತೊಟ್ಟಿದ್ದೆ. ಆಗ ನನ್ನ ನೆರವಿಗೆ ಬಂದವರು ಗುರುಗಳಾದ ಪ್ರೊ. ಟಿ ವಿ ವೆಂಕಟಾಚಲ ಶಾಸ್ತ್ರಿಗಳು. ಅವರು ಪೀಠದ ಕೆಲಸ ಸರಿಯಾಗಿ ನಡೆಯಲು ಡಾ, ಎ ವಿ ಪ್ರಸನ್ನರ ಹೆಸರು ಸೂಚಿಸಿದರು, ನಾನು ಅವರ ನಿರಂತರ ಸಲಹೆ ಸಹಕಾರ ಪಡೆಯಲು ಅವರನ್ನು ಪೀಠದ ಸಂದರ್ಶಕ ಪ್ರಾಧ್ಯಾಪಕರನ್ನಾಗಿ ಮಾಡಲು ವಿಶ್ವವಿದ್ಯಾನಿಲಯವನ್ನು ಕೋರಿದೆ, ಅದರಂತೆ ಆಯಿತು, ನನ್ನ ಭಾಗ್ಯ, ಇಬ್ಬರು ದಿಗ್ಗಜರ ನೆರವು ಬೆಂಬಲ ಸಿಕ್ಕಿತು. ಪೀಠದ ಕೆಲಸ ಸುಲಭವಾಯ್ತು.

ಆಯಿತು, ಇವರ ನಿರ್ದೇಶನದ ಅಡಿಯಲ್ಲಿ ಪೀಠದ ಕೆಲಸ ಶುರು ಮಾಡಿದೆ, ಮೊದಲ ಕೆಲಸ ಕುಮಾರವ್ಯಾಸ ಭಾರತದ ಪರಿಷ್ಕರಣೆ ಮಾಡುವುದಾಗಿತ್ತು, ಮಾನ್ಯ ಕುವೆಂಪು ಹಾಗೂ ಮಾಸ್ತಿಯವರ ಸಂಪಾದಕತ್ವದಲ್ಲಿ ಹೊರಬಂದಿದ್ದ ದಶಕಗಳ ಹಿಂದಿನ ಪ್ರತಿಯೇ ಸದ್ಯದ ಅಧಿಕೃತ ಸಂಪುಟವಾಗಿತ್ತು, ಆದರೆ ಅದರಲ್ಲೂ ಸಾಕಷ್ಟು ತಿದ್ದುಪಡಿ ಆಗಬೇಕಾದ ಸಂಗತಿಗಳು ಈಚಿನ ಸಂಶೋಧನೆಗಳ ಅಡಿಯಲ್ಲಿ ಅಗತ್ಯವಿತ್ತು, ಇದನ್ನು ಆದ್ಯತೆಯ ಆಧಾರದಲ್ಲಿ ಕನ್ನಡ ಗಣಕ ಪರಿಷತ್ತಿನ ಸಹಯೋಗದ ಅಡಿಯಲ್ಲಿ ಪೀಠ ಕೈಗೆತ್ತಿಕೊಂಡಿತು. ಎರಡು ಮೂರು ವರ್ಷ ಸತತ ಪರಿಶ್ರಮ ಪಟ್ಟ ಮೇಲೆ ಪ್ರೊ. ಶಾಸ್ತ್ರಿಗಳ ಅಧ್ಯಕ್ಷತೆಯ ಸಂಪಾದಕ ಮಂಡಳಿಯ ಸಹಾಯದೊಂದಿಗೆ ಪರಿಷ್ಕೃತ ಕುಮಾರವ್ಯಾಸ ಭಾರತ ಎರಡು ಸಂಪುಟಗಳಲ್ಲಿ ಹೊರಬಂತು, ಅದರ ಡಿಜಿಟಲ್ ಪ್ರತಿಕೂಡ ಸಿದ್ಧವಿದೆ, ಸದ್ಯದಲ್ಲಿ ಕುಮಾರವ್ಯಾಸನಿಗೆ ಸಂಬಂಧಿಸಿದ ಭಾರತ ಮಾತ್ರವಲ್ಲ, ಅವನಿಗೆ ಸಂಬಂಧಿಸಿದ ಸಮಗ್ರ ವಷಯವುಳ್ಳ ವಿಶ್ವಕೋಶ ಎಂಬ ಪ್ರಶಂಸೆಗೆ ಇದು ಪಾತ್ರವಾಗಿದೆ, ಅದಾಯಿತು, ಕುಮಾರವ್ಯಾಸನಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯ ಸ್ಥಾಪನೆ, ಹಸ್ತಪ್ರತಿ ಸಂಗ್ರಹಾಲಯ ಮೊದಲಾದ ಕೆಲಸಗಳು ಇನ್ನೂ ಬಾಕಿ ಇವೆ, ಕಾರಣಾಂತರಗಳಿಂದ ಅವು ಹಿಂದೆ ಬಿದ್ದಿವೆ. ಮುಂದೊಂದು ದಿನ ಅವು ಕೈಗೂಡುವ ಆಸೆ ಇದೆ, ಏಕೆಂದರೆ ಇದರ ಹಿಂದೆ ಇಬ್ಬರ ಅಂಥ ಶಕ್ತಿ ಇದೆ, ಕಾಯುವ. ಅಂತೂ ಈ ನೆಪದಲ್ಲಿ ನಾನು ಮಾನ್ಯ ಪ್ರಸನ್ನರ ಹತ್ತಿರದ ಒಡನಾಟಕ್ಕೆ ಬಂದೆ. ಅವರ ವಿದ್ವತ್ತು, ವ್ಯಕ್ತಿತ್ವದ ಪರಿಚಯವಾಯ್ತು.ಅವರು ಸಾಹಿತ್ಯ ಸಂಶೋಧನೆ ಮಾತ್ರವಲ್ಲ, ಸರ್ಕಾತರದ ಆಡಳಿ ಕಾರ್ಯದಲ್ಲೂ ಸಿದ್ಧಹಸ್ತರು, ಅವರು ಕೆಲಸ ಮಾಡಿದ ಸರ್ಕಾರದ ಎಲ್ಲ ಹಂಯಗಳಲ್ಲೂ ನಿವೃತ್ತರಾಗಿ ಇಷ್ಟು ವರ್ಷಗಳಾದರೂ ಉನ್ನತ ಹೆಸರು ಗೌರವಗಳಿವೆ. ಇದು ಇಂದಿನ ವ್ಯವಸ್ಥೆಯಲ್ಲಿ ಸುಲಭದ ಮಾತಲ್ಲ, ಅಷ್ಟು ಪರಿಶುದ್ಧ ವ್ಯಕ್ತಿತ್ವ ಅವರದು, ಅವರ ಆಡಳಿತ ಒಂದೆಡೆ ಇರಲಿ. ಕೆಲಸ ಶುರು ಮಾಡಿದ್ದೇ ಅಧ್ಯಾಪಕ ಕೆಲಸದಿಂದ. ಬದುಕಿನ ಅನಿವಾರ್ಯತೆ ಅವರನ್ನು ಸರ್ಕಾರದ ಕೆಲಸಕ್ಕೆ ಒಯ್ಯಿತು. ಆದರೆ ಅವರ ಉಪನ್ಯಾಸ ಅಥವಾ ಪ್ರವಚನ ಕೇಳುತ್ತಿದ್ದರೆ ಛೆ, ಶಿಕ್ಷಕ ಕ್ಷೇತ್ರಕ್ಕೆ ಇವರು ಬರದ ಕಾರಣಕ್ಕೆ ಎಂಥ ನಷ್ಟವಾಯಿತೆಂದು ಬೇಸರವಾಗುತ್ತದೆ,  ಹೇಳುತ್ತಾರಲ್ಲ, ಸಂಬಡಿಸ್ ಡ್ಯೂಮ್ಸ್ ಡೇ ಈಸ ಅದರ್ಸ್ ಹೇ ಡೇ ಎಂದು. ಇಲ್ಲಿಯೂ ಹೀಗೆ ಆಯಿತು, ಶಿಕ್ಷಕರಿಗೆ ಡೂಮ್ಸ ಡೇ ಆದರೆ ಆಡಳಿತ ಕ್ಷೇತ್ರಕ್ಕೆ ಅವರು ಹೋಗಿದ್ದು ಹೇ ಡೇ ಆಯಿತು. ಇರಲಿ. ಆದರೆ ನಾವು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನಿಷ್ಟ ವಾರಕ್ಕೊಮ್ಮೆ ಅವರಿಂದ ಸತತ ವರ್ಷಗಟ್ಟಲೆ ವಿಶೇಷ ಉಪನ್ಯಾಸ ಏರ್ಪಡಿಸಿ ಕೇಳಿ ಧನ್ಯರಾಗಿದ್ದೇವೆ, ಮಕ್ಕಳು ಖುಷಿ ಪಟ್ಟಿದ್ದಾರೆ. ಇನ್ನೇನು ಬೇಕು? ಅವರಿಗೆ ಅವರ ಬಹುದೊಡ್ಡ ಪರಿಚಿತ ಬಳಗ ಹಾಗೂ ಸಹೋದ್ಯೋಗಿ ಮಿತ್ರರು ಕೆಲವು ವರ್ಷಗಳ ಹಿಂದೆ ಅರ್ಥಪೂರ್ಣವಾಗಿ ಸ್ನೇಹಶೀಲ ಎಂಬ ಅಭಿನಂದನ ಗ್ರಂಥ ಅರ್ಪಿಸಿದ್ದಾರೆ, ಅದು ಅವರ ಬಹುಮುಖ ಪ್ರತಿಭೆಯ ಕಿರು ಪರಿಚಯ ಮಾಡಿಕೊಡುತ್ತದೆ, ನಿಜ ಇಂಥವರಿಗೆ ಅಂಥ ಗ್ರಂಥ ಅರ್ಪಣೆ ಆಗಬೇಕು. ಆಗಿದೆ. ಆದರೆ ನಮ್ಮ ಪ್ರಸನ್ನರು ಅಷ್ಟೇ ಅಲ್ಲ, ಇನ್ನೂ ಅನೇಕ. ಅವರ ಪ್ರತಿಭೆಗೆ ಈಚೆಗೆ ನಾರಾಚಮ್ಮ ಪ್ರಶಸ್ತಿ ಹಾಗೂ ಕುಮಾರವ್ಯಾಸ ಪ್ರಶಸ್ತಿಗಳು ಸಂದಿವೆ. ನನಗೆ ಒಂದು ಅಚ್ಚರಿ ಅಂದರೆ ನಮ್ಮ ಕನ್ನಡ  ಸಾಹಿತ್ಯ ಸಂಗೀತಗಳಿಗೆ ಸಂಬಂಧಿಸಿದ ಯಾವುದೇ ಗೌರ ಪ್ರಶಸ್ತಿಗಳಿಗೆ ಅವರು ಭಾಜನರಾಗುವ ಅರ್ಹತೆ ಪಡೆದಿದ್ದಾರೆ ಆದರೆ ಅವರು ತಮ್ಮನ್ನು ಹುಡುಕಿಬಂದ ಅನೇಕಾನೇಕ ಪ್ರಶಸ್ತಿಗಳನ್ನು ಗೌರವಗಳನ್ನು ಅತ್ಯಂತ ವಿನಯದಿಂದ ತಮಗಿಂತ ಅರ್ಹರು ಬೇಕಾದಷ್ಟು ಜನರಿದ್ದಾರೆಂದು ಬೇರೆಯವರಿಗೆ ಕೊಡಿಸಿದ್ದಾರೆ, ಆದರೆ ಈಗ ಇವೆರಡು ಗೌರವವನ್ನು ಅವರು ಸ್ವೀಕರಿಸುವಂತೆ ಮಾಡಿದ ಮಹನೀಯರು ನಿಜಕ್ಕೂ ಅಭಿನಂದನಾರ್ಹರು. 

ಮಹಾಕವಿ ಕುಮಾರವ್ಯಾಸನ ಹೆಸರಲ್ಲಿ ಕರ್ನಾಧಟಕ ಸರ್ಕಾರದ ಮಟ್ಟದಲ್ಲಿ ಒಂದು ಸರ್ಥಕ ಪ್ರಶಸ್ತಿ ಸ್ಥಾಪಿಸಿ ಅದು ಅರ್ಹ ಗಮಕಿಗಳಿಗೆ ಸಲ್ಲಬೇಕೆಂದು ದಶಕಗಳ ಕಾಲ ಹೋರಾಟ,ಆಡಿ ಸ್ಥಾಪಿಸಿ ನೂರಾರು ಎಲೆಮರೆಯ ಕಲಾವಿದರಿಗೆ£ನೆರವಾದವರು ಅವರು, ಈ ಪ್ರಶಸ್ತಿ ಶುರುವಾದ ಹೊಸದರಲ್ಲಿಯೇ ಪ್ರಸಿದ್ಧ ಗಮಕಿಗಳಾದ ಇವರ ಹೆಸರೇ ಹತ್‌ತಾರು ಬಾರಿ ಪ್ರಸ್ತಾಪವಾದರೂ ತಾವೇ ಶ್ರಮವಹಿಸಿ ಸ್ಥಾಪಿಸಿದ ಪ್ರಶಸ್ತಿ ತಮಗೆ ಬೇಡ ಎಂಬ ಸೌಜನ್ಯದಿಂದ ನಿರಾಕರಿಸುತ್ತಲೇ ಬಂದವರು ಅವರು. ಆದರೆ ನಮಗೆಲ್ಲ ವಿಶ್ವಾಸವಿತ್ತು ಅದೆಷ್ಟು ಕಾಲ ನಿರಾಕರಿಸುತ್ತಾರೋ ನೋಡುವ ಎಂದು. ಏಕೆಂದರೆ ಅರ್ಹರಿಗೆ ಸಲ್ಲಬೇಕಾದ ಸ್ಥಾನ ಮಾನ ಒಂದಲ್ಲ ಒಂದು ದಿನ ಸಲ್ಲಲೇಬೇಕು, ಈಗ ಅದಾಗಿದೆ. ಇದಕ್ಕಿಂತ ಸಂತೋಷ ಇನ್ನೇನಿದೆ? ನಾನಂತೂ ದಶಕಗಳಿಂದ ಅವರ ಪ್ರವಚನ ಹಾಗೂ ಬರೆಹದ ಅಭಿಮಾನಿ. ನಮ್ಮ ಪೀಠದ ವತಿಯಿಂದ ಕುಮಾರವ್ಯಾಸನ ಜನ್ಮ ಸ್ಥಳದಲ್ಲಿ ಅವನ ಭಾರತದ ಗಮಕ ಏರ್ಪಡಿಸುವ ಆಸೆ ಇತ್ತು. ಪುಣ್ಯಕ್ಕೆ ಪ್ರಸನ್ನ ದಂಪತಿಗಳೇ ಇದನ್ನು ಕುಮಾರವ್ಯಾಸನ ಜನ್ಮ ಸ್ಥಳದಲ್ಲಿ ನಡೆಸಿಕೊಟ್ಟರು. ಅದು ಮರೆಯಲಾಗದ ಅನುಭವ.  ಅವರ ಸಾಹಿತ್ಯ ಸಂಶೋಧನೆ, ಗಮಕಾನುಭವಗಳಿಗೆ ಸಕಲ ಸನ್ಮಾನದ ಭಾಗ್ಯವೂ ಲಭಿಸಲಿ, ಅದನ್ನು ಕಂಡು ಆನಂದಿಸಿ ಧನ್ಯರಾಗೋಣ. ಅವರಿಗೆ ಪ್ರಶಸ್ತಿಗಳು ಸಂದ ಈ ಸಂದರ್ಭದಲ್ಲಿ ಅವರನ್ನು ಕುರಿತು ಬರೆಯುವ ಅವಕಾಶ ಸಿಕ್ಕಿತು. ಇದಕ್ಕಾಗಿ ಅವರಿಗೆ ಕೃತಜ್ಞ. 


Wednesday, 7 May 2025

ಇದನ್ನು ಓದಿಲ್ವಾ?


ಯುವ ವಿದ್ವಾಂಸರೂ ಅನುವಾದಕರೂ ದಕ್ಷ ಆಡಳಿತಗಾರರೂ ಆದ ಅಜಕ್ಕಳ ಗಿರೀಶ ಭಟ್ಟರ ಹೊಸ ಕೃತಿ ರಾಷ್ಟ್ರಧರ್ಮ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿ ಹತ್ತು ಅಧ್ಯಾಯಗಳಿದ್ದು ನೂರು ಪುಟಗಳ ವ್ಯಾಪ್ತಿ ಇದೆ. ಆದರೆ ಕತೆ ಇಷ್ಟೇ ಅಲ್ಲ, ಈ ನೂರು ಪುಟಗಳು ಜನ್ನನ ಯಶೋಧರ ಚರಿತೆಯಂತೆ ಕೃತಿ ಸಣ್ಣದಾದರೂ ಚಿಂತನೆ ಹಿರಿಯದು. ಮಹಾಕೃತಿಯ ಆಳ ಅಗಲ ಇದಕ್ಕಿದೆ. ಒಂದೊಂದು ಅಧ್ಯಾಯವೂ ಸಂಕ್ಷಿಪ್ತವಾಗಿದೆ, ಇವನ್ನು ವಿಸ್ತರಿಸಿದರೆ ಒಂದೊಂದು ಪಿ.ಎಚ್.ಡಿ. ಆಗಬಲ್ಲವು. ಅಂಥ ಆಸಕ್ತಿ ಮತ್ತು ಶಕ್ತಿ ಇರುವವರು ಹಾಗೂ ಪಿ.ಎಚ್.ಡಿ. ಸರಿಯಾದ ಶೀರ್ಷಿಕೆ ಮತ್ತು ಸತ್ವವುಳ್ಳ ವಿಷಯ ಆಯ್ಕೆ ಮಾಡಿಕೊಳ್ಳದೇ ಕಿತ್ತುಹೋದ ಅವರಿವರ ಜೀವನ, ಸಾಧನೆ ಎಂದೆಲ್ಲ ಪದವಿಗಾಗಿ ಅಧ್ಯಯನ ಮಾಡುವವರು ಇಂಥ ಕೃತಿಗಳನ್ನು ಒಮ್ಮೆ ಅಗತ್ಯ ಗಮನಿಸಬೇಕು. ಇಲ್ಲ ಅಂಥ ಅಧ್ಯಯನ ಮನೋಧರ್ಮವೇ ನಮ್ಮ ಶಿಕ್ಷಣ ವಲಯದಿಂದ ನಾಪತ್ತೆಯಾಗಿ ದಶಕಗಳೇ ಸಂದಿವೆ, ಕಿತ್ತುಹೋದ ವಸಾಹತುಶಾಹಿ ಕಾಲದ ಚಿಂತನೆಗಳನ್ನೇ ಪುನರುತ್ಪಾದನೆ ಮಾಡುವುದು ಅಥವಾ ಅವುಗಳಿಗೆ ಪೂರಕವಾದ ಒಂದಿಷ್ಟು ಮಾಹಿತಿಗಳನ್ನು ಅಲ್ಲಿಲ್ಲಿಂದ ಕದ್ದು ಕೊಡುವುದೇ ಸಂಶೋಧನೆಯಾಗಿಬಿಟ್ಟಿದೆ, ಪರಿಸ್ಥಿತಿ ಹೇಗಿದೆ ಅಂದರೆ ಸ್ಥಾಪಿತ ಚಿಂತನಾಕ್ರಮಕ್ಕೆ ವಿರುದ್ಧವಾದ ಒಂದು ಮಾತು ಬಂದರೂ ಶೈಕ್ಷಣಿಕ ವಲಯ ಅದನ್ನು ಗಂಭೀರವಾಗಿ ಚರ್ಚೆಗೆ ಸ್ವೀಕರಿಸುವ ಮನಃಸ್ಥಿತಿಯಲ್ಲಿಲ್ಲ, ಅಷ್ಟರಮಟ್ಟಿಗೆ ನಾವು, ನಮ್ಮ ಶೈಕ್ಷಣಿಕ ವಲಯ ವಸಾಹತುಗಳ ವಶದಲ್ಲಿ ನಮ್ಮನ್ನು ಮಾರಿಕೊಂಡಿದ್ದೇವೆ, ಇಂಥ ಮಾರಿಕೊಂಡ ಸಂಗತಿಗಳನ್ನು ಮನಗಾಣಿಸುವ ಕೆಲಸವನ್ನು ಈಗೀಗ ಹಲವರು ಮಡುತ್ತಿದ್ದಾರೆ, ಅಂಥವರಲ್ಲಿ ಅಜಕ್ಕಳರೂ ಒಬ್ಬರು. ಅವರು ಸುಮ್ಮನೇ ಕೂರುವವರಲ್ಲ, ಅದರ ಅಗತ್ಯವೂ ಇಲ್ಲ, ಓದು ಬರಹದ ಜೊತೆಗೆ ಕೃಷಿಯಲ್ಲಿಯೂ ತೊಡಗಿಸಿಕೊಂಡ ಫಲವೋ ಏನೋ ನೆಲದಲ್ಲಿ ಕಾಣುವ ಹೊಸತನ ಅವರ ಚಿಂತನೆಯಲ್ಲೂ ಕಾಣಿಸುತ್ತದೆ. ಈ ಕೃತಿಯಲ್ಲೂ ಅಂಥ ಒಳನೋಟಗಳಿವೆ, ಅವರು ನಿರಂತರ ಅಧ್ಯಯನಶೀಲರಾದ ಕಾರಣ ಹತ್ತು ಹಲವು ಚಿಂತನೆಗಳ ಪ್ರಭಾವ ಇಲ್ಲಿ ಕಾಣಿಸುತ್ತದೆ. ಇಂಥ ಪ್ರಭಾವಗಳಲ್ಲಿ ಭಾರತೀಯತೆಯ ಹುಡುಕಾಟದಲ್ಲಿ ದಶಕಗಳ ಶ್ರಮ ಸಾಧಿಸಿರುವ ಎಸ್ ಎನ್ ಬಾಲಗಂಗಾಧರ ಅವರ ಚಿಂತನೆಯೂ ಸೇರಿದೆ. ಸ್ಥಾಪಿತ ಚಿಂತನೆಗಳಿಗೆ ವಿರುದ್ಧವಾದ ಮಾತುಗಳಿಗೆ  ಈ ಆಧುನಿಕ ಮುಕ್ತ ಸಮಾಜದ ಸಂದರ್ಭದಲ್ಲಿ ಬಹುಶಃ ಬಾಲಗಂಗಾಧರ ಅವರಷ್ಟು ಬಹಿಷ್ಕಾರಕ್ಕೆ ಒಳಗಾದವರು ಇರಲಿಕ್ಕಿಲ್ಲ, ದುರಂತವೆAದರೆ ಬಾಲಗಂಗಾಧರ ಅವರ ವಾದಕ್ಕೆ ಕೆಟ್ಟ ಮಾದರಿಯ ದೈಹಿಕ ಆಕ್ರಮಣ ಮಾಡುವಂಥ ಪ್ರತಿರೋಧ ಬಿಟ್ಟರೆ ತಾತ್ವಿಕವಾಗಿ ಸೈ ಅನಿಸುವಂಥ ವಾದಗಳೇ ಹುಟ್ಟುತ್ತಿಲ್ಲ ಎಂಬುದು ಅವರ ಸಂಶೋಧನೆಯ ಗಟ್ಟಿತನ ತೋರಿಸುತ್ತದೆ, ಯಾರಾದರೂ ಇಂದು ಭಾರತದಲ್ಲಿ ಹೊಸರೀತಿಯಲ್ಲಿ ಏನಾದರೂ ಹೇಳಬೇಕೆಂದಿದ್ದರೆ ಅದಕ್ಕೆ ಬಾಲು ಅವರ ಚಿಂತನೆಯ ದಾಟಿ ಅಗತ್ಯವಾಗುತ್ತದೆ. ಅಥವಾ ಬಾಲು ಅವರಂತೆ ಯೋಚಿಸಲು ಕಲಿಯಬೇಕಾಗುತ್ತದೆ, ಏಕೆಂದರೆ ಅನ್ಯ ಪ್ರಭಾವದಿಂದ ಬಿಡಿಸಿಕೊಂಡು ಸ್ವಂತ ಯೋಚನೆ ಮಾಡುವ ರೀತಿಯನ್ನು ಅವರ ಕಾಣಿಸುತ್ತಾರೆ, ಈ ಕೃತಿಯಲ್ಲೂ ಹೊಸ ಒಳನೋಟಗಳು ಕಾಣಿಸುತ್ತವೆ, ಒಂದು ಸಣ್ಣ ನಿದರ್ಶನ - ಪಾಶ್ಚಾತ್ಯರು ಭಾರತಕ್ಕೆ ಬಂದಮೇಲೆ ನಮ್ಮ ಸಮಾಹವನ್ನು ವ್ಯವಸ್ಥಿತವಾಗಿ ಒಡೆಯುವ ಕೆಲಸ ನಡೆಯುತ್ತ ಬಂದಿತು. ಇದರ ಫಲವಾಗಿ ಮೇಲು ಕೀಳು ಇತ್ಯಾದಿ ಭಾವನೆಗಳನ್ನು ಬಿತ್ತಲಾಯಿತು. ಇಲ್ಲಿಯೂ ಎಲ್ಲದಕ್ಕೂ ವೈದಿಕ ಪ್ರಭಾವ ಕಾರಣವೆನ್ನಲಾಗುತ್ತದೆ. ಆದರೆ ಸಂದರ್ಭ ಬಂದಾಗ ಜೈನ ಸಂಪ್ರದಾಯ ವೈದಿಕಕ್ಕಿಂತ ಹಳೆಯದು ಅನ್ನುತ್ತಾ ಇದರಲ್ಲಿ ಸಮಾನತೆ ಯನ್ನು ಮೊದಲು ಸಾಧಿಸಲಾಗಿದೆ ಎಂದು ಹೇಳಲಾಗುತ್ತದೆ, ನಿಜ ಸಂಗಿ ಎಂದರೆ ಆದಿಪುರಾಣದಂಥ ಕೃತಿಯಲ್ಲಿ ಸಮಾಜವನ್ನು ವೈಶ್ಯ ಶೂದ್ರ, ಸ್ಪೃಶ್ಯ, ಅಸ್ಪೃಶ್ಯ ಎಂದು ವಿಭಜಿಸಿದವನು ವೃಷಭನಾಥ ಅನ್ನಲಾಗುತ್ತದೆಯಾದರೂ ಇಂಥ ಸಂದರ್ಭದಲ್ಲಿ ಮನುಸ್ಮೃತಿ, ವೇದಗಳನ್ನೇ ಇದಕ್ಕೆ ಕಾರಣ ಮಾಡಲಾಗುತ್ತದೆಯೇ ವಿನಾ ಸತ್ಯವನ್ನು ಮುಂದೆ ಮಾಡುವ ಪ್ರವೃತ್ತಿ ಕಾಣಿಸುವುದಿಲ್ಲ ಎಂಬ ಸಂಗತಿಯ ಕಡೆಗೆ ಗಮನ ಸೆಳೆಯುತ್ತಾರೆ (ಪು. ೨೧). ಅದನ್ನು ವಿಸ್ತರಿಸುವ ಸಾಧ್ಯತೆಯೂ ಇದೆ, ಇದೇ ಮನೋಧರ್ಮ ವಚನ ಸಾಹಿತ್ಯಗಳ ಸಂದರ್ಭದಲ್ಲೂ ಕಾಣಿಸುತ್ತದೆ, ವಚನಗಳು ವೇದ ವಿರೋಧಿ ಆಗಿವೆ ಎಂಬ ಮಾತಿಗೆ ವಿರುದ್ಧ ಸಾಕ್ಷಿಗಳು ವಚನಗಳಲ್ಲೇ ಸಿಗುತ್ತವೆ, ಆದರೆ ಅವುಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ, ಇಂಥ ಮನೋಧರ್ಮ ನಮಗೆ ಬಳುವಳಿಯಾಗಿ ಬಂದಿದ್ದು ವಸಾಹತುಗಳಿಂದ. ಇಂಥ ಹತ್ತು ಹಲವು ಸಂಗತಿಗಳ ಕಡೆಗೆ ನಮ್ಮ ಗಮನಹರಿಯುವಂತೆ ಮಾಡುತ್ತದೆ ಈ ಕೃತಿ, ಇಷ್ಟಲ್ಲದೇ ಹಲವರು ಪ್ರತಿಪಾದಿಸುವಂತೆ ರಾಷ್ಟ್ರದ ಕುರಿತ ಮನೋಭಾವನೆ ನಮಗೆ ಬಂದಿದ್ದು ವಸಾಹತುಗಳಿಂದ ಎಂಬ ಮಾತಿಗೆ ಭಿನ್ನವಾಗಿ ಅಜಕ್ಕಳರು ಇಲ್ಲಿ ಇಲ್ಲ, ನಮ್ಮ ರಾಷ್ಟ್ರ ಅಥವಾ ದೇಶ ಕುರಿತ ಭಾವನೆ ಹಾಗೂ ದೃಷ್ಟಿಕೋನ ಪಾಶ್ಚಾತ್ಯರಿಗಿಂತಲೂ ಭಿನ್ನ ಹಾಗೂ ವಿಸ್ತೃತ ಎಂದು ತೋರಿಸಿಕೊಡುತ್ತ ಇದು ಯಾವಾಗ ಅಪಾಯಕಾರಿ ಆಗುತ್ತದೆ, ಇಲ್ಲವಾದಲ್ಲಿ ಇದು ಸಮಾಜಕ್ಕೆ ಎಷ್ಟು ಉಪಯುಕ್ತ  ಎಂಬುದನ್ನು ಮನಗಾಣಿಸುತ್ತಾರೆ, ಜೊತೆಗೆ ಸಾವರ್ಕರ್ ಅವರಂಥವರು ಇಂದಿನ ಜನಕ್ಕೆ ತಪ್ಪಾಗಿ ಏಕೆ ಕಾಣುತ್ತಾರೆ ಎಂಬುದನ್ನೂ ನಿರುಮ್ಮಳವಾಗಿ ಸಾವಧಾನದಿಂದ ಅರ್ಥ ಮಾಡಿಸುತ್ತಾರೆ. ನಮ್ಮ ವಿಶೇಷ ಇರುವುದೇ ಬಹುತ್ವದಲ್ಲಿ ಯಾವ ಸಂದರ್ಭದಲ್ಲೂ ನಮ್ಮ ಸಮಾಜ ಅದನ್ನು ಬಿಟ್ಟಿಲ್ಲ, ಎಲ್ಲವನ್ನೂ ಏಕರೂಪ ಮಾಡಲು ಹೊರಟಿದ್ದು ವಸಾಹತು ದೃಷ್ಟಿ, ಭಾರತದ ದೃಷ್ಟಿಯೇ ಬಹುಯ್ವ, ಅದರಲ್ಲೇ ಸಹಬಾಳ್ವೆಯ ಮೂಲದ್ರವ್ಯವಿದೆ, ಇದನ್ನು ನಾವು ಬೇರೆ ಕಡೆಯಿಂದ ಎರವಲು ಪಡೆಯಬೇಕಿಲ್ಲ, ನಮ್ಮ ರಾಷ್ಟçಧರ್ಮವೇ ಬೇರೆ, ನಾವೇ ಬೇರೆ ಅನ್ನುವುದನ್ನು ಸರಳವೂ ಸ್ಪಷ್ಟವೂ ಆದ ರೀತಿಯಲ್ಲಿ ಅರ್ಥ ಮಾಡಿಸುವ ಕೃತಿ ಇದು, ವಿಶೇಷ ಅಂದರೆ ನೂರಾರು ಕಡೆ ಹರಡಿಕೊಂಡಿರುವ ಇಂಥ ಗಂಭೀರ ವಿಷಯವನ್ನು ಕಿರು ಕೈಪಿಡಿ ರೂಪದ ಈ ಕೃತಿಯಲ್ಲಿ ಗೊಂದಲಕ್ಕೆಡೆ ಇಲ್ಲದಂತೆ ಹಣೆದುಕೊಟ್ಟಿದ್ದಕ್ಕೆ ನಾವೆಲ್ಲ ಅಜಕ್ಕಳರಿಗೆ ಆಭಾರಿಗಳಾಗಿರಬೇಕಿದೆ, ಜೊತೆಗೆ ಮಾನವಿಕದಲ್ಲಿ ಉನ್ನತ ವ್ಯಾಸಂಗ ಹಾಗೂ ಸಂಶೋಧನೆ ಮಾಡಲು ಬಯಸುವವರಿಗೆ ಕೈಮರವಾಗಿಯೂ ಕೆಲಸ ಮಾಡುವ ಕಾರಣಕ್ಕೆ ಇದರ ಹಿರಿಮೆ ಮತ್ತಷ್ಟು ಚ್ಚಿದೆ, ಇಂಥ ಕೃತಿಯನ್ನು ಸಾಮಾನ್ಯವಾಗಿ ಶೈಕ್ಷಣಿಕ ವಲಯ ಹಾಗೂ ತಥಾ ಕಥಿತ ಬೌದ್ಧಿಕ ವಲಯ ನಿರಾಕರಿಸುವ ಸಾಧ್ಯತೆ ಇರುವ ಕಾರಣಕ್ಕೆ ಪ್ರಕಟಣೆ ಮಾಡಲು ಯಾರೂ ಮುಂದಾಗುವುದಿಲ್ಲ, ಅಂಥಾದ್ರಲ್ಲಿ ಬೆಂಗಳೂರಿನ ಅಯೋಧ್ಯಾ ಪ್ರಕಾಶನ ಇದಕ್ಕೆ ಮುಂದಾಗಿ ಸುಂದರವಾಗಿ ಪ್ರಕಟಿಸಿ ಮುಕ್ತ ಚರ್ಚೆಗೆ ವೇದಿಕೆ ಹಾಕಿಕೊಟ್ಟಿದೆ, ಈ ಕೃತಿ ಆನ್ ಲೈನ್ ಮಾರುಕಟ್ಟೆಯಲ್ಲೂ ಸುಲಭದಲ್ಲಿ ಸಿಗುವಂತಾಗಲಿ,  ಗಂಭೀರ ಸಾಹಿತ್ಯ ಪ್ರೇಮಿಗಳು ಇದಕ್ಕೆ ಮುಂದಾಗಬೇಕಿದೆ, ಇನ್ನು ಘೋಡಾ ಹೈ, ಮೈದಾನ್ ಹೈ ಅನ್ನಬೇಕು ಅಷ್ಟೇ, ಇಂಥ ಸಾವಿರ ಕೃತಿಗಳು ಬರಲಿ, ಬರಡಾಗಿ ಸತ್ವ ಕಳೆದುಕೊಂಡು ಕೊಳೆತ ನೀರಾದ ನಮ್ಮ ಮಾನವಿಕ ವಲಯ ಆರೋಗ್ಯಕರ ಚರ್ಚೆಗೆ ಮುಂದಾಗಿ ಮರುಜೀವ ಪಡೆಯಲಿ, ಇಷ್ಠೇ ಹೇಳಬಹುದು ಸದ್ಯಕ್ಕೆ. 


ಕೃತಿ ವಿವರ -

ರಾಷ್ಟ್ರಧರ್ಮ- ಇದು ಬೌದ್ಧಿಕ ಆಯುಧ

ಲೇಖಕರು - ಅಜಕ್ಕಳ ಗಿರೀಶ ಭಟ್

ಪ್ರಕಟಣೆ - ಯೋಧ್ಯಾ ಪಬ್ಲಿ ಕೇಶನ್ಸ್, ಬನಶಂಕರಿ, ಬೆಂಗಳೂರು, ಬೆಲೆ- ೧೨೦ ರೂ, ಪುಟಗಳು- ೧೦೦, ಐ ಎಸ್ ಬಿಎಬ್ ಇದೆ, ಸಂಪರ್ಕ- ೯೬೨೦೯೧೬೯೯೬ 


Saturday, 3 May 2025

ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳ್ಕೋಡು


ಕರ್ನಾಟಕದ ಯಕ್ಷಗಾನ ಬಹಳ ಪುರಾತನವಾದುದು, ಸಾವಿರಾರು ವರ್ಷಗಳ ಇತಿಹಾಸ ಇದಕ್ಕಿದೆ, ಅಂತೆಯೇ ತಮಿಳುನಾಡಿನ ತೆರವುಕೂತ್, ಕೇರಳದ ಕಥಕಳಿಗಳು ಕೂಡ ಯಕ್ಷ ಪ್ರಕಾರಗಳೇ, ಈ ಎಲ್ಲ ಪ್ರಕಾರಗಳಲ್ಲಿ ಗಂಡಸರದೇ ಮೆರೆದಾಟವಾದ ಕಾರಣ ಇದನ್ನು ಗಂಡು ಕಲೆ ಎಂದು ಕರೆಯಲಾಗುತ್ತದೆ, ಆದರೆ ಇತ್ತೀಚೆಗೆ ಈ ಕಲಾ ಪ್ರಕಾರದಲ್ಲಿ ಐದು ಅಂಗಗಳಾದ ಭಾಗವಂತಿಕೆ, ಮಾತುಗಾರಿಕೆ, ನಾಟ್ಯ, ಸಂಗೀತ, ಮತ್ತು ವಾದ್ಯಗಳಲ್ಲಿ ಮಹಿಳೆ ಕಾಣಿಸಿಕೊಳ್ಳುತ್ತಿದ್ದಾಳೆ, ಮಾತ್ರವಲ್ಲ, ಸಾಕಷ್ಟು ಛಾಪು ಮೂಡಿಸುತ್ತಿದ್ದಾರೆ, ದಕ್ಷಿಣೋತ್ತರಕನ್ನಡ ಜಿಲ್ಲೆಗಳಲ್ಲಿ ಈ ಕಲೆ ಹೆಚ್ಚು ಪ್ರಸಿದ್ಧ, ಈ ಭಾಗಗಳಲ್ಲಿ ನೃತ್ಯಪ್ರಧಾನ ಯಕ್ಷಗಾನದ ಜೊತೆಗೆ ಕೇವಲ ಮಾತುಗಾರಿಕೆಯಲ್ಲೇ ಕಥನ ಕಟ್ಟಿಕೊಡುವ ತಾಳಮದ್ದಲೆ ಕೂಡ ಅಷ್ಟೇ ಪರಿಚಿತ. ಈ ಪ್ರಕಾರದಲ್ಲೂ ಸಾಕಷ್ಟು ಮಹಿಳೆಯರು ಸಾಧನೆ ಮಾಡಿದ್ದಾರೆ, ಈ ಪ್ರಕಾರದಲ್ಲಿ ಉತ್ತಮ ಸಂಶೋಧನೆಯನ್ನು ಕೂಡ ಮಾಡಲಾಗಿದೆ. 

ಇವೆಲ್ಲದರ ಜೊತೆ ದಕ್ಷಿಣೋತ್ತರಕನ್ನಡಗಳ ಜೊತೆಗೆ ಉಡುಪಿಯ ಯಕ್ಷಗಾನವೂ ಸೇರಿ ತೆಂಕು ಮತ್ತು ಬಡಗು ತಿಟ್ಟುಗಳಿದ್ದು ಇವುಗಳ ಸ್ವಂತಿಕೆ ಪ್ರತ್ಯೇಕವೇ ಆಗಿದೆ, ಜೊತೆಗೆ ಶಿವಮೊಗ್ಗ ಭಾಗದಲ್ಲೂ ಇದು ಕಾಣಿಸುತ್ತದೆ, ಈ ಎಲ್ಲ ಭಾಗದಲ್ಲೂ ಅದ್ಭುತ ಕಲಾವಿದರಿದ್ದಾರೆ, ಅದರಲ್ಲೂ ಇತ್ತೀಚೆಗೆ ಹೆಣ್ಣುಮಕ್ಕಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಲಾಗಾಯ್ತಿನಿಂದ ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ವೇಷಗಾರಿಕೆ, ಮಾತು, ವಾದ್ಯ, ಭಾಗವಂತಿಕೆಗಳಲ್ಲಿ ವ್ಯತ್ಯಾಸವಿದ್ದು ಎರಡೂ ಸಾಕಷ್ಟು ಅಂತರ ಕಾಯ್ದುಕೊಂಡಿವೆ, ಇವನ್ನು ಕಲೆಯ  ದೃಷ್ಟಿಯಿಂದ ಒಂದೇ ವೇದಿಕೆಯಲ್ಲಿ ತರುವ ಯತ್ನವನ್ನು ಕೂಡ ಮಹಿಳೆಯರೇ ನಾಡುತ್ತಿದ್ದಾರೆ ಇಂಥವರಲ್ಲಿ ಮೊದಲಿಗರು ಭವ್ಯಶ್ರೀ ಕಲ್ಕುಂದ ಮುಖ್ಯರು, ಇವರು ಭಾವತರೂ ಹೌದು, ಇವರದು ತೆಂಕು ತಿಟ್ಟಿನ ಭಾಗವಂತಿಕೆ. ಈಗ ಬಡಗು ತಿಟ್ಟಿನಲ್ಲೂ ಹೊನ್ನಾವರದ ಚಿಂತನಾ ಹೆಗಡೆಯವರು ಕಾಣಿಸಿಕೊಂಡಿದ್ದು ತಮ್ಮ ಅಪೂರ್ವ ಕಂಠಸಿರಿಯಿಂದ ಯಕ್ಷಪ್ರಿಯರ ಗಮನ ಸೆಳೆಯುತ್ತಿದ್ದಾರೆ.

ನಮ್ಮ ದೇಶದ ಸಂಪ್ರದಾಯವೇ ಹಾಗಿದೆ. ನಮ್ಮ ಕುಟುಂಬ ವ್ಯವಸ್ಥೆಯನ್ನು ಗಮನಿಸಿ, ಅದು ನಕ್ಕಳ ಬೆಳವಣಿಗೆಗೆ ಎಷ್ಟು ಆದ್ಯತೆ ಕೊಡುತ್ತದೆಯೋ ನೋಡಿ, ಒಮ್ಮೆ ಹಿರಿಯ ರಂಗಕರ್ಮಿ ಬಿ ವಿ ಕಾರಂತರು ಮಾತನಾಡುತ್ತಾ, ನಮ್ಮ ಮಕ್ಕಳ ರಕ್ತದಲ್ಲಿ ಸಾಂಸ್ಕೃತಿಕ ಸಂಗತಿ ಹರಿಯುತ್ತಲೇ ಇರುತ್ತದೆ, ನಮ್ಮ ಕುಟುಂಬ ಮತ್ತು ಸಮಾಜ ಹೀಗೆ ಮಾಡುತ್ತದೆ, ನಮ್ಮ ಪರಂಪರೆಯಲ್ಲಿ ಸಣ್ಣ ಮಕ್ಕಳ ಕೈಗೆ ಬಳಪ, ಪೆನ್ನು ಕೊಡುವುದು ಒಂದು ಸಡಗರದ ಹಬ್ಬ, ಪ್ರಪಂಚದ ಬೇರೆಲ್ಲೂ ಇಂಥ ಸಂಭ್ರಮವಿಲ್ಲ, ನೆರೆಯ ಪಾಕಿಸ್ತಾನದಲ್ಲಿ ಮಕ್ಕಳ ಕೈಗೆ ಗನ್ನು ಕೊಡುತ್ತಾರೆ, ಆದರೆ ನಮ್ಮಲ್ಲಿ ಪೆನ್ನು ಕೊಡಲಾಗುತ್ತದೆ, ಇಷ್ಟೇ ವ್ಯತ್ಯಾಸ, ಆದರೆ ಇದು ಉಂಟು ಮಾಡುವ ಪರಿಣಾಮ ಅಂತಿಂಥದ್ದಲ್ಲ, ಇದು ಜಗತ್ತಿನಲ್ಲಿ ನಮ್ಮ ದೇಶವನ್ನು ಬೇರೆಯಾಗಿಸಿದೆ, ಚಿಂತನಾ ಹೆಗಡೆ ಇದಕ್ಕೊಂದು ಉದಾಹರಣೆ. ಎಲ್ಲ ಮನೆಗಳಲ್ಲೂ ಇಂಥ ಪ್ರತಿಭೆಗಳಿರಬಹುದು, ಆದರೆ ಸರಿಯಾದ ಮಾರ್ಗವನ್ನು ಅವರಿಗೆ ತೋರಿಸಬೇಕು, ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು, ಆಗ ಯಶಸ್ಸು ಸಾಧ್ಯ,  ಚಿಂತನಾ ಅವರಿಗೆ ಇವೆರಡೂ ಸಿಕ್ಕಿದೆ, ಅವರು ಅದನ್ನು ಸರಿಯಾಗಿ ಬಳಸಿಕೊಂಡಿದ್ದಾರೆ, ಅವರಿಗೆ ಭವಿಷ್ಯದಲ್ಲಿ ಕ್ಷೇತ್ರದ ಸಕಲ ಸೌಭಾಗ್ಯಗಳೂ ಲಭಿಸಲಿ.

ಚಿಂತನಾ ಹೆಗಡೆ ಅವರ ಭಾಗವಂತಿಕೆಯನ್ನು ಒಮ್ಮೆ ಕೇಳಿದವರು ಅವರ ಅಭಿಮಾಯಾಗುವುದು ನಿಶ್ಚಿತ, ಒಮ್ಮೆ ಹಾಗೆಯೇ ಅಂತರ್ಜಾಲದಲ್ಲಿ ಯಕ್ಷಗಾನ ಜಾಲಾಡುವಾಗ ಚಿಂತನಾ ಹೆಗಡೆಯವರ ಗಾಯನ ಕೇಳಿಸಿಕೊಂಡೆ, ತಕೊಳಿ ಆಗಿನಿಂದ ಅವರ ಗಾಯನವನ್ನು ಅದೆಷ್ಟೋ ಬಾರಿ ಕೇಳಿದ್ದೇನೆ, ಗುರುವೆ ನಿನ್ನೊಳು ಸಮರಮಾಡುವೆ ಎಂಬ ಪದ್ಯವಂತೂ ರೋಮಾಂಚನಗೊಳಿಸುತ್ತದೆ, ಅಂತೆಯೇ ಅವರು ಹಾಡಿದ  ನನ್ನ ಮಗನೆಲ್ಲಿ ಹೋದನಮ್ಮಾ, ಗಿರಿಧರ, ಮರುಧರ ಗೀತೆಯಂತೂ  ಅತ್ಯದ್ಭುತವಾಗಿದೆ, ಅವರ ಹಾಡುಗಳನ್ನು ಯಕ್ಷರಂಗ ವೇದಿಕೆಯಲ್ಲಿ ಯೂಟ್ಯೂಬ್ ನಲ್ಲಿ ಕೇಳಿ ಆನಂದಿಸಬಹುದು. ಅವರ ಗಾಯನದಲ್ಲಿ ಮನಸೆಳೆಯುವ ಸಂಗತಿಯೆAದರೆ, ಹಾಡಿನ ಸ್ಪಷ್ಟ ಸಾಹಿತ್ಯ, ರಾಗ, ಭಾವ, ತಾಳ ಬದ್ಧತೆಗಳು, ಇವೆಲ್ಲ ಸೇರಿ ಇವರೊಬ್ಬ  ಕಾಳಿಂಗನಾವುಡರು ಹೀಗೆ ಮಹಿಳಾ ರೂಪದಲ್ಲಿ ಮತ್ತೆ ಬಂದಿದ್ದಾರೆ ಅನಿಸುತ್ತದೆ. ಒಮ್ಮೆ ಕೇಳಿದರೆ ಕಿವಿಯಲ್ಲಿ ದಿನಗಟ್ಟಲೆ ಸುಮ್ಮನೇ ಅದು ಗುನುಗುಡುತ್ತಿರುತ್ತದೆ. ಇದು ಅವರ ಗಾಯನದ ಹೆಚ್ಚುಗಾರಿಕೆ. ಅವರ ಕಂಠಶ್ರೀ ಪ್ರಪಂಚದಲ್ಲಿ ಮೊಳಗಲಿ. ಹೊನ್ನಾವರದ ಮಾಳ್ಕೋಡ್ ನಲ್ಲಿ ಯಕ್ಷಪಲ್ಲವಿಯ ಅಡಿಯಲ್ಲಿ ತಮ್ಮ ಕಾಯಕ ಮಡುತ್ತಿದ್ದಾರೆ, ಇವರ ಗಾಯನಕ್ಕೆ ಯಕ್ಷ ಮಾಣಿಕ್ಯ ಎಂಬ ಬಿರುದನ್ನು ಕೂಡ ಅವರಿಗೆ ಕೊಡಲಾಗಿದೆ, ಇವರಿಗೆ ದೂರದ ಮುಂಬೈನಲ್ಲಿ ದೊಡ್ಡ ಸನ್ಮಾನ ಕೂಡ ಆಗಿದೆ. ಇವರ ತಂದೆ ಮಾಳ್ಕೋಡ್ ಉದಯ ಹೆಗಡೆಯವರು ಪ್ರಸಿದ್ಧ ಯಕ್ಷಗಾನ ಕಲಾವಿದರು. ಅವರ ಉತ್ತೇಜನದಿಂದ ಮತ್ತು ಪ್ರಭಾವದಿಂದ ಯಕ್ಷಗಾನಕ್ಕೆ ಬಂದರು, ಎಂಟನೆಯ ತರಗತಿಯಲ್ಲೇ ಯಕ್ಷಗಾನದತ್ತ ಹೊರಳಿದರು, ತಾಯಿಯವರ ಪ್ರೇರಣೆಯಿಂದ ಯಕ್ಷಗಾನದಲ್ಲಿ ಭಾಗವತಿಕೆ ಆಯ್ದುಕೊಂಡರು, ಸಾರ್ಥಕವಾಯ್ತು. ತಂದೆ ತಾಯಿ ಮಕ್ಕಳಿಗೆ ಸರಿಯಾದ ಮಾರ್ಗ ತೋರಿದರೆ ಮಕ್ಕಳು ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಆಗಿದ್ದಾರೆ. ಬಾಲ್ಯದಿಂದ ಭಜನೆ ಸಂಗೀತ ಮೊದಲಾದ ಪ್ರಕಾರದಲ್ಲಿ ತೊಡಗಿಸಿಕೊಂಡರು ಜೊತೆಗೆ ಇವರ ಸಹೋದರ ಸಾಥ್ ಕೊಟ್ಟರು, ಇವೆಲ್ಲದರ ಫಲವಾಗಿ ಚಿಂತನಾ ಹೆಗಡೆಯವರು ಯಕ್ಷಮಾಣಿಕ್ಯವಾಗಿ ರೂಪುಗೊಂಡಿದ್ದಾರೆ, ಇವರ ಕಂಚಿನ ಕಂಠ ಸಿರಿ ಜಗತ್ತನ್ನೇ ಆವರಿಸಲಿ, ಇನ್ನೇನು ಹೇಳುವುದಿದೆ?ನಮ್ಮೂರ ಅದ್ಭುತ ಕಲಾವಿದೆ ಬೆಳೆಯಲಿ, ಬೆಳಗಲಿ, ಅಷ್ಟೇ.  ಕರಾವಳಿ ಕರ್ನಾಟಕ ಯಕ್ಷಗನಕ್ಕೆ ಹೆಸರು-ಉಸಿರು ಅದರಲ್ಲೂ ಹೊನ್ನಾವರವಂತೂ ಅದಕ್ಕೆ ಮಡಿಲು, ಬಂದವರು ಚಿಂತನಾ ಹೆಗಡೆ,ಅದರಲ್ಲೂ ಗುಂಡಬಾಳದ ಆಂಜನೇಯನ ದೇವಸ್ಥಾನದಲ್ಲಿ ವರ್ಷದ ಯಾವ ದಿನ ಹೋದರೂ ಯಕ್ಷಗಾನ ಸೇವೆ ನಡೆದಿರುತ್ತದೆ, ದೇವರ ಸೇವೆಯ ಹೆಸರಲ್ಲಿ ಕಲಾಸೇವೆ ಅಲ್ಲಿ ನಿರಂತರ ನಡೆಯುತ್ತದೆ. ಹೊನ್ನಾವರ ಹೇಳಿ ಕೇಳಿ ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸಿಂಹ ನೃತ್ಯದ ಹಾಸ್ಯಗಾರ ಮನೆತನ, ಕೊಂಡದಕುಳಿ ಮನೆತನ, ಮೊದಲಾದ ಖ್ಯಾತ ಕಲಾವಿದರನ್ನು ಲೆಕ್ಕವಿಲ್ಲದಷ್ಟು ಕೊಟ್ಟ ಜಾಗ. ಇಂಥ ಪರಿಸರದಿಂದ ಬಂದವರು ಚಿಂತನಾ. ಇವರ ರಕ್ತದಲ್ಲಿ ಯಕ್ಷಗಾನವಿದೆ, ಅದು ಪರಿಪೂರ್ಣವಾಗಿ ಅವರ ಕಂಠಕ್ಕೆ ಇಳಿದಿದೆ, ಸುಮ್ಮನೇ ಅವರ ಹೆಸರನ್ನು ಯೂ ಟ್ಯೂಬ್ ಅಥವಾ ಗೂಗಲ್ ನಲ್ಲಿ ಜಾಲಾಡಿ, ಒಂದಿಷ್ಟು ಗಾಯನಗಳ ಪಟ್ಟಿ ಬರುತ್ತದೆ, ಕೇಳಿ, ಇಲ್ಲವಾದರೆ ನಿಮ್ಮ ಕಲೆ, ಸಾಹಿತ್ಯ, ಸಂಗೀತ ಪ್ರೇಮ ಏನಾದರೂ ನಿಮಗಿದ್ದರೆ ಅದೆಲ್ಲ ವ್ಯರ್ಥ ಎಂದಷ್ಟೇ ಹೇಳಬಹುದು.